Site icon Vistara News

Viral video: ಗುದ್ದಾಟ, ಕಿತ್ತಾಟ, ರಣರಂಪ: ಇದು ಬಾಕ್ಸಿಂಗ್‌ ಕಣವಲ್ಲ, ಮಾಲ್ದೀವ್ಸ್‌ ಪಾರ್ಲಿಮೆಂಟ್!‌

Maldives Parliament

ಮಾಲೆ: ಭಾರತದ ವಿರುದ್ಧ ಮುಸುಕಿನ ಸಮರ ಸಾರಿದ್ದ ಮಾಲ್ದೀವ್ಸ್‌ ಅಧ್ಯಕ್ಷ (Maldives president) ಮೊಹಮ್ಮದ್‌ ಮುಯಿಜು (Mohamed Muizzu) ಅವರಿಗೆ ಅವರ ತವರಿನಲ್ಲೇ ಮುಜುಗರ ತರಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಇದೀಗ ವೈರಲ್‌ ಆಗುತ್ತಿರುವ ವಿಡಿಯೋಗಳಲ್ಲಿ (Viral video), ಮಾಲ್ದೀವ್ಸ್‌ ಸಂಸತ್ತಿನಲ್ಲಿ (Maldives Parliament) ನಡೆದ ಕೋಲಾಹಲದ ದೃಶ್ಯಗಳು ಬಿತ್ತರವಾಗುತ್ತಿದ್ದು, ನೋಡುಗರಲ್ಲಿ ನಗೆ ಉಕ್ಕಿಸುವಂತಿದೆ.

ಈ ವಿಡಿಯೋದಲ್ಲಿ ಸೂಟ್‌ ಧರಿಸಿಕೊಂಡ ಎಂಪಿಗಳು ಒಬ್ಬರಿನ್ನೊಬ್ಬರ ಮೇಲೆ ಬಿದ್ದು ಹುಚ್ಚರಂತೆ ಗುದ್ದಾಡಿಕೊಂಡಿದ್ದಾರೆ. ಪರಸ್ಪರ ಪಂಚ್‌, ಕಿಕ್‌ ಮಾಡಿ, ತಳ್ಳಾಡಿಕೊಂಡು, ಉರುಳಿಬಿದ್ದಿದ್ದಾರೆ. ನೋಡುಗರು ಇದೇನು ಸಂಸತ್ತೋ ಬಾಕ್ಸಿಂಗ್‌ ರಿಂಗೋ ಎಂದು ಕೇಳುವಂತಾಗಿದೆ.

ಮೊಹಮ್ಮದ್‌ ಮುಯಿಜು ಅವರ ಸರ್ಕಾರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಮಾಲ್ದೀವ್ಸ್‌ ಸಂಸತ್ತು ಈ ಕಿತ್ತಾಟಕ್ಕೆ ಸಾಕ್ಷಿಯಾಯಿತು. ಮುಯಿಜು ಅವರ ಕ್ಯಾಬಿನೆಟ್‌ಗೆ ಒಪ್ಪಿಗೆಯನ್ನು ಸಂಸತ್ತಿನಲ್ಲಿ ಮತಕ್ಕೆ ಹಾಕಿದಾಗ ಈ ಸಂದರ್ಭ ಸೃಷ್ಟಿಯಾಗಿದೆ.

ವಿಡಿಯೋದಲ್ಲಿ ಒಬ್ಬ ಎಂಪಿ ಇನ್ನೊಬ್ಬನ ಕಾಲು ಗಟ್ಟಿಯಾಗಿ ನೆಲಕ್ಕೆ ಒತ್ತಿ ಹಿಡಿದಿದ್ದಾನೆ. ಇಬ್ಬರು ಕಿತ್ತಾಡಿಕೊಳ್ಳುತ್ತಿದ್ದಾರೆ. ಮತ್ತೊಬ್ಬ ಇನ್ನೊಬ್ಬನ ತಲೆಕೂದಲು ಕೀಳುತ್ತಿದ್ದಾನೆ. ಮತ್ತೊಬ್ಬ ತಳ್ಳುತ್ತಿದ್ದಾನೆ. ಇನ್ನೊಬ್ಬ ಎಂಪಿ ಸ್ಪೀಕರ್‌ನ ಕಿವಿಯಲ್ಲಿ ಒಂದು ಕಹಳೆಯನ್ನು ಊದುತ್ತಿದ್ದಾನೆ! ಸ್ಪೀಕರ್‌ ತನ್ನ ಕಿವಿ ಮುಚ್ಚಿಕೊಂಡಿದ್ದಾನೆ!

ಹೀಗೆ ಗುದ್ದಾಡಿಕೊಂಡ ಎಂಪಿಗಳಲ್ಲಿ ಇಬ್ಬರು ಪ್ರತಿಪಕ್ಷ ಮಾಲ್ದೀವಿಯನ್‌ ಡೆಮೊಕ್ರಾಟಿಕ್‌ ಪಾರ್ಟಿಯ (ಎಂಡಿಪಿ) ಇಸ್ಸಾ ಹಾಗೂ ಆಡಳಿತ ಪಕ್ಷ ಪಿಎನ್‌ಸಿಯ ಅಬ್ದುಲ್ಲಾ ಶಾಹೀಂ ಅಬ್ದುಲ್‌ ಹಕೀಂ ಎಂದು ಗೊತ್ತಾಗಿದೆ.

ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರ ಸಂಪುಟದ ಮೂವರು ಸದಸ್ಯರು ಇತ್ತೀಚೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ ಸಂದರ್ಭದಲ್ಲಿ ಅಪಹಾಸ್ಯದ, ಅವಹೇಳನದ ಮಾತನಾಡಿದ್ದರು. ಇದರಿಂದ ಭಾರತದ ಜನತೆ ಮಾತ್ರವಲ್ಲ, ಸ್ವತಃ ಮಾಲ್ದೀವ್ಸ್‌ ಜನತೆಯೂ ಸಿಟ್ಟಿಗೆದ್ದು ಛೀಮಾರಿ ಹಾಕಿದ್ದರು.

ಇದರಿಂದ ಸಂಪುಟದಿಂದ ಮೂವರು ಸಚಿವರ ತಲೆದಂಡವಾಗಿತ್ತು. ಆದರೂ ಅಧ್ಯಕ್ಷ ಮುಯಿಜು, ʼನಾವು ಯಾರಿಗೂ ಹೆದರುವ ಪ್ರಶ್ನೆ ಇಲ್ಲʼ ಎಂದು ಮುಸುಕಿನ ಹೇಳಿಕೆ ಕೊಟ್ಟಿದ್ದರು.

ಇದನ್ನೂ ಓದಿ: Boycott Maldives: ಭಾರತದ ಹೈಕಮಿಷನರ್‌ಗೂ ಮಾಲ್ದೀವ್ಸ್‌ ಸಚಿವಾಲಯದಿಂದ ಬುಲಾವ್‌

Exit mobile version