ನವದೆಹಲಿ: ಕಾರಿನಿಂದ ಇಳಿಯದ ಕಪ್ಪು ವರ್ಣದ ಗರ್ಭಿಣಿ ಯುವತಿಯನ್ನು (Pregnant Black Woman) ಅಮೆರಿಕದ ಒಹಿಯೋ ಪೊಲೀಸ್ (Ohio police) ಶೂಟ್ ಮಾಡಿ ಹತ್ಯೆ ಮಾಡಿದ ವಿಡಿಯೋ ಭಾರೀ ವೈರಲ್ ಆಗಿದೆ(Viral Video). ಈ ಘಟನೆಯ ಆಗಸ್ಟ್ 24ರಂದು ನಡೆದಿದ್ದು, ಹತ್ಯೆಗೀಡಾದ ಗರ್ಭಿಣಿಯನ್ನು 21 ವರ್ಷದ ತಾ’ಕಿಯಾ ಎಂದು ಗುರುತಿಸಲಾಗಿದೆ. ನ್ಯೂಯಾರ್ಕ್ ಪೋಸ್ಟ್ (New York Post) ಪತ್ರಿಕೆಯ ವರದಿಯ ಪ್ರಕಾರ, ಕಳ್ಳತನಕ್ಕೆ ಸಂಬಂಧಿಸಿದಂತೆ ತರುಣ ಗರ್ಭಿಣಿಯನ್ನು ಒಹಿಯೋ ಪೊಲೀಸರು ಪ್ರಶ್ನಿಸುತ್ತಿರುತ್ತಾರೆ. ಕಾರಿನಿಂದ ಹೊರ ಬರುವಂತೆ ಸೂಚಿಸಲಾಗುತ್ತದೆ. ಆದರೆ, ಯುವತಿ ಹೊರ ಬರಲು ನಿರಾಕರಿಸುತ್ತಾರೆ. ಕಾರ್ ಮುಂದಿನಿಂದ ಪೊಲೀಸ್ ಒಬ್ಬ ಅವಳತ್ತ ಗನ್‌ನಿಂದ ಗುರಿ ಇಡುತ್ತಾರೆ. ಕಾರ್ ಮುಂದೆ ಚಲಿಸುತ್ತಿದ್ದಂತೆ ಪೊಲೀಸ್ ಆಕೆಗೆ ನೇರವಾಗಿ ಶೂಟ್ ಮಾಡುತ್ತಾರೆ. ಈ ಎಲ್ಲ ದೃಶ್ಯಗಳು ಪೊಲೀಸರ ಬಾಡಿಕ್ಯಾಮ್‌ನಲ್ಲಿ (Police Bodycam) ಸೆರೆಯಾಗಿದ್ದು, ಅವುಗಳನ್ನು ಈಗ ಬಹಿರಂಗ ಮಾಡಲಾಗಿದೆ.
ಕಪ್ಪು ವರ್ಣದ ಗರ್ಭಿಣಿಗೆ ಪೊಲೀಸ್ ಶೂಟ್ ಮಾಡಿದ ದೃಶ್ಯಗಳು
ಬ್ಲೆಂಡನ್ ಟೌನ್‌ಶಿಪ್ ಪೋಲೀಸ್ ಡಿಪಾರ್ಟ್‌ಮೆಂಟ್ ಹಂಚಿಕೊಂಡ ವೀಡಿಯೊದಲ್ಲಿ, ಮಹಿಳೆ ತನ್ನ ಕಪ್ಪು ಸೆಡಾನ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಆದರೆ ಅಧಿಕಾರಿಯೊಬ್ಬರು “ಕಾರಿನಿಂದ ಇಳಿಯಿರಿ” ಎಂದು ಪದೇ ಪದೇ ಕೇಳುತ್ತಾರೆ. ಅವಳು ಅದೇ ರೀತಿ, ಯಾಕೆ ಇಳಿಯಬೇಕು ಎಂದು ಪ್ರಶ್ನಿಸುತ್ತಾಳೆ ಮತ್ತು “ನಾನು ಕಾರಿನಿಂದ ಇಳಿಯುವುದಿಲ್ಲ.” ಆಗ ಪೊಲೀಸರು, “ನೀವು ವಸ್ತುಗಳನ್ನು ಕದ್ದಿದ್ದೀರಿ” ಎನ್ನುತ್ತಾರೆ. ಆಗ, ಇಲ್ಲ ನಾನು ಕದ್ದಿಲ್ಲ. ಬೇರೆ ಹುಡುಗಿಯರು ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಉತ್ತರಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಬಳಿಕ, ಇಬ್ಬರು ಪೊಲೀಸರ ಪೈಕಿ ಒಬ್ಬ ಪೊಲೀಸ್ ಯುವತಿಯ ಕಾರು ಮುಂಭಾಗದಲ್ಲಿ ನಿಲ್ಲುತ್ತಾರೆ. ಕಾರಿನಿಂದ ಹೊರ ಬರುವಂತೆ ಕಿರುಚುತ್ತಾನೆ. ಆತನ ಕರೆಯನ್ನು ನಿರ್ಲಕ್ಷಿಸುವ ಯುವತಿಯು ಕಾರಿನ ವೇಗವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಾಳೆ. ಆಗ ಪೊಲೀಸ್ ಅಧಿಕಾರಿಯು ಆಕೆಯತ್ತ ಗುಂಡು ಹಾರಿಸುತ್ತಾನೆ. ಯುವತಿ ಗುಂಡು ತಗಲುತ್ತದೆ ಮತ್ತು ಕಾರು ನಿಧಾನವಾಗಿ ಕಿರಾಣಿ ಅಂಗಡಿಯ ಇಟ್ಟಿಗೆ ಗೋಡೆಗೆ ಅಪ್ಪಳಿಸುವ ಮೊದಲು ನಿಧಾನವಾಗಿ ಕಾರು ಚಲಿಸುತ್ತಿರುತ್ತದೆ, ಪೊಲೀಸರು ಕಾರು ನಿಲ್ಲಿಸುವಂತೆ ಕೂಗುತ್ತಾರೆ. ಆದರೆ, ಯಾವುದೇ ಪ್ರಯೋಜನವಾಗುವುದಿಲ್ಲ.
ಈ ಸುದ್ದಿಯನ್ನೂ ಓದಿ: ಗಂಡನ ಕಿರುಕುಳ, ಸೀಮಂತ ಮಾಡಿದ ಮೂರೇ ದಿನಕ್ಕೆ ಗರ್ಭಿಣಿ ಆತ್ಮಹತ್ಯೆ
ಎರಡನೇ ಅಧಿಕಾರಿಯು ಬಾಗಿಲನ್ನು ತೆರೆಯಲು ಪ್ರಯತ್ನಿಸಿದರೂ ವಿಫಲನಾಗುತ್ತಾರೆ. ನಂತರ ಅವರು ಕಾರಿನ ಸೆಂಟರ್ ಕನ್ಸೋಲ್‌ನ ಮೇಲೆ ಬಿದ್ದ ಯವತಿಯನ್ನು ಹೊರ ತೆಗೆಯುವುದಕ್ಕಾಗಿ ಆಕೆಯ ಕಡೆಗಿನ ಗಾಜನ್ನು ಒಡೆದು ಹಾಕುತ್ತಾರೆ. ಇಬ್ಬರು ಮಕ್ಕಳ ತಾಯಿಯಾಗಿರುವ ಮತ್ತು ಮತ್ತೊಂದು ಮಗುವಿಗೆ ಜನ್ಮ ನೀಡಲಿದ್ದ ತಾ’ಕಿಯಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗುತ್ತದೆಯಾದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಆಕೆ, ನವೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ತಾ’ಕಿಯಾ ಕುಟುಂಬದ ಸದಸ್ಯರು ಪೊಲೀಸರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಈ ಘಟನೆಯನ್ನು ತಪ್ಪಿಸಬಹುದಾಗಿತ್ತು ಮಾತ್ರವಲ್ಲದೇ, ಪೊಲೀಸ್ ಅಧಿಕಾರಿಗಳು ತಮಗೆ ನೀಡಿದ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಒಹಿಯೋ ಕ್ರಿಮಿನಲ್ ತನಿಖಾ ಕೇಂದ್ರ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಯನ್ನು ಆರಂಭಿಸಿದೆ.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.