Site icon Vistara News

ವಿಸ್ತಾರ ಸಂಪಾದಕೀಯ: ‌ಪಾಕ್ ಕ್ರೂರ ನಡೆ, ಆಫ್ಘನ್ ನಿರಾಶ್ರಿತರು ಅತಂತ್ರ

Afghan Refugees

Vistara Editorial: Pakistan cruel decision, Afghanistan refugees are helpless

ಒಂದು ಕಡೆ ಗಾಜಾದಲ್ಲಿ ಪ್ಯಾಲೆಸ್ತೀನ್‌ ನಿರಾಶ್ರಿತರ ಮೇಲೆ ಇಸ್ರೇಲ್‌ ದಾಳಿ ನಡೆಸುತ್ತಿದೆ ಎಂದು ಮಾನವ ಹಕ್ಕು ಸಂಘಟನೆಗಳು ಹುಯಿಲಿಡುತ್ತಿದ್ದರೆ, ಇತ್ತ ಪಾಕ್‌ ಹಾಗೂ ಅಫಘಾನಿಸ್ತಾನದ ನಡುವೆ ಸದ್ದಿಲ್ಲದೇ ಇನ್ನೊಂದು ಮೆಗಾ ದೌರ್ಜನ್ಯ ನಡೆದಿದೆ. ಪಾಕಿಸ್ತಾನ ಏಕಾಏಕಿ 17 ಲಕ್ಷ ಆಫ್ಘನ್‌ ನಿರಾಶ್ರಿತರನ್ನು (Afghanistan Refugees) ಗಡಿಪಾರು ಮಾಡಲು ಮುಂದಾಗಿದೆ. ಇದರಿಂದಾಗಿ ಲಕ್ಷಾಂತರ ಆಫ್ಘನ್‌ ನಿರಾಶ್ರಿತರು ಈಗ ಪಾಕ್‌ ತೊರೆದು, ಆಫ್ಘನ್‌ಗೆ ಮರಳುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟ್ರಂಕ್‌ ಹೊತ್ತುಕೊಂಡು, ವಾಹನಗಳಲ್ಲಿ ಬ್ಯಾಗ್‌ಗಳನ್ನು ತುಂಬಿಕೊಂಡು, ಮಹಿಳೆಯರು, ಮಕ್ಕಳು ಸೇರಿ ಎಲ್ಲರೂ ಗುಳೆ ಹೊರಟಿರುವ ದೃಶ್ಯಗಳು ಮನಕಲಕುತ್ತಿವೆ. ಆದರೆ ತಾಲಿಬಾನ್‌ ಇವರನ್ನು ಸ್ವೀಕರಿಸುವ ಔದಾರ್ಯ ತೋರಿಸುವ ಸಾಧ್ಯತೆಯಿಲ್ಲ. ಅತ್ತ ತಾಲಿಬಾನ್ ಕ್ರೌರ್ಯ, ಇತ್ತ ದಿವಾಳಿಯಾದ ಪಾಕಿಸ್ತಾನದ ದೌರ್ಜನ್ಯದ ನಡುವೆ ಈ ನಿರಾಶ್ರಿತರು ಸಿಲುಕಿ ಯಾರಿಗೂ ಬೇಡವಾಗಿದ್ದಾರೆ.

ಅಫಘಾನಿಸ್ತಾನದ ಸುಮಾರು 20 ಲಕ್ಷಕ್ಕೂ ಅಧಿಕ ನಿರಾಶ್ರಿತರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. 2021ರಲ್ಲಿ ತಾಲಿಬಾನ್‌ ಉಗ್ರರು ಅಫಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಒಂದಷ್ಟು ನಿರಾಶ್ರಿತರು ಅಫಘಾನಿಸ್ತಾನಕ್ಕೆ ಹೋಗಿದ್ದಾರೆ. ಈಗ ಪಾಕಿಸ್ತಾನವು 17 ಲಕ್ಷ ಆಫ್ಘನ್‌ ನಿರಾಶ್ರಿತರು ನವೆಂಬರ್‌ 1ರ ರಾತ್ರಿಯೊಳಗೆ ಪಾಕಿಸ್ತಾನ ತೊರೆಯಬೇಕು. ಇಲ್ಲದಿದ್ದರೆ, ಬಂಧಿಸಿ, ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದೆ. ಈ ಗಡುವಿನಿಂದಾಗಿ ಲಕ್ಷಾಂತರ ಆಫ್ಘನ್ನರು ಕಷ್ಟಪಟ್ಟು ಗಡಿ ದಾಟುತ್ತಿದ್ದಾರೆ. ಪಾಕಿಸ್ತಾನ ಈ ವಾಪಸಾತಿ ತಾಕೀತಿಗೆ ಭದ್ರತೆಯ ಕಾರಣಗಳನ್ನು ನೀಡಿದೆ. ಆಫ್ಘನ್ನರು ಅಕ್ರಮವಾಗಿ ನೆಲೆಸಿದ್ದು, ಇವರು ದೇಶದ ಭದ್ರತೆಗೆ ಅಪಾಯ ತಂದೊಡ್ಡಿದ್ದಾರೆ. ಹಾಗಾಗಿ, ಇವರನ್ನು ವಾಪಸ್‌ ಕಳುಹಿಸಲಾಗುತ್ತಿದೆ ಎಂದು ಪಾಕ್‌ ತಿಳಿಸಿದೆ. ಇತ್ತೀಚೆಗೆ ಪಾಕ್‌ ಗಡಿಯಲ್ಲಿ ಪಾಕಿಸ್ತಾನಿಯರು ಹಾಗೂ ಆಫ್ಘನ್‌ ನಿರಾಶ್ರಿತರ ಮಧ್ಯೆ ಸಂಘರ್ಷಗಳು ನಡೆಯುತ್ತಿವೆ. ಪಾಕಿಸ್ತಾನವು ಆಫ್ಘನ್‌ ಜತೆ ಸುಮಾರು 2,611 ಕಿಲೋಮೀಟರ್‌ ಗಡಿ ಹೊಂದಿದೆ. ಪಾಕಿಸ್ತಾನದ ಮೇಲೆ ತಾಲಿಬಾನ್‌ ಉಗ್ರರು ಸಿಟ್ಟು ಮಾಡಿಕೊಂಡಿದ್ದಾರೆ. ತಾಲಿಬಾನಿಗಳು ಗಡಿಯಲ್ಲಿ ಉಗ್ರರನ್ನು ಕಳುಹಿಸಿ ಪಾಕ್‌ ನಾಗರಿಕರಿಗೆ ತೊಂದರೆ, ಕಿರುಕುಳ ಕೊಡತ್ತಿದ್ದಾರೆ. ಪಾಕಿಸ್ತಾನದಲ್ಲಿ ಪ್ರಸಕ್ತ ವರ್ಷದ ಜನವರಿಯಿಂದ ಇದುವರೆಗೆ 24 ಆತ್ಮಾಹುತಿ ದಾಳಿಗಳು ನಡೆದಿದ್ದು, ಇವುಗಳಲ್ಲಿ 14 ದಾಳಿಗಳನ್ನು ಆಫ್ಘನ್‌ ನಾಗರಿಕರೇ ಮಾಡಿದ್ದಾರೆ ಎಂದು ಪಾಕಿಸ್ತಾನ ತಿಳಿಸಿದೆ.

ಪಾಕಿಸ್ತಾನವು ಆರ್ಥಿಕವಾಗಿ ದಿವಾಳಿಯಾಗಿರುವುದು ಆಫ್ಘನ್‌ನ ಲಕ್ಷಾಂತರ ನಾಗರಿಕರನ್ನು ವಾಪಸ್‌ ಕಳುಹಿಸಲು ಇನ್ನೊಂದು ಕಾರಣ. ಪಾಕಿಸ್ತಾನವು ಆರ್ಥಿಕವಾಗಿ ಸಂಪೂರ್ಣವಾಗಿ ದಿವಾಳಿಯಾಗಿರುವ ಕಾರಣ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದೇ ಸರ್ಕಾರಕ್ಕೆ ಕಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ರಾಜಕೀಯವಾಗಿ, ಆಡಳಿತಾತ್ಮಕವಾಗಿಯೂ ಪಾಕ್‌ ಕುಸಿದುಹೋಗಿದೆ. ಹಣಕ್ಕಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಎದುರು ಪಾಕ್‌ ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಹಾಗಾಗಿ, ಅಫಘಾನಿಸ್ತಾನಿಯರನ್ನು ಹೊರದಬ್ಬುತ್ತಿದೆ. ಪಾಕಿಸ್ತಾನದಿಂದ ಏಕಾಏಕಿ ಲಕ್ಷಾಂತರ ಆಫ್ಘನ್‌ ನಿರಾಶ್ರಿತರು ದೇಶಕ್ಕೆ ಆಗಮಿಸುತ್ತಿರುವುದು ತಾಲಿಬಾನ್‌ ಆಡಳಿತಕ್ಕೂ ತಲೆನೋವಾಗಿದೆ. ತೋರ್ಖಾಮ್‌ ಗಡಿಯಲ್ಲಿಯೇ ಒಂದು ಲಕ್ಷ ನಿರಾಶ್ರಿತರು ಆಫ್ಘನ್‌ ತಲುಪಿದ್ದಾರೆ. ಇದುವರೆಗೆ ಎರಡು ಲಕ್ಷ ನಿರಾಶ್ರಿತರು ಅಫಘಾನಿಸ್ತಾನವನ್ನು ತಲುಪಿದ್ದಾರೆ. ಇವರಿಗೆ ಆಶ್ರಯ, ಅನ್ನ, ನೀರು ಸೇರಿ ಮೂಲ ಸೌಕರ್ಯಗಳನ್ನು ಒದಗಿಸುವುದು ತಾಲಿಬಾನ್‌ ಆಡಳಿತಕ್ಕೆ ಕಷ್ಟವಾಗಿದೆ. “ಪಾಕಿಸ್ತಾನವು ಕ್ರೂರ ಹಾಗೂ ನಿರ್ದಯಿಯಾಗಿ ವರ್ತಿಸುತ್ತಿದೆ” ಎಂದು ಆಫ್ಘನ್‌ ಆಡಳಿತ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ವಿಸ್ತಾರ Explainer: 17 ಲಕ್ಷ ಆಫ್ಘನ್ನರನ್ನು ಪಾಕಿಸ್ತಾನ ಕ್ರೂರವಾಗಿ ಓಡಿಸುತ್ತಿರುವುದೇಕೆ?

ಇಲ್ಲಿ ಈಗ ಯಾರು ಯಾರನ್ನು ದೂರಬೇಕು, ಯಾರು ಯಾರಿಗೆ ಮಾನವೀಯತೆಯ ಪಾಠ ಮಾಡಬೇಕು? ಎರಡೂ ʼಮುಸ್ಲಿಂ ರಾಷ್ಟ್ರʼಗಳೇ ಆಗಿವೆ. ಮಾತೆತ್ತಿದರೆ ʼಇಸ್ಲಾಮಿಕ್‌ ಭ್ರಾತೃತ್ವʼದ ಬಗ್ಗೆ ಮಾತನಾಡುವವರು ಇದನ್ನು ನೋಡಿ ತುಸು ಪಾಠ ಕಲಿಯುವುದು ಒಳಿತು. ಎರಡೂ ದೇಶಗಳೂ ಮತಾಂಧತೆಯ ಸುಳಿಯಲ್ಲಿ ಸಿಲುಕಿ ಅಭಿವೃದ್ಧಿಯ ದಾರಿಗಳನ್ನು ತೊರೆದಿವೆ. ಪಾಕಿಸ್ತಾನದ ಪ್ರಜಾಪ್ರಭುತ್ವವನ್ನು ಮಿಲಿಟರಿ ಹಿಡಿದು ಅಲ್ಲಾಡಿಸುತ್ತಿದ್ದರೆ, ಅಫಘಾನಿಸ್ತಾನದಲ್ಲಿ ಭಯೋತ್ಪಾದಕರೇ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಒಂದು ಕಾಲದಲ್ಲಿ ಆಫ್ಘನ್‌ ಉಗ್ರರಿಗೆ ತರಬೇತಿ, ಹಣ ನೀಡಿದ ಪಾಕಿಸ್ತಾನಕ್ಕೇ ಈಗ ಅವರ ಸಹವಾಸ ಸಾಕಾಗಿದೆ. ಅದಕ್ಕೆ ಆಫ್ಘನ್‌ ದೇಶ ಭಸ್ಮಾಸುರನಂತಾಗಿದ್ದು, ಆ ಉಗ್ರರೇ ಪಾಕ್‌ನ ನೆತ್ತಿಗೆ ಉರಿಹಸ್ತವಿಡಲು ಮುಂದಾಗಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ಪೋಷಣೆ ಮಾಡುತ್ತಿದ್ದ ಪಾಕಿಸ್ತಾನ ಇದರಿಂದ ಸ್ವಲ್ಪವಾದರೂ ಪಾಠ ಕಲಿಯುವಂತಾಗುತ್ತದೆಯೇ ನೋಡಬೇಕು. ಎರಡೂ ದೇಶಗಳೂ ಇಂಥ ಶೋಚನೀಯ ಸ್ಥಿತಿಯಲ್ಲಿದ್ದಾಗಲೂ ಇವರ ʼಆಪ್ತ ಮಿತ್ರʼ ಚೀನಾ ತನ್ನ ಪಾಡಿಗೆ ಇದೆ. ಸದ್ಯ ಎರಡೂ ದೇಶಗಳೂ ಅಂತಾರಾಷ್ಟ್ರೀಯ ನೆರವಿನ ನಿರೀಕ್ಷೆಯಲ್ಲಿ ಇವೆ. ಆದರೆ ಸಾಕಿದವರ ಮನೆಗೇ ಕನ್ನವಿಕ್ಕುವ ಬುದ್ಧಿಯನ್ನೂ ಮತಾಂಧತೆಯನ್ನೂ ತೊರೆದು, ಸರಿಯಾದ ಪ್ರಜಾಪ್ರಭುತ್ವ ದೇಶಗಳಾಗುವವರೆಗೂ ಇವರಿಗೆ ದುಃಸ್ಥಿತಿ ಕಟ್ಟಿಟ್ಟ ಬುತ್ತಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version