Site icon Vistara News

Viral News: ಹೆಣ್ಣು ಮಗು ಹೆತ್ತ ಮಂಗಳಮುಖಿ ಪುರುಷ! ಇದೆಲ್ಲ ಹೇಗಾಯ್ತು?

Transgender Man

ನವದೆಹಲಿ: ವೈದ್ಯಕೀಯ ವಿಜ್ಞಾನದಲ್ಲಿ (Medical Science) ರೋಚಕ ಬೆಳವಣಿಗೆ ನಡೆದಿದೆ. ಪುರುಷನೊಬ್ಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ! ಹೌದು ನೀವು ಓದುತ್ತಿರುವುದು ಸತ್ಯ. ಇಂಗ್ಲೆಂಡ್‌ನಲ್ಲಿ 27 ವರ್ಷ ಮಂಗಳಮುಖಿ ಪುರುಷನೇ (Transgender Man) ಹೆಣ್ಣು ಮಗು (Baby Girl) ಹೆತ್ತಿದ್ದಾರೆ. ಆ ಮಂಗಳಮುಖಿ ಪುರುಷನ ಹೆಸರು ಕ್ಯಾಲೆಬ್ ಬೋಲ್ಡನ್(Caleb Bolden). ಕ್ಯಾಲೆಬ್ ಮತ್ತು ಆತನ ಪತ್ನಿ 25 ವರ್ಷ ವಯಸ್ಸಿನ ನಿಯಾಮ್ ಬೋಲ್ಡೆನ್ (Niamh Bolden) ಅವರ ಸಂತಸಕ್ಕೆ ಈಗ ಪಾರವೇ ಇಲ್ಲ. ಅಲ್ಲದೇ ಮತ್ತೊಂದು ಮಗುವನ್ನು ಮಾಡಿಕೊಳ್ಳುವ ಪ್ಲ್ಯಾನ್ ಕೂಡ ಈ ದಂಪತಿ ಹೊಂದಿದ್ದಾರೆ(Viral News).

ಮಂಗಳಮುಖಿ ಕ್ಯಾಲೆಬ್ ಯಾಕೆ ಗರ್ಭ ಧರಿಸಬೇಕಾಯಿತು ಎಂಬುದು ರೋಚಕವಾಗಿದೆ. ಮಂಗಳಮುಖಿ ಕ್ಯಾಲೆಬ್ ಹಾಗೂ ಆತನ ಪತ್ನಿ ನಿಯಾಮ್‌ಗೆ ಮಕ್ಕಳೆಂದರೆ ಪ್ರಾಣ. ನಿಯಾಮ್ ಮೂರು ಬಾರಿ ಗರ್ಭ ಧರಿಸಿದ್ದರು. ಆದರೆ, ಮೂರು ಬಾರಿಯೂ ಗರ್ಭಪಾತವದ್ದರಿಂದ ನಿಯಾಮ್ ಮತ್ತೆ ಮಕ್ಕಳನ್ನು ಹೆರುವ ಶಕ್ತಿಯನ್ನು ಕಳೆದುಕೊಂಡರು. ಆದರೆ, ಹೇಗಾದರೂ ಮಾಡಿ ಮಕ್ಕಳನ್ನು ಪಡೆಯಲೇಬೇಕೆಂದು ನಿರ್ಧರಿಸಿದ ದಂಪತಿ ಹೊಸ ದಾರಿಯನ್ನು ಕಂಡುಕೊಂಡರು. ಹೆಂಡತಿಯ ಬದಲಿಗೆ ಗಂಡ(ಮಂಗಳಮುಖಿ)ನೇ ಗರ್ಭ ಧರಿಸುವ ಬಗ್ಗೆ ಯೋಚನೆ ಮಾಡಿದರು. ಈಗ ಅದನ್ನು ನನಸಾಗಿಸಿಕೊಂಡಿದ್ದಾರೆ. ಅವರ ಮಡಿಲಲ್ಲಿ ಮುದ್ದಾದ ಹೆಣ್ಣು ಮಗುವಿದೆ.

ಮಗುವನ್ನು ಹೆರುವುದಕ್ಕೆ ಕ್ಯಾಲೆಬ್ ಸಾಕಷ್ಟು ಕಠಿಣ ಪರೀಕ್ಷೆಗಳನ್ನು ಮತ್ತು ಪ್ರಯೋಗಗಳಿಗೆ ಒಳಗಾಗಿದ್ದಾರೆ. 27 ತಿಂಗಳು ಕಾಲ ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿದ್ದಾರೆ. ಯಾವಾಗಲೂ ತಂದೆಯಾಗಬೇಕು ಎಂಬ ಹಂಬಲ ಹೊಂದಿದ್ದ ಕ್ಯಾಲೆಬ್ ಅವರು, 2022ರಲ್ಲಿ ಯಾವುದೇ ರೀತಿಯ ಔಷಧಗಳನ್ನು ಸೇವಿಸುವುದನ್ನು ನಿಲ್ಲಿಸಿದರು. ಆನ್‌ಲೈನ್‌ನಲ್ಲಿ ವೀರ್ಯ ದಾನಿಗಳಿಗಾಗಿ ಹುಡುಕಾಡಿದರು. 6 ತಿಂಗಳಲ್ಲೇ ದಾನಿ ಕೂಡ ಸಿಕ್ಕರು ಮತ್ತು ಪೋಷಕರಾಗುವ ದಾರಿ ತೆರೆದುಕೊಂಡಿತು.

ಕ್ಯಾಲೆಬ್‌ ಅವರ ಗರ್ಭದಲ್ಲಿ ಮಗು ಬೆಳೆಯುತ್ತ ಹೋದಂತೆ, ಜನರ ಗಮನವನ್ನು ಅವರ ತಮ್ಮಡೆಗೆ ಸೆಳೆಯಲಾರಂಭಿಸಿದರು. ಜನರಿಂದ ಮಿಶ್ರ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ಅವರ ಕುಟುಂಬಗಳ ಸದಸ್ಯರು ಮತ್ತು ಸ್ನೇಹಿತರು ಕ್ಯಾಲೆಬ್ ಹಾಗೂ ನಿಯಾಮ್ ಅವರಿಗೆ ಬೆಂಬಲವಾಗಿ ನಿಂತರೆ, ಕೆಲವರು ಅನುಮಾನಗಳನ್ನು ವ್ಯಕ್ತಪಡಿಸಿದರು. ಸಾಂಪ್ರದಾಯಿಕ ಲಿಂಗ ನಿಯಮಗಳನ್ನು ಮುರಿಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪುರುಷನೊಬ್ಬ ಗರ್ಭ ಧರಿಸುವುದನ್ನು ಅವರು ಪ್ರಶ್ನಿಸಿದರು. ಈ ಯಾವುದೇ ಟೀಕೆಗಳನ್ನು ಕ್ಯಾಲೆಬ್ ಅವರು ತಲೆ ಹಾಕಿಕೊಳ್ಳಲಿಲ್ಲ. ಅಂತಿಮವಾಗಿ 2023 ಮೇ ತಿಂಗಳಲ್ಲಿ ವೆಸ್ಟ್ ಸಫೊಲ್ಕ್ ಆಸ್ಪತ್ರೆಯಲ್ಲಿ ತಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಈ ಸುದ್ದಿಯನ್ನೂ ಓದಿ: Viral News: ನಲ್ಲನ ಭೇಟಿಗೆ ಇಡೀ ಊರಿನ ವಿದ್ಯುತ್‌ ಕಟ್‌ ಮಾಡಿದ ನಲ್ಲೆ; ಗ್ರಾಮಸ್ಥರ ಕೈಗೆ ಸಿಕ್ಕ ಬಳಿಕ ಏನಾಯ್ತು?

ಪುರುಷ ಗರ್ಭ ಧರಿಸುವ ಕಲ್ಪನೆಯೇ ಊಹಾತೀತ. ಹಾಗಾಗಿ, ಗರ್ಭ ಧರಿಸುವ ಇಡೀ ಪ್ರಕ್ರಿಯೆಯ ಕುರಿತು ಗೌಪ್ಯತೆಯನ್ನು ಆಯ್ಕೆ ಮಾಡಿಕೊಂಡರು. ಹಾಗಾಗಿ, ಅವರಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋಣೆಯನ್ನು ಒದಗಿಸಲಾಯಿತು. ಹಲವು ಅಡೆತಡೆಗಳನ್ನು ಎದುರಿಸಿ ಕೊನೆಗೆ ತಮ್ಮ ಮಡಿಲಲ್ಲಿ ಹೆಣ್ಣು ಮಗುವನ್ನು ಕಂಡಾಗ ತಾವು ಪಟ್ಟ ಕಷ್ಟವೇ ಅವರಿಗೆ ಲೆಕ್ಕಕ್ಕೆ ಬರಲಿಲ್ಲ. ಮಕ್ಕಳನ್ನು ಹೆರುವುದು ಏನಿದ್ದರೂ ಹೆಂಗಸರು ಎಂಬ ಸೃಷ್ಟಿಯ ನಿಯಮವನ್ನು ಈ ದಂಪತಿ ಸುಳ್ಳು ಮಾಡಿದ್ದಾರೆ. ಮನಸ್ಸು ಮಾಡಿದರೆ, ಪುರುಷ ಕೂಡ ಮಗುವಿಗೆ ಜನ್ಮ ನೀಡಬಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version