Site icon Vistara News

ವಿಸ್ತಾರ Explainer: ಅಬಾರ್ಷನ್‌- ಎಲ್ಲಿ ಓಕೆ, ಎಲ್ಲಿ ನಾಟ್‌ ಓಕೆ?

abortion

ಅಬಾರ್ಷನ್‌ ಅಥವಾ ಗರ್ಭಪಾತ. ಸದ್ಯ ಅಮೆರಿಕದ ಸುಪ್ರೀಂ ಕೋರ್ಟ್‌ ಈ ಕುರಿತು ನೀಡಿರುವ ತೀರ್ಪಿನ ಪರಿಣಾಮದಿಂದಾಗಿ ಹಾಟ್‌ ಟಾಪಿಕ್‌ ಆಗಿದೆ. 15 ವಾರ ಮೇಲ್ಪಟ್ಟ ಭ್ರೂಣವನ್ನು ತೆಗೆಸುವ ಹಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ರೂಲ್‌ ಮಾಡಿದೆ. ಇದಕ್ಕೂ ಮೊದಲು 24 ವಾರಗಳ ವರೆಗೆ ಗರ್ಭಪಾತ ಮಾಡಿಸಿಕೊಳ್ಳುವ ಅವಕಾಶವಿತ್ತು. ಕೋರ್ಟ್‌ನ ಈ ತೀರ್ಪು ಮಹಿಳೆಯರ ಹಕ್ಕುಗಳ ಉಲ್ಲಂಘನೆ ಅಂತ ಕೂಗು ಎದ್ದಿದೆ. ಪ್ರತಿಭಟನೆಕಾರರು ಬೀದಿಗೆ ಇಳಿದಿದ್ದಾರೆ.

ಅಮೆರಿಕದಲ್ಲಿ ಈ ಹಿಂದೆ ಅಬಾರ್ಷನ್‌ ಬಗ್ಗೆ ಇದ್ದ ಕಾನೂನು ಯಾವುದು? ಅಮೆರಿಕದಂಥ ಮುಂದುವರಿದ ದೇಶಗಳಲ್ಲೂ ಅಬಾರ್ಷನ್‌ಗೆ ಕಾನೂನು ಅಡ್ಡಿ ಆತಂಕ ಇದೆಯಾ? ಹಾಗಿದ್ದರೆ ಬೇರೆ ದೇಶಗಳಲ್ಲಿ ಪರಿಸ್ಥಿತಿ ಹೇಗಿದೆ? ಭಾರತದಲ್ಲಿ ಯಾವ ತಿಂಗಳ ವರೆಗೂ ಅಬಾರ್ಷನ್‌ ಮಾಡಿಸಿಕೊಳ್ಳಬಹುದು? ಭಾರತ ಮೂಲದ ಸವಿತಾ ಹಾಲಪ್ಪನವರ್‌ ಪ್ರಕರಣ ಯುರೋಪ್‌ನಲ್ಲಿ ಮೂಡಿಸಿದ ಸಂಚಲನವೇನು? ಈ ಬಗ್ಗೆ ವಿವರವಾಗಿ ನೋಡೋಣ.

ಮಗು ಬೇಕು ಎಂದುಕೊಂಡಿರುವವರಿಗೆ ಗರ್ಭಪಾತ ಆದರೆ ಅದು ದುರಂತ; ಮಗು ಬೇಡ ಅಂದುಕೊಂಡಿರುವವವರಿಗೆ ಗರ್ಭಪಾತ ಆಗದೇ ಇದ್ದರೆ ಅದೂ ದುರಂತವೇ. ದಶಕಗಳ ಹಿಂದೆ ಆರೋಗ್ಯಕರವಾದ, ವೈಜ್ಞಾನಿಕವಾದ ಗರ್ಭಪಾತದ ವಿಧಾನಗಳ ಲಭ್ಯತೆ ಇಲ್ಲದೇ ಇದ್ದಾಗಲೂ ಅಬಾರ್ಷನ್‌ಗಳು ಆಗ್ತಾ ಇದ್ದವು. ನಂತರ ಹೆಚ್ಚಿನ ಆಧುನಿಕ ಸಮಾಜಗಳಲ್ಲಿ ಗಂಡ ಹೆಂಡತಿಗೆ ಎರಡೇ ಮಗು, ನಂತರ ಅದಕ್ಕೂ ಮುಂದುವರಿದು ಒಂದೇ ಮಗು ಎಂಬ ಮನೋಧರ್ಮ ಬಂತು. ಶಿಕ್ಷಣ ಹೆಚ್ಚಾದಷ್ಟೂ ಮಕ್ಕಳು ಮಾಡಿಕೊಳ್ಳುವ ಪ್ರಮಾಣ ಕಡಿಮೆಯಾಯಿತು, ಅಬಾರ್ಷನ್‌ ಹೆಚ್ಚಾಯಿತು. ಇದೇ ಸಂದರ್ಭದಲ್ಲಿ ಅಬಾರ್ಷನ್‌ ಕುರಿತು ಪಾಲಿಸಿ ಮತ್ತು ಕಾನೂನುಗಳನ್ನು ರೂಪಿಸುವ ಅಗತ್ಯವೂ ಸರ್ಕಾರಗಳ ಮೇಲೆ ಬಿತ್ತು. ಸಾಂಪ್ರದಾಯಿಕ ಮನೋಭಾವ ಹೆಚ್ಚಾಗಿರುವ, ಮತೀಯತೆ ಗಾಢವಾಗಿರುವ, ಶಿಕ್ಷಣ ಪ್ರಮಾಣ ಕಡಿಮೆ ಇರುವ ದೇಶಗಳಲ್ಲಿ ಅಬಾರ್ಷನ್‌ಗೆ ನಿಷೇಧ ಎಂಬ ಸಾಮಾನ್ಯ ಅಭಿಪ್ರಾಯವಿದೆ. ಹಾಗಂತ ಆಧುನಿಕ ಮನೋಧರ್ಮದ ದೇಶಗಳಲ್ಲೆಲ್ಲಾ ಅಬಾರ್ಷನ್‌ಗೆ ಮುಕ್ತ ಸಮ್ಮತಿಯಿದೆ ಎಂದರ್ಥವಲ್ಲ. ಈ ಬಗ್ಗೆ ನಾವು ವಿವರವಾಗಿ ನೋಡೋಣ.

ಅಮೆರಿಕದಲ್ಲಿ ಬಂದ ತೀರ್ಪು ಏನು?

ಮಿಸಿಸಿಪ್ಪಿ ರಾಜ್ಯದ ರಿಪಬ್ಲಿಕನ್‌ ಪಕ್ಷದ ಸರಕಾರ ಜಾರಿಗೆ ತಂದಿದ್ದ ʼ15 ವಾರಗಳ ಬಳಿಕ ಗರ್ಭಪಾತ ನಿಷೇಧʼ ಕಾಯಿದೆಯನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಎತ್ತಿ ಹಿಡಿಯಿತು. 9 ನ್ಯಾಯಮೂರ್ತಿಗಳಿದ್ದ ಪೀಠದಲ್ಲಿ 6 ಮಂದಿ ಗರ್ಭಪಾತದ ವಿರುದ್ಧವಾಗಿ ನಿಲುವು ತಾಳಿದರು. 2018ರಲ್ಲಿ ಮಿಸಿಸಿಪ್ಪಿ ರಾಜ್ಯ ಸರ್ಕಾರ 15 ವಾರಗಳ ನಂತರದ ಭ್ರೂಣ ತೆಗೆಸುವುದನ್ನು ನಿಷೇಧಿಸಿತ್ತು. ವೈದ್ಯಕೀಯ ತುರ್ತುಪರಿಸ್ಥಿತಿ, ಭ್ರೂಣದಲ್ಲಿ ಗಂಭೀರ ಅಸಹಜತೆ ಇದ್ದಾಗ ಮಾತ್ರ ಅಬಾರ್ಷನ್‌ ಮಾಡಬಹುದು ಎಂದು ಕಾಯಿದೆ ಹೇಳಿತ್ತು. ಈಗ, ಅಬಾರ್ಷನ್‌ ಬಗ್ಗೆ ರಾಜ್ಯಗಳು ತಮ್ಮದೇ ಆದ ಕಾಯಿದೆ ರೂಪಿಸಬಹುದು ಎಂದಿದೆ. ಈಗಾಗಲೇ ಅಮೆರಿಕದ 11 ರಾಜ್ಯಗಳಲ್ಲಿ ಅಬಾರ್ಷನ್‌ ಮೇಲೆ ಕಟ್ಟುನಿಟ್ಟಾದ ನಿಷೇಧಗಳಿವೆ. ಇತರ 12 ರಾಜ್ಯಗಳಲ್ಲಿ ಯಾವಾಗ ಬೇಕಿದ್ದರೂ ನಿರ್ಬಂಧ ವಿಧಿಸಬಹುದಾದ ಅವಕಾಶಗಳನ್ನು ಹೊಂದಿರುವ ಕಾನೂನುಗಳಿವೆ.

ರೋ ಮತ್ತು ವೇಡ್‌ ಪ್ರಕರಣ

1937ರಲ್ಲಿ ಸುಪ್ರೀಂ ಕೋರ್ಟ್ ನೀಡಿದ Roe v Wade ಪ್ರಕರಣದ ತೀರ್ಪನ್ನು ಐತಿಹಾಸಿಕ ಎನ್ನಲಾಗುತ್ತದೆ. ಆ ಪ್ರಕರಣದಲ್ಲಿ, ಮಹಿಳೆಗೆ ಇರುವ ಖಾಸಗಿತನದ ಹಕ್ಕಿನಡಿ ಗರ್ಭಪಾತದ ಹಕ್ಕು ಕೂಡ ಬರುತ್ತದೆ ಎಂದು ಕೋರ್ಟ್‌ ವ್ಯಾಖ್ಯಾನಿಸಿತ್ತು. ಆದರೆ ಈಗ, ತಾನೇ ನೀಡಿದ ತೀರ್ಪಿಗೆ ಉಲ್ಟಾ ಹೊಡೆದಿರುವ ಕೋರ್ಟ್‌, ಸಂವಿಧಾನದಲ್ಲಿ ಗರ್ಭಪಾತದ ಉಲ್ಲೇಖವಿಲ್ಲ ಎಂದು ಹೇಳಿದೆ. ಈ ತೀರ್ಪು ಅಮೆರಿಕದಲ್ಲಿ ಸಾಕಷ್ಟು ವಾದವಿವಾದ, ಕೋಲಾಹಲ ಎಬ್ಬಿಸುವ ಸಾಧ್ಯತೆ ಇದೆ. ಯಾಕೆಂದರೆ ಈ ಹಕ್ಕನ್ನು ಪಡೆಯುವ ಮುನ್ನ ಸಾಕಷ್ಟು ಹೋರಾಟಗಳು ನಡೆದಿದ್ದವು. ಅಮೆರಿಕದ ರಾಜಕೀಯದಲ್ಲಿ ಈ ಬಗ್ಗೆ ಬಿಸಿಯೇರಿದ ವಾಗ್ಯುದ್ಧಗಳು, ಚಳವಳಿ ಎಲ್ಲವೂ ನಡೆದಿದ್ದವು. ಇತ್ತೀಚಿಗಿನ ಒಂದು ದಶಕದಲ್ಲಿ ಅಮೆರಿಕದಲ್ಲಿ ಗರ್ಭಪಾತ ಪ್ರಕರಣಗಳು ಏರಿದ್ದವು. ಕಳೆದ ಮೂರು ವರ್ಷಗಳಲ್ಲಿ ಇದು ಶೇ.8ರಷ್ಟು ಏರಿಕೆಯಾಗಿತ್ತು. ಸಂಪ್ರದಾಯವಾದಿ ವಲಯದಲ್ಲಿ ಇದು ಕಳವಳ ಹುಟ್ಟಿಸಿತ್ತು. ಆದರೆ ಕೋರ್ಟ್‌ ತೀರ್ಪಿನಿಂದಾಗಿ, ದೇಶ ಮತ್ತೆ ಸಂಪ್ರದಾಯವಾದಿ ಮನಸ್ಸತ್ವದತ್ತ ವಾಲುತ್ತಿದೆ ಎಂಬ ಅಭಿಪ್ರಾಯ ಉಂಟಾಗಿದೆ. ಹಾಗೆಯೇ, ಜಗತ್ತಿನ ಅತ್ಯಂತ ಆಧುನಿಕ ದೇಶದಲ್ಲೇ ಹೀಗಾದರೆ, ಇತರ ದೇಶಗಳ ಕತೆ ಏನಾದೀತು ಎಂಬ ಆತಂಕವೂ ಮೂಡುವಂತಾಗಿದೆ.

ಭಾರತದಲ್ಲಿ ಕಾಯಿದೆ ಹೇಗಿದೆ?

ವೈದ್ಯಕೀಯ ಗರ್ಭಧಾರಣೆ ತಡೆ ಕಾಯಿದೆ- 1971ರಲ್ಲಿ ದೇಶದಲ್ಲಿ ಗರ್ಭಪಾತ ಯಾವ ಅವಧಿಯವರೆಗೆ ಮಾಡಬಹುದು, ಯಾವಾಗ ಮಾಡಬಾರದು ಎಂಬುದನ್ನು ನಿಯಮಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, 20ನೇ ವಾರದ ಒಳಗೆ ಮಾಡಿಕೊಳ್ಳುವ ಅಬಾರ್ಷನ್‌ ಕಾನೂನುಬದ್ಧವಾದುದು. ಇದಕ್ಕೆ ಡಾಕ್ಟರ್‌ ಒಪ್ಪಿಗೆ ಇರಬೇಕು ಹಾಗೂ ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆಯ ವೈದ್ಯರಿಂದ ಇದನ್ನು ಮಾಡಿಸಬಹುದು.

ಆದರೆ ಇದರ ಮಾನದಂಡದಲ್ಲೂ ಸ್ವಲ್ಪ ವ್ಯತ್ಯಾಸಗಳಿವೆ. ಗರ್ಭದ 12ನೇ ವಾರಗಳವರೆಗೆ ಒಬ್ಬ ವೈದ್ಯರ ಅನುಮತಿ ಪಡೆದು ಅಬಾರ್ಷನ್‌ ಮಾಡಬಹುದು. 12ರಿಂದ ಮೇಲ್ಪಟ್ಟು 20 ವಾರಗಳ ಒಳಗೆ ಆಗಿದ್ದರೆ ಇಬ್ಬರು ವೈದ್ಯರ ಒಪ್ಪಿಗೆ ಬೇಕು.

2020ರಲ್ಲಿ ಈ ಕಾಯಿದೆಗೆ ಒಂದು ತಿದ್ದುಪಡಿ ತರಲಾಯಿತು. ಕೆಲವು ಪ್ರಕರಣಗಳಲ್ಲಿ ಮಾತ್ರ 24ನೇ ವಾರದವರೆಗೆ ಗರ್ಭಪಾತ ಮಾಡಿಸುವ ಹಕ್ಕನ್ನು ನೀಡಲಾಯಿತು. ಭ್ರೂಣದಲ್ಲಿ ಗಂಭೀರವಾದ ಅಸಹಜತೆ ಇದ್ದರೆ, ರೇಪ್‌ನಿಂದಾಗಿ ಮಹಿಳೆ ಗರ್ಭವತಿಯಾಗಿದ್ದು ಆ ಮಗು ಆಕೆಗೆ ಬೇಡವಾಗಿದ್ದರೆ, ಅಂಥ ಸಂದರ್ಭದಲ್ಲಿ 24ನೇ ವಾರದವರೆಗೂ ಅಬಾರ್ಷನ್‌ ಮಾಡಿಸಲು ಅವಕಾಶವಿದೆ.

ಈ ಕಾಯಿದೆ ಇನ್ನೂ ಒಂದು ಅಂಶವನ್ನು ಹೇಳಿದೆ- ತೀರಾ ಗಂಭೀರವಾದ ಆರೋಗ್ಯ- ದೈಹಿಕ ಅಸಹಜತೆ ಭ್ರೂಣದಲ್ಲಿ ಇದ್ದರೆ, ಅಂಥ ಗರ್ಭವನ್ನು ತೆಗೆಸಲು 24ನೇ ವಾರದ ನಂತರವೂ ಈಗಿನ ತಂತ್ರಜ್ಞಾನದ ಬೆಳವಣಿಗೆಗಳ ಕಾರಣದಿಂದಾಗಿ ಅವಕಾಶವಿದೆ. ಆದರೆ ಇದನ್ನು ಒಂದು ವೈದ್ಯಕೀಯ ಮಂಡಳಿ ಶಿಫಾರಸು ಮಾಡಬೇಕು. ಈ ಮಂಡಳಿಯಲ್ಲಿ ಗೈನಕಾಲಜಿಸ್ಟ್‌, ಮಕ್ಕಳ ತಜ್ಞ, ರೇಡಿಯಾಲಜಿಸ್ಟ್‌, ಮತ್ತು ಸರ್ಕಾರ ನಿಗದಿಪಡಿಸಿದ ಇತರ ತಜ್ಞರು ಇರಬೇಕು.

ಇಂಥ ಮಹಿಳೆಯ ಗುರುತನ್ನು ಯಾರೂ ಬಹಿರಂಗಪಡಿಸುವಂತಿಲ್ಲ. ಹಾಗೆ ಬಹಿರಂಗಪಡಿಸುವುದು ಕ್ರಿಮಿನಲ್‌ ಅಪರಾಧ. ಮಹಿಳೆಯ ಒಪ್ಪಿಗೆಯಿಲ್ಲದೇ ಆಕೆಗೆ ಅಬಾರ್ಷನ್‌ ನೆರವೇರಿಸುವುದು ಗುರುತರ ದಂಡನೀಯ ಅಪರಾಧ. ಹಾಗೇ ಗರ್ಭಧಾರಣೆ ತಡೆ ಕ್ರಮಗಳು ವಿಫಲಗೊಂಡ ಕಾರಣದಿಂದ ಆಕೆ ಗರ್ಭ ಧರಿಸಿದ್ದರೆ, ಅದನ್ನೂ ತೆಗೆಸಲು ಅವಕಾಶವಿದೆ. ಇಲ್ಲಿ ಮಹಿಳೆ ವಿವಾಹಿತೆಯೇ ಅಲ್ಲವೇ ಎಂಬುದು ಗಣನೆಗೆ ಬರುವುದಿಲ್ಲ.

ಭಾರತದಲ್ಲಿ ವೈದ್ಯರ ಸಹಾಯವಿಲ್ಲದೆ ಸ್ವಯಂ ಆಗಿ ಗರ್ಭಪಾತ ಮಾಡಿಕೊಳ್ಳುವುದು ಭಾರತೀಯ ದಂಡಸಂಹಿತೆಯ ಪ್ರಕಾರ ಕ್ರಿಮಿನಲ್‌ ಕೃತ್ಯ. 20ನೇ ವಾರದವರೆಗೆ ಅಬಾರ್ಷನ್‌ಗೆ ಅವಕಾಶ ನೀಡಿದ್ದರೂ ಭಾರತದಲ್ಲಿ ಅಬಾರ್ಷನ್‌ ಮಾಡಿಸಿಕೊಳ್ಳುವುದನ್ನು ಅಪರಾಧ ಎಂಬಂತೆಯೇ ನೋಡುವ ಮನೋಭಾವ ಹಲವು ವಲಯಗಳಲ್ಲಿ ಇದೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಪ್ರಕಾರ, ಭಾರತದಲ್ಲಿ ಮಾತೃತ್ವ ಮರಣಗಳಿಗೆ ಕಾರಣವಾಗುವ ಅಂಶಗಳಲ್ಲಿ ಅಸುರಕ್ಷಿತ ಅಬಾರ್ಷನ್‌ಗಳು ಮೂರನೇ ಸ್ಥಾನದಲ್ಲಿವೆ. 2007-2011ರ ಅವಧಿಯಲ್ಲಿ ದೇಶದಲ್ಲಿನ 67% ಅಬಾರ್ಷನ್‌ಗಳು ಅಸುರಕ್ಷಿತ ರೀತಿಯಲ್ಲಿ ನಡೆದಿವೆ.

ಈಗ ಬೇರೆ ದೇಶಗಳ ಕತೆ ಏನು ನೋಡೋಣ.

24 ದೇಶಗಳಲ್ಲಿ ಅಬಾರ್ಷನ್ ಎಂಬುದು ಸಂಪೂರ್ಣ ನಿಷೇಧಿತ ಕೃತ್ಯ. ಈ 24 ದೇಶಗಳಲ್ಲಿ ಜಗತ್ತಿನ 5% ಸಂತಾನೋತ್ಪತ್ತಿ ಪ್ರಾಯದ ಮಹಿಳೆಯರು (ಸುಮಾರು 9 ಕೋಟಿ) ಇದ್ದಾರೆ. ಇದರಲ್ಲಿ ಸೆನೆಗಲ್, ಮಾರಿತಾನಿಯಾ, ಈಜಿಪ್ಟ್, ಲಾವೋಸ್, ಫಿಲಿಪೀನ್ಸ್, ಎಲ್ ಸಾಲ್ವಡಾರ್, ಹೊಂಡುರಾಸ್, ಪೋಲೆಂಡ್, ಮಾಲ್ಟಾ ಮುಂತಾದ ದೇಶಗಳಿವೆ. ಇದರಲ್ಲಿನ ಕೆಲವು ದೇಶಗಳ ಕಾನೂನುಗಳು ಎಷ್ಟು ಕಠಿಣವಾಗಿವೆ ಎಂದರೆ, ಅಬಾರ್ಷನ್ ಮಾಡಿಸಿಕೊಂಡ ಮಹಿಳೆಯರಿಗೆ ಜೈಲುವಾಸ ಖಚಿತ. ಉದಾಹರಣೆಗೆ, ಎಲ್ ಸಾಲ್ವಡಾರ್ನಲ್ಲಿ ಅಚಾನಕ್ ಗರ್ಭಪಾತಕ್ಕೆ ಈಡಾದ ಮಹಿಳೆಯರ ಮೇಲೆ ಕೊಲೆ ಆರೋಪವನ್ನು ಹೊರಿಸಿ ಜೈಲಿನಲ್ಲಿಡಲಾಗಿದೆ.

ಅಬಾರ್ಷನ್ ಅನ್ನು ಯಾವುದೇ ಸಂದರ್ಭದಲ್ಲಿ ನಿಷೇಧಿಸಿರುವ ಯುರೋಪ್ನ ಏಕೈಕ ದೇಶ ಮಾಲ್ಟಾ. ಕಳೆದ ವರ್ಷ ಇಲ್ಲಿನ ಶತಮಾನಗಳಷ್ಟು ಹಳೆಯದಾದ ಅಬಾರ್ಷನ್ ಕಾನೂನನ್ನು ಕಿತ್ತುಹಾಕುವಂತೆ ಆಗ್ರಹಿಸಿ ದೊಡ್ಡ ಸಂಖ್ಯೆಯ ಮಂದಿ ಪ್ರತಿಭಟನೆ ನಡೆಸಿದರು. ಇನ್ನೊಂದು ಕಡೆ ಪೋಲೆಂಡ್ನಲ್ಲಿ ಇತ್ತೀಚೆಗೆ ಅಬಾರ್ಷನ್ ಕಾಯಿದೆಯನ್ನು ಇನ್ನಷ್ಟು ಬಿಗಿ ಮಾಡಲಾಗಿದ್ದು, ಕೇವಲ ರೇಪ್, ಕುಟುಂಬ ಸಂಬಂಧದೊಳಗಿನ ಗರ್ಭಕಟ್ಟುವಿಕೆ, ಅಥವಾ ತಾಯಿಯ ಜೀವ ಗಂಡಾಂತರದಲ್ಲಿದ್ದರೆ ಮಾತ್ರ ಗರ್ಭಪಾತಕ್ಕೆ ಅವಕಾಶ ನೀಡಲಾಗಿದೆ.

ಆಫ್ರಿಕಾದಲ್ಲಿ ಕಳೆದ ಮೂರು ದಶಕಗಳಲ್ಲಿ ಅನುದ್ದೇಶಿತ ಗರ್ಭಧಾರಣೆಗಳ ಸಂಖ್ಯೆ ಶೇ.15ರಷ್ಟು ಇಳಿದಿದ್ದರೆ, ಅಬಾರ್ಷನ್ ಪ್ರಮಾಣ ಶೇ.13ರಷ್ಟು ಏರಿದೆ. ಹೆಚ್ಚಿನ ಆಫ್ರಿಕನ್ ದೇಶಗಳು ಗರ್ಭಪಾತವನ್ನು ಬಹುತೇಕ ಬ್ಯಾನ್ ಮಾಡಿವೆ ಅಥವಾ ಕಠಿಣವಾಗಿ ನಿರ್ಬಂಧಿಸಿವೆ. ನೈಜೀರಿಯಾದಲ್ಲಿ ತಾಯಿಯ ಜೀವ ಅಪಾಯದಲ್ಲಿದ್ದರೆ ಮಾತ್ರವೇ ಅಬಾರ್ಷನ್ಗೆ ಅವಕಾಶವಿದೆ. ಜಿಂಬಾಬ್ವೆ, ಬೋಟ್ಸ್ವಾನಾಗಳಲ್ಲಿ ಕುಟುಂಬದೊಳಗಿನ ಸಂಬಂಧದಿಂದ ಆದ ಗರ್ಭ, ರೇಪ್ ಅಥವಾ ಭ್ರೂಣದಲ್ಲಿ ಸಮಸ್ಯೆಯಿದ್ದರೆ ಮಾತ್ರ ತೆಗೆಸಲು ಅವಕಾಶ.

50 ದೇಶಗಳಲ್ಲಿ ತಾಯಿಯ ಜೀವ ಅಪಾಯದಲ್ಲಿದ್ದರೆ ಗರ್ಭಪಾತಕ್ಕೆ ಅವಕಾಶ ಮಾಡಿಕೊಡಲಾಗಿದೆ. ಲಿಬಿಯಾ, ನೈಜೀರಿಯಾ, ಇರಾನ್, ವೆನೆಜುವೆಲಾ ಮುಂತಾದ ದೇಶಗಳಲ್ಲಿ ಹೀಗಿದೆ. ಬ್ರೆಜಿಲ್ನಲ್ಲಿ ರೇಪ್ ಅಥವಾ ಭ್ರೂಣದ ಅಸಹಜತೆಯಿದ್ದರೆ ಗರ್ಭಪಾತದ ಅವಕಾಶವಿದ್ದರೂ ಮೂವರು ವೈದ್ಯರಿಂದ ಶಿಫಾರಸು ಪಡೆಯುವುದು ಅಗತ್ಯವಿದೆ. ರೇಪ್ ಬಳಿಕ ಅಬಾರ್ಷನ್ ಮಾಡಿಸಿಕೊಳ್ಳುವವರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಾರೆ.

ಇನ್ನು ಕೆಲವು ದೇಶಗಳಲ್ಲಿ ಗರ್ಭಪಾತ ಮಾಡಿಸಿಕೊಳ್ಳುವುದು ಅಷ್ಟು ಕಷ್ಟವಿಲ್ಲ. ಕೆನಡಾ, ಆಸ್ಟ್ರೇಲಿಯಾ, ಯುರೋಪ್ನ ಹಲವಾರು ದೇಶಗಳಲ್ಲಿ ಗರ್ಭದ ಅವಧಿಯನ್ನು ಹೊರತುಪಡಿಸಿ ಅಬಾರ್ಷನ್ಗೆ ಬೇರೇನೂ ನಿಷೇಧವಿಲ್ಲ. ಕೆನಡಾದಲ್ಲಿ ಅಬಾರ್ಷನ್ ಕುರಿತು ಯಾವುದೇ ಕಾನೂನು ಇಲ್ಲ. 1998ರಲ್ಲಿ ಅಬಾರ್ಷನ್ ನಿಷೇಧಿಸುವ ಫೆಡರಲ್ ಕಾಯಿದೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತು. “ಈ ಕಾಯಿದೆ ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸುರಕ್ಷತೆಯನ್ನು ಉಲ್ಲಂಘಿಸುತ್ತಿದೆʼʼ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

ಹೆಚ್ಚಿನ ಯುರೋಪಿಯನ್ ದೇಶಗಳು ಅವಧಿಗೊಳಪಟ್ಟು ಅಬಾರ್ಷನ್‌ಗೆ ಅನುಮತಿ ನೀಡಿವೆ. ಸರಾಸರಿ ಅವಧಿ ಎಂದರೆ 12- 14 ವಾರಗಳು. ಇನ್ನಷ್ಟು ವಿಳಂಬವಾಗಿ ಅಬಾರ್ಷನ್ ಮಾಡಿಸಿಕೊಳ್ಳುವುದಕ್ಕೂ ಕೆಲವು ದೇಶಗಳಲ್ಲಿ ವಿನಾಯಿತಿಗಳಿವೆ. ಉದಾಹರಣೆಗೆ ಬ್ರಿಟನ್ನಲ್ಲಿ, ಭ್ರೂಣದಲ್ಲಿ ಗಂಭೀರ ಸಮಸ್ಯೆಯಿದ್ದರೆ, ಜನನಪೂರ್ವ ಅವಧಿಯವರೆಗೂ ಅಬಾರ್ಷನ್ ಮಾಡಿಸಿಕೊಳ್ಳುವ ಅವಕಾಶ ನೀಡಲಾಗಿದೆ.

ಯುರೋಪ್, ಲ್ಯಾಟಿನ್ ಅಮೆರಿಕ, ಅಮೆರಿಕ, ಕಟ್ಟುನಿಟ್ಟಾದ ಕ್ಯಾಥೊಲಿಕ್ ಸಂಪ್ರದಾಯದ ದೇಶಗಳಲ್ಲೂ ಗರ್ಭಪಾತದ ಹಕ್ಕಿನ ಬಗ್ಗೆ ಸಾಕಷ್ಟು ವಾದವಿವಾದಗಳು, ಹೋರಾಟಗಳು ನಡೆದಿವೆ. ಇವುಗಳ ಹಿನ್ನೆಲೆಯಲ್ಲಿ ಅಲ್ಲಿನ ಕಾನೂನುಗಳೂ ಬದಲಾಗಿವೆ. ಕಳೆದ ವರ್ಷ ಕೊಲಂಬಿಯಾದಲ್ಲಿ ʼಕಾಸಾ ಜಸ್ಟಾʼ ಎಂಬ ಹೋರಾಟ ನಡೆದು, ಆ ಹಿನ್ನೆಲೆಯಲ್ಲಿ ಅಲ್ಲಿನ ಸಾಂವಿಧಾನಿಕ ಕೋರ್ಟ್ 24ನೇ ವಾರದವರೆಗೂ ಗರ್ಭಪಾತವನ್ನು ಮಾನ್ಯ ಮಾಡಿತು. ಮೆಕ್ಸಿಕೋದ ಸುಪ್ರೀಂ ಕೋರ್ಟ್ ಕೂಡ, ಅಬಾರ್ಷನ್ ಮಾಡಿಸಿಕೊಂಡ ಮಹಿಳೆಯನ್ನು ಬಂಧನಕ್ಕೊಳಪಡಿಸುವ ಅಧಿಕಾರಿಗಳ ಅಧಿಕಾರವನ್ನು ರದ್ದುಪಡಿಸಿತು.

ಸವಿತಾ ಹಾಲಪ್ಪನವರ್ ಪ್ರಕರಣ

ಅಬಾರ್ಷನ್ ವಿಚಾರದಲ್ಲಿ ಇಡೀ ಜಗತ್ತಿನ ಗಮನ ಸೆಳೆದ ದುರಂತಮಯ, ಮಾನವೀಯ ನೆಲೆಯ ಘಟನೆ ಎಂದರೆ ಐರ್ಲೆಂಡ್ನಲ್ಲಿ ಸಂಭವಿಸಿದ ಸವಿತಾ ಹಾಲಪ್ಪನವರ್ ಅವರ ಅಬಾರ್ಷನ್ ಪ್ರಕರಣ. ಯುರೋಪ್ನಲ್ಲಿ ಅಬಾರ್ಷನ್ ಬಗ್ಗೆ ಅತಿ ಹೆಚ್ಚು ನಿರ್ಬಂಧ ಹೊಂದಿದ್ದ ದೇಶವೆಂದರೆ ಐರ್ಲೆಂಡ್. ಪಕ್ಕದ ಇಂಗ್ಲೆಂಡ್ನಲ್ಲಿ ಈ ಬಗ್ಗೆ ಆಧುನಿಕವಾದ ಚಿಂತನೆ ಇದ್ದರೂ ಐರ್ಲೆಂಡ್ ಮಾತ್ರ ಇನ್ನೂ ಪುರಾತನವಾದ ಕಾಯಿದೆಯನ್ನೇ ಹೊಂದಿತ್ತು. ತಾಯಿಯ ಜೀವಕ್ಕೆ ಅಪಾಯ ಇದ್ದರೆ ಅಥವಾ ಭ್ರೂಣದ ಹೃದಯಬಡಿತ ನಿಂತಿದ್ದರೆ ಮಾತ್ರವೇ ಅಬಾರ್ಷನ್ ಮಾಡಿಸಬಹುದು ಎಂಬ ಕಠೋರ ಕಾಯಿದೆ ಅಲ್ಲಿತ್ತು. ಇದರಿಂದಾಗಿ, ಅಬಾರ್ಷನ್ ಮಾಡಿಸಿಕೊಳ್ಳಬಯಸುವ ಮಹಿಳೆಯರು ಸದ್ದಿಲ್ಲದೇ ಅಕ್ಕಪಕ್ಕದ ಇಂಗ್ಲೆಂಡ್ ಮುಂತಾದ ದೇಶಗಳಿಗೆ ಹೋಗಿ ಗರ್ಭ ತೆಗೆಸಿಕೊಂಡು ಬರುತ್ತಿದ್ದರು.

2012ರಲ್ಲಿ ಮಾತ್ರ ಒಂದು ದುರಂತ ನಡೆದುಹೋಯಿತು. ಕರ್ನಾಟಕ ಮೂಲದ ಸವಿತಾ ಹಾಲಪ್ಪವರ್ ಎಂಬ 31 ವರ್ಷದ ಹೆಣ್ಣುಮಗಳು ಗರ್ಭವತಿಯಾಗಿದ್ದರು. ಇದ್ದಕ್ಕಿದ್ದಂತೆ ಗರ್ಭ ಜಾರಿದ ಅನುಭವವಾಗಿ, ವೈದ್ಯರಲ್ಲಿಗೆ ತೆರಳಿದ ಅವರಿಗೆ ಭ್ರೂಣ ಉಳಿಯುವುದಿಲ್ಲ ಎಂದು ಅರಿವಾಗಿ ಅದನ್ನು ತೆಗೆಸಲು ಮುಂದಾದರು. ಆಗ ಗರ್ಭಕ್ಕೆ 17 ವಾರವಾಗಿತ್ತು. ವೈದ್ಯರು ಅಬಾರ್ಷನ್ ಮಾಡುವುದಿಲ್ಲ ಎಂದರು. ಭ್ರೂಣದ ಹೃದಯ ಇನ್ನೂ ಬಡಿದುಕೊಳ್ಳುತ್ತಿದೆ ಎಂಬ ಕಾರಣ ನೀಡಿದರು. ಸವಿತಾ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡುವಂತೆ ಮೇಲ್ಮನವಿ ಮಾಡಬೇಕಾಯಿತು. ಆದರೆ ಅವಕಾಶ ಸಿಗಲಿಲ್ಲ. ಈ ನಡುವೆ ಆಕೆಯಲ್ಲಿ ಸೆಪ್ಸಿಸ್ ಎಂಬ ಸೋಂಕು ರೋಗ ಉಂಟಾಯಿತು. ಅಬಾರ್ಷನ್ ಬಗ್ಗೆ ಚರ್ಚೆ ನಡೆಯುತ್ತಿದ್ದಾಗಲೇ, ಒಂದೇ ವಾರದಲ್ಲಿ ಆಕೆ ಬಹು ಅಂಗವೈಫಲ್ಯದಿಂದ ಮೃತಪಟ್ಟರು.

ಈ ಪ್ರಕರಣ ಐರ್ಲೆಂಡ್ನಲ್ಲಿ ಹಾಗೂ ವಿಶ್ವಾದ್ಯಂತ ಗರ್ಭಪಾತದ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಮಹಿಳಾ ಸಮುದಾಯದಲ್ಲಿ ಆಕ್ರೋಶದ ಅಲೆಯನ್ನು ಎಬ್ಬಿಸಿತು. ಸಾವಿರಾರು ಮಂದಿ ಬೀದಿಗೆ ಇಳಿದರು. ಇದೆಲ್ಲದರಿಂದ ಎಚ್ಚೆತ್ತ ಐರ್ಲೆಂಡ್ ಪ್ರಕರಣದ ಸಮಗ್ರವಾದ ತನಿಖೆ ನಡೆಸಿತು. 2019ರಲ್ಲಿ ತನ್ನ ಸಂವಿಧಾನದಲ್ಲಿ ತಿದ್ದುಪಡಿ ತಂದಿತು. ಅದರ ಪ್ರಕಾರ ಇಂದು 12 ವಾರಗಳವರೆಗಿನ ಗರ್ಭಪಾತ ಸಂಪೂರ್ಣ ಕಾನೂನುಬದ್ಧ ಹಾಗೂ ಕೆಲವು ನಿರ್ಬಂಧಗಳಿಗೆ ಒಳಪಟ್ಟು 24 ವಾರಗಳವರೆಗೆ ಅಬಾರ್ಷನ್ ಮಾಡಿಸಿಕೊಳ್ಳಬಹುದಾಗಿದೆ. ಆದರೆ ಈ ಬದಲಾವಣೆ ಉಂಟಾಗಬೇಕಾದರೆ ಸವಿತA ಎಂಬ ಮುಗ್ಧ ಹೆಣ್ಣುಮಗಳು ಬಲಿಯಾಗಬೇಕಾಯಿತು.

ನಮ್ಮ ನಡುವೆಯೂ ಇಂಥ ಸಾವಿರಾರು ಸವಿತಾಗಳು ಇರಬಹುದು. ಅಬಾರ್ಷನ್ ಎಂಬುದು ಕಾನೂನುಬದ್ಧವಾದಾಗ, ಆ ಕುರಿತು ಮುಜುಗರ ಆತಂಕಗಳು ಇಲ್ಲದೇ ಹೋದಾಗ ಅನೇಕ ಹೆಣ್ಣುಮಕ್ಕಳ ಜೀವ ಉಳಿಯುತ್ತದೆ. ಅಮೆರಿಕದ ಸುಪ್ರೀಂ ಕೋರ್ಟ್ ಇಂದು ತೆಗೆದುಕೊಂಡಿರುವ ನಿರ್ಧಾರ ಮಹಿಳಾ ಹಕ್ಕುಗಳನ್ನು ಮಾತ್ರವಲ್ಲ ಮನುಕುಲವನ್ನೇ ಒಂದು ಹೆಜ್ಜೆ ಹಿಂದಕ್ಕೆ ಎಳೆಯುವ ತೀರ್ಪು ಎಂದು ಹೋರಾಟಗಾರರು, ತಜ್ಞರು ವಾದಿಸುತ್ತಿದ್ದಾರೆ. ಅಮೆರಿಕದ ಮಾದರಿಯನ್ನು ಇತರ ದೇಶಗಳೂ ಅನುಸರಿಸಿದರೆ ನಾವು ಇದುವರೆಗೆ ಹೋರಾಟಗಳ ಮೂಲಕ ಸಾಧಿಸಿರುವ ಸ್ತ್ರೀ ಸಮಾನತೆ, ಆರೋಗ್ಯಕರ ತಾಯ್ತನ ಮುಂತಾದ ಆಶಯಗಳೆಲ್ಲ ಮಣ್ಣುಗೂಡಲಿವೆ.

Exit mobile version