Site icon Vistara News

Shehbaz Sharif: ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಮಾರಲು ನಿರ್ಧರಿಸಿದೆ ದಿವಾಳಿ ಪಾಕಿಸ್ತಾನ!

Shehbaz Sharif

Shehbaz Sharif

ಇಸ್ಲಾಮಾಬಾದ್:‌ ಆರ್ಥಿಕವಾಗಿ ದಿವಾಳಿಯಾಗಿರುವ, ಉತ್ತಮ ನಾಯಕ ಸಿಗದೆ ಆಡಳಿತಾತ್ಮಕವಾಗಿಯೂ ಅರಾಜಕತೆಯಿಂದ ಕೂಡಿರುವ, ಉಗ್ರರ ಪೋಷಣೆಗಾಗಿ ಜಾಗತಿಕವಾಗಿ ಹಣಕಾಸು ನೆರವು ಸಿಗದೆ ಒದ್ಡಾಡುತ್ತಿರುವ ಪಾಕಿಸ್ತಾನ(Pakistan) ಈಗ ಕಾರ್ಯತಂತ್ರದ ಘಟಕಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ (Shehbaz Sharif) ಮಂಗಳವಾರ ತಿಳಿಸಿದರು.

ಶೆಹಬಾಜ್ ಷರೀಫ್ ನೇತೃತ್ವದಲ್ಲಿ ನಡೆದ ಸರ್ಕಾರಿ ಉದ್ಯಮಗಳ (SOEs) ಖಾಸಗೀಕರಣ ಪ್ರಕ್ರಿಯೆಯ ಪರಿಶೀಲನಾ ಸಭೆಯ ನಂತರ ಈ ನಿರ್ಧಾರ ಪ್ರಕಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದು 2024ರಿಂದ 29ರವರೆಗೆ ಹಂತ ಹಂತವಾಗಿ ನಡೆಯಲಿರುವ ಖಾಸಗೀಕರಣದ ಮಾರ್ಗಸೂಚಿಯನ್ನು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

“ಲಾಭದಲ್ಲಿರಲಿ ಅಥವಾ ನಷ್ಟದಲ್ಲಿರಲಿ ಸರ್ಕಾರಿ ಸ್ವಾಮ್ಯದ ಎಲ್ಲ ಉದ್ಯಮಗಳನ್ನು ಖಾಸಗೀಕರಣಗೊಳಿಸಲಾಗುವುದು” ಎಂದು ಷರೀಫ್ ತಿಳಿಸಿದರು. ʼʼಈ ಕ್ರಮದಿಂದ ತೆರಿಗೆದಾರರ ಹಣವನ್ನು ಉಳಿಸಬಹುದುʼʼ ಎಂದು ಅವರು ಹೇಳಿದರು. ಆದರೆ ಯಾವ ಕ್ಷೇತ್ರಗಳನ್ನು ಕಾರ್ಯತಂತ್ರ ಮತ್ತು ಕಾರ್ಯತಂತ್ರೇತರ ಎಂದು ಪರಿಗಣಿಸಲಾಗುತ್ತದೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಹೊರ ಬಿದ್ದಿಲ್ಲ. ಹೀಗಾಗಿ ಯಾವೆಲ್ಲ ಕಂಪನಿಗಳು ಖಾಸಗೀಕರಣಕ್ಕೆ ಒಳಪಡುತ್ತವೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ 3 ಶತಕೋಟಿ ಡಾಲರ್‌ ಮೊತ್ತದ ಸಾಲದ ಪ್ಯಾಕೇಜ್‌ ಒದಗಿಸಲು ಐಎಂಎಫ್‌ (International Monetary Fund) ಸಮ್ಮತಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಐಎಂಎಫ್‌ನ ಶಿಫಾರಸ್ಸು

ಐಎಂಎಫ್‌ ಪಾಕಿಸ್ತಾನಕ್ಕೆ ಸೂಚಿದ ಶಿಫಾರಸ್ಸಿನ ಪಟ್ಟಿಯಲ್ಲಿ ನಷ್ಟದಲ್ಲಿರುವ ಸರ್ಕಾರಿ ಉದ್ಯಮಗಳ ಖಾಸಗೀಕರಣವೂ ಸೇರಿದೆ. ಸದ್ಯ ಪಾಕ್‌ ಹಣಕಾಸಿನ ಕೊರತೆಯಿಂದ ಬಳಲುತ್ತಿದೆ. ವಿದೇಶಿ ವಿನಿಮಯ ಮೀಸಲು ನಿಧಿ ಆಮದನ್ನು ಪೂರೈಸಲು ಸಾಕಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಕೆಲವು ಮಧ್ಯಪ್ರಾಚ್ಯ ದೇಶಗಳಿಗೆ ಹೋಲಿಸಿದರೆ ಪಾಕಿಸ್ತಾನದ ಸರ್ಕಾರಿ ಉದ್ಯಮಗಳು 2019ರಲ್ಲಿ ಜಿಡಿಪಿಯ ಶೇ. 44ರಷ್ಟು ಗಣನೀಯ ಪಾಲನ್ನು ಹೊಂದಿವೆ. 2019ರಲ್ಲಿ ಸುಮಾರು ಅರ್ಧದಷ್ಟು ಸರ್ಕಾರಿ ಉದ್ಯಮಗಳು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಐಎಂಎಫ್‌ ಹೇಳಿದೆ.

ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಿಂದಿನ ಖಾಸಗೀಕರಣ ಪ್ರಯತ್ನಗಳು ವಿಫಲವಾಗಿದ್ದವು ಎಂದು ಆರ್ಥಿಕ ತಜ್ಞರು ಕಂಡುಕೊಂಡಿದ್ದಾರೆ. ನಷ್ಟದಲ್ಲಿರುವ ಅತಿದೊಡ್ಡ ಉದ್ಯಮಗಳಲ್ಲಿ ಒಂದಾದ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ಸೇರಿದಂತೆ ಹಲವು ಎಸ್ಒಇಗಳಿಗೆ ಪಾಕಿಸ್ತಾನ ವರ್ಷಗಳಿಂದ ಶತಕೋಟಿ ಡಾಲರ್‌ ಖರ್ಚು ಮಾಡುತ್ತಿದೆ. ಸದ್ಯ ಇದು ಮಾರಾಟದ ಅಂತಿಮ ಹಂತದಲ್ಲಿದೆ. ಖರೀದಿದಾರರಿಗೆ ಈ ವಾರಾಂತ್ಯದವರೆಗೆ ಗಡುವು ನೀಡಲಾಗಿದೆ.

ಇದನ್ನೂ ಓದಿ: ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

ಮಾರಾಟ ಮಾಡಲು ನಿರ್ಧರಿಸಿರುವ ಪಟ್ಟಿಯಲ್ಲಿ ಅಮೆರಿಕದ ನ್ಯೂಯಾರ್ಕ್‌ನ ಮ್ಯಾನ್ಹ್ಯಾಟನ್‌ನಲ್ಲಿರುವ ಐಷಾರಾಮಿ ರೂಸ್‌ವೆಲ್ಟ್‌ ಹೋಟೆಲ್ ಮತ್ತು ಎರಡು ವಿಮಾ ಕಂಪೆನಿಗಳು ಸೇರಿವೆ. ಇದರ ಜತೆಗೆ ನಾಲ್ಕು ವಿದ್ಯುತ್ ಸ್ಥಾವರಗಳೂ ಇವೆ. ʼʼನಷ್ಟದಲ್ಲಿರುವ ಸರ್ಕಾರಿ ಉದ್ಯಮಗಳ ಖಾಸಗೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಹಂತ ಹಂತವಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆʼʼ ಎಂದು ಪ್ರಧಾನಿ ಶೆಹಬಾಜ್ ಷರೀಫ್ ವಿವರಿಸಿದ್ದಾರೆ.

Exit mobile version