ಯುಎಸ್ ಅಧ್ಯಕ್ಷ ಜೋ ಬೈಡೆನ್ (Joe Biden) ಅವರು ಏರ್ಫೋರ್ಸ್ ವಿಮಾನ ಹತ್ತುವ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಅವರು ಹೀಗೆ ಬೀಳುತ್ತಿರುವುದು ಎರಡನೇ ಬಾರಿ. 2021ರ ಮಾರ್ಚ್ ತಿಂಗಳಲ್ಲಿ ಕೂಡ ಜೋ ಬೈಡೆನ್ ಅವರು ಏರ್ಫೋರ್ಸ್ ವಿಮಾನ ಏರುವ ವೇಳೆ, ಮೂರು ಬಾರಿ ಎಡವಿದ್ದರು. ಆ ವಿಡಿಯೊ ವೈರಲ್ ಆಗಿತ್ತು. ಈ ಸಲ ಅವರು ಪೋಲ್ಯಾಂಡ್ನ ವಾರ್ಸಾದಲ್ಲಿ ಏರ್ಫೋರ್ಸ್ ಒನ್ ವಿಮಾನ ಹತ್ತುವ ವೇಳೆ ಮೆಟ್ಟಿಲುಗಳ ಮೇಲೆ ಮುಗ್ಗರಿಸಿದ ವಿಡಿಯೊ ವೈರಲ್ ಆಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಇತ್ತೀಚೆಗೆ ಉಕ್ರೇನ್ ಮತ್ತು ಪೋಲ್ಯಾಂಡ್ಗೆ ಭೇಟಿ ಕೊಟ್ಟಿದ್ದರು. ಪೋಲ್ಯಾಂಡ್ ಪ್ರವಾಸ ಮುಗಿಸಿ ವಾಪಸ್ ಅಮೆರಿಕಕ್ಕೆ ಹೊರಡುವ ವೇಳೆ ಹೀಗಾಗಿದೆ. ವಿಮಾನದ ಮೆಟ್ಟಿಲುಗಳ ಮೇಲೆ ಮುಗ್ಗರಿಸಿ, ಕೈಯೂರಿದ ಅವರು ನಂತರ ಸಾವರಿಸಿಕೊಂಡು ಮೇಲೆ ಹತ್ತಿದ್ದಾರೆ. ಹಾಗೇ, ವಿಮಾನದ ಒಳಗೆ ಹೋಗುವ ಮುನ್ನ, ಕೆಳೆಗೆ ಇದ್ದವರೆಡೆಗೆ ಕೈಬೀಸಿದ್ದಾರೆ. ಆದರೂ ವಿಡಿಯೊ ನೋಡಿದ ಜನರು, ಅಮೆರಿಕ ಅಧ್ಯಕ್ಷರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Vivek Ramaswamy: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತ ಮೂಲದ ವಿವೇಕ್ ರಾಮಸ್ವಾಮಿ ಸ್ಪರ್ಧೆ
2021ರಲ್ಲಿ ಅವರು ಅಟ್ಲಾಂಟಾಕ್ಕೆ ತೆರಳುವಾಗ ಹೀಗೆ ವಿಮಾನದ ಮೆಟ್ಟಿಲುಗಳ ಮೇಲೆ ಮುಗ್ಗರಿಸಿದ್ದರು. ಆಗಲೂ ಜೋ ಬೈಡೆನ್ ಆರೋಗ್ಯದ ಬಗ್ಗೆ ಚರ್ಚೆ ಶುರುವಾಗಿತ್ತು. ಕೂಡಲೇ ಹೇಳಿಕೆ ಬಿಡುಗಡೆ ಮಾಡಿದ್ದ ವೈಟ್ ಹೌಸ್ ‘ಬೈಡೆನ್ ಆರೋಗ್ಯಕ್ಕೆ ಏನೂ ಆಗಿಲ್ಲ. ಜೋರಾಗಿ ಗಾಳಿ ಬೀಸುತ್ತಿದ್ದುದರಿಂದ ಅವರ ಸಮತೋಲನ ತಪ್ಪಿತು’ ಎಂದು ಹೇಳಿತ್ತು. ಆದರೆ ಈ ಸಲ ಬೈಡೆನ್ ಮುಗ್ಗರಿಸಿದ್ದರ ಬಗ್ಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.