ನ್ಯೂಯಾರ್ಕ್: ಅಮೆರಿಕದ ಲಾಸ್ ವೇಗಾಸ್‌ನ (Las Vegas) ನೆವಾಡಾ ವಿಶ್ವವಿದ್ಯಾಲಯದ (University of Nevada) ಕ್ಯಾಂಪಸ್‌ನಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಈ ಗುಂಡಿನ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ (Shooting At University).
“ನಮ್ಮ ತನಿಖಾಧಿಕಾರಿಗಳ ಪ್ರಕಾರ, ಮೂವರು ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಇನ್ನೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವೇಳೆ ಈ ಶೂಟ್‌ಔಟ್ ನಡೆಸಿದ ಶಂಕಿತ ವ್ಯಕ್ತಿ ಕೂಡ ಮೃತಪಟ್ಟಿದ್ದಾನೆ” ಎಂದು ಲಾಸ್ ವೇಗಾಸ್ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಸದ್ಯ ಪೊಲೀಸರು ಕ್ಯಾಂಪಸ್‌ನಲ್ಲಿ ತನಿಖೆ ನಡೆಸುತ್ತಿದ್ದಾರೆ. ಬಂದೂಕುಧಾರಿ 60ರ ಹರೆಯದ ಶಿಕ್ಷಣ ತಜ್ಞನಾಗಿದ್ದ ಎಂದು ತನಿಖೆಯ ಮೂಲಗಳು ತಿಳಿಸಿವೆ. ಹೆಚ್ಚಿನ ವಿವರಗಳನ್ನು ಇನ್ನಷ್ಟೇ ಲಭಿಸಬೇಕಿದೆ.
ಘಟನೆಯ ಹಿನ್ನೆಲೆ ಏನು?
ಬುಧವಾರ (ಡಿಸೆಂಬರ್ 6) ವಿಶ್ವವಿದ್ಯಾಲಯದ ಲೀ ಬಿಸಿನೆಸ್ ಸ್ಕೂಲ್‌ನ ಬೀಮ್ ಹಾಲ್ ಬಳಿ ಗುಂಡಿನ ದಾಳಿ ನಡೆಯಿತು. ಬೆಳಗ್ಗೆ ಸುಮಾರು 11.54ರ ಹೊತ್ತಿಗೆ ವಿಶ್ವವಿದ್ಯಾಲಯವು ಆನ್‌ಲೈನ್‌ನಲ್ಲಿ ತುರ್ತು ನೋಟಿಸ್ ಪೋಸ್ಟ್ ಮಾಡಿ, “ಬಿಇಎಚ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ವಿಶ್ವವಿದ್ಯಾಲಯ ಪೊಲೀಸರು ವಿದ್ಯಾರ್ಥಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆʼʼ ಎಂದು ತಿಳಿಸಿತ್ತು.
ಘಟನೆಯ ಬಗ್ಗೆ ಮಾತನಾಡಿದ ವಿದ್ಯಾರ್ಥಿಯೊಬ್ಬ , “ನಾನು ಉಪಾಹಾರ ಸೇವಿಸುತ್ತಿದ್ದೆ. ಆಗ ಮೂರು ಬಾರಿ ಜೋರಾದ ಶಬ್ದ ಕೇಳಿಸಿತು. ಏನೆಂದು ಅರ್ಥ ಆಗಿರಲಿಲ್ಲ. ಗೊಂದಲದಲ್ಲಿರುವಾಗಲೇ ಪೊಲೀಸರು ಬಂದರು. ನಂತರ ನಾನು ಒಳಗೆ ಓಡಿದೆ. ಎರಡು ನಿಮಿಷಗಳ ನಂತರ ಇನ್ನು ಹೆಚ್ಚಿನ ಗುಂಡಿನ ಮೊರೆತಗಳ ಶಬ್ದ ಕೇಳಿಸಿತು. ನಾನು ನೆಲಮಾಳಿಗೆಗಳಿಗೆ ತೆರಳಿದೆ. ಅಲ್ಲಿ ಸುಮಾರು 20 ನಿಮಿಷಗಳ ಕಾಲ ಆಶ್ರಯ ಪಡೆದಿದ್ದೆʼʼ ಎಂದು ಅವರು ವಿವರಿಸಿದ್ದಾರೆ. ಈ ಕ್ಯಾಂಪಸ್‌ನಲ್ಲಿ ಸುಮಾರು 30,000 ವಿದ್ಯಾರ್ಥಿಗಳಿದ್ದಾರೆ.
ಘಟನೆಯ ಬಳಿಕ ವಿಶ್ವವಿದ್ಯಾಲಯಗಳನ್ನು ದಿನವಿಡೀ ಮುಚ್ಚಲಾಯಿತು ಮತ್ತು ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಲಾಯಿತು ಎಂದು ವರದಿ ತಿಳಿಸಿದೆ. ಲಾಸ್ ವೇಗಾಸ್ ಮನರಂಜನಾ ಕೇಂದ್ರವಾಗಿದ್ದು, ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಇದನ್ನೂ ಓದಿ: LeT terrorist killed: ಉಧಮ್‌ಪುರ ದಾಳಿಯ ಮಾಸ್ಟರ್‌ಮೈಂಡ್ ಲಷ್ಕರೆ ಉಗ್ರ ಕರಾಚಿಯಲ್ಲಿ ಫಿನಿಷ್!
ಎರಡನೇ ಬಾರಿ ಶೂಟ್‌ಔಟ್
ಲಾಸ್ ವೇಗಾಸ್ ಇಂತಹ ಭೀಕರ ಗುಂಡಿನ ಕಾಳಗಕ್ಕೆ ಸಾಕ್ಷಿಯಾಗುತ್ತಿರುವುದು ಇದು ಎರಡನೇ ಬಾರಿ. 2017ರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಅಂದು ಮಾಂಡಲೆ ಬೇಯಲ್ಲಿರುವ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಸಂಗೀತ ಉತ್ಸವಕ್ಕೆ ನುಗ್ಗಿದ್ದ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ 59 ಜನರನ್ನು ಕೊಂದು 400 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದ. ಅದಾದ ಆರು ವರ್ಷಗಳ ನಂತರ ಈ ಗುಂಡಿನ ದಾಳಿ ನಡೆದಿದೆ. ಈ ಕ್ಯಾಂಪಸ್ ಆ ಮಾಂಡಲೆ ಬೇಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. ಈ ವರ್ಷ ಅಮೆರಿಕದಲ್ಲಿ 600ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿ ನಡೆದಿವೆ ಎಂದು ಅಂಕಿ-ಅಂಶಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ