ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಸಂಘರ್ಷ ನಡೆಯುತ್ತಲೇ ಇದೆ. ರಷ್ಯಾ ವಿರುದ್ಧ ಉಕ್ರೇನ್, ಉಕ್ರೇನ್ ವಿರುದ್ಧ ರಷ್ಯಾ ಕಿಡಿಕಾರುತ್ತಿವೆ. ರಷ್ಯಾ-ಉಕ್ರೇನ್ ಸಂಬಂಧ ಹದಗೆಟ್ಟಿರುವ ಬಗ್ಗೆ ದಿನಬೆಳಗಾದರೆ ನಾವು ಸುದ್ದಿಗಳನ್ನು ಓದುತ್ತಿರುತ್ತೇವೆ. ಪರಿಸ್ಥಿತಿ ಹೀಗಿರುವ ಮಧ್ಯೆ, ‘ಉಕ್ರೇನ್ ಸಂಸದ ಒಲೆಕ್ಸಾಂಡರ್ ಮಾರಿಕೋವ್ಸ್ಕಿ ಎಂಬುವರು ಜಾಗತಿಕ ನಾಯಕರ ಸಭೆಯೊಂದರಲ್ಲಿ ರಷ್ಯಾದ ಪ್ರತಿನಿಧಿಗೆ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ’. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಷ್ಯಾದ ಆ ರಾಜಕಾರಣಿ ಯಾರು ಎಂಬುದು ಗೊತ್ತಾಗಿಲ್ಲ.
ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಗುರುವಾರ ಬ್ಲ್ಯಾಕ್ ಸೀ ಎಕಾನಮಿಕ್ ಕೋ ಆಪರೇಶನ್ನ ಸಂಸದೀಯ ಸಭೆಯ 61ನೇ ಸಾಮಾನ್ಯ ಸಭೆ (PABSEC) ನಡೆಯುತ್ತಿತ್ತು. ಕಪ್ಪು ಸಮುದ್ರದ ಸುತ್ತಮುತ್ತಲ ಪ್ರದೇಶಗಳಲ್ಲಿ ಶಾಂತಿ, ಸ್ಥಿರತೆ, ಸಮೃದ್ಧಿ, ಸಹಕಾರವನ್ನು ವೃದ್ಧಿಸುವ ಸಲುವಾಗಿ ಆ ಭಾಗದ ದೇಶಗಳೆಲ್ಲ ಸೇರಿಕೊಂಡು ಕಟ್ಟಿಕೊಂಡಿರುವ ಒಂದು ಪ್ರಾದೇಶಿಕ, ಅಂತಾರಾಷ್ಟ್ರೀಯ ಸಂಸ್ಥೆಯೇ ಈ ಬ್ಲ್ಯಾಕ್ ಸೀ ಎಕಾನಮಿಕ್ ಕೋ ಆಪರೇಶನ್. ಈ ಒಕ್ಕೂಟದಲ್ಲಿ ಅರ್ಮೇನಿಯಾ, ಅಜೆರ್ಬೈಜಾನ್, ಬಲ್ಗೇರಿಯಾ, ಜಾರ್ಜಿಯಾ, ಗ್ರೀಸ್, ಮೊಲ್ಡೊವಾ, ರೊಮೇನಿಯಾ, ರಷ್ಯನ್ ಒಕ್ಕೂಟ, ಸರ್ಬಿಯಾ, ಟರ್ಕಿ ಮತ್ತು ಉಕ್ರೇನ್ ದೇಶಗಳು ಸೇರಿವೆ. ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಎಲ್ಲ ದೇಶಗಳ ಸಂಸದರು/ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪರಸ್ಪರ ದೇಶಗಳ ಮಧ್ಯೆ ಆರ್ಥಿಕ, ತಾಂತ್ರಿಕ, ಸಾಮಾಜಿಕ, ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುವ ಸಂಬಂಧ ಚರ್ಚೆ ನಡೆಯುತ್ತಿತ್ತು.
ಇದನ್ನೂ ಓದಿ: Ukraine War: ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರನ್ನು ಕೊಲ್ಲಲು ಉಕ್ರೇನ್ 2 ಡ್ರೋನ್ ದಾಳಿ ನಡೆಸಿದೆ ಎಂದ ರಷ್ಯಾ
ಈ ಜಾಗತಿಕ ಸಭೆಯಲ್ಲಿ ಒಕ್ಕೂಟದ ಎಲ್ಲ ದೇಶಗಳ ರಾಷ್ಟ್ರಧ್ವಜಗಳನ್ನೂ ಇಡಲಾಗುತ್ತದೆ. ಆಯಾ ದೇಶದ ಪ್ರತಿನಿಧಿಗಳು ಕೈಯಲ್ಲಿ ತಮ್ಮ ರಾಷ್ಟ್ರದ ಧ್ವಜವನ್ನು ಹಿಡಿದಿರುತ್ತಾರೆ. ಅಂತೆಯೇ ಉಕ್ರೇನ್ನ ಸಂಸದ ಒಲೆಕ್ಸಾಂಡರ್ ಮಾರಿಕೋವ್ಸ್ಕಿ ಅವರು ತಮ್ಮ ದೇಶದ ಬಾವುಟ ಹಿಡಿದು ನಿಂತಿದ್ದರು. ಆಗ ಅಲ್ಲಿಗೆ ಬಂದ ರಷ್ಯಾದ ಪ್ರತಿನಿಧಿಯೊಬ್ಬರು, ಒಲೆಕ್ಸಾಂಡರ್ ಕೈಯಲ್ಲಿದ್ದ ಉಕ್ರೇನ್ ಧ್ವಜವನ್ನು ಕಿತ್ತುಕೊಂಡು ಓಡಲು ಶುರು ಮಾಡಿದ್ದಾರೆ. ಆಗ ಅವರ ಬೆನ್ನಟ್ಟಿದ ಒಲೆಕ್ಸಾಂಡರ್ ಮಾರಿಕೋವ್ಸ್ಕಿ ಹಲ್ಲೆ ನಡೆಸಿದ್ದಾರೆ. ರಷ್ಯಾ ರಾಜಕಾರಣಿಯ ತಲೆ, ಬೆನ್ನುಗಳಿಗೆಲ್ಲ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಬಳಿಕ ಅಲ್ಲಿದ್ದ ಇನ್ನಿತರ ದೇಶಗಳ ಪ್ರತಿನಿಧಿಗಳು ಬಂದು, ಜಗಳ ಬಿಡಿಸಿದ್ದಾರೆ. ವಿಡಿಯೊ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಒಲೆಕ್ಸಾಂಡರ್ ಮಾರಿಕೋವ್ಸ್ಕಿ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಹಲವರು ಕಮೆಂಟ್ ಮಾಡಿ, ಆ ರಷ್ಯಾದ ಪ್ರತಿನಿಧಿಗೆ ತಕ್ಕ ಶಾಸ್ತಿಯಾಯಿತು ಎಂದಿದ್ದಾರೆ.