Site icon Vistara News

Ukraine Dam Blast: ಉಕ್ರೇನ್‌ನಲ್ಲಿ ಡ್ಯಾಮ್‌ ಸ್ಫೋಟ, ನೂರಾರು ಜನರ ಸಾವು; ಯುದ್ಧದ ಗಾಯಕ್ಕೆ ಜಲಕಂಟಕದ ಬರೆ

Dam Blast In Ukraine

Ukraine Dam Blast: 17,000 Rescued, Many Deaths, 24 Villages Flooded

ಕೀವ್:‌ 2022ರ ಫೆಬ್ರವರಿಯಿಂದಲೂ ಉಕ್ರೇನ್‌ ಮೇಲೆ ರಷ್ಯಾ ನಿರಂತರವಾಗಿ ಆಕ್ರಮಣ ಮಾಡುತ್ತಿರುವ ಕಾರಣ ಸಾವಿರಾರು ಜನ ಹತರಾಗಿದ್ದಾರೆ. ಲಕ್ಷಾಂತರ ಜನ ದೇಶವನ್ನೇ ಬಿಟ್ಟು ಹೋಗಿದ್ದಾರೆ. ಇನ್ನೂ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಈಗಲೂ ರಾಕೆಟ್‌, ಕ್ಷಿಪಣಿ, ಗುಂಡಿನ ಸದ್ದು ಜನರನ್ನು ಬೆಚ್ಚಿಬೀಳಿಸುತ್ತಲೇ ಇದೆ. ಇದರ ಬೆನ್ನಲ್ಲೇ ಉಕ್ರೇನ್‌ನ ಖೇರ್ಸನ್‌ನಲ್ಲಿರುವ ಜಲಾಶಯವೊಂದು ಸ್ಫೋಟಗೊಂಡಿದ್ದು (Ukraine Dam Blast), ಗ್ರಾಮಕ್ಕೆ ಗ್ರಾಮಗಳೇ ಮುಳುಗಿಹೋಗಿವೆ. ಸಾವಿರಾರು ಜನ ನಿರಾಶ್ರಿತರಾಗಿದ್ದು, ನೂರಾರು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ರಷ್ಯಾ ದಾಳಿಗೆ ನಲುಗಿರುವ ಉಕ್ರೇನ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಿಪ್ರೋ ನದಿಗೆ ಅಡ್ಡಲಾಗಿ ಕಟ್ಟಿರುವ (Dnipro River) ನೋವಾ ಕಖೋವಾ ಜಲಾಶಯವು ಕೆಲವೇ ಸೆಕೆಂಡ್‌ಗಳಲ್ಲಿ ಸ್ಫೋಟಗೊಂಡಿದೆ. ಡ್ಯಾಮ್‌ ಮೇಲೆ ದಾಳಿ ನಡೆಸಿದ ಕಾರಣ ಅದು ಕುಸಿದಿದೆ ಎಂದು ತಿಳಿದುಬಂದಿದೆ. ಡ್ಯಾಮ್‌ ಸ್ಫೋಟದಿಂದ ಸುಮಾರು 24 ಗ್ರಾಮಗಳು ಸಂಪೂರ್ಣವಾಗಿ ಮುಳುಗಿವೆ. ಇದುವರೆಗೆ 17 ಸಾವಿರ ಜನರನ್ನು ರಕ್ಷಿಸಲಾಗಿದ್ದು, ಇನ್ನೂ 42 ಸಾವಿರ ಜನರ ಪರಿಸ್ಥಿತಿ ಅತಂತ್ರವಾಗಿದೆ. ಗ್ರಾಮಕ್ಕೆ ಗ್ರಾಮಗಳೇ ಮುಳುಗಿದ ಕಾರಣ ನೂರಾರು ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹೀಗಾಗಿದೆ ಜಲಪ್ರಳಯ

ಇದನ್ನೂ ಓದಿ: Naatu Naatu : ಉಕ್ರೇನ್‌ನ ಯೋಧರಿಂದಲೂ ನಾಟು ನಾಟು ಡ್ಯಾನ್ಸ್‌! ಸಕತ್‌ ಆಗಿದೆ ಇಲ್ಲಿರುವ ಟ್ವಿಸ್ಟ್‌

ನೋವಾ ಕಖೋವಾ ಡ್ಯಾಮ್‌ ಸ್ಫೋಟಗೊಂಡ ಕಾರಣ ರಕ್ಷಣಾ ಕಾರ್ಯಾಚರಣೆ ವೇಗವಾಗಿ ಸಾಗುತ್ತಿದೆ. ಆದರೆ, ಖೇರ್ಸನ್‌ ಸುತ್ತಮುತ್ತ ನೀರೇ ಆವರಿಸಿರುವ ಕಾರಣ ಜನರ ರಕ್ಷಣೆಯೂ ತೊಂದರೆಯಾಗುತ್ತಿದೆ. ಇನ್ನು ಪ್ರಾಣಿ ಸಂಗ್ರಹಾಲಯಗಳು ಕೂಡ ಮುಳುಗಿಹೋದ ಕಾರಣ ಇದುವರೆಗೆ 300ಕ್ಕೂ ಅಧಿಕ ಪ್ರಾಣಿಗಳು ಮೃತಪಟ್ಟಿವೆ. ಸ್ಫೋಟದ ಕಾರಣ ಜಲಾಶಯಕ್ಕೆ 150 ಟನ್‌ ಎಂಜಿನ್‌ ಆಯಿಲ್‌ ಬಿದ್ದಿದ್ದು, ಇದರಿಂದ ಪರಿಸರದ ಮೇಲೂ ಪರಿಣಾಮ ಬೀರಲಿದೆ. ನೀರು ಕುಡಿದವರಿಗೆ ಅಪಾಯ ತಪ್ಪಿದ್ದಲ್ಲ ಎಂಬ ಎಚ್ಚರಿಕೆ ನೀಡಲಾಗಿದೆ.

ಡ್ಯಾಮ್‌ ಮೇಲೆ ರಷ್ಯಾ ದಾಳಿ?

ಒಂದು ವರ್ಷಕ್ಕೂ ಅಧಿಕ ಸಮಯದಿಂದ ನಿರಂತರವಾಗಿ ಉಕ್ರೇನ್‌ ಮೇಲೆ ದಾಳಿ ಮಾಡುತ್ತಿರುವ ರಷ್ಯಾವೇ ನೋವಾ ಕಖೋವಾ ಡ್ಯಾಮ್‌ ಮೇಲೂ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ರಷ್ಯಾ ಮೇಲೆ ಉಕ್ರೇನ್‌ ಆರೋಪ ಮಾಡಿದೆ. ರಷ್ಯಾ ಮಾತ್ರ ಇಂತಹ ಕ್ರೌರ್ಯ ಮೆರೆಯಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಆದರೆ, ಡ್ಯಾಮ್‌ ಮೇಲಿನ ದಾಳಿಯನ್ನು ರಷ್ಯಾ ನಿರಾಕರಿಸಿದೆ. ಉಕ್ರೇನ್‌ ತಾನೇ ದಾಳಿ ಮಾಡಿ, ನಮ್ಮ ಮೇಲೆ ಆರೋಪ ಮಾಡುತ್ತಿದೆ ಎಂದು ರಷ್ಯಾ ಹೇಳಿದೆ. ದಾಳಿಯ ಬಳಿಕವೂ ಎದೆಗುಂದದ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ, ಡ್ಯಾಮ್‌ ಮೇಲೆ ದಾಳಿಯಾದರೂ ಮಿಲಿಟರಿ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ರಷ್ಯಾಗೆ ತಿರುಗೇಟು ನೀಡಿದ್ದಾರೆ.

Exit mobile version