Site icon Vistara News

ವಿಸ್ತಾರ Explainer | ತೈವಾನ್‌ ದ್ವೀಪದೇಶದಲ್ಲಿ ಚೀನಾ- ಅಮೆರಿಕ ತಿಕ್ಕಾಟದ ಹಕೀಕತ್ತು

taiwan

ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ಚೀನಾದ ಕಟು ಎಚ್ಚರಿಕೆಯ ನಡುವೆಯೂ ತೈವಾನ್‌ಗೆ ಭೇಟಿ ನೀಡಿರುವುದು ಈಗ ಚೀನಾ- ಅಮೆರಿಕ ಸಂಬಂಧದ ನಡುವೆ ಇನ್ನಷ್ಟು ಕಿಡಿ ಕೆದರಿಸಿದೆ. ಅಲ್ಲಿ ಹೋದ ನ್ಯಾನ್ಸಿ ಅವರು ಸುಮ್ಮನಿರದೆ, ʼʼತೈವಾನ್‌ ವಿಚಾರದಲ್ಲಿ ನಮಗೆ ಇರುವ ಬದ್ಧತೆಯನ್ನು ನಾವೆಂದಿಗೂ ತೊರೆಯುವುದಿಲ್ಲʼʼ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಎಂದರೆ, ಸ್ವಾತಂತ್ರ್ಯಕ್ಕಾಗಿ ತೈವಾನ್‌ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸುವ, ಅಲ್ಲಿ ಚೀನಾದ ಆಡಳಿತವನ್ನು ನಿರಾಕರಿಸುವ ಕೆಲಸವನ್ನು ಸ್ಪಷ್ಟವಾಗಿಯೇ ಮಾಡಿದ್ದಾರೆ. ಕಳೆದ 25 ವರ್ಷಗಳಿಂದ ಇಲ್ಲಿಗೆ ಅಮೆರಿಕದ ಯಾವುದೇ ಜನಪ್ರತಿನಿಧಿ ಭೇಟಿ ನೀಡಿಲ್ಲ. ಇದೇ ಮೊದಲ ನ್ಯಾನ್ಸಿ ಪೆಲೋಸಿ ಅಲ್ಲಿಗೆ ಹೋಗುತ್ತಿದ್ದಾರೆ. ಮೇಲಾಗಿ, ನ್ಯಾನ್ಸಿ ಅವರು ಮೊದಲಿನಿಂದಲೂ ಚೀನಾದ ಕಟು ಟೀಕಾಕಾರರು.

ಇದು ಚೀನಾಕ್ಕೆ ಸಿಟ್ಟು ತರಿಸದೇ ಇದ್ದೀತೆ? ಅಮೆರಿಕದ ಒಡನಾಟ ತೈವಾನ್‌ಗೆ ಹೆಚ್ಚಾಗಿಬಿಟ್ಟರೆ ತನಗೆ ಕಷ್ಟ ಎಂಬುದು ಚೀನಾಗೆ ಗೊತ್ತು. ಯಾಕೆಂದರೆ ತಾನು ಸ್ವತಂತ್ರ ರಾಷ್ಟ್ರ ಎಂದೇ ತೈವಾನ್‌ ವಾದಿಸುತ್ತಿದೆ. ಆದರೆ ತೈವಾನ್‌ ತನ್ನ ಭೂಭಾಗ ಎಂದು ಚೀನಾ ವಾದಿಸುತ್ತದೆ. ಇತ್ತೀಚೆಗೆ ತೈವಾನ್‌ನಲ್ಲಿ ಸ್ವಾತಂತ್ರ್ಯವಾದ ಹೆಚ್ಚಾಗುತ್ತಿರುವಂತೆ, ತೈವಾನ್‌ ಸುತ್ತಮುತ್ತ ತನ್ನ ಮಿಲಿಟರಿ ಹಿಡಿತವನ್ನೂ ಚೀನಾ ಬಿಗಿ ಮಾಡಲು ಯತ್ನಿಸುತ್ತಿದೆ. ತೈವಾನ್‌ನ ಮೇಲೆ ಚೀನಾ ದಾಳಿ ನಡೆಸದಂತೆ ನೋಡಿಕೊಳ್ಳಲೆಂದು ಈ ಸಮುದ್ರ ಪ್ರದೇಶದಲ್ಲಿ ಅಮೆರಿಕ ಕೂಡ ತನ್ನ ಯುದ್ಧನೌಕೆಗಳನ್ನು ಕಾವಲಿಗಿಟ್ಟಿದೆ. ಇದೆಲ್ಲವೂ ಅಮೆರಿಕ- ಚೀನಾ ನಡುವಿನ ಸಂಬಂಧವನ್ನು ಇನ್ನಷ್ಟು ಆಳವಾಗಿ ಕದಡಿದ್ದು, ಈಗ ನ್ಯಾನ್ಸಿ ಭೇಟಿಯಿಂದ ಇದು ಇನ್ನಷ್ಟು ಕೆರಳಿದೆ.

ಹಾಗಿದ್ದರೆ ತೈವಾನ್‌ ಎಲ್ಲಿದೆ? ಅದರ ವಿಚಾರದಲ್ಲಿ ಚೀನಾದ ಹಿತಾಸಕ್ತಿ ಏನು? ಅಮೆರಿಕಕ್ಕೆ ಇಲ್ಲಿ ಏನು ಕೆಲಸ? ಅಮೆರಿಕ ಇಲ್ಲಿಗೆ ಬಂದರೆ ಚೀನಾ ಸಿಟ್ಟಾಗುವುದು ಏಕೆ? ತಿಳಿಯೋಣ.

ಏಳು ದಶಕಗಳ ಹಿಂದಿನ ಒಡಕು

ಆರೇಳು ದಶಕಗಳ ಹಿಂದಿನಿಂದಲೂ ತೈವಾನ್‌ನ ಆಡಳಿತದ ವಿಷಯದಲ್ಲಿ ಚೀನಾ ತಲೆ ಹಾಕುತ್ತಾ ಬಂದಿದೆ. 1949ರಲ್ಲಿ ಮಾವೋ ಝೆಡಾಂಗ್ ನೇತೃತ್ವದಲ್ಲಿ ಕಮ್ಯುನಿಸ್ಟರು ಬೀಜಿಂಗ್‌ನಲ್ಲಿ ಅಧಿಕಾರವನ್ನು ಪಡೆದರು. ಚಿಯಾಂಗ್ ಕೈ ಶೇಕ್‌ ನೇತೃತ್ವದ ಕೌಮಿಂಟಾಂಗ್ (KMT) ದಳವನ್ನು ಸೋಲಿಸಿದರು. ಆಗ ನಡೆದ ಅಂತರ್ಯುದ್ಧದಲ್ಲಿ ಕೌಮಿಂಟಾಂಗ್‌ಗಳು ಚೀನಾದ ಪಕ್ಕದ ದ್ವೀಪ ತೈವಾನ್‌ಗೆ ಪಲಾಯನ ಮಾಡಿದರು. ಅಲ್ಲಿ ತಮ್ಮದೇ ಆಡಳಿತ ಸ್ಥಾಪಿಸಿಕೊಂಡರು. ಚೀನಾದ ಜತೆಗೆ ಸಂಪರ್ಕ ಕಡಿದುಕೊಂಡರು. ಚೀನಾದ ರಾಜಧಾನಿ ಬೀಜಿಂಗಾ ಅಥವಾ ತೈವಾನ್‌ನ ಮುಖ್ಯಪಟ್ಟಣ ತೈಪೆಯಾ ಎಂಬ ಗೊಂದಲ ಮುಂದಿನ ಹಲವು ವರ್ಷಗಳ ಕಾಲ ಮುಂದುವರಿಯಿತು. ಹೀಗಾಗಿ ವಿಶ್ವಸಂಸ್ಥೆಯಲ್ಲಿ ಬೀಜಿಂಗ್‌ನ ಬದಲು ತೈಪೆಗೆ ಹೆಚ್ಚಿನ ಮಾನ್ಯತೆ ದೊರೆಯಿತು. 1950ರಲ್ಲಿ ತೈವಾನ್, ಅಮೆರಿಕದ ಜತೆಗೆ ಸ್ನೇಹ ಬೆಳೆಸಿತು. ಕೊರಿಯಾ ವಿರುದ್ಧದ ಯುದ್ಧದಲ್ಲಿ ಅಮೆರಿಕಕ್ಕೆ ಸಹಾಯ ಮಾಡಿತು. ತೈವಾನ್‌ನ ರಕ್ಷಣೆಗೆ ಅಮೆರಿಕವು ತೈವಾನ್ ಜಲಸಂಧಿಯಲ್ಲಿ ತನ್ನ ಯುದ್ಧನೌಕೆಯನ್ನು ನಿಯೋಜಿಸಿತು.

1971ರಲ್ಲಿ ವಿಶ್ವಸಂಸ್ಥೆಯು ಬೀಜಿಂಗ್‌ ಅನ್ನು ಚೀನಾದ ರಾಜಧಾನಿಯಾಗಿ ಗುರುತಿಸಿತು. ಹಾಗೂ ಅಮೆರಿಕ ಕೂಡ ಅದನ್ನು ಮಾನ್ಯ ಮಾಡಿ, ಬೀಜಿಂಗ್‌ ಜತೆಗೆ ರಾಯಭಾರ ಸಂಬಂಧಗಳನ್ನು ಶುರುಮಾಡಿತು. 1987ರಲ್ಲಿ ತೈವಾನ್‌ ನಿವಾಸಿಗಳಿಗೆ ಚೀನಾಗೆ ಬಂದುಹೋಗಲು ಅನುಮತಿ ದೊರೆಯಿತು. 1991ರಲ್ಲಿ ಎಮೆರ್ಜೆನ್ಸಿ ತೆಗೆದುಹಾಕಿದ ತೈವಾನ್‌, ಚೀನಾದ ಜತೆಗಿನ ಯುದ್ಧ ಕೊನೆಗೊಳಿಸಿತು. ಆದರೆ ಅಮೆರಿಕದವರು ತೈವಾನ್‌ಗೆ ಬಂದುಹೋಗುವುದನ್ನು ಚೀನಾ ಒಪ್ಪಲಿಲ್ಲ. 1995ರಲ್ಲಿ ತೈವಾನ್‌ ಪ್ರೆಸಿಡೆಂಟ್‌ ಲೀ ತೆಂಗ್ ಹುಯಿ ಅಮೆರಿಕೆಗೆ ಭೇಟಿ ನೀಡಿದ್ದನ್ನೂ ಚೀನಾ ಮಾನ್ಯ ಮಾಡಲಿಲ್ಲ. 1996ರಲ್ಲಿ ತೈವಾನ್‌ ಮೊತ್ತಮೊದಲ ಅಧ್ಯಕ್ಷೀಯ ಚುನಾವಣೆ ನಡೆಸಿದಾಗ, ಅದನ್ನು ಬೆದರಿಸಲು ಎಂಬಂತೆ ಚೀನಾ ಅದರ ಪಕ್ಕದಲ್ಲೇ ಕ್ಷಿಪಣಿ ಪ್ರಯೋಗ ಮಾಡಿತು. 2000ದ ತೈವಾನ್‌ ಚುನಾವಣೆಯಲ್ಲಿ ಕೆಎಂಟಿ ಸೋತು, ಕಮ್ಯುನಿಸ್ಟರು ಗೆದ್ದ ಕಾರಣ, ಚೀನಾ ಮುಂದಿನ ಹಕವು ವರ್ಷ ಹೆಚ್ಚು ತಗಾದೆ ತೆಗೆಯದೆ ಸುಮ್ಮನಿತ್ತು.

ಚೀನಾ ಒಂದು ಪಾಲಿಸಿಯನ್ನು ರೂಪಿಸಿ ಅದನ್ನು ಸುತ್ತಮುತ್ತಲಿನ ದೇಶಗಳ ಒಪ್ಪಿಕೊಳ್ಳುವಂತೆ ಮಾಡಿದೆ. ಅದೇ ʻಒನ್‌ ಚೀನಾ ಪಾಲಿಸಿʼ. ಅದರ ಪ್ರಕಾರ, ಚೀನಾದ ಸುತ್ತಮುತ್ತಲಿನ ಟಿಬೆಟ್‌, ತೈವಾನ್‌, ಹಾಂಕಾಂಗ್‌ ಕೂಡ ಚೀನಾದ ಭಾಗವೇ ಆಗಿವೆ. ಇದನ್ನು ಭಾರತವೂ ಒಪ್ಪಿದೆ. ಅಮೆರಿಕವೂ ಆರಂಭದ ದಿನಗಳಲ್ಲಿ ಒಪ್ಪಿಕೊಂಡಿತ್ತು. ಆದರೆ ಈಗ ಅದನ್ನು ಒಪ್ಪುವುದಿಲ್ಲ ಎಂದಿದೆ. ತೈವಾನ್‌ ಹಾಗೂ ಹಾಂಕಾಂಗ್‌ಗಳಿಗೆ ಸ್ವತಂತ್ರ ಅಸ್ತಿತ್ವವಿದೆ ಎನ್ನುತ್ತಿದೆ. ಇದು ಚೀನಾಗೆ ನುಂಗಲಾರದ ತುತ್ತು. ಚೀನಾದ ಕಿರುಕುಳ ಅತಿಯಾದರೆ ಭಾರತ ಕೂಡ ತಾನು ಒಪ್ಪಿಕೊಂಡ ʻಒನ್‌ ಚೀನಾ ನೀತಿʼಯನ್ನು ನಿರಾಕರಿಸಿ ಚೀನಾಗೆ ತುಸು ಕಿರಿಕಿರಿ ಉಂಟುಮಾಡಬಹುದು.

ಅಲ್ಪಕಾಲದ ಮಧುಚಂದ್ರ

2005ರಲ್ಲಿ, ತೈವಾನ್‌ ಸ್ವಾತಂತ್ರ್ಯ ಘೋಷಿಸಿಕೊಂಡರೆ ತಾನು ಬಲಪ್ರಯೋಗ ಮಾಡುವುದಾಗಿ ಚೀನಾ ಒಂದು ನೀತಿಯನ್ನು ಮಾಡಿಕೊಂಡಿತು. ಇದಾಗಿ, 2015ರವರೆಗೂ ಚೀನಾ- ತೈವಾನ್‌ ನಡುವೆ ಹೆಚ್ಚೇನೂ ತಗಾದೆಗಳಿರಲಿಲ್ಲ. ಎರಡೂ ದೇಶಗಳ ನಡುವೆ ಮುಕ್ತ ವ್ಯಾಪಾರ ವ್ಯವಹಾರ ಸಂಬಂಧ ಮುಂದುವರಿಯಿತು. ಈ ನಡುವೆ ಅಮೆರಿಕ ಕೂಡ ತೈವಾನ್‌ನ ಮೈಕ್ರೋಚಿಪ್‌ ಟೆಕ್ನಾಲಜಿ ಸಂಸ್ಥೆಗಳಲ್ಲಿ ಸಾಕಷ್ಟು ಹಣ ಹೂಡಿಕೆ ಮಾಡಿತು. ಅತ್ತ ಚೀನಾ ಕೂಡ ತೈವಾನ್‌ನಲ್ಲಿ ಮುಖ್ಯನೆಲದ ಸಾಂಸ್ಕೃತಿಕ ಪ್ರಭಾವವನ್ನು ಸಾಕಷ್ಟು ಹಬ್ಬಿಸಲು ಯತ್ನಿಸಿತು. ಇದರಿಂದಾಗಿ ಈ ಅವಧಿಯಲ್ಲಿ ಚೀನಾ- ಅಮೆರಿಕ ಎರಡೂ ವಿಭಿನ್ನ- ವಿರುದ್ಧ ಸಂಸ್ಕೃತಿಗಳ ಮಿಶ್ರಣದ ನೆಲವಾಗಿ ತೈವಾನ್‌ ರೂಪುಗೊಂಡಿತು.‌

ಇದನ್ನೂ ಓದಿ: ತೈವಾನ್ ಅಧ್ಯಕ್ಷೆ ಪಕ್ಕ ನಿಂತು ಚೀನಾಕ್ಕೊಂದು ಖಡಕ್​ ಸಂದೇಶ ಕೊಟ್ಟ ನ್ಯಾನ್ಸಿ; ಎಚ್ಚರಿಕೆಗೆ ಡೋಂಟ್​​ ಕೇರ್​ !

ಸಮರದ ಕಾರ್ಮೋಡ

2016ರಲ್ಲಿ, ಸ್ವಾತಂತ್ರ್ಯದ ಪರವಾಗಿರುವ ಡೆಮೊಕ್ರಟಿಕ್‌ ಪ್ರೊಗ್ರೆಸಿವ್‌ ಪಾರ್ಟಿ ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದಿತು. ಸಿಟ್ಟಿಗೆದ್ದ ಚೀನಾ, ತೈವಾನ್‌ ಜತೆಗಿನ ಎಲ್ಲ ಸಂವಹನಗಳನ್ನು ಕಡಿದುಕೊಂಡಿತು. ಅದೇ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತೈವಾನ್‌ ಅಧ್ಯಕ್ಷ ತ್ಸೈ ಇಂಗ್‌ ವೆನ್‌ ಜತೆ ದೂರವಾಣಿಯಲ್ಲಿ ಮಾತನಾಡಿ, ಚೀನಾ ವಿಧಿಸಿದ್ದ ಎಲ್ಲ ಗಡಿಗೆರೆಗಳನ್ನು ಉಲ್ಲಂಘಿಸಿದರು. 2019ರಲ್ಲಿ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌, ʼʼಚೀನಾದೊಂದಿಗೆ ತೈವಾನ್‌ನ ಒಂದಾಗುವಿಕೆ ತಡೆಗಟ್ಟಲಾಗದುʼʼ ಎಂದರು.

ತೈವಾನ್‌ನ ಯುವಜನತೆ ಅಮೆರಿಕದಿಂದ ಮಿಲಿಟರಿ ತರಬೇತಿ ಪಡೆಯುತ್ತಿದ್ದಾರೆ.

2021ರಲ್ಲಿ ಚೀನಾದ ಮಿಲಿಟರಿ ಜೆಟ್‌ಗಳು ತೈವಾನ್‌ನ ವಾಯುನೆಲೆಯ ಮೇಲೆ ಹಾರಾಡಿದವು. ʼʼತೈವಾನ್‌ ಮೇಲೆ ಚೀನಾ ದಾಳಿ ಮಾಡಿದರೆ ಅಮೆರಿಕ ತೈವಾನ್‌ನ ರಕ್ಷಣೆಗೆ ನಿಲ್ಲುವುʼʼದಾಗಿ ಅಧ್ಯಕ್ಷ ಜೋ ಬೈಡೆನ್‌ ಹೇಳಿಕೆ ನೀಡಿದರು. ತೈವಾನ್‌ನ ರಕ್ಷಣಾಪಡೆಗಳಿಎಗ ಅಮೆರಿಕದ ಯೋಧರಿಂದ ತರಬೇತಿಯೂ ದೊರೆಯುತ್ತಿದೆ ಎಂದು ತೈವಾನ್‌ನ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ. ಅಲ್ಲಿಂದೀಚೆಗೆ ತೈವಾನ್‌ನ ಸಮುದ್ರದಲ್ಲಿ ಅಮೆರಿಕದ ಪಡೆಗಳು ಗಸ್ತು ತಿರುಗುತ್ತಿವೆ. ಚೀನಾದ ಜೆಟ್‌ಗಳೂ ತೈವಾನ್‌ ಮೇಲೆ ಹಾರಾಡುತ್ತಿವೆ. ಈಗ ನ್ಯಾನ್ಸಿ ಪೆಲೋಸಿ ಭೇಟಿಯಿಂದ ಈ ತಿಕ್ಕಾಟ ಇನ್ನಷ್ಟು ಉಲ್ಬಣಗೊಂಡಿದೆ.

ತೈವಾನ್‌ಗೆ ಸ್ವತಂತ್ರ ಅಸ್ತಿತ್ವ ಇದೆಯೇ?

ರಷ್ಯಾದ ಮುಂದೆ ಉಕ್ರೇನ್ ಇರುವಂತೆಯೇ ಚೀನಾದ ಮುಂದೆ ತೈವಾನ್ ಕೂಡ ಇದೆ. ಚೀನಾದ ಪೂರ್ವ ಕರಾವಳಿಯಲ್ಲಿರುವ ಸಣ್ಣ ದ್ವೀಪ ತೈವಾನ್. ಅದನ್ನು ಕೇವಲ 13 ದೇಶಗಳು ಮಾತ್ರ ಸ್ವತಂತ್ರ ದೇಶವೆಂದು ಗುರುತಿಸಿವೆ. ಅದಕ್ಕೆ ಸ್ವಾಯತ್ತ ಸ್ಥಾನಮಾನ ದೊರೆಯದಂತೆ ಚೀನಾ ಪ್ರಯತ್ನಿಸುತ್ತಲೇ ಇದೆ. ಪೆಸಿಫಿಕ್‌ ಸಮುದ್ರದಲ್ಲಿ ಶಾಂತಿ ಕಾಪಾಡುವ, ವಾಣಿಜ್ಯ ಚಟುವಟಿಕೆಗೆ ತೊಡಕಾಗದಂತೆ ನೋಡಿಕೊಳ್ಳುವ ಹೊಣೆ ಹೊತ್ತಿರುವ ಕ್ವಾಡ್‌ ಸಂಘಟನೆ ಕೂಡ ತೈವಾನ್‌ ವಿಷಯದಲ್ಲಿ ಮಧ್ಯ ಪ್ರವೇಶಿಸುವ ಇರಾದೆ ಹೊಂದಿದೆ. ಕ್ವಾಡ್‌ ಸದಸ್ಯ ದೇಶವಾದ ಆಸ್ಟ್ರೇಲಿಯಾ ಕೂಡ ತನ್ನ ಜಲಾಂತರ್ಗಾಮಿಯನ್ನು ಈ ಪ್ರದೇಶದಲ್ಲಿ ನಿಯೋಜಿಸಿದೆ.

ಅಮೆರಿಕಕ್ಕೆ ಇಲ್ಲೇನು ಹಿತಾಸಕ್ತಿ?

ತೈವಾನ್‌ನಲ್ಲಿ ಅಮೆರಿಕದ ಭಾರಿ ಹೂಡಿಕೆಗಳು ಇವೆ. ಅಮೆರಿಕ ಸೇರಿದಂತೆ ಜಗತ್ತು ಬಳಸುವ ಶೇ.60 ಭಾಗ ಸೆಮಿಕಂಡಕ್ಟರ್ ಚಿಪ್‌ಗಳು ತೈವಾನ್‌ನಲ್ಲಿ ತಯಾರಾಗುತ್ತಿವೆ. ಒಂದು ವೇಳೆ ತೈವಾನ್‌ ಕೈತಪ್ಪಿದರೆ ಇದು ಟೆಲಿಕಾಂ, ಎಲೆಕ್ಟ್ರಾನಿಕ್ಸ್‌ ಹಾಗೂ ಐಟಿ ವಲಯಕ್ಕೆ ದೊಡ್ಡ ಏಟು ನೀಡಬಹುದು. ಚೀನಾದ ಕುತ್ಸಿತ ವಾಣಿಜ್ಯ ಪಾಲಿಸಿಯ ಬಗ್ಗೆ ಅಮೆರಿಕನ್ನರಲ್ಲಿ ಸಾಮೂಹಿಕ ಸಿಟ್ಟು ಇದೆ. ತೈವಾನ್ ಅನ್ನು ಚೀನಾ ವಶಪಡಿಸಿಕೊಂಡರೆ ಪೂರ್ವ ಮತ್ತು ದಕ್ಷಿಣ ಪೆಸಿಫಿಕ್ ಸಮುದ್ರದಲ್ಲಿ ಅಮೆರಿಕದ ಹಿತಾಸಕ್ತಿಗಳು ಧಕ್ಕೆಗೊಳಗಾಗಲಿವೆ. ದಕ್ಷಿಣ ಕೊರಿಯ, ಜಪಾನ್, ಫಿಲಿಪ್ಪೀನ್ಸ್‌ಗಳ ಹಿತಾಸಕ್ತಿಗಳೂ ಕೆಡಲಿವೆ. ಜತೆಗೆ, ತೈವಾನ್‌ ತುಂಬ ಅಯಕಟ್ಟಿನ ಜಾಗದಲ್ಲಿದ್ದು, ಇಲ್ಲಿಂದ ಚೀನಾದ ಚಟುವಟಿಕೆಗಳ ಮೇಲೆ ಕಣ್ಣಿಡುವುದು ತುಂಬ ಸುಲಭ. ಹೀಗಾಗಿ ಅಮೆರಿಕ ಥಟ್ಟನೆ ಮಿಲಿಟರಿ ಪ್ರತಿಕ್ರಿಯೆ ತೋರುವ ಸಾಧ್ಯತೆಗಳಿವೆ. ಹೀಗಾಗಿ ತೈವಾನನ್ನು ಚೀನಾ ವಶಪಡಿಸಿಕೊಳ್ಳಲು ಮುಂದಾದರೆ ಅದು ಜಾಗತಿಕ ಸಮಸ್ಯೆಯಾಗುವ ಎಲ್ಲ ಸಾಧ್ಯತೆಗಳಿವೆ.

ಇದನ್ನೂ ಓದಿ: ತೈವಾನ್​ ರಕ್ಷಣಾ ವಲಯದಲ್ಲಿ ಚೀನಾ ಸೇನಾ ತಾಲೀಮು ಇನ್ನಷ್ಟು ತೀವ್ರ; ಹಾರಾಡುತ್ತಿವೆ ಯುದ್ಧ ವಿಮಾನಗಳು !

ಭಾರತಕ್ಕೆ ಏನು ತೊಂದರೆ?

ತೈವಾನ್‌ನ ವಿಷಯದಲ್ಲಿ ಚೀನಾ ಹೆಚ್ಚು ತೊಡಗಿಕೊಂಡರೆ ಭಾರತಕ್ಕೆ ಒಂದು ರೀತಿಯಿಂದ ಸಮಾಧಾನ. ಯಾಕೆಂದರೆ ಏಕಕಾಲಕ್ಕೆ ಹಲವು ಶತ್ರುಗಳನ್ನು ತಡವಿಕೊಳ್ಳಲು ಚೀನಾ ಮುಂದಾಗಲಾರದು. ಇದೇ ವೇಳೆಗೆ ಚೀನಾ ಮಾರುಕಟ್ಟೆಗೆ ನಿರ್ಬಂಧ ಬೀಳುವುದರಿಂದ, ಭಾರತದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರೆಯಬಹುದು. ಆದರೆ ಜಾಗತಿಕವಾಗಿ ಸೆಮಿಕಂಡಕ್ಟರ್‌ ಚಿಪ್‌ಗಳ ಕೊರತೆಯಾದರೆ ಅದು ಭಾರತವನ್ನೂ ಕಾಡಲಿದೆ. ಚೀನಾದ ಉತ್ಪನ್ನಗಳನ್ನು ಇನ್ನೂ ಭಾರತ ದೊಡ್ಡ ಸಂಖ್ಯೆಯಲ್ಲಿ ನಂಬಿಕೊಂಡಿದೆ. ಚೀನಾದದೊಂದಿಗೆ ರಫ್ತು- ಆಮದು ಕೂಡ ದೊಡ್ಡ ಪ್ರಮಾಣದಲ್ಲಿಯೇ ಇದೆ. ಹೀಗಾಗಿ ದಿಡೀರನೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದು. ಮೇಲಾಗಿ, ಭಾರತ ಕೂಡ ʼಒನ್‌ ಚೀನಾ ಪಾಲಿಸಿʼಯನ್ನು ಮೊದಲಿನಿಂದ ಅಂಗೀಕರಿಸಿಕೊಂಡು ಬಂದಿದೆ.

Exit mobile version