ಕೀವ್/ಮಾಸ್ಕೊ: ಕಳೆದ ಒಂದು ವರ್ಷದಿಂದ ಉಕ್ರೇನ್ ಮೇಲೆ ರಷ್ಯಾ (Vladimir Putin’s Army) ಆಕ್ರಮಣ ಮಾಡುತ್ತಿದೆ. ಉಕ್ರೇನ್ ಸೇನೆಯ ಪ್ರತ್ಯುತ್ತರಕ್ಕೆ ರಷ್ಯಾದ ಸಾವಿರಾರು ಸೈನಿಕರು ಯುದ್ಧಭೂಮಿಯಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ, ವ್ಲಾಡಿಮಿರ್ ಪುಟಿನ್ ಹುಚ್ಚಾಟದಿಂದಾಗಿ ಹೆಚ್ಚಿನ ಯುವಕರು ಸೇನೆ ಸೇರಲು ಮುಂದಾಗುತ್ತಿಲ್ಲ. ಆದರೂ, ರಷ್ಯಾಗೆ ಉಕ್ರೇನ್‌ನಲ್ಲಿ ನಡೆಸುತ್ತಿರುವ ಆಕ್ರಮಣವನ್ನು ನಿಲ್ಲಿಸಲು ಮನಸ್ಸಿಲ್ಲ. ಹಾಗಾಗಿ, ಹತಾಶ ರಷ್ಯಾ ಸೇನೆಯು ಪೋರ್ನ್‌ಹಬ್ (ಸೆಕ್ಸ್ ವಿಡಿಯೊ ಅಪ್‌ಲೋಡ್ ಮಾಡುವ ವೆಬ್‌ಸೈಟ್) ಮೂಲಕ ಸೈನಿಕರನ್ನು ನೇಮಿಸಲು ಮುಂದಾಗಿದೆ.
ಪೋರ್ನ್‌ಹಬ್‌ಗಳಿಗೆ ಭೇಟಿಯಾಗಿ ಅಶ್ಲೀಲ ವಿಡಿಯೊ ನೋಡುವವರನ್ನು ಸೇನೆಗೆ ನೇಮಿಸಲು ವ್ಲಾಡಿಮಿರ್ ಪುಟಿನ್ ಅವರ ಖಾಸಗಿ ಸೇನಾಪಡೆಯಾದ ವ್ಯಾಗ್ನರ್ ಗ್ರೂಪ್ (Wagner Group) ಮುಂದಾಗಿದೆ. ಪೋರ್ನ್‌ಹಬ್‌ಗಳಲ್ಲಿ ವಿಚಿತ್ರ ಜಾಹೀರಾತು ನೀಡುವ ಮೂಲಕ ಯುವಕರನ್ನು ಸೇನೆಗೆ ನೇಮಿಸಲು ವ್ಯಾಗ್ನರ್ ಪ್ರಯತ್ನ ಮಾಡುತ್ತಿದೆ. ಈ ಕುರಿತು ಉಕ್ರೇನ್ ಮಾಧ್ಯಮಗಳು ಜಾಹೀರಾತು ವಿಡಿಯೊಗಳನ್ನು ಉಲ್ಲೇಖಿಸಿ ವರದಿ ಮಾಡಿವೆ. ಇದು ಜಾಗತಿಕ ಮಟ್ಟದಲ್ಲಿ ವ್ಲಾಡಿಮಿರ್ ಪುಟಿನ್ ಅವರಿಗೆ ಮುಖಭಂಗ ಎಂದೇ ಹೇಳಲಾಗುತ್ತಿದೆ.
ಏನಿದೆ ಜಾಹೀರಾತು?
ಉಕ್ರೇನ್ ಮಾಧ್ಯಮಗಳ ಪ್ರಕಾರ, ಪೋರ್ನ್‌ಹಬ್‌ಗಳಲ್ಲಿ ವಿಚಿತ್ರವಾದ ಜಾಹೀರಾತು ನೀಡಲಾಗಿದೆ. ಮಹಿಳೆಯೊಬ್ಬರು ಲಾಲಿಪಾಪ್ ಮೆಲ್ಲುತ್ತ, “ನಮ್ಮದೇ ಜಗತ್ತಿನಲ್ಲಿ ಅದ್ಭುತ (F*****G) ಖಾಸಗಿ ಸೇನಾಪಡೆ” ಎಂದು ಹೇಳಿದ್ದಾರೆ. ಈ ವಿಡಿಯೊ ಉಕ್ರೇನ್‌ನ ಉಕ್ರೇನಿಯನ್ ಪ್ರಾವ್ಡಾ ಎಂಬ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಇಲ್ಲಿದೆ ಜಾಹೀರಾತು ವಿಡಿಯೊ
ಇತ್ತೀಚೆಗೆ ಯಾರೂ ಸೇನೆ ಸೇರಲು ಮನಸ್ಸು ಮಾಡದ ಕಾರಣ ಅನಿವಾರ್ಯವಾಗಿ ರಷ್ಯಾ ಇಂತಹ ವಾಮಮಾರ್ಗ ಹಿಡಿದಿದೆ ಎನ್ನಲಾಗುತ್ತಿದೆ. ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಯುದ್ಧದಲ್ಲಿ ತೊಡಗಿರುವ ರಷ್ಯಾದ ಸೈನಿಕರು ಈಗಾಗಲೇ ಹತಾಶರಾಗಿದ್ದಾರೆ. ಅವರು ರಷ್ಯಾಗೆ ಹಿಂತಿರುಗಲು ಬಯಸುತ್ತಿದ್ದರೂ ಪುಟಿನ್, ಕದನವಿರಾಮ ಘೋಷಿಸದ ಕಾರಣ ಸಮರಭೂಮಿಯಲ್ಲೇ ಕಷ್ಟ ಅನುಭವಿಸುವಂತಾಗಿದೆ ಎಂದು ತಿಳಿದುಬಂದಿದೆ.
ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್
ಮತ್ತೊಂದೆಡೆ, ಉಕ್ರೇನ್‌ನಲ್ಲಿ ಯುದ್ಧಾಪರಾಧ ಎಸಗಿದ ಹಿನ್ನೆಲೆಯಲ್ಲಿ ವ್ಲಾಡಿಮಿರ್ ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (International Criminal Court) ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ. “ಉಕ್ರೇನ್‌ನಲ್ಲಿ ನಡೆದಿರುವ ಯುದ್ಧಾಪರಾಧಗಳು, ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಉಕ್ರೇನ್‌ನಿಂದ ಕಾನೂನುಬಾಹಿರವಾಗಿ ಮಕ್ಕಳು ಹಾಗೂ ಜನರನ್ನು ಗಡಿಪಾರು ಮಾಡಿದ ಕಾರಣಕ್ಕಾಗಿ ವ್ಲಾಡಿಮಿರ್ ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ” ಎಂದು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: Vladimir Putin: ಉಕ್ರೇನ್ ಮೇಲೆ ದಾಳಿ; ವ್ಲಾಡಿಮಿರ್ ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್ ಅರೆಸ್ಟ್ ವಾರಂಟ್