Site icon Vistara News

ವಿಸ್ತಾರ Explainer: Turkey Earthquake: ಯಾಕಿಷ್ಟು ಭಯಾನಕ? ನಮ್ಮಲ್ಲೂ ಇಂಥ ಭೂಕಂಪ ಆಗಬಹುದೇ?

turkey earthquake

ಸೋಮವಾರದ ಮುಂಜಾನೆಯಿಂದ ಟರ್ಕಿಯಲ್ಲಿ ಸಂಭವಿಸಿರುವ ಪ್ರಬಲ ಭೂಕಂಪಗಳ ಸರಣಿಯಲ್ಲಿ 4000ಕ್ಕೂ ಅಧಿಕ ಮಂದಿ ಸತ್ತಿದ್ದಾರೆ. ಇನ್ನಷ್ಟು ಮಂದಿ ಅವಶೇಷಗಳಡಿ ಸಿಲುಕಿ ನಲುಗುತ್ತಿದ್ದಾರೆ. 7.8 ರಿಕ್ಟರ್‌ ಮಾಪನದ ಈ ಕಂಪನ ಕಳೆದ ಒಂದು ಶತಮಾನದಲ್ಲಿಯೇ ಸಂಭವಿಸಿದ ಅತಿ ಭೀಕರ, ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ.

ಆಗ್ನೇಯ ಟರ್ಕಿಯಲ್ಲಿ, ಸಿರಿಯಾದ ಗಡಿಯಲ್ಲಿ ಕನಿಷ್ಠ 41ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ. ಟರ್ಕಿ ಮತ್ತು ಸಿರಿಯಾ ಎರಡೂ ದೇಶಗಳು ತಲ್ಲಣಿಸಿವೆ. ದೊಡ್ಡ ಭೂಕಂಪಗಳ ಸಂದರ್ಭದಲ್ಲಿ ತಕ್ಷಣಕ್ಕೆ ಸಾವಿರಾರು ಮಂದಿ ಸಾಯುತ್ತಾರೆ. ಅದರ ನಂತರದ ಹಲವಾರು ದಿನಗಳ ಕಾಲ ಪಶ್ಚಾತ್‌ ಕಂಪನಗಳು ಹಾಗೂ ಸಾವಿನ ಸರಣಿ ಮುಂದುವರಿಯುತ್ತದೆ.

ಯಾಕೆ ಇಲ್ಲಿ ಇಷ್ಟೊಂದು ಪ್ರಬಲ ಭೂಕಂಪ?

ಟರ್ಕಿ ಮತ್ತು ಸಿರಿಯಾ ಭೂಕಂಪನದ ಸಕ್ರಿಯ ಪ್ರದೇಶದಲ್ಲಿವೆ. ಉತ್ತರ ಯುರೋಪ್‌ ಪ್ರದೇಶದಲ್ಲಿ ಹಾದುಹೋಗುವ ಅನಟೋಲಿಯಾ ಟೆಕ್ಟೋನಿಕ್ ಬ್ಲಾಕ್ ಎಂಬ ಪ್ರಸಿದ್ಧ ಭೂಕಂಪನ ರೇಖೆಯ ಉದ್ದಕ್ಕೂ ಈ ಭೂಕಂಪ ಸಂಭವಿಸಿದ ಪ್ರದೇಶ ಇದೆ. ಮಧ್ಯ ಮತ್ತು ಪೂರ್ವ ಟರ್ಕಿಗಳು ಭೂಕಂಪನದ ಸಕ್ರಿಯ ವಲಯಗಳು. ಹಿಮಾಲಯವೂ ಇಂಥ ಒಂದು ಪ್ರದೇಶ. ಹಿಮಾಲಯವೂ ಸೇರಿದಂತೆ ಟರ್ಕಿ ಕೂಡ ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದು.

ಭೂಕಂಪನ ಚಟುವಟಿಕೆಯ ಹಾಟ್‌ಬೆಡ್ ಟರ್ಕಿ

ಟರ್ಕಿ, ಸಿರಿಯಾ ಮತ್ತು ಜೋರ್ಡಾನ್‌ಗಳನ್ನು ಒಳಗೊಂಡಿರುವ ಪೂರ್ವ ಮೆಡಿಟರೇನಿಯನ್ ಪ್ರದೇಶದಲ್ಲಿ ಭೂಫಲಕಗಳು ಪರಸ್ಪರ ಸಂಕೀರ್ಣ ತಿಕ್ಕಾಟ ಹೊಂದಿವೆ. ಆಫ್ರಿಕನ್, ಅರೇಬಿಯನ್ ಮತ್ತು ಯುರೇಷಿಯನ್ ಭೂಫಲಕಗಳು ಮತ್ತು ಅನಾಟೋಲಿಯನ್ ಭೂಫಲಕಗಳು ಇಲ್ಲಿ ಪ್ರಬಲವಾದ ರಚನೆಗಳು. ಇಲ್ಲಿ ಕೆಂಪು ಸಮುದ್ರದ ಬಿರುಕು, ಆಫ್ರಿಕನ್ ಮತ್ತು ಅರೇಬಿಯನ್ ಫಲಕಗಳ ನಡುವಿನ ಛಿದ್ರ, ಮೃತ ಸಮುದ್ರ, ಇವುಗಳೆಲ್ಲ ಭೂಮಿಯ ಕಂಪನಕ್ಕೆ ಆಗಾಗ್ಗೆ ಅವಕಾಶ ನೀಡುತ್ತವೆ.

ಆಫ್ರಿಕನ್, ಯುರೇಷಿಯನ್ ಮತ್ತು ಅರೇಬಿಯನ್ ಭೂಫಲಕಗಳ ನಡುವಿನ ಪರಸ್ಪರ ತಿಕ್ಕಾಟದಿಂದಾಗಿ ಈ ಪ್ರದೇಶದಲ್ಲಿ ಭೂಕಂಪನ ಉಂಟಾಗುತ್ತದೆ. ಅರೇಬಿಯನ್ ಫಲಕ ಉತ್ತರಕ್ಕೆ ತಳ್ಳುತ್ತಿದೆ. ಇದು ಟರ್ಕಿಯ ಅಡಿಯಲ್ಲಿರುವ ಅನಾಟೋಲಿಯನ್ ಫಲಕವನ್ನು ಮುನ್ನೂಕುತ್ತದೆ. ಸಿರಿಯನ್ ಗಡಿಗೆ ಸಮೀಪವಿರುವ ಪೂರ್ವ ಅನಾಟೋಲಿಯನ್ ಬ್ಲಾಕ್‌ನಲ್ಲಿ ಲಂಬ ದೋಷದ ರೇಖೆಯ ಸುತ್ತಲೂ ಕಂಪನ ಸಂಭವಿಸಿದೆ. ಏಜಿಯನ್ ಸಮುದ್ರದಲ್ಲಿ ಟರ್ಕಿಯ ಪಶ್ಚಿಮ ಕಡೆಗಿನ ಒತ್ತಡ ಸಂಭವಿಸಿದರೆ, ಮೃತ ಸಮುದ್ರವು ಅರೇಬಿಯನ್ ಪರ್ಯಾಯ ದ್ವೀಪದ ಉತ್ತರದ ಚಲನೆಗೆ ಒತ್ತಡ ಕಲ್ಪಿಸುತ್ತದೆ.

ರಿಕ್ಟರ್‌ ಮಾಪನ 5 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ದೊಡ್ಡ ಭೂಕಂಪಗಳು ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿಲ್ಲ. 1970ರಿಂದ ಈಚೆಗೆ ಈ ಪ್ರದೇಶದಲ್ಲಿ ರಿಕ್ಟರ್ 6 ಅಥವಾ ಅದಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪಗಳು ಕೇವಲ ಮೂರು ಬಾರಿ ಮಾತ್ರ ಸಂಭವಿಸಿವೆ. ಈ ಪ್ರದೇಶದಲ್ಲಿ ಕೊನೆಯ ದೊಡ್ಡ ಭೂಕಂಪ ಜನವರಿ 2020ರಲ್ಲಿ ನಡೆದಿದೆ.

ಮೇಲ್ಭಾಗದ ಭೂಕಂಪದ ಭೀಕರತೆ

ಭೂಕಂಪನ ಹೆಚ್ಚಿನ ಆಳದಲ್ಲಿ ನಡೆಯದೆ, ಮೇಲುಮಟ್ಟದಲ್ಲಿ ನಡೆದಾಗ ಹೆಚ್ಚು ವಿನಾಶಕಾರಿಯಾಗುತ್ತದೆ. ಸೋಮವಾರದ ಭೂಕಂಪ ಮೇಲ್ಮೈಗೆ ಹತ್ತಿರದಿಂದ ಉಂಟಾಗಿದೆ. 7.8 ತೀವ್ರತೆಯ ಮೊದಲ ಭೂಕಂಪ ಭೂಮಿಯ ಮೇಲ್ಮೈಯಿಂದ 17.9 ಕಿಮೀ ಆಳದಿಂದ ಹೊರಟಿದೆ. ನಂತರದ ಕಂಪನಗಳು ಮೇಲ್ಮೈಗೆ ಇನ್ನೂ ಹತ್ತಿರದಿಂದ ಹೊರಹೊಮ್ಮಿದ್ದವು.

ಆಳದಲ್ಲಿ ಆಗುವ ಭೂಕಂಪಗಳು ಮೇಲ್ಮೈಗೆ ಬರುವ ಹೊತ್ತಿಗೆ ತಮ್ಮ ಹೆಚ್ಚಿನ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಮತ್ತು ಅದರ ಅಲೆಗಳು ಬಹಳ ದೂರದವರೆಗೆ ಹರಡುತ್ತವೆ. ಆಳದಿಂದ ಮೇಲ್ಮೈಗೆ ಶಂಕುವಿನಾಕಾರದಲ್ಲಿ ಮೇಲಕ್ಕೆ ಬರುವಾಗ ದುರ್ಬಲವಾಗುತ್ತವೆ. ಹೆಚ್ಚಿನ ದೂರಕ್ಕೆ ಚಲಿಸುವಾಗ ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಕಡಿಮೆ ಹಾನಿಯನ್ನು ಉಂಟುಮಾಡುತ್ತದೆ. ಆದರೆ ಮೇಲಿನಿಂದ ಸಂಭವಿಸುವ ಭೂಕಂಪಗಳು ಸಾಮಾನ್ಯವಾಗಿ ಹೆಚ್ಚು ವಿನಾಶಕಾರಿ. ಅವು ಮೇಲ್ಮೈಯಲ್ಲಿಯೇ ಹೆಚ್ಚಿನ ಶಕ್ತಿಯನ್ನು ಹೊಮ್ಮಿಸುತ್ತವೆ.

ಇದನ್ನೂ ಓದಿ: Turkey Earthquake: 4000 ತಲುಪಿದ ಸಾವಿನ ಸಂಖ್ಯೆ, ಭಾರತದಿಂದ ನೆರವು ತಂಡ

ಎರಡು ವಾರಗಳ ಹಿಂದೆ ನೇಪಾಳದಲ್ಲಿ ಭೂಕಂಪ ಸಂಭವಿಸಿತ್ತು. ಉತ್ತರ ಭಾರತದ ಅನೇಕ ಭಾಗಗಳಲ್ಲಿಯೂ ಭೂಮಿ ಕಂಪಿಸಿತು. ಇದು ಭೂಮಿಯಿಂದ ಸುಮಾರು 25 ಕಿಮೀ ಕೆಳಗೆ ಹುಟ್ಟಿಕೊಂಡಿತ್ತು. ಹೀಗಾಗಿ ಇದು ದೊಡ್ಡ ಪ್ರಮಾಣದ ಹಾನಿಯನ್ನುಂಟುಮಾಡಲಿಲ್ಲ. ನೇಪಾಳದ ಭೂಕಂಪ ರಿಕ್ಟರ್‌ 5.8ರ ಕಡಿಮೆ ತೀವ್ರತೆ ಹೊಂದಿತ್ತು.

ಅಳೆಯುವ ಮಾಪನವೇನು?

ಭೂಕಂಪದ ಮ್ಯಾಗ್ನಿಟ್ಯೂಡ್‌ (ಪ್ರಮಾಣ) ಎಂದರೆ ಅದರ ಅಲೆಗಳು ಎಷ್ಟು ದೊಡ್ಡದಾಗಿವೆ ಎಂಬುದರ ಮಾಪನ. ಇದರ ಶಕ್ತಿ ಅಥವಾ ಪರಿಣಾಮ ಬೇರೆಯೇ ಆಗಿದೆ. ಮ್ಯಾಗ್ನಿಟ್ಯೂಡ್ ಅನ್ನು ಲಾಗರಿಥಮಿಕ್ ಪ್ರಮಾಣದಲ್ಲಿ ಅಳೆಯಲಾಗುತ್ತದೆ. ರಿಕ್ಟರ್‌ 6ರ ತೀವ್ರತೆಯ ಭೂಕಂಪದಿಂದ ಉತ್ಪತ್ತಿಯಾಗುವ ಭೂಕಂಪನದ ಅಲೆಗಳು 5ರ ಪ್ರಮಾಣಕ್ಕಿಂತ 10 ಪಟ್ಟು ಹೆಚ್ಚಿನ ವೈಶಾಲ್ಯವನ್ನು ಹೊಂದಿವೆ. ಒಂದೊಂದು ರಿಕ್ಟರ್‌ ಪ್ರಮಾಣ ಹೆಚ್ಚಾದಾಗಲೂ ಇದರ ಶಕ್ತಿ 32 ಪಟ್ಟು ಹೆಚ್ಚುತ್ತಾ ಹೋಗುತ್ತದೆ. ಹೀಗಾಗಿ ಟರ್ಕಿಯಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪವು 5.8 ರಿಕ್ಟರ್‌ಗಿಂತ 100 ಪಟ್ಟು ಹೆಚ್ಚು ಶಕ್ತಿಯುತವಾಗಿತ್ತು. 100 ಪಟ್ಟು ದೊಡ್ಡ ಅಲೆಗಳನ್ನು ಉತ್ಪಾದಿಸಿತ್ತು.

ಇದನ್ನೂ ಓದಿ: Viral Video: ಸಿರಿಯಾ ಭೂಕಂಪದ ಮಧ್ಯೆ ಮನಕಲಕುವ ದೃಶ್ಯ, ಅವಶೇಷಗಳಡಿಯಲ್ಲೇ ಹುಟ್ಟಿದ ಮಗುವಿನ ರಕ್ಷಣೆ

ಎಲ್ಲಿ ಭೂಕಂಪನ ಆಗಬಹುದು?

ಭೂಕಂಪಗಳು ಅತ್ಯಂತ ಸಾಮಾನ್ಯವಾದ, ನೈಸರ್ಗಿಕವಾದ, ಆದರೆ ಅನಿರೀಕ್ಷಿತವಾದ ಉತ್ಪಾತಗಳು. ಇದಕ್ಕೆ ಯಾವುದೇ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಇನ್ನೂ ಅಭಿವೃದ್ಧಿಪಡಿಸಲಾಗಿಲ್ಲ. ಭೂಕಂಪದ ಮೂಲದ ಸಮಯ ಮತ್ತು ಅದು ಭೂಮಿಯನ್ನು ತಲುಪುವ ಸಮಯದ ನಡುವಿನ ಸಮಯದಲ್ಲಿ ಮುನ್ನೆಚ್ಚರಿಕೆ ಕೊಡಲು ಸಾಧ್ಯ. ಆದರೆ ಈ ಅಂತರ ಕೆಲವೇ ಸೆಕೆಂಡ್‌ಗಳು ಮಾತ್ರ. ಭೂಕಂಪನದ ಅಲೆಗಳು ಬೆಳಕಿನ ವೇಗಕ್ಕಿಂತ ತುಂಬಾ ನಿಧಾನವಾಗಿ ಚಲಿಸುತ್ತವೆ. ಸೆಕೆಂಡಿಗೆ 5ರಿಂದ 13 ಕಿಮೀ ಇದರ ವೇಗ. ಹಾಗಾಗಿ ಅದು ಹುಟ್ಟಿಕೊಂಡ ತಕ್ಷಣ ಮಾಹಿತಿಯನ್ನು ಪಡೆಯಬಹುದಷ್ಟೇ.

ಭೂಕಂಪಗಳ ಬಗ್ಗೆ ಎಚ್ಚರಿಕೆ ನೀಡಲು ಕೆಲವು ಸ್ಥಳಗಳಲ್ಲಿ ಇಂತಹ ವ್ಯವಸ್ಥೆಗಳು ಈಗಾಗಲೇ ಬಳಕೆಯಲ್ಲಿವೆ. ಆದರೆ ಇವು ನಿಖರವೇನಲ್ಲ. ಭೂಕಂಪಗಳಿಗೆ ವಿಶ್ವಾಸಾರ್ಹ ಮುನ್ಸೂಚಕಗಳನ್ನು ಕಂಡುಹಿಡಿಯುವ ಪ್ರಯತ್ನಗಳು ಇಲ್ಲಿಯವರೆಗೆ ಫಲಪ್ರದವಾಗಿಲ್ಲ. ವಿಜ್ಞಾನಿಗಳು ಭೂಕಂಪದ ಪ್ರದೇಶಗಳನ್ನು ಗುರುತಿಸಿದ್ದಾರೆ. ಇಲ್ಲೆಲ್ಲಾ ಭವಿಷ್ಯದಲ್ಲಿ ಭೂಕಂಪಗಳು ಉಂಟಾಗಬಹುದು. ಆದರೆ ಯಾವಾಗ ಆಗಬಹುದು ಎಂದು ಊಹಿಸಲು ಯಾವುದೇ ಮಾರ್ಗವಿಲ್ಲ.

ಉದಾಹರಣೆಗೆ, ವಿಜ್ಞಾನಿಗಳು ಹಿಮಾಲಯದ ಪ್ರದೇಶವು ಮೇಲ್ಮೈ ಅಡಿಯಲ್ಲಿ ತುಂಬಾ ಒತ್ತಡವನ್ನು ಹೊಂದಿದೆ ಎಂದು ಹೇಳುತ್ತಾರೆ. ಇದು 7 ಅಥವಾ 8 ರಿಕ್ಟರ್‌ ಮಾಪನದ ಭೂಕಂಪಕ್ಕೆ ಕಾರಣವಾಗಬಹುದು. ಆದರೆ ಯಾವಾಗ ಸಂಭವಿಸುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಪ್ರತಿ ವರ್ಷ ಸರಾಸರಿ 8 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಒಂದರಿಂದ ಮೂರು ಭೂಕಂಪಗಳು ದಾಖಲಾಗುತ್ತವೆ. ಆದರೆ 7ಕ್ಕಿಂತ ಕೆಳಗಿನ 10-15 ಭೂಕಂಪಗಳು ಸಂಭವಿಸುತ್ತದೆ.

ಇದನ್ನೂ ಓದಿ: Viral Video: ಟರ್ಕಿ ಭೂಕಂಪನದ ಭಯಾನಕ ದೃಶ್ಯಗಳು; ಕುಸಿದು ಬಿದ್ದ ಅಪಾರ್ಟ್​ಮೆಂಟ್

Exit mobile version