Site icon Vistara News

US Midterm Elections | ಜನಪ್ರತಿನಿಧಿಗಳ ಸಭೆಯ 199 ಸೀಟುಗಳು ರಿಪಬ್ಲಿಕ್, 172 ಡೆಮಾಕ್ರಟಿಕ್ ಪಾಲು!

US Midterm Election

ವಾಷಿಂಗ್ಟನ್: ಅಮೆರಿಕದ ಕಾಂಗ್ರೆಸ್‌(ಸಂಸತ್ತು)ಗೆ ನಡೆದ ಮಿಡ್ ಟರ್ಮ್ ಚುನಾವಣೆ (US Midterm Elections) ಫಲಿತಾಂಶ ಪ್ರಕಟವಾಗುತ್ತಿದ್ದು, ಜನಪ್ರತಿನಿಧಿಗಳ ಸಭೆ(House of Representative)ಗೆ ರಿಪಬ್ಲಿಕನ್ನರು ಲಗ್ಗೆ ಹಾಕುತ್ತಿದ್ದರೆ, ಸೆನೆಟ್‌(ಮೇಲ್ಮನೆ)ಗೆ ಡೆಮಾಕ್ರಟಿಕ್ ಮತ್ತು ರಿಪಬ್ಲಿಕ್ ಪಕ್ಷದ ಮಧ್ಯೆ ನೆಕ್‌ ಟು ನೆಕ್ ‌ಸ್ಪರ್ಧೆ ಏರ್ಪಟ್ಟಿದೆ. ಜನಪ್ರತಿನಿಧಿಗಳ ಸಭೆ ಒಟ್ಟು 435 ಬಲ ಹೊಂದಿದೆ. ಈ ಪೈಕಿ 371 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ರಿಪಬ್ಲಿಕ್ ಪಾರ್ಟಿ 199 ಸ್ಥಾನಗಳನ್ನು ಗೆದ್ದುಕೊಂಡು ಮುನ್ನಡೆಯಲ್ಲಿದ್ದರೆ, ಡೆಮಾಕ್ರಟಿಕ್ ಕೇವಲ 172 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಬಹುಮತಕ್ಕೆ 218 ಸ್ಥಾನಗಳನ್ನು ಗೆಲ್ಲಬೇಕು.

ಇನ್ನು ಅಮೆರಿಕದ ಸೆನೆಟ್‌ಗೆ ಉಭಯ ಪಕ್ಷಗಳ ಮಧ್ಯೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಈವರೆಗೆ ಪ್ರಕಟವಾಗಿರುವ ಫಲಿತಾಂಶದಲ್ಲಿ ಡೆಮಾಕ್ರಟಿಕ್ 46 ಮತ್ತು ರಿಪಬ್ಲಿಕ್ 47 ಸ್ಥಾನಗಳನ್ನು ಗೆದ್ದುಕೊಂಡಿದೆ. ಸೆನೆಟ್ ಒಟ್ಟು 100 ಸದಸ್ಯರನ್ನು ಹೊಂದಿದೆ.

ಅಮೆರಿಕ ಸಂಸತ್ತನ್ನು ಕಾಂಗ್ರೆಸ್(Congress) ಎಂದು ಕರೆಯಲಾಗುತ್ತದೆ. ಇಲ್ಲೂ ದ್ವಿಸದನ ಪದ್ಧತಿಯು ಜಾರಿಯಲ್ಲಿದ್ದು, ಮೇಲ್ಮನೆಯನ್ನು ‘ಸೆನೆಟ್’ ಎಂದೂ ಮತ್ತು ಕೆಳಮನೆಯನ್ನು ‘ಜನಪ್ರತಿನಿಧಿಗಳ ಸಭೆ’ ಎಂದು ಕರೆಯಲಾಗುತ್ತದೆ. ಅಮೆರಿಕ ಕಾಂಗ್ರೆಸ್ ಒಟ್ಟಾರೆ 535 ಸದಸ್ಯರನ್ನು ಒಳಗೊಂಡಿದೆ.

ಜನಪ್ರತಿನಿಧಿಗಳ ಸಭೆಯ ರೇಸಿನಲ್ಲಿ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷವೂ ತೀವ್ರ ಹಿನ್ನಡೆಯನ್ನು ಅನುಭವಿಸುತ್ತಿದೆ. ಜನರು ರಿಪಬ್ಲಿಕ್ ಪಕ್ಷದತ್ತ ವಾಲುತ್ತಿರುವುದು ನಿಚ್ಚಳವಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ಕಾರ್ಯನಿರ್ಹವಣೆ ಸರಿಯಾಗಿಲ್ಲ ಎಂಬುದು ಈ ಫಲಿತಾಂಶವು ಸಾರಿ ಹೇಳುತ್ತಿದೆ. ಹಾಗಾಗಿ, ಮುಂಬರುವ 2024ರ ಅಧ್ಯಕ್ಷೀಯ ಚುನಾವಣೆಗೆ ಅವರನ್ನು ಡೆಮಾಕ್ರಟಿಕ್ ಪಕ್ಷವೂ ಪರಿಗಣಿಸುವುದು ಅಸಾಧ್ಯದ ಮಾತು ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ಮತ್ತೊಂದೆಡೆ, ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರೀ ಸೋಲು ಕಂಡಿದ್ದ ರಿಪಬ್ಲಿಕ್ ಮತ್ತೆ ಪುಟಿದೇಳುವ ಸಾಧ್ಯತೆಗಳ ಸಂದೇಶವನ್ನು ಈ ಮಿಡ್ ಟರ್ಮ್ ಎಲೆಕ್ಷನ್ ರವಾನಿಸಿದೆ.

ಇದನ್ನೂ ಓದಿ | Pramila Jayapal | ಭಾರತಕ್ಕೆ ವಾಪಸ್ ಹೋಗಿ! ಇಂಡಿಯನ್ ಅಮೆರಿಕನ್ ಮಹಿಳಾ ಸಂಸದೆಗೆ ಧಮ್ಕಿ!

Exit mobile version