Site icon Vistara News

ವಿಸ್ತಾರ ಸಂಪಾದಕೀಯ: ವಾಯುನೆಲೆ ಮೇಲಿನ ದಾಳಿ ಪಾಕ್‌ಗೆ ಎಚ್ಚರಿಕೆ ಗಂಟೆಯಾಗಲಿ

pak airbase

ಪಾಕಿಸ್ತಾನದ ಕೇಂದ್ರ ಭಾಗದ ಪಂಜಾಬ್‌ನ ಮಿಯಾನ್‌ವಾಲಿಯಲ್ಲಿರುವ ವಾಯು ಪಡೆಯ ನೆಲೆ ಮೇಲೆ ಭಯೋತ್ಪಾದನಾ ದಾಳಿ ನಡೆದಿದೆ. ಹಲವು ಆತ್ಮಾಹುತಿ ಬಾಂಬ್ ದಾಳಿಕೋರರು ಶನಿವಾರ ವಾಯು ನೆಲೆಗೆ ನುಗ್ಗಿದ್ದಾರೆ. ಇದಕ್ಕೆ ಪ್ರತಿಯಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ವಾಯು ಪಡೆ (ಪಿಎಎಫ್) ತಿಳಿಸಿದೆ. ಭಾರಿ ಶಸ್ತ್ರಸಜ್ಜಿತರಾದ ಐದರಿಂದ ಆರು ಮಂದಿ ಜನರ ಗುಂಪು ಶನಿವಾರ ಮುಂಜಾನೆ ತೀವ್ರ ಸ್ವರೂಪದ ದಾಳಿ ಆರಂಭಿಸಿದೆ. ಇದರಿಂದ ಎರಡೂ ಕಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಘಟನೆಯನ್ನು ಖಚಿತಪಡಿಸಿರುವ ಪಿಎಎಫ್, ಉಗ್ರರು ವಾಯು ನೆಲೆ ಪ್ರವೇಶಿಸುವುದಕ್ಕೂ ಮುನ್ನವೇ ಅವರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿದೆ. ಈ ದಾಳಿಯ ಹೊಣೆಯನ್ನು ಪಾಕ್ ಮೂಲದ ಉಗ್ರ ಸಂಘಟನೆ ತೆಹ್ರೀಕ್ ಇ ಜಿಹಾದ್ ಪಾಕಿಸ್ತಾನ್ ಹೊತ್ತುಕೊಂಡಿದೆ. ಈ ಸಂಘಟನೆ ಬಲೂಚಿಸ್ತಾನದಲ್ಲಿ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿದೆ.

ಸಂಘಟನೆಗಳ ಹೆಸರು ಬೇರೆ ಬೇರೆ ಇರಬಹುದು. ಆದರೆ ವಿಶ್ವಾದ್ಯಂತ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿರುವ ಸಂಘಟನೆಗಳಲ್ಲಿ ಹೆಚ್ಚಿನವು ಪಾಕ್ ಮೂಲದವುಗಳು ಎಂಬುದರಲ್ಲಿ ಸಂಶಯವಿಲ್ಲ. ಅದು ಅಫಘಾನಿಸ್ತಾನ ಇರಬಹುದು, ಕಾಶ್ಮೀರ ಇರಬಹುದು. ಹೆಸರು ಬೇರೆಯಾದರೂ ಇವೆಲ್ಲವುಗಳ ಸ್ವರೂಪ ಒಂದೇ. ಕಾರ್ಯವೈಖರಿ ಒಂದೇ. ಇವರನ್ನು ತರಬೇತು ಮಾಡುವ ಕೇಂದ್ರಗಳಿರುವುದೂ ಪಾಕ್‌ನಲ್ಲಿ. ತರಬೇತಿದಾರರೂ ಪಾಕ್‌ನ ಐಎಸ್‌ಐ ಹಾಗೂ ಮಿಲಿಟರಿ. ಮನುಕುಲಕ್ಕೆ ಇವುಗಳು ಒಡ್ಡಿರುವ ಆತಂಕವೂ ಏಕರೂಪದ್ದು. ವಿಚಿತ್ರ ಹಾಗೂ ವಿಪರ್ಯಾಸ ಎಂದರೆ ಇದೀಗ ಆ ಉಗ್ರರು ತಮ್ಮ ಜನ್ಮದಾತರ ವಿರುದ್ಧವೇ ತಿರುಗಿಬಿದ್ದಿರುವುದು. ಭಸ್ಮಾಸುರನ ಉರಿಹಸ್ತದ ವರದಂತಾಗಿದೆ ಭಯೋತ್ಪಾದಕರ ಜನ್ಮ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಝಿಕಾ ವೈರಸ್‌ ಬಗ್ಗೆ ಆತಂಕ ಬೇಡ, ಎಚ್ಚರ ಇರಲಿ

ಒಂದೇ ದಿನ ಸ್ವತಂತ್ರಗೊಂಡ ಎರಡು ದೇಶಗಳ ವಿಭಿನ್ನ ಬೆಳವಣಿಗೆಯ ಪಥಗಳನ್ನು ಗಮನಿಸಿ ಇಡೀ ಜಗತ್ತು ಬುದ್ಧಿ ಕಲಿಯಬಹುದಾಗಿದೆ. ಒಂದು ದೇಶ ಜಾತ್ಯತೀತ, ಮುಕ್ತ ಸಾಂವಿಧಾನಿಕ ಆಡಳಿತವನ್ನು ಅಪ್ಪಿಕೊಂಡು ಮುನ್ನಡೆಯುತ್ತಾ ಇಂದು ಜಗತ್ತಿನಲ್ಲೇ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಇನ್ನೊಂದು ದೇಶ ಇಸ್ಲಾಮಿಕ್ ಆಡಳಿತವನ್ನು ಅಪ್ಪಿಕೊಂಡು, ಮತಾಂಧತೆಗೆ ಅಡಿಯಾಳಾಗಿ ಮುನ್ನಡೆದು ಇಂದು ಭಿಕ್ಷಾಪಾತ್ರೆ ಹಿಡಿಯುವಂತಾಗಿದೆ. ಅದರ ಆಪ್ತ ದೇಶವಾದ ಚೀನಾವೇ ಅದರ ಕೈಬಿಟ್ಟಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಪಾಕ್ ದೇಶವನ್ನು ಬೂದಾ ಪಟ್ಟಿಯಲ್ಲಿ ಸೇರಿಸಿದೆ. ಉಗ್ರರಿಗೆ ಹಣಕಾಸು ನೆರವು ಮುಂದುವರಿಸುತ್ತಿರುವವರೆಗೂ ಅದಕ್ಕೆ ಆ ಪಟ್ಟಿಯಿಂದ ಬಿಡುಗಡೆಯಿಲ್ಲ. ಇತ್ತೀಚೆಗೆ ಲಕ್ಷಾಂತರ ಅಫಘಾನಿಸ್ತಾನದ ನಿರಾಶ್ರಿತರನ್ನು ಹೊರಗಟ್ಟಿರುವ ಪಾಕ್, ಆ ಮೂಲಕ ತಾನೇ ಸೃಷ್ಟಿಸಿರುವ ಭಸ್ಮಾಸುರನನ್ನು ಸಾಕಲು ತಾನೇ ಒಲ್ಲೆ ಎಂದಿದೆ. ಇದೆಲ್ಲವೂ ದುಷ್ಪರಿಣಾಮ ಬೀರುವುದು ತನ್ನ ದೇಶದ ಮುಗ್ಧ ನಾಗರಿಕರ ಮೇಲೆ ಎಂಬುದನ್ನು ಇನ್ನಾದರೂ ಪಾಕ್ ಅರಿತುಕೊಳ್ಳುವುದು ಒಳ್ಳೆಯದು.

Exit mobile version