Site icon Vistara News

ಖಾಸಗಿ ವಿಮಾನದ ಎಡವಟ್ಟು; ಬೀಚ್‌ ಹೌಸ್‌ನಿಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸ್ಥಳಾಂತರ

Joe Biden

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (US President Joe Biden) ಅವರ ಬೀಚ್‌ ಹೋಂ (ವಿಶ್ರಾಂತಿ ಗೃಹ)ನ ನಿರ್ಬಂಧಿತ ವಾಯುಪ್ರದೇಶಕ್ಕೆ ಖಾಸಗಿ ವಿಮಾನವೊಂದು ಪ್ರವೇಶಿಸಿ ಹಾರಾಟ ನಡೆಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೈಡೆನ್‌ ಮತ್ತು ಅವರ ಪತ್ನಿ ಜಿಲ್‌ ಬೈಡೆನ್‌ರನ್ನು ಬೀಚ್‌ ಹೌಸ್‌ನಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು ಎಂದು ವೈಟ್‌ ಹೌಸ್‌ ತಿಳಿಸಿದೆ.

ಬೈಡೆನ್‌ ತಮ್ಮ ಪತ್ನಿಯೊಂದಿಗೆ ರೆಹೋಬೋತ್ ಬೀಚ್ ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆ ಪ್ರದೇಶದ ಸುತ್ತಮುತ್ತ ವಾಯುಪ್ರದೇಶ ನಿರ್ಬಂಧಿತವಾಗಿರುತ್ತದೆ. ಆದರೆ ಖಾಸಗಿ ವಿಮಾನವೊಂದು ತಪ್ಪಾಗಿ ಹಾರಾಟ ನಡೆಸಿ, ಅಲ್ಲಿಗೆ ಪ್ರವೇಶಿಸಿತ್ತು. ʼಜೋ ಬೈಡೆನ್‌ ಮತ್ತು ಜಿಲ್‌ ಬೈಡೆನ್‌ಗಾಗಲೀ ಯಾವ ಬೆದರಿಕೆಯೂ ಇಲ್ಲ. ಆದರೆ ಇಂಥ ಪ್ರಮಾದವಾದಾಗ ನಾವೂ ನಮ್ಮ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಬೇರೆಡೆಗೆ ಕರೆದೊಯ್ಯಲಾಗಿತ್ತು. ಈಗ ಮತ್ತೆ ಅವರಿಬ್ಬರೂ ಬೀಚ್‌ ಹೌಸ್‌ಗೆ ಮರಳಿದ್ದಾರೆʼ ಎಂದೂ ಶ್ವೇತಭವನ ತಿಳಿಸಿದೆ.

ಖಾಸಗಿ ವಿಮಾನ ಈ ನಿರ್ಬಂಧಿತ ಪ್ರದೇಶಕ್ಕೆ ತಪ್ಪಾಗಿ ಪ್ರವೇಶ ಮಾಡಿತು. ತಕ್ಷಣವೇ ಅದನ್ನು ವಾಪಸ್‌ ಕಳಿಸಲಾಯಿತು. ಭದ್ರತಾ ಸಿಬ್ಬಂದಿ ಕೂಡಲೇ ಅಲರ್ಟ್‌ ಆದರು. ವಿಮಾನ ಹಾರಾಟಕ್ಕೆ ಸಂಬಂಧಪಟ್ಟ ನಿಯಮಗಳನ್ನು ಖಾಸಗಿ ವಿಮಾನದ ಪೈಲಟ್‌ ಪಾಲಿಸದೆ ಇರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಪರಿಶೀಲನೆ ನಡೆಸುತ್ತೇವೆ ಎಂದು ಯುಎಸ್‌ನ ಕಾನೂನು ಮತ್ತು ಸುವ್ಯವಸ್ಥೆ ಇಲಾಖೆ ಸೀಕ್ರೆಟ್‌ ಸರ್ವೀಸ್‌ ತಿಳಿಸಿದೆ.

ಇದನ್ನೂ ಓದಿ: ರಷ್ಯಾದ ಆಕ್ರಮಣ ವಿರೋಧಿಸಲು ಭಾರತಕ್ಕೆ ಭಯವಿದೆ: ಬೈಡನ್‌

ಅಮೆರಿಕದಲ್ಲಿ ಅಧ್ಯಕ್ಷರು ಹೀಗೆ ವಿಶ್ರಾಂತಿಗಾಗಿ ಹೋಗುವುದು ಸಾಮಾನ್ಯ. ಆ ಪ್ರದೇಶದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗುತ್ತದೆ. ಅಲ್ಲಿನ ವಾಯುಪ್ರದೇಶವನ್ನೂ ನಿರ್ಬಂಧಗೊಳಿಸಲಾಗುತ್ತದೆ ಮತ್ತು ಅದನ್ನು ಉಲ್ಲಂಘಿಸುವ ವಿಮಾನಗಳನ್ನು ತಡೆ ಹಿಡಿಯಲು ಯುಎಸ್‌ ಮಿಲಿಟರಿ ವಿಮಾನಗಳು, ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿರುತ್ತದೆ. ಹಾಗೊಮ್ಮೆ ಯಾರಾದರೂ ತಪ್ಪಾಗಿ ಪ್ರವೇಶ ಮಾಡಿದರೂ ಅದರ ಪೈಲಟ್‌ನನ್ನು ತೀವ್ರ ವಿಚಾರಣೆಗ ಒಳಪಡಿಸಲಾಗುತ್ತದೆ ಬಳಿಕ ಅಲ್ಲಿಂದ ಹೊರ ಹೋಗಲು ಪರ್ಯಾಯ ಮಾರ್ಗವನ್ನು ಸೂಚಿಸಲಾಗುತ್ತದೆ.

ಇದನ್ನೂ ಓದಿ: ಅಮೆರಿಕದಲ್ಲಿ ಸ್ಮಶಾನ-ಚರ್ಚ್‌ನಲ್ಲಿ ಗುಂಡಿನ ದಾಳಿ; ಇಬ್ಬರು ಸಾವು, ಇಬ್ಬರಿಗೆ ಗಾಯ

Exit mobile version