ನವ ದೆಹಲಿ: ಉಕ್ರೇನ್‌ನ ನಾಲ್ಕು ಪ್ರದೇಶಗಳು ತಮ್ಮ ದೇಶದ್ದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಘೋಷಿಸುತ್ತಿದ್ದಂತೆ, ನ್ಯಾಟೋ(NATO) ಸದಸ್ಯತ್ವವನ್ನು ಶೀಘ್ರವಾಗಿ ಪರಿಗಣಿಸುವಂತೆ ಉಕ್ರೇನ್ (Ukraine) ಅಧ್ಯಕ್ಷ ಜೆಲನ್‌ಸ್ಕೀ ಅವರು ಯುರೋಪ್ ರಾಷ್ಟ್ರಗಳಿಗೆ ಕೋರಿದ್ದಾರೆ.
ಒಕ್ಕೂಟದ ಮಾನದಂಡಗಳೊಂದಿಗೆ ನಮ್ಮ ಹೊಂದಾಣಿಕೆಯನ್ನು ನಾವು ಈಗಾಗಲೇ ಸಾಬೀತುಪಡಿಸಿದ್ದೇವೆ. ನ್ಯಾಟೋ(NATO)ಗೆ ವೇಗವಾಗಿ ಸೇರ್ಪಡೆಯಾಗುವ ಸಂಬಂಧ ಉಕ್ರೇನ್ (Ukraine) ಸಲ್ಲಿಸಿರುವ ಅರ್ಜಿಗೆ ಸಹಿ ಹಾಕುವ ಮೂಲಕ ನಾವು ನಿರ್ಣಾಯಕ ಹೆಜ್ಜೆ ಇಡಬೇಕು ಎಂದು ಉಕ್ರೇನ್ ಅಧ್ಯಕ್ಷ ಜೆಲನ್‌ಸ್ಕೀ ಅವರು ಟೆಲಿಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಮತ್ತೊಂದೆಡೆ, ಸೋಷಿಯಲ್ ಮೀಡಿಯಾ ವೇದಿಕೆಗಳ ಉಕ್ರೇನ್ ಅಧ್ಯಕ್ಷೀಯ ಖಾತೆಯಲ್ಲೂ ಜೆಲನ್‌ಸ್ಕೀ ಅವರ ವಿಡಿಯೋ ಸಂದೇಶವನ್ನು ಷೇರ್ ಮಾಡಲಾಗಿದೆ. ಉಕ್ರೇನ್ ನ್ಯಾಟೋ ಪಡೆಯನ್ನು ರಷ್ಯಾ ತೀವ್ರವಾಗಿ ವಿರೋಧಿಸಿತ್ತು. ಆದರೆ, ಉಕ್ರೇನ್ ಈ ವಿರೋಧವನ್ನು ಕ್ಯಾರೇ ಎಂದಿರಲಿಲ್ಲ. ಇದಕ್ಕೆ ಪ್ರತಿಯಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ಫೆಬ್ರವರಿಯಲ್ಲಿ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಉಕ್ರೇನ್ ಮೇಲಿನ ಯುದ್ಧ ಈವರೆಗೂ ನಡೆದುಕೊಂಡು ಬಂದಿದೆ.
ಏತನ್ಮಧ್ಯೆ, ಉಕ್ರೇನ್ ನಾಲ್ಕು ಪ್ರಾಂತ್ಯಗಳು ರಷ್ಯಾಗೆ ಸೇರಿದ್ದವು ಎಂದು ಗುರುವಾರವಷ್ಟೇ ರಷ್ಯಾ ಅಧ್ಯಕ್ಷರು ಘೋಷಿಸಿದ್ದರು. ಇದಕ್ಕೆ ಪ್ರತಿಯಾಗಿ ಈಗ ನ್ಯಾಟೋ ಸದಸ್ಯತ್ವವನ್ನು ತ್ವರಿತವಾಗಿ ನೀಡಬೇಕೆಂದು ಯುರೋಪಿಯನ್ ರಾಷ್ಟ್ರಗಳಿಗೆ ಜೆಲನ್‌ಸ್ಕೀ ಅವರು ಕೋರಿದ್ದಾರೆ.
ಇದನ್ನೂ ಓದಿ | ಉಕ್ರೇನ್ ಪರಿಸ್ಥಿತಿ ಬಗ್ಗೆ ಮತ್ತೊಮ್ಮೆ ಭಾರತ ಕಳವಳ, ಮಾತುಕತೆಗೆ ಒತ್ತಾಯ