Site icon Vistara News

Elon Musk: 14 ಸಾವಿರ ‘ಮೈಗಳ್ಳ’ ನೌಕರರನ್ನು ವಜಾಗೊಳಿಸಿದ ಎಲಾನ್ ಮಸ್ಕ್;‌ ಇನ್ನೊಂದು ಕಾರಣವೂ ಇದೆ!

Elon Musk

Elon Musk Flags Risk Of Poll Rigging In EVMs, BJP Leader Responds

ವಾಷಿಂಗ್ಟನ್:‌ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಗೆ ಜಗತ್ತಿನಾದ್ಯಂತ ಖ್ಯಾತಿ ಗಳಿಸಿರುವ, ಎಲಾನ್‌ ಮಸ್ಕ್‌ (Elon Musk) ಒಡೆತನದ ಟೆಸ್ಲಾ ಕಂಪನಿಯು (Tesla Company) ತನ್ನ ಒಟ್ಟು ನೌಕರರ ಶೇ.10ರಷ್ಟು ಎಂದರೆ 14 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸಲು (Tesla Layoffs) ತೀರ್ಮಾನಿಸಿದೆ. ಕೆಲಸದಿಂದ ವಜಾಗೊಳಿಸುವ ಕುರಿತು ಎಲಾನ್‌ ಮಸ್ಕ್‌ ಅವರೇ ಉದ್ಯೋಗಿಗಳಿಗೆ ಮೇಲ್‌ ಮಾಡಿದ್ದಾರೆ ಎಂದು ಎಲೆಕ್ಟ್ರಿಕ್.ಕಾಮ್‌ ಸಂಸ್ಥೆಯು ವರದಿ ಮಾಡಿದೆ. ಹಾಗಾಗಿ, ಶೀಘ್ರದಲ್ಲೇ 14 ಸಾವಿರ ನೌಕರರಿಗೆ ಟೆಸ್ಲಾ ‘ಪಿಂಕ್‌ ಸ್ಲಿಪ್‌’ ನೀಡಲಿದೆ ಎಂದು ತಿಳಿದುಬಂದಿದೆ.

“ಕಡಿಮೆ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಹೆಚ್ಚಿನ ಉತ್ಪಾದನೆಯತ್ತ, ಬೆಳವಣಿಗೆಯತ್ತ ದಾಪುಗಾಲು ಇಡುವುದು ಕಂಪನಿಗೆ ಅನಿವಾರ್ಯವಾಗಿದೆ. ಇದರಿಂದ ಕಂಪನಿಗೆ ಆಗುವ ವೆಚ್ಚವನ್ನು ತಗ್ಗಿಸುವುದು ಕೂಡ ಉದ್ದೇಶವಾಗಿದೆ. ಹಾಗಾಗಿ, ಮನಸ್ಸಿಲ್ಲದಿದ್ದರೂ ನಿಮಗೆ ಈ ಸಂದೇಶ ರವಾನಿಸುವ ಅನಿವಾರ್ಯತೆಗೆ ಸಿಲುಕಿದ್ದೇನೆ. ಶೀಘ್ರದಲ್ಲೇ ನೌಕರರನ್ನು ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ” ಎಂಬುದಾಗಿ ಎಲಾನ್‌ ಮಸ್ಕ್‌ ಅವರು ಮೇಲ್‌ ಮಾಡಿದ್ದಾರೆ ಎನ್ನಲಾಗಿದೆ. ದಕ್ಷವಾಗಿ ಕೆಲಸ ಮಾಡದ, ಮೈಗಳ್ಳ ನೌಕರರನ್ನು ಗುರುತಿಸಿ, ಅವರನ್ನು ವಜಾಗೊಳಿಸುವುದು ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕವಾಗಿ ಆರ್ಥಿಕ ಹಿಂಜರಿತ, ಕೊರೊನಾ ಕಾಲದಲ್ಲಿ ನಷ್ಟ, ಖರ್ಚು ತಗ್ಗಿಸುವ ಅನಿವಾರ್ಯತೆ ಸೇರಿ ಹಲವು ಕಾರಣಗಳಿಂದಾಗಿ ಜಗತ್ತಿನಾದ್ಯಂತ 2022 ಹಾಗೂ 2023ರಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಅದರಲ್ಲೂ, ಗೂಗಲ್‌, ಮೆಟಾ, ಮೈಕ್ರೋಸಾಫ್ಟ್‌ನಂತಹ ವಿಶ್ವವಿಖ್ಯಾತ ಕಂಪನಿಗಳೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಈಗಲೂ ಕೆಲ ಕಂಪನಿಗಳು ವಾರ್ಷಿಕವಾಗಿ ನಿಯಮಿತವಾಗಿ ನೌಕರರನ್ನು ವಜಾಗೊಳಿಸುತ್ತಲೇ ಇವೆ.

ಕೆಲ ತಿಂಗಳ ಹಿಂದಷ್ಟೇ, ಯುಪಿಐ ಪೇಮೆಂಟ್​ ಆ್ಯಪ್​ ಪೇಟಿಎಂನ ಮಾತೃಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ ತನ್ನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ 1,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿತ್ತು. ಪೇಟಿಎಂ ವಿವಿಧ ವ್ಯವಹಾರಗಳನ್ನು ಮರುಹೊಂದಿಸುವ ಪ್ರಕ್ರಿಯೆಯಲ್ಲಿದೆ. ಆದ್ದರಿಂದ, ವೆಚ್ಚವನ್ನು ಕಡಿತಗೊಳಿಸಲು ಮುಂದಾಗಿದೆ ಎಂದು ವರದಿ ಹೇಳಿದೆ. ಇದರರ್ಥ ಮುಂಬರುವ ತಿಂಗಳುಗಳಲ್ಲಿ ಕಂಪನಿಯಾದ್ಯಂತ ಇನ್ನಷ್ಟು ಮಂದಿ ಉದ್ಯೋಗ ಕಳೆದುಕೊಳ್ಳಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: Air India: 180 ಉದ್ಯೋಗಿಗಳನ್ನು ವಜಾಗೊಳಿಸಿದ ಏರ್‌ ಇಂಡಿಯಾ; ನೀಡಿದ ಕಾರಣ ಇಲ್ಲಿವೆ

Exit mobile version