ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ರಷ್ಯಾ ಖಾಸಗಿ ಸೇನಾಪಡೆ ವ್ಯಾಗ್ನರ್ ಗ್ರೂಪ್ ಬಂಡಾಯವು ಒಂದೇ ದಿನದಲ್ಲಿ ಥಂಡಾ ಹೊಡೆದಂತಿದೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ದಾಳಿ (Turmoil In Russia) ನಡೆಸುವ ಮೂಲಕ ಪುಟಿನ್ ಅವರಿಗೆ ಬಿಸಿ ಮುಟ್ಟಿಸಲು ಹೊರಟಿದ್ದ ಸೈನಿಕರನ್ನು ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರು ತಡೆದಿದ್ದು, ರಕ್ತಪಾತ ಬೇಡ ಎಂಬ ಆದೇಶ ಹೊರಡಿಸಿದ್ದಾರೆ. ಹಾಗಾಗಿ, ಬಂಡಾಯವು ಒಂದೇ ದಿನದಲ್ಲಿ ಶಮನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ದಾಳಿ ನಡೆಸಲು ಆರ್ಟಿಲರ್, ಯುದ್ಧ ಟ್ಯಾಂಕರ್‌ಗಳ ಸಮೇತ ವ್ಯಾಗ್ನರ್ ಸೈನಿಕರು ಹೊರಟಿದ್ದರು. ಮಾಸ್ಕೋದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿ ಸೈನಿಕರು ಬೀಡುಬಿಟ್ಟಿದ್ದರು. ಮಾಸ್ಕೋ ಮೇಲೆ ದಾಳಿ ನಡೆಸಲು ಸಕಲ ರೀತಿಯಲ್ಲಿ ಸಜ್ಜಾಗಿದ್ದರು. ಆದರೆ, ವ್ಯಾಗ್ನರ್ ಸೈನಿಕರು ದಾಳಿ ನಡೆಸಿದರೆ ಮಾಸ್ಕೋದಲ್ಲಿ ಭಾರಿ ಪ್ರಮಾಣದ ರಕ್ತಪಾತವಾಗುವ ಸಾಧ್ಯತೆ ಇರುವುದರಿಂದ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದು ಯೆವ್ಗೆನಿ ಪ್ರಿಗೋಜಿನ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: Turmoil In Russia: ಮಾಸ್ಕೋದತ್ತ ವ್ಯಾಗ್ನರ್ ಸೇನೆ ಲಗ್ಗೆ, ರಷ್ಯಾದಿಂದಲೇ ವ್ಲಾಡಿಮಿರ್ ಪುಟಿನ್ ಪಲಾಯನ
ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಡಾಯವೆದ್ದಿರುವ ಯೆವ್ಗೆನಿ ಪ್ರಿಗೋಜಿನ್ ಅವರು ಈಗಾಗಲೇ ಹಲವು ನಗರಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ಪುಟಿನ್ ವಿರುದ್ಧದ ದಂಗೆ ಎಂದು ಯೆವ್ಗೆನಿ ಪ್ರಿಗೋಜಿನ್ ಘೋಷಿಸಿದ್ದಾರೆ. ಹಾಗಾಗಿ, ಮಾಸ್ಕೋ ಮೇಲೆ ದಾಳಿ ನಡೆಸುವ ಮೂಲಕ ಪುಟಿನ್‌ಗೆ ಬಿಸಿ ಮುಟ್ಟಿಸಬೇಕು ಎಂಬ ಉದ್ದೇಶದಿಂದ ಮುನ್ನುಗ್ಗಲಾಗಿತ್ತು. ಈಗ ದಾಳಿಯನ್ನು ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ. ಹಾಗಾಗಿ, ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
ವ್ಲಾಡಿಮಿರ್ ಪುಟಿನ್ ಪಲಾಯನ?
ಉಕ್ರೇನ್ ಮೇಲೆ ಯುದ್ಧ ಸಾರಿ, ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ವ್ಲಾಡಿಮಿರ್ ಪುಟಿನ್ ಈಗ ದೇಶದಿಂದಲೇ ಪಲಾಯನ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ವ್ಯಾಗ್ನರ್ ಗ್ರೂಪ್ ಪಡೆಗಳು ಹಾಗೂ ಯೆವ್ಗೆನಿ ಪ್ರಿಗೋಜಿನ್ ಎಂಬ ಹಠಮಾರಿ ಸೇನಾಧಿಪತಿಯ ದಂಗೆಗೆ ಬೆಚ್ಚಿ ಪಲಾಯನ ಮಾಡಿರಬಹುದು. ವ್ಲಾಡಿಮಿರ್ ಪುಟಿನ್ ಸಂಚರಿಸುತ್ತಿದ್ದ ವಿಮಾನವು ರಡಾರ್ ಸಂಪರ್ಕ ಕಳೆದುಕೊಂಡಿರುವ ಕಾರಣ ಇಂತಹ ಗುಮಾನಿ ಇದೆ. ಆದರೆ, ಕ್ರೆಮ್ಲಿನ್ ಈ ಆರೋಪವನ್ನು ಅಲ್ಲಗಳೆದಿದೆ.