ಇರಾನ್: ಹಿಜಾಬ್ ವಿಚಾರದಲ್ಲಿ ಜಗಳ ಇಂದು ನಿನ್ನೆಯದಲ್ಲ. ಇಂದಿಗೂ ಅನೇಕ ರಾಷ್ಟ್ರಗಳಲ್ಲಿ ಹಿಜಾಬ್ ಕಡ್ಡಾಯವಾಗಿದೆ. ಹಿಜಾಬ್ ಧರಿಸಿಲ್ಲ ಎನ್ನುವ ಕಾರಣಕ್ಕೇ ಹಲ್ಲೆಗಳು ನಡೆಯುತ್ತವೆ. ಅದೇ ರೀತಿಯಲ್ಲಿ ಇರಾನ್ ದೇಶದಲ್ಲಿ ಹಿಜಾಬ್ ಧರಿಸಿಲ್ಲ ಎಂದು ಪುಟ್ಟ ಬಾಲಕಿಯ ಮೇಲೇ ರಕ್ತ ಬರುವಂತೆ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಬಾಲಕಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video: ಹೇ ಅಲ್ಲಾ, ನಮಗೆ ಮೋದಿಯನ್ನು ಕೊಡು, ಅವರೇ ಈ ದೇಶವನ್ನು ಸರಿ ಮಾಡಲಿ ಎಂದು ಬೇಡಿಕೊಂಡ ಪಾಕಿಸ್ತಾನಿ ಯುವಕ
ಬಾಲಕಿಯೊಬ್ಬಳು ರಸ್ತೆಯ ಬದಿಯಲ್ಲಿ ಜೋರಾಗಿ ಅಳುತ್ತಾ ಕುಳಿತಿದ್ದಾಳೆ. ಆಕೆಯ ಮೂಗಿನಿಂದ ರಕ್ತ ಸುರಿಯುತ್ತಿದೆ. ಈಗಾಗಲೇ ಅಧಿಕ ರಕ್ತ ಸೋರಿಕೆಯಾಗಿದ್ದು, ಬಾಲಕಿಯ ಬಟ್ಟೆಯೆಲ್ಲ ರಕ್ತವಾಗಿರುವ ದೃಶ್ಯ ವಿಡಿಯೊದಲ್ಲಿದೆ. ಇಬ್ಬರು ಮಹಿಳೆಯರು ಬಾಲಕಿಗೆ ಸಮಾಧಾನ ಮಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ಗಾಯಾಳುವಾಗಿರುವ ಬಾಲಕಿಯನ್ನು ಸಾರಾ ಶಿರಾಜಿ ಎಂದು ಗುರುತಿಸಲಾಗಿದೆ. ಆಕೆ ಎಲಿಮೆಂಟರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಆಕೆ ಶಾಲೆಗೆ ತೆರಳುತ್ತಿದ್ದಾಗ ಆಕೆಯ ಮೇಲೆ ರಜಿಯಾ ಹಫ್ತ್ ಬರದರನ್ ಹೆಸರಿನ ಮಹಿಳೆ ಹಲ್ಲೆ ನಡೆಸಿದ್ದಾರೆ. ಹಿಜಾಬ್ ಧರಿಸಿಲ್ಲವೆಂದು ಹಲ್ಲೆ ನಡೆಸಲಾಗಿದೆ. ಬಾಲಕಿಯ ಕುಟುಂಬಕ್ಕೂ ಕರೆ ಮಾಡಿ ಬೆದರಿಕೆ ನೀಡಿರುವುದಾಗಿ ಹೇಳಲಾಗಿದೆ.
ಇರಾನ್ ದೇಶದಲ್ಲಿ ಹಿಜಾಬ್ ಧರಿಸಿಲ್ಲವೆಂದು ಹಲ್ಲೆ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಹ್ಸಾ ಅಮಿನಿ ಹೆಸರಿನ ಯುವತಿಯನ್ನು ಹಿಜಾಬ್ ಧರಿಸಿಲ್ಲವೆನ್ನುವ ಕಾರಣಕ್ಕೆ ಬಂಧಿಸಲಾಗಿತ್ತು. ಆಕೆ ಪೊಲೀಸ್ ಠಾಣೆಯಲ್ಲೇ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಳು. ಇದು ರಾಷ್ಟ್ರಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು.