Site icon Vistara News

Vladimir Putin: ಚುನಾವಣೆ ಗೆದ್ದ ಬೆನ್ನಲ್ಲೇ 3ನೇ ಮಹಾಯುದ್ಧದ ಎಚ್ಚರಿಕೆ ನೀಡಿದ ಪುಟಿನ್‌!

Vladimir Putin

Vladimir Putin wins Russian presidential elections, Warns Of World War 3

ಮಾಸ್ಕೊ: ಉಕ್ರೇನ್‌ ಮೇಲೆ ಯುದ್ಧ ಸಾರಿ, ಸಾವಿರಾರು ಜನರ ಮಾರಣಹೋಮಕ್ಕೆ ಕಾರಣವಾದರೂ ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ (Russia Presidential Elections) ವ್ಲಾಡಿಮಿರ್‌ ಪುಟಿನ್‌ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಸುಮಾರು ಶೇ.87.8ರಷ್ಟು ಮತಗಳನ್ನು ಪಡೆದ ವ್ಲಾಡಿಮಿರ್‌ ಪುಟಿನ್‌ (Vladimir Putin) ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರ ಬೆನ್ನಲ್ಲೇ, ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಅವರು ಮೂರನೇ ಮಹಾಯುದ್ಧದ (World War 3) ಎಚ್ಚರಿಕೆ ನೀಡಿದ್ದಾರೆ.

ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಭಾಷಣ ಮಾಡಿದ ವ್ಲಾಡಿಮಿರ್‌ ಪುಟಿನ್‌, ಮಹಾಯುದ್ಧದ ಕುರಿತೇ ಪ್ರಸ್ತಾಪಿಸಿದರು. “ಮೂರನೇ ಮಹಾಯುದ್ಧಕ್ಕೆ ಒಂದೇ ಹೆಜ್ಜೆ ಬಾಕಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೂರನೇ ಮಹಾಯುದ್ಧದಲ್ಲಿ ಯಾರಿಗೆ ಆಸಕ್ತಿ ಇದೆ ಎಂಬುದು ಗೊತ್ತಿದೆ. ನ್ಯಾಟೋ ಪಡೆಗಳು ಈಗಾಗಲೇ ಉಕ್ರೇನ್‌ನಲ್ಲಿ ಬೀಡು ಬಿಟ್ಟಿವೆ. ಫ್ರಾನ್ಸ್‌ ಹಾಗೂ ಬ್ರಿಟನ್‌ವನ್ನು ಎದುರಿಸಲು ರಷ್ಯಾ ಸಜ್ಜಾಗಿದೆ” ಎಂದು ಬಹಿರಂಗವಾಗಿಯೇ ವ್ಲಾಡಿಮಿರ್‌ ಪುಟಿನ್‌ ಎಚ್ಚರಿಕೆ ನೀಡಿದ್ದಾರೆ.

“ನ್ಯಾಟೋ ಪಡೆಗಳು ಉಕ್ರೇನ್‌ನಲ್ಲಿ ಬೀಡು ಬಿಟ್ಟಿರುವುದು ಮೂರನೇ ಮಹಾಯುದ್ಧಕ್ಕೆ ಪ್ರಚೋದನೆ ನೀಡುವಂತಿದೆ. ಆದರೆ, ಇದು ಅವರಿಗೆ ಔಚಿತ್ಯವಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನ ಮೃತಪಡುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಹೀಗಿದ್ದರೂ ಪ್ರಚೋದನೆ ನೀಡುತ್ತಿರುವುದು ಅಪಾಯಕಾರಿಯಾಗಿದೆ. ಹಾಗಾಗಿ, ನಾವು ಉಕ್ರೇನ್‌ ಮೇಲೆ ಮತ್ತೊಂದು ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸುತ್ತೇವೆ” ಎಂದು ಹೇಳಿದ್ದಾರೆ. ಇದು ಈಗ ಉಕ್ರೇನ್‌ ಜನರಿಗೆ ಮತ್ತಷ್ಟು ಆತಂಕ ತಂದೊಡ್ಡಿದೆ. ಇದಕ್ಕೂ ಮೊದಲು ಕೂಡ ವ್ಲಾಡಿಮಿರ್‌ ಪುಟಿನ್‌ ಅವರು ಅಣ್ವಸ್ತ್ರ ದಾಳಿಯ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: Vladimir Putin: ವ್ಲಾದಿಮಿರ್‌ ಪುಟಿನ್‌ ಹೊಸ ಪ್ರೇಯಸಿಯಂತೆ ಈ ಬಾರ್ಬಿ ಚೆಲುವೆ!

ವ್ಲಾಡಿಮಿರ್‌ ಪುಟಿನ್‌ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಮುಂದಿನ ಆರು ವರ್ಷಗಳವರೆಗೆ ವ್ಲಾಡಿಮಿರ್‌ ಪುಟಿನ್‌ ಅವರೇ ರಷ್ಯಾ ಅಧ್ಯಕ್ಷರಾಗಿ ಇರಲಿದ್ದಾರೆ. ಇವರು ಆರು ವರ್ಷ ರಷ್ಯಾ ಅಧ್ಯಕ್ಷರಾಗಿ ಆಡಳಿತ ನಡೆಸಿದರೆ ರಷ್ಯಾದ 200 ವರ್ಷಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಅವಧಿಗೆ ಆಡಳಿತ ನಡೆಸಿದ ಅಧ್ಯಕ್ಷ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಗೆಲುವು ಸಾಧಿಸಿದ ಬಳಿಕ ಮೊದಲ ಭಾಷಣ ಮಾಡಲು ವೇದಿಕೆ ಏರುತ್ತಲೇ ಅವರ ಬೆಂಬಲಿಗರು, ಪುಟಿನ್‌ ಪುಟಿನ್‌, ರಷ್ಯಾ ರಷ್ಯಾ ಎಂಬುದಾಗಿ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು. ರಷ್ಯಾದ ಪ್ರಮುಖ ಪ್ರತಿಪಕ್ಷವು ಕೇವಲ ಶೇ.4ರಷ್ಟು ಮತಗಳನ್ನು ಪಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version