ಅಮೆರಿಕದ ಎಮ್ಕ್ಯೂ-9 ಗುಪ್ತಚರ ಡ್ರೋನ್ನ್ನು (US Drone) ರಷ್ಯಾದ ಸುಖೋಯ್-27 ಯುದ್ಧ ವಿಮಾನ (Russian Sukhoi-27 fighter jet)ವು ಹೊಡೆದು ಉರುಳಿಸಿದೆ. ಮಂಗಳವಾರ ಕಪ್ಪುಸಮುದ್ರದ ಮೇಲ್ಭಾಗ ಹಾರಾಡುತ್ತಿದ್ದ ಈ ಡ್ರೋನ್ ಮೇಲೆ ಮೊದಲು ಇಂಧನವನ್ನು ಸುರಿದ ರಷ್ಯಾ ಯುದ್ಧವಿಮಾನ ಬಳಿಕ ಅದಕ್ಕೆ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಅಮೆರಿಕ ಸೇನೆ ಮಾಹಿತಿ ನೀಡಿದೆ. ‘ರಷ್ಯಾ ಯುದ್ಧ ವಿಮಾನ ನಮ್ಮ ಡ್ರೋನ್ನ್ನು ಕುತಂತ್ರದಿಂದ ಮತ್ತು ಅಜಾಗರೂಕತೆಯಿಂದ ಹೊಡೆದು ಹಾಕಿದೆ. ಎಮ್ಕ್ಯೂ-9 ಡ್ರೋನ್ ಎದುರು ಹಲವು ಬಾರಿ ಹಾರಾಡಿದ ಸುಖೋಯ್-27, ಅದರ ಮೇಲೆ ಇಂಧನವನ್ನು ಹಾಕಿತು. ಇಂಧನ ಹಾಕಿದರೂ ಡ್ರೋನ್ ಕೆಳಗೆ ಬೀಳದೆ ಇದ್ದಾಗ, ಅದಕ್ಕೆ ಡಿಕ್ಕಿ ಹೊಡೆಯಿತು. ಇದು ವೃತ್ತಿಪರತೆಯೇ ಅಲ್ಲ’ ಎಂದು ಯುಎಸ್ ಸೇನೆ ಹೇಳಿದೆ.
ಮತ್ತೊಂದೆಡೆ ರಷ್ಯಾ ಈ ಆಪಾದನೆಯನ್ನು ತಳ್ಳಿಹಾಕಿದೆ. ಡ್ರೋನ್ ಅಪಘಾತದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಹೇಳಿದೆ. ‘ಯುಎಸ್ನ ಕಣ್ಗಾವಲು ಡ್ರೋನ್ ಕಪ್ಪುಸಮುದ್ರದ ಮೇಲ್ಭಾಗದಲ್ಲಿ ತೀಕ್ಷ್ಣವಾಗಿ ಚಲಿಸಿದ ಪರಿಣಾಮ ಹಾರಾಟದಲ್ಲಿ ನಿಯಂತ್ರಣ ಕಳೆದುಕೊಂಡಿತು. ಹೀಗಾಗಿ ಅತ್ಯಂತ ಕೆಳಭಾಗಕ್ಕೆ ಬಂದು, ಸಮುದ್ರ ನೀರಿನ ಮೇಲ್ಮೈಗೆ ಅಪ್ಪಳಿಸಿ, ಕೆಳಗೆ ಬಿದ್ದಿದೆ’ ಎಂದು ರಷ್ಯಾ ರಕ್ಷಣಾ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Signature Bank : ಅಮೆರಿಕದಲ್ಲಿ 48 ಗಂಟೆಗಳಲ್ಲಿ ಎರಡನೇ ಪ್ರಮುಖ ಬ್ಯಾಂಕ್ ದಿವಾಳಿ, ಮುಂದಿನ ಸರದಿ ಯಾವುದು?
ಅಷ್ಟರಲ್ಲಾಗಲೇ ಯುಎಸ್ನ ಸ್ಟೇಟ್ ಡಿಪಾರ್ಟ್ಮೆಂಟ್, ಯುಎಸ್ನಲ್ಲಿರುವ ರಷ್ಯಾದ ರಾಯಭಾರಿ ಅನಾಟೊಲಿ ಆಂಟೊನೊವ್ಗೆ ಸಮನ್ಸ್ ನೀಡಿದೆ. ಯುರೋಪ್ನ ರಾಜ್ಯ ಸಹಾಯಕ ಕಾರ್ಯದರ್ಶಿ ಕರೆನ್ ಡಾನ್‌ಫ್ರೈಡ್ ಅವರನ್ನು ಭೇಟಿಯಾಗುವಂತೆ ತಿಳಿಸಿದೆ. ಸಮನ್ಸ್ ಪಡೆದ ರಷ್ಯಾ ರಾಯಭಾರಿ ಅನಾಟೊಲಿ ಪ್ರತಿಕ್ರಿಯೆ ನೀಡಿ ‘ನಾವು ಯುಎಸ್ ಮತ್ತು ರಷ್ಯಾ ಮಧ್ಯೆ ಯಾವುದೇ ರೀತಿಯ ಸಂಘರ್ಷವನ್ನೂ ಬಯಸುವುದಿಲ್ಲ’ ಎಂದಿದ್ದಾರೆ.
ಮತ್ತೆ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ, ‘ಡ್ರೋನ್ ಅಪಘಾತದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಹೇಳುತ್ತಿರುವ ರಷ್ಯಾದ ಮಾತನ್ನು ನಾವು ಒಪ್ಪುವುದಿಲ್ಲ. ಕೆಳಗೆ ಬಿದ್ದಿರುವ ಡ್ರೋನ್ ಪತ್ತೆಗೆ ಪ್ರಯತ್ನ ಮಾಡುತ್ತಿದ್ದೇವೆ’ ಎಂದಿದ್ದಾರೆ.