Site icon Vistara News

Shabbar Zaidi: ಮಸೀದಿಗಳ ಧ್ವನಿವರ್ಧಕದ ಬಗ್ಗೆ ಪಾಕಿಸ್ತಾನದಲ್ಲೇ ಕೇಳಿ ಬಂತು ಅಪಸ್ವರ; ಮೊಹಮ್ಮದ್ ಶಬ್ಬರ್ ಜೈದಿ ಹೇಳಿದ್ದೇನು?

Shabbar Zaidi

Shabbar Zaidi

ಇಸ್ಲಾಮಾಬಾದ್‌: ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಸ್ಥಾಪಿಸುವ ವಿಚಾರದ ಬಗ್ಗೆ ಭಾರತ ಮಾತ್ರವಲ್ಲದೆ ಪಾಕಿಸ್ತಾನದಲ್ಲಿಯೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವೆನ್ಯೂ (Federal Board of Revenue) ಮಾಜಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಶಬ್ಬರ್ ಜೈದಿ (Syed Mohammad Shabbar Zaidi) ಅವರು ಮಾತನಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಅವರು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಸ್ಥಾಪಿಸುವುದು ಅನಗತ್ಯ ಎಂದು ಹೇಳಿದ್ದಾರೆ (Viral Video).

ಪಾಕಿಸ್ತಾನದ ಯೂಟ್ಯೂಬರ್ ಜತೆ ಮಾತನಾಡಿದ ಜೈದಿ, ʼʼನೀವು ಇತರರಿಗೆ ತೊಂದರೆ ನೀಡಿ ಅಜಾನ್ ಅನ್ನು ಜೋರಾಗಿ ಕೂಗುವುದು ಸರಿಯಲ್ಲ. ಅಲ್ಲಾಹನೊಂದಿಗಿನ ಜತೆಗಿನ ಸಂಬಂಧದ ಮಧ್ಯೆ ಇತರರಿಗೆ ನೋವು ನೀಡುವುದೇಕೆ? ನಾನು ಬರುತ್ತಿದ್ದಾಗ ಎಷ್ಟು ದೊಡ್ಡ ಅಜಾನ್ ಶಬ್ದ ಕೇಳಿಸಿಕೊಂಡಿತ್ತೆಂದರೆ ಅದು ನನ್ನ ತಲೆಗೆ ಅಪ್ಪಳಿಸಿತು. ನನಗೆ ಅದು ಇಷ್ಟವಿಲ್ಲ. ಏನು ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅಷ್ಟಕ್ಕೂ, ಇಷ್ಟು ದೊಡ್ಡ ಧ್ವನಿವರ್ಧಕಗಳನ್ನು ಏಕೆ ಸ್ಥಾಪಿಸಲಾಗುತ್ತಿದೆ?ʼʼ ಎಂದು ಅವರು ಪ್ರಶ್ನಿಸಿದ್ದಾರೆ.

ತೀವ್ರ ಚರ್ಚೆ

ಸದ್ಯ ಸೈಯದ್ ಮೊಹಮ್ಮದ್ ಶಬ್ಬರ್ ಜೈದಿ ಅವರ ಈ ವಿಡಿಯೊ ಪಾಕಿಸ್ತಾನದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ನೆಟ್ಟಿಗರು ಬಗ್ಗೆ ವಿಧ ವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ. ಜೈದಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಇದು ಮೊದಲ ಸಲವೇನಲ್ಲ. ಅವರ ಆಗಾಗ ಪಾಕಿಸ್ತಾನದ ಜನರನ್ನು ಧಾರ್ಮಿಕ ನಡೆಯನ್ನು ಟೀಕಿಸುತ್ತ ಬಂದಿದ್ದಾರೆ. ಪಾಕಿಸ್ತಾನದಲ್ಲಿ ಧರ್ಮಗುರುಗಳ ಕೈಯಲ್ಲಿರುವ ಅಧಿಕಾರವು ಹಾನಿಕಾರಕವೆಂದು ಸಾಬೀತಾಗಿದೆ ಎಂದು ಜೈದಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಭಾರತದ ಕುರಿತು ಮೆಚ್ಚುಗೆ

ಇದೇ ವೇಳೆ ಜೈದಿ ಅವರು ಭಾರತವನ್ನು ಹೊಗಳಿದ್ದಾರೆ. ಇಲ್ಲಿನ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪಾಕಿಸ್ತಾನದೊಂದಿಗೆ ಹೋಲಿಸಿ ಭಾರತವನ್ನು ಶ್ಲಾಘಿಸಿದ್ದಾರೆ. ಮನಮೋಹನ್ ಸಿಂಗ್ ಅವರಂತಹ ನಾಯಕ ಪಾಕಿಸ್ತಾನಕ್ಕೆ ಇಲ್ಲ ಎಂದು ಜೈದಿ ಹೇಳಿದ್ದಾರೆ. ʼʼಅಂತಹವರು ಇಲ್ಲಿದ್ದರೆ ಇಂದು ಪಾಕಿಸ್ತಾನ ಇನ್ನಷ್ಟು ಬಲಿಷ್ಠವಾಗುತ್ತಿತ್ತು. ಆರ್ಥಿಕವಾಗಿ ದರಢವಾಗುತ್ತಿತ್ತು. 1992ರಲ್ಲಿ ಭಾರತ ಮತ್ತು ಪಾಕಿಸ್ತಾನದ ಪರಿಸ್ಥಿತಿ ಒಂದೇ ಆಗಿತ್ತು. ಭಾರತ ಇಂದು ಯಶಸ್ಸಿನ ಉತ್ತುಂಗಕ್ಕೇರಿದೆ. ಆದರೆ ಪಾಕಿಸ್ತಾನ ಇನ್ನೂ ಹಿಂದೆ ಇದೆ. ಅದಕ್ಕೆ ಕಾರಣ ಭಾರತದಲ್ಲಿ ಮನಮೋಹನ್ ಸಿಂಗ್ ಅವರಂತಹವರು ಇದ್ದರುʼʼ ಎಂದು ಮಾಜಿ ಪ್ರಧಾನಿಯ ಕುರಿತು ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.

ಕಾಶ್ಮೀರವನ್ನು ಮರೆತು ಬಿಡಿ

ಜತೆಗೆ ಅವರು ಪಾಕಿಸ್ತಾನವು ಕಾಶ್ಮೀರವನ್ನು ಮರೆತು ಬಿಡಿವುದು ಒಳಿತು ಎಂದು ಸಲಹೆ ನೀಡಿದ್ದಾರೆ. “ಪಾಕಿಸ್ತಾನವು ಕಾಶ್ಮೀರ, ಇಸ್ಲಾಂ ಇತ್ಯಾದಿಗಳನ್ನು ಮರೆತು ಭಾರತದ ಮುಂದೆ ಮಂಡಿಯೂರಿ ನಿಲ್ಲಬೇಕು. ನಾವು ಭಾರತಕ್ಕೆ ಸಮಾನರಲ್ಲ. ಪಾಕಿಸ್ತಾನ ಸೇನೆಗೆ ತನ್ನ ಸೈನಿಕರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲʼʼ ಎಂದೂ ಅವರು ಹೇಳಿದ್ದಾರೆ.

ಜೈದಿ ಅವರು 2019ರ ಮೇಯಿಂದ 2020ರ ಏಪ್ರಿಲ್‌ವರೆಗೆ ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವೆನ್ಯೂನ 26 ನೇ ಅಧ್ಯಕ್ಷರಾಗಿದ್ದರು. ಅವರು Panama Leaks – A Blessing in Disguise – Offshore Assets of Pakistani Citizens, A Journey for Clarity and Pakistan: Not a Failed State ಮುಂತಾದ ಪುಸ್ತಕ ಬರೆದಿದ್ದಾರೆ.

ಇದನ್ನೂ ಓದಿ: Hardeep Singh Nijjar: ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದನಂತೆ ನಿಜ್ಜರ್‌; ಖಲಿಸ್ತಾನಿ ಉಗ್ರನ ಬಗ್ಗೆ ಮತ್ತಷ್ಟು ಭೀಕರ ಸಂಗತಿ ಬಯಲು

Exit mobile version