ಪ್ರಮುಖ ಸುದ್ದಿ
Vladimir Putin’s Army: ರಷ್ಯಾ ಸೇನೆಗೆ ಯುವಕರ ನೇಮಿಸಲು ಪೋರ್ನ್‌ಹಬ್ ಬಳಕೆ, ದೈನೇಸಿ ಸ್ಥಿತಿ ತಲುಪಿದ ಪುಟಿನ್
Vladimir Putin’s Army: ಉಕ್ರೇನ್ ಮೇಲೆ ಒಂದು ವರ್ಷಕ್ಕೂ ಅಧಿಕ ಸಮಯದಿಂದ ರಷ್ಯಾ ದಾಳಿ ಮಾಡುತ್ತಿರುವ ಕಾರಣ ಯುವಕರು ರಷ್ಯಾ ಸೇನೆಗೆ ಸೇರ್ಪಡೆಯಾಗುತ್ತಿಲ್ಲ. ಹಾಗಾಗಿ, ಪುಟಿನ್ ಪಡೆಯು ವಾಮಮಾರ್ಗದ ಮೂಲಕ ಯುವಕರನ್ನು ಸೇನೆಗೆ ನೇಮಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಕೀವ್/ಮಾಸ್ಕೊ: ಕಳೆದ ಒಂದು ವರ್ಷದಿಂದ ಉಕ್ರೇನ್ ಮೇಲೆ ರಷ್ಯಾ (Vladimir Putin’s Army) ಆಕ್ರಮಣ ಮಾಡುತ್ತಿದೆ. ಉಕ್ರೇನ್ ಸೇನೆಯ ಪ್ರತ್ಯುತ್ತರಕ್ಕೆ ರಷ್ಯಾದ ಸಾವಿರಾರು ಸೈನಿಕರು ಯುದ್ಧಭೂಮಿಯಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ, ವ್ಲಾಡಿಮಿರ್ ಪುಟಿನ್ ಹುಚ್ಚಾಟದಿಂದಾಗಿ ಹೆಚ್ಚಿನ ಯುವಕರು ಸೇನೆ ಸೇರಲು ಮುಂದಾಗುತ್ತಿಲ್ಲ. ಆದರೂ, ರಷ್ಯಾಗೆ ಉಕ್ರೇನ್‌ನಲ್ಲಿ ನಡೆಸುತ್ತಿರುವ ಆಕ್ರಮಣವನ್ನು ನಿಲ್ಲಿಸಲು ಮನಸ್ಸಿಲ್ಲ. ಹಾಗಾಗಿ, ಹತಾಶ ರಷ್ಯಾ ಸೇನೆಯು ಪೋರ್ನ್‌ಹಬ್ (ಸೆಕ್ಸ್ ವಿಡಿಯೊ ಅಪ್‌ಲೋಡ್ ಮಾಡುವ ವೆಬ್‌ಸೈಟ್) ಮೂಲಕ ಸೈನಿಕರನ್ನು ನೇಮಿಸಲು ಮುಂದಾಗಿದೆ.
ಪೋರ್ನ್‌ಹಬ್‌ಗಳಿಗೆ ಭೇಟಿಯಾಗಿ ಅಶ್ಲೀಲ ವಿಡಿಯೊ ನೋಡುವವರನ್ನು ಸೇನೆಗೆ ನೇಮಿಸಲು ವ್ಲಾಡಿಮಿರ್ ಪುಟಿನ್ ಅವರ ಖಾಸಗಿ ಸೇನಾಪಡೆಯಾದ ವ್ಯಾಗ್ನರ್ ಗ್ರೂಪ್ (Wagner Group) ಮುಂದಾಗಿದೆ. ಪೋರ್ನ್‌ಹಬ್‌ಗಳಲ್ಲಿ ವಿಚಿತ್ರ ಜಾಹೀರಾತು ನೀಡುವ ಮೂಲಕ ಯುವಕರನ್ನು ಸೇನೆಗೆ ನೇಮಿಸಲು ವ್ಯಾಗ್ನರ್ ಪ್ರಯತ್ನ ಮಾಡುತ್ತಿದೆ. ಈ ಕುರಿತು ಉಕ್ರೇನ್ ಮಾಧ್ಯಮಗಳು ಜಾಹೀರಾತು ವಿಡಿಯೊಗಳನ್ನು ಉಲ್ಲೇಖಿಸಿ ವರದಿ ಮಾಡಿವೆ. ಇದು ಜಾಗತಿಕ ಮಟ್ಟದಲ್ಲಿ ವ್ಲಾಡಿಮಿರ್ ಪುಟಿನ್ ಅವರಿಗೆ ಮುಖಭಂಗ ಎಂದೇ ಹೇಳಲಾಗುತ್ತಿದೆ.
ಏನಿದೆ ಜಾಹೀರಾತು?
ಉಕ್ರೇನ್ ಮಾಧ್ಯಮಗಳ ಪ್ರಕಾರ, ಪೋರ್ನ್‌ಹಬ್‌ಗಳಲ್ಲಿ ವಿಚಿತ್ರವಾದ ಜಾಹೀರಾತು ನೀಡಲಾಗಿದೆ. ಮಹಿಳೆಯೊಬ್ಬರು ಲಾಲಿಪಾಪ್ ಮೆಲ್ಲುತ್ತ, “ನಮ್ಮದೇ ಜಗತ್ತಿನಲ್ಲಿ ಅದ್ಭುತ (F*****G) ಖಾಸಗಿ ಸೇನಾಪಡೆ” ಎಂದು ಹೇಳಿದ್ದಾರೆ. ಈ ವಿಡಿಯೊ ಉಕ್ರೇನ್‌ನ ಉಕ್ರೇನಿಯನ್ ಪ್ರಾವ್ಡಾ ಎಂಬ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಇಲ್ಲಿದೆ ಜಾಹೀರಾತು ವಿಡಿಯೊ
ಇತ್ತೀಚೆಗೆ ಯಾರೂ ಸೇನೆ ಸೇರಲು ಮನಸ್ಸು ಮಾಡದ ಕಾರಣ ಅನಿವಾರ್ಯವಾಗಿ ರಷ್ಯಾ ಇಂತಹ ವಾಮಮಾರ್ಗ ಹಿಡಿದಿದೆ ಎನ್ನಲಾಗುತ್ತಿದೆ. ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಯುದ್ಧದಲ್ಲಿ ತೊಡಗಿರುವ ರಷ್ಯಾದ ಸೈನಿಕರು ಈಗಾಗಲೇ ಹತಾಶರಾಗಿದ್ದಾರೆ. ಅವರು ರಷ್ಯಾಗೆ ಹಿಂತಿರುಗಲು ಬಯಸುತ್ತಿದ್ದರೂ ಪುಟಿನ್, ಕದನವಿರಾಮ ಘೋಷಿಸದ ಕಾರಣ ಸಮರಭೂಮಿಯಲ್ಲೇ ಕಷ್ಟ ಅನುಭವಿಸುವಂತಾಗಿದೆ ಎಂದು ತಿಳಿದುಬಂದಿದೆ.
ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್
ಮತ್ತೊಂದೆಡೆ, ಉಕ್ರೇನ್‌ನಲ್ಲಿ ಯುದ್ಧಾಪರಾಧ ಎಸಗಿದ ಹಿನ್ನೆಲೆಯಲ್ಲಿ ವ್ಲಾಡಿಮಿರ್ ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (International Criminal Court) ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ. “ಉಕ್ರೇನ್‌ನಲ್ಲಿ ನಡೆದಿರುವ ಯುದ್ಧಾಪರಾಧಗಳು, ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಉಕ್ರೇನ್‌ನಿಂದ ಕಾನೂನುಬಾಹಿರವಾಗಿ ಮಕ್ಕಳು ಹಾಗೂ ಜನರನ್ನು ಗಡಿಪಾರು ಮಾಡಿದ ಕಾರಣಕ್ಕಾಗಿ ವ್ಲಾಡಿಮಿರ್ ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ” ಎಂದು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: Vladimir Putin: ಉಕ್ರೇನ್ ಮೇಲೆ ದಾಳಿ; ವ್ಲಾಡಿಮಿರ್ ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್ ಅರೆಸ್ಟ್ ವಾರಂಟ್
ದೇಶ
ವಿಸ್ತಾರ ಸಂಪಾದಕೀಯ: ಅಮೆರಿಕದಲ್ಲಿ ಹಾರಾಡಿದ ತ್ರಿವರ್ಣ ಧ್ವಜ; ಖಲಿಸ್ತಾನಿಗಳಿಗೆ ದೇಶಪ್ರೇಮಿಗಳ ತಿರುಗೇಟು
ಸಿಖ್ ಧರ್ಮ ಎಂಬುದು ಶತಮಾನಗಳಿಂದ ಹಿಂದೂಗಳ ಜತೆಗೆ ಅನ್ಯೋನ್ಯತೆಯಿಂದ ಇರುವ ಧರ್ಮ. ಅವರು ಬೇರೆ ಎಂದು ಹಿಂದೂಗಳಿಗೆ ಎಂದೂ ಅನಿಸಿಯೇ ಇಲ್ಲ. ಇಂಥವರ ನಡುವೆ ಪ್ರತ್ಯೇಕತೆಯ ವಿಷಬೀಜ ಬಿತ್ತಲು ಯತ್ನಿಸುವ ದೇಶವಿರೋಧಿ ಸಂಚನ್ನು ಈಗಲೇ ಹೊಸಕಿ ಹಾಕಬೇಕಿದೆ.
ಅಮೆರಿಕದ ಕಾನ್ಸುಲೇಟ್ ಕಚೇರಿ ಎದುರು ಸಾವಿರಾರು ಭಾರತೀಯರು ತ್ರಿವರ್ಣ ಧ್ವಜ ಹಾರಿಸಿ ಭಾರತದ ಪರ ಘೋಷಣೆ ಮೊಳಗಿಸಿದ್ದಾರೆ. ಹಿಂದೂ, ಮುಸ್ಲಿಂ, ಸಿಖ್ ಸೇರಿದಂತೆ ಎಲ್ಲ ಧರ್ಮೀಯರೂ ಇದರಲ್ಲಿ ಭಾಗವಹಿಸಿದ್ದು ಗಮನಾರ್ಹ. ಪಾಕ್ ಪ್ರೇರಿತ ಸಿಖ್ ಪ್ರತ್ಯೇಕತಾವಾದಿಗಳಿಗೆ ಇದು ತಕ್ಕ ತಿರುಗೇಟಾಗಿದೆ. ಕಳೆದ ಭಾನುವಾರ ಖಲಿಸ್ತಾನಿಗಳ ಗುಂಪು ಇಂಡಿಯನ್ ಕಾನ್ಸುಲೇಟ್ ಕಚೇರಿ ಮೇಲೆ ದಾಳಿ ಮಾಡಿ ತ್ರಿವರ್ಣ ಧ್ವಜವನ್ನು ಕೆಳಗಿಸಿ ಅವಮಾನ ಮಾಡಿತ್ತು. ಇವರನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆಯನ್ನು ಅಲ್ಲಿನ ಸರ್ಕಾರಗಳು ವಿಧಿಸಬೇಕು ಅಥವಾ ಭಾರತಕ್ಕೆ ಹಸ್ತಾಂತರಿಸಬೇಕು. ಇದು ರಾಜನೀತಿಯ ಮಟ್ಟದಲ್ಲಿ ಆಗಬೇಕಾದ ಉಪಕ್ರಮ. ಈ ಬಗ್ಗೆ ಉಭಯ ದೇಶಗಳ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕಿದೆ. ಆದರೆ ನೈಜ ಭಾರತೀಯರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೋ ಆ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂಬುದು ನಮ್ಮ ಹೆಮ್ಮೆಗೆ ಕಾರಣವಾಗಿದೆ.
ಪಂಜಾಬ್‌ನಲ್ಲಿ ಖಲಿಸ್ತಾನಿಗಳು ಈಗಾಗಲೇ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪಾಕ್ ಪ್ರೇರಿತ ಡ್ರೋನ್‌ಗಳ ಮೂಲಕ ಪೂರೈಕೆಯಾಗುವ ಶಸ್ತ್ರಾಸ್ತ್ರಗಳು ಹಾಗೂ ಮಾದಕ ದ್ರವ್ಯಗಳ ಮೂಲಕ ಪಂಜಾಬ್‌ನ ಯುವಜನತೆಯನ್ನು ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಇವರು ಎಷ್ಟು ಬೆಳೆದಿದ್ದಾರೆ ಎಂದರೆ, ಇತ್ತೀಚೆಗೆ ಅಲ್ಲಿನ ತರಣ್ ತಾರಣ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ರಾಕೆಟ್ ಲಾಂಚರ್‌ನಿಂದ ದಾಳಿ ನಡೆಸಲಾಗಿತ್ತು. ಪಂಜಾಬ್ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೆಯೂ ಇದೇ ರೀತಿಯ ದಾಳಿ ನಡೆಸಲಾಗಿತ್ತು. ಇವರಿಗೆ ಬೆಂಬಲವಾಗಿ ದೇಶದಾಚೆಯ ಕೆಲವು ಪ್ರತ್ಯೇಕತಾವಾದಿ ಸಿಖ್ಖರ ಗುಂಪುಗಳು, ಖಲಿಸ್ತಾನ್ ಪರ ಸಂಘಟನೆಗಳೂ ವರ್ತಿಸುತ್ತಿವೆ. ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಅಮೆರಿಕದಲ್ಲಿ ಇವು ಹೆಚ್ಚಾಗಿವೆ. ಇವರ ಟಾರ್ಗೆಟ್ ಎಂದರೆ ಅಲ್ಲಿನ ಭಾರತೀಯರು, ಅವರ ಶ್ರದ್ಧಾಕೇಂದ್ರಗಳಾದ ದೇವಾಲಯಗಳು ಹಾಗೂ ಕಾನ್ಸುಲೇಟ್‌ಗಳು. ಇತ್ತೀಚಿನ ದಿನಗಳಲ್ಲಿ ಅನೇಕ ದೇವಾಲಯಗಳನ್ನು ಹಾನಿಗೊಳಪಡಿಸಲಾಗಿದೆ. ಈ ಸಂಘಟನೆಗಳು ವಿನಾಕಾರಣ ಭಾರತೀಯರನ್ನು ಕೆಣಕುತ್ತಿವೆ.
ಇದಕ್ಕೆ ತಕ್ಕ ಉತ್ತರವನ್ನು ಭಾರತೀಯರು ನೀಡಿದ್ದಾರೆ. ಈವರೆಗೆ ಇದನ್ನೆಲ್ಲ ತಾಳ್ಮೆಯಿಂದ ಸಹಿಸಿಕೊಂಡಿದ್ದ ಅನಿವಾಸಿ ಭಾರತೀಯರು ಈಗ ತಿರುಗಿ ಬಿದ್ದಿದ್ದಾರೆ. ಅಮೆರಿಕ ಮಾತ್ರವಲ್ಲ, ವಿಶ್ವದ ಮೂಲೆ ಮೂಲೆಗಳಲ್ಲಿ ಅನಿವಾಸಿ ಭಾರತೀಯರು ಒಗ್ಗಟ್ಟಿನಿಂದ ಇದ್ದಾರೆ ಮತ್ತು ಸದಾ ಭಾರತದ ಪರ ದನಿ ಎತ್ತುತ್ತಿದ್ದಾರೆ. ವಿದೇಶಗಳಲ್ಲಿನ ಭಾರತ ವಿರೋಧಿ ಚಟುವಟಿಕೆ ವಿರುದ್ಧ ಭಾರತ ಸರ್ಕಾರ ಈಗಾಗಲೇ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಪ್ರತೀಕಾರದ ಕ್ರಮವಾಗಿ ಭಾರತವು ದಿಲ್ಲಿಯಲ್ಲಿನ ಬ್ರಿಟನ್ ದೂತಾವಾಸ ಕಚೇರಿಯಲ್ಲಿನ ಹೆಚ್ಚುವರಿ ಭದ್ರತೆಯನ್ನು ಹಿಂತೆಗೆದುಕೊಂಡಿತ್ತು. ಖಲಿಸ್ತಾನಿಗಳಿಗೆ ಅನಿವಾಸಿ ಭಾರತೀಯರು ಇಷ್ಟೊಂದು ಸದರವಾಗಿರುವುದೇಕೆ? ಇವರಿಗೆ ಭದ್ರತೆಯಿಲ್ಲವೆಂದು ಖಲಿಸ್ತಾನಿಗಳು ಭಾವಿಸಿರಬಹುದು. ಆದರೆ ಅನಿವಾಸಿ ಭಾರತೀಯರ ನೆರವಿಗೆ ಭಾರತ ಸದಾ ಸನ್ನದ್ಧವಾಗಿದೆ. ಈ ಸಂದೇಶವನ್ನು ನಾವು ರವಾನಿಸಬೇಕು. ಅನಿವಾಸಿ ಭಾರತೀಯರೂ ತಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ನೀಡಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಕೇಂದ್ರೀಯ ತನಿಖಾ ದಳಗಳ ದುರುಪಯೋಗ ಆರೋಪ; ಪಾರದರ್ಶಕತೆ ಅಗತ್ಯ
ಇದರ ಜತೆಗೆ ಭಾರತದಲ್ಲಿ ಕೂಡ ಕೇಂದ್ರ ಸರ್ಕಾರ ಸಿಖ್ ಫಾರ್ ಜಸ್ಟಿಸ್, ವಾರಿಸ್ ಪಂಜಾಜ್ ದೇ ಇತ್ಯಾದಿ ಖಲಿಸ್ತಾನ್ ಪರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಆರಂಭಿಸಿದೆ. ಪಂಜಾಬಿನಲ್ಲಿ ಪ್ರತ್ಯೇಕತೆಯ ಬೀಜ ಬಿತ್ತುತ್ತಿರುವ ಅಮೃತ್ ಪಾಲ್ ಸಿಂಗ್‌ನನ್ನು ಬೇಟೆಯಾಡಲು ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆತನ ಹಲವಾರು ಬೆಂಬಲಿಗರನ್ನು ಬಂಧಿಸಿದ್ದಾರೆ. ಸಿಖ್ ಧರ್ಮ ಎಂಬುದು ಶತಮಾನಗಳಿಂದ ಹಿಂದೂಗಳ ಜತೆಗೆ ಎರಕವಾಗಿ ಅನ್ಯೋನ್ಯತೆಯಿಂದ ಇರುವ ಧರ್ಮ. ಅವರು ಬೇರೆ ಎಂದು ಹಿಂದೂಗಳಿಗೆ ಎಂದೂ ಅನಿಸಿಯೇ ಇಲ್ಲ. ಇಂಥವರ ನಡುವೆ ಪ್ರತ್ಯೇಕತೆಯ ವಿಷಬೀಜ ಬಿತ್ತಲು ಯತ್ನಿಸುವ ದೇಶವಿರೋಧಿ ಸಂಚನ್ನು ಈಗಲೇ ಹೊಸಕಿ ಹಾಕಬೇಕಿದೆ. ಇದನ್ನು ಪೋಷಿಸುತ್ತಿರುವ ಕೆನಡಾ ಹಾಗೂ ಬ್ರಿಟನ್‌ನ ಕೆಲವು ರಾಜಕಾರಣಿಗಳ ಬಣ್ಣವನ್ನೂ ಬಯಲು ಮಾಡಬೇಕಿದೆ.
ಕ್ರೀಡೆ
Women’s Boxing: ಚಿನ್ನಕ್ಕೆ ಸಿಹಿ ಮುತ್ತು ನೀಡಿದ ಸ್ವೀಟಿ ಬೂರಾ
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್ಗಳಾದ ನೀತು ಗಂಗಾಸ್ ಮತ್ತು ಸ್ವೀಟಿ ಬೂರಾ ಚಿನ್ನದ ಪದಕಕ್ಕೆ ಪಂಚ್ ನೀಡಿದ್ದಾರೆ.
ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(World Women’s Boxing) ಭಾರತದ ಬಾಕ್ಸರ್ಗಳು ಪ್ರಾಬಲ್ಯ ಮರೆದಿದ್ದಾರೆ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 2 ಚಿನ್ನದ ಪದಕ ಗೆದ್ದಿದೆ. ಆರಂಭದಲ್ಲಿ ನೀತು ಗಂಗಾಸ್ ಚಿನ್ನ ಗೆದ್ದು ಭಾರತದ ಖಾತೆ ತೆರೆದರೆ ಇದರ ಬೆನ್ನಲ್ಲೇ ಸ್ವೀಟಿ ಬೂರಾ(Saweety Boora) ಕೂಡ ಚಿನ್ನದ ಪದಕ ಗೆದ್ದು ಸಿಹಿ ಸುದ್ದಿ ನೀಡಿದರು.
ಶನಿವಾರ ಇಲ್ಲಿ ನಡೆದ 81 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಸ್ವೀಟಿ ಬೂರಾ ಅವರು 4-3 ಅಂಕಗಳ ಅಂತರದಿಂದ ಚೀನಾದ ವಾಂಗ್ ಲೀನಾ ಅವರನ್ನು ಪ್ರಬಲ ಪಂಚ್ಗಳ ಮೂಲಕ ಹಿಮ್ಮೆಟ್ಟಿಸಿದರು. ರೋಚಕವಾಗಿ ಸಾಗಿದ ಈ ಪಂದ್ಯದಲ್ಲಿ ಆರಂಭಿಕ ಬೌಟ್ನಲ್ಲಿ ಸ್ವೀಟಿ ಬೂರಾ ಹಿನ್ನಡೆ ಅನುಭವಿಸಿದರೂ ಆ ಬಳಿಕದ ಬೌಟ್ನಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ಕೊಟ್ಟು ಅಂತಿಮವಾಗಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು.
ಇದಕ್ಕೂ ಮುನ್ನ ನಡೆದ ದಿನದ ಮತ್ತೊಂದು ಪಂದ್ಯದಲ್ಲಿ 48 ಕೆಜಿ ವಿಭಾಗದದ ಫೈನಲ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ನೀತು ಗಂಗಾಸ್ ಚಿನ್ನ ಗೆದ್ದಿದ್ದರು. ಅವರು ಪ್ರಬಲ ಪಂಚ್ಗಳ ಮೂಲಕ ಮಂಗೋಲಿಯಾದ ಲುತ್ಸಾಯಿಖಾನ್ ಅಲ್ಟಂಟ್‌ಸೆಟ್‌ಸೆಗ್ ವಿರುದ್ಧ 5-0 ಅಂತರದ ಅಧಿಕಾರಯುತ ಗೆಲುವು ದಾಖಲಿಸಿದ್ದರು.
ಇದನ್ನೂ ಓದಿ World Women’s Boxing; ಚಿನ್ನದ ಪದಕಕ್ಕೆ ಪಂಚ್ ನೀಡಿದ ನೀತು ಗಂಗಾಸ್
ಇನ್ನೂ ಎರಡು ಚಿನ್ನ ನಿರೀಕ್ಷೆ
ಭಾನುವಾರ ನಡೆಯುವ 52 ಕೆಜಿ ವಿಭಾಗದಲ್ಲಿ ನಿಖತ್ ಮತ್ತು 75 ಕೆಜಿ ವಿಭಾಗದಲ್ಲಿ ಲವ್ಲಿನಾ ಬೊರ್ಗೊಹೈನ್ ಫೈನಲ್ ಪಂದ್ಯ ಆಡಿಲಿದ್ದಾರೆ. ಉಭಯ ಬಾಕ್ಸರ್ಗಳ ಮೇಲು ಪದಕ ನಿರೀಕ್ಷೆ ಇರಿಸಲಾಗಿದೆ. ಒಂದೊಮ್ಮೆ ಈ ಇಬ್ಬರು ಫೈನಲ್ನಲ್ಲಿ ಗೆದ್ದರೆ ಭಾರತ ನಾಲ್ಕು ಚಿನ್ನದ ಪದಕ ಗೆದ್ದಂತಾಗುತ್ತದೆ.
ಕರ್ನಾಟಕ
Reservation : ಮೀಸಲಾತಿ ಪರಿಷ್ಕರಣೆ ಮೂಲಕ ಧರ್ಮದ ಹೆಸರಿನಲ್ಲಿ ರಾಜ್ಯ ವಿಭಜನೆಗೆ ಬಿಜೆಪಿ ಯತ್ನ ಎಂದ ಜೆಡಿಎಸ್
ದೇವೇಗೌಡರು ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನೀಡಿದ್ದ ಶೇ.4ರಷ್ಟು ಮೀಸಲು ಕಸಿದುಕೊಂಡು, ಅದಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಲೇಪ ಹಚ್ಚಿ, ಮೀಸಲು ಆಶಯವನ್ನೇ ಹಾಳುಗೆಡವಲಾಗಿದೆ ಎಂದು ಜೆಡಿಎಸ್ ಹೇಳಿದೆ.
ಬೆಂಗಳೂರು: ರಾಜ್ಯ ಸರ್ಕಾರ ಪ್ರಕಟಿಸಿದ ಪರಿಷ್ಕೃತ ಮೀಸಲಾತಿ ನೀತಿಯನ್ನು ಜೆಡಿಎಸ್ ತೀವ್ರವಾಗಿ ಆಕ್ಷೇಪಿಸಿದೆ. ಇದು ಧರ್ಮದ ಹೆಸರಿನಲ್ಲಿ ರಾಜ್ಯ ವಿಭಜನೆಗೆ ನಡೆಸಿದ ಯತ್ನ ಮತ್ತು ಜಾತಿ ಜಗಳ ಸೃಷ್ಟಿಸುವ ಸಂಚು ಎಂದು ಅದು ಹೇಳಿದೆ. ಜೆಡಿಎಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮೀಸಲಾತಿ ಪರಿಷ್ಕರಣೆಗೆ ಸಂಬಂಧಿಸಿ ಹತ್ತು ಅಂಶಗಳನ್ನು ಹಂಚಿಕೊಂಡಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಮಾಜಿ ಪ್ರಧಾನಿಗಳಾದ ದೇವೇಗೌಡರು ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನೀಡಿದ್ದ ಶೇ.4ರಷ್ಟು ಮೀಸಲು ಕಸಿದುಕೊಂಡು, ಅದಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಲೇಪ ಹಚ್ಚಿ, ಮೀಸಲು ಆಶಯವನ್ನೇ ಹಾಳುಗೆಡವಿ ಬದುಕುಗಳನ್ನು ಸುಟ್ಟು ಹಾಕುವ ದುಷ್ಟತನವಲ್ಲದೆ ಮತ್ತೇನೂ ಅಲ್ಲ ಎಂದು ಹೇಳಿದೆ.
ಜೆಡಿಎಸ್‌ನ ಆಕ್ರೋಶದ ಮಾತುಗಳು ಇಲ್ಲಿವೆ.
- ರಾಜ್ಯ @BJP4Karnataka ಸರಕಾರ ಪ್ರತಿಯೊಂದರಲ್ಲಿಯೂ ರಾಜಕೀಯ ಮಾಡುತ್ತದೆ, ಪ್ರತಿಯೊಂದರಲ್ಲಿಯೂ ಚುನಾವಣೆಯನ್ನೇ ಕಾಣುತ್ತದೆ! ಸಂಪುಟದಲ್ಲಿ ಸಭೆಯ ಮೀಸಲಾತಿ ಹಕೀಕತ್ತೇ ಒಂದು ಖತರ್ನಾಕ್ ನಾಟಕ. ಕೊಡಲು ಕೈ ಬಾರದು, ಕೊಡಲೂ ಆಗದು. ಹಣೆಗೆ ಮಣೆಯಿಂದ ಬಾರಿಸಿಕೊಳ್ಳುವುದೂ ಎಂದರೆ ಇದೆ. ಪಾಪದ ಪಾಶ ಬಿಜೆಪಿ ಬೆನ್ನುಬಿದ್ದಿದೆ.
- ಚುನಾವಣೆ ಎಂಬ ಚದುರಂಗದಾಟದಲ್ಲಿ @BJP4Karnataka ಬಿಸಿಲುಗುದುರೆಯ ಮೇಲೆ ಸವಾರಿ ಮಾಡುತ್ತಿದೆ, ಅಷ್ಟೇ ಅಲ್ಲ; ಕ್ರೂರ ವ್ಯಾಘ್ರನ ಮೇಲೂ ಕುಳಿತು ಕುರುಡಾಗಿ ಸರ್ಕಸ್ ಮಾಡುತ್ತಿದೆ. ಸಾಗು, ಇಲ್ಲವೇ ಹೋಗು ಎನ್ನುವ ದುಸ್ಥಿತಿಯಲ್ಲಿ ತೋಯ್ದಾಡುತ್ತಿದೆ.
- ಮತದ ಹೆಸರಿನಲ್ಲಿ ಮತಯುದ್ಧ ಗೆಲ್ಲಬಹುದೆಂದು ಚಟಕ್ಕೆ ಬಿದ್ದಿರುವ @BJP4Karnataka ಈಗ ಸರ್ವಜನರ ಕಲ್ಯಾಣದ ಪ್ರತೀಕವಾದ ಕರ್ನಾಟಕದಲ್ಲಿ ಮೀಸಲು ಕಳ್ಳಾಟ ಆಡಿದೆ. ಗೆಲ್ಲಲೇಬೇಕು, ಗೆಲ್ಲದಿದ್ದರೆ ಇನ್ನೊಬ್ಬರ ತಟ್ಟೆಗೆ ಕೈ ಹಾಕು, ಆಗದಿದ್ದರೆ ಕಸಿದುಕೋ.. ಇದೇ ಕಮಲಪಕ್ಷದ ಕುಟಿಲತೆ.
- ಮೂರೂವರೆ ವರ್ಷದಿಂದ ಗಾಳಿಯಲ್ಲಿ ಗಾಳೀಪಟ ಹಾರಿಸಿಕೊಂಡೇ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿದ್ದ @BJP4Karnataka, ಚುನಾವಣೆ ಗಿಮಿಕ್ಕಿನ ಸಂಪುಟ ಸಭೆಯಲ್ಲಿ ಮೀಸಲು ತುಪ್ಪವನ್ನು ಜನರ ಹಣೆಗೆ ಸವರುವ ಬೂಟಾಟಿಕೆ ನಡೆಸಿದೆ. ಕಳ್ಳ ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯಲು ಹೊರಟಿದೆ.
- ಒಬ್ಬರ ಅನ್ನ ಕಸಿದುಕೊಂಡು ಇನ್ನೊಬ್ಬರ ಹೊಟ್ಟೆ ತುಂಬಿಸಬಹುದು ಎನ್ನುವ ಬಿಜೆಪಿಗರ ರಕ್ಕಸ ಚಾಳಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಕ್ಕೆ ಶಾಶ್ವತ ಸಮಾಧಿ ಕಟ್ಟುವಂತಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲದವರ ನಡವಳಿಕೆ ಇದು.
- ಮೀಸಲು ಕೊಡುವುದು ತಪ್ಪಲ್ಲ, ಆದರೆ, ತನ್ನ ಹಿಡೆನ್ ಅಜೆಂಡಾವನ್ನು ಮೀಸಲಿನೊಳಕ್ಕೂ ನುಸುಳಿಸಿದ @BJP4Karnataka ನರಿ ರಾಜಕಾರಣ ಆಘಾತಕಾರಿ.
- ಸಾಮಾಜಿಕ ನ್ಯಾಯದಿಂದಲೇ ಇಡೀ ದೇಶಕ್ಕೆ ಮೇಲ್ಪಂಕ್ತಿಯಾಗಿದ್ದ ಕರ್ನಾಟಕವನ್ನು ಮೀಸಲು ಮೂಲಕವೇ ವಿಭಜಿಸಿ ಮತ ಫಸಲು ತೆಗೆಯುವ ದುರಾಲೋಚನೆಯೊಂದಿಗೆ ಬಿಜೆಪಿ, ಸಾಮಾಜಿಕ ನ್ಯಾಯಕ್ಕೆ ಚಟ್ಟ ಕಟ್ಟಿ ಸ್ಮಶಾನ ಕೇಕೆ ಹಾಕುತ್ತಿದೆ.
- ಒಳ ಮೀಸಲು ಎನ್ನುವುದು ಒಡೆಯಲಾಗದ ಕಗ್ಗಂಟೇನಲ್ಲ. ಬಿಜೆಪಿ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲವಷ್ಟೇ. ಆದರೆ, ಚುನಾವಣೆ ಹೊತ್ತಿನಲ್ಲಿ ಜಾತಿ ಜಾತಿಗಳ ನಡುವೆ ವೈಮನಸ್ಸು ತಂದು ಉರಿಯುವ ಕಿಚ್ಚಿನಲ್ಲಿ ಚಳಿ ಕಾಯಿಸಿಕೊಳ್ಳಬೇಕು ಎನ್ನುವುದೇ ಬಿಜೆಪಿಯ ಅಸಲಿ ಆಟ.
- ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda ಅವರು ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನೀಡಿದ್ದ ಶೇ.4ರಷ್ಟು ಮೀಸಲು ಕಸಿದುಕೊಂಡು, ಅದಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಲೇಪ ಹಚ್ಚಿ, ಮೀಸಲು ಆಶಯವನ್ನೇ ಹಾಳುಗೆಡವಿ ಬದುಕುಗಳನ್ನು ಸುಟ್ಟು ಹಾಕುವ ದುಷ್ಟತನವಲ್ಲದೆ ಮತ್ತೇನೂ ಅಲ್ಲ.
- ಬಿಜೆಪಿ ಪಾಪದಕೊಡ ಭರ್ತಿ ಆಗಿದೆ. ರಾಜ್ಯವನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿ, ಜಾತಿಜಗಳಕ್ಕೆ ತುಪ್ಪ ಸುರಿಯುತ್ತಿದೆ. ಅರಗಿನ ಮನೆಯಲ್ಲಿ ಪಾಂಡವರಿಗೆ ಕೊಳ್ಳಿ ಇಡಲು ಹೋಗಿ ಮುಂದೊಮ್ಮೆ ತಾವೇ ಎಸಗಿದ ಪಾಪಕುಂಡದಲ್ಲಿ ಬೆಂದುಹೋದ ಕೌರವರಂತೆ, ಬಿಜೆಪಿಗರು ಮದವೇರಿ ಮೆರೆಯುತ್ತಿದ್ದಾರೆ. ಉರಿಯುತ್ತಿರುವ ಜನರ ಒಡಲು ತಣ್ಣಗಾಗುವುದಿಲ್ಲ. ನೆನಪಿರಲಿ.
ಇದನ್ನೂ ಓದಿ : Panchamasali Reservation : 2ಡಿ ಮೀಸಲಾತಿಗೆ ಪಂಚಮಸಾಲಿ ಒಪ್ಪಿಗೆ, ಎರಡು ವರ್ಷಗಳ ಹೋರಾಟಕ್ಕೆ ತೆರೆ
ಕರ್ನಾಟಕ
Modi security lapse : ಮೋದಿ ರೋಡ್ ಶೋ ವೇಳೆ ಭದ್ರತಾಲೋಪ; ಬ್ಯಾರಿಕೇಡ್ ಹಾರಿ ನುಗ್ಗಿದ ಯುವಕ, ಪೊಲೀಸರಿಂದ ತಡೆ
ದಾವಣಗೆರೆಯಲ್ಲಿ ನಡೆದ ನರೇಂದ್ರ ಮೋದಿ ಅವರ ಆಂತರಿಕ ರೋಡ್ ಶೋ ಸಂದರ್ಭ ಯುವಕನೊಬ್ಬ ಬ್ಯಾರಿಕೇಡ್ ಮುರಿದು ಮೋದಿ ಅವರ ವಾಹನದತ್ತ ಧಾವಿಸಿದ ಹಿನ್ನೆಲೆಯಲ್ಲಿ (Modi security lapse) ಒಮ್ಮೆಗೇ ಆತಂಕ ಸೃಷ್ಟಿಯಾಗಿತ್ತು.
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ (Modi in Karnataka) ಭದ್ರತೆ ಎಷ್ಟೇ ಬಿಗಿಯಾಗಿದ್ದರೂ ಕೆಲವೊಂದು ಸಣ್ಣಪುಟ್ಟ ಭದ್ರತಾ ಉಲ್ಲಂಘನೆ (Modi security lapse) ಘಟನೆಗಳು ನಡೆಯುತ್ತಲೇ ಇರುತ್ತವೆ. ಕಳೆದ ಜನವರಿಯಲ್ಲಿ ಮೋದಿ ಹುಬ್ಬಳ್ಳಿಗೆ ಬಂದಿದ್ದಾಗ ಒಬ್ಬ ಪುಟ್ಟ ಬಾಲಕ ಬ್ಯಾರಿಕೇಡ್ ದಾಟಿ ಬಂದು ಮೋದಿ ಅವರಿಗೆ ಹೂವು ನೀಡಿದ್ದ. ಬಳಿಕ ಆತನ ಹಿನ್ನೆಲೆ, ತಂದೆ -ತಾಯಿ ವಿವರಗಳನ್ನೆಲ್ಲ ಪರಿಶೀಲಿಸಿ ಯಾವುದೇ ಅಪಾಯವಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದರು ಪೊಲೀಸರು.
ಶನಿವಾರ ದಾವಣಗೆರೆಯಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾವೇಶದ ಸಂದರ್ಭದಲ್ಲೂ ಇದೇ ಮಾದರಿಯ ಅಚಾತುರ್ಯವೊಂದು ನಡೆದಿದೆ. ಪ್ರಧಾನಿ ಮೋದಿ ಅವರು ಬೃಹತ್ ಪೆಂಡಾಲ್‌ನ ಸುತ್ತ ವಾಹನದಲ್ಲಿ ರೋಡ್ ಶೋ ನಡೆಸುತ್ತಿದ್ದರೆ ಯುವಕನೊಬ್ಬ ಬ್ಯಾರಿಕೇರ್ ಹಾರಿ ಮೋದಿ ಅವರಿದ್ದ ವಾಹನದತ್ತ ದೌಡಾಯಿಸಿದ್ದ. ಕೂಡಲೇ ಎಚ್ಚೆತ್ತ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯಾದ್ಯಂತ ನಡೆದ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆಯ ಸಮಾರೋಪ ಸಮಾರಂಭ ದಾವಣಗೆರೆಯಲ್ಲಿ ಆಯೋಜನೆಯಾಗಿತ್ತು. ಅಲ್ಲಿ ಸುಮಾರು 2 ಲಕ್ಷ ಜನರಿಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು. ಅವರ ಮಧ್ಯೆ ಪ್ರಧಾನಿಯವರು ವಾಹನದ ಮೂಲಕ ರೋಡ್ ಶೋ ನಡೆಸಿದರು.
ಹೊರಗಿನ ಆವರಣದಲ್ಲೂ ಲಕ್ಷಾಂತರ ಜನರು ಸೇರಿದ್ದು, ಅವರಿಗೂ ಕೈಬೀಸುವುದಕ್ಕಾಗಿ ಮೋದಿ ಅವರು ಹೊರಾವರಣದಲ್ಲೂ ಒಂದು ಸುತ್ತು ಹೊಡೆದರು. ಆಗ ವೇದಿಕೆಯ ಹಿಂಭಾಗದಲ್ಲಿ ಸಾಕಷ್ಟು ಜನರು ಸೇರಿದ್ದರು. ಅವರು ಮುಂದೆ ಬರಲಾಗದಂತೆ ಬ್ಯಾರಿಕೇಡ್ ಅಳವಡಿಸಲಾಯಿತು. ಒಂದು ಹಂತದಲ್ಲಿ ಜನರ ಒತ್ತಡದಿಂದ ಬ್ಯಾರಿಕೇಡ್ ಮುರಿದುಬಿತ್ತು. ಆಗ ಒಬ್ಬ ಯುವಕ ಒಳಗೆ ಓಡಿಬಂದಿದ್ದ. ಅಷ್ಟು ಹೊತ್ತಿಗೆ ಸರಿಯಾಗಿ ಮೋದಿ ಅವರ ವಾಹನವೂ ಅದೇ ಜಾಗಕ್ಕೆ ಬಂದಿತ್ತು. ಇದರಿಂದ ಸ್ವಲ್ಪ ಹೊತ್ತು ಆತಂಕ ಸೃಷ್ಟಿಯಾಯಿತು. ಕೂಡಲೇ ಅಲ್ಲಿದ್ದ ಪೊಲೀಸರು ಯುವಕನನ್ನು ಹಿಡಿದುಕೊಂಡರು. ಬಳಿಕ ಆತನ ಹಿನ್ನೆಲೆಯನ್ನು ವಿಚಾರಿಸಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ಭದ್ರತಾ ಲೋಪ ಆಗಿಲ್ಲ ಎಂದ ದಾವಣಗೆರೆ ಎಸ್ಪಿ
ಈ ಘಟನೆಯ ಬಗ್ಗೆ ದಾವಣಗೆರೆಯ ಎಸ್ಪಿ ರಿಷ್ಯಂತ್ ಅವರು ಪ್ರತಿಕ್ರಿಯಿಸಿ ಈ ಘಟನೆಯನ್ನು ಭದ್ರತಾ ಲೋಪ ಎನ್ನುವ ಹಾಗಿಲ್ಲ ಎಂದಿದ್ದಾರೆ. ಹಾಗೇನಾದರು ಇದ್ದಿದ್ದರೆ ಎಸ್‌ಪಿಜಿಯವರು ನಮ್ಮ ಗಮನಕ್ಕೆ ತರುತ್ತಿದ್ದರು ಎಂದು ಹೇಳಿದ್ದಾರೆ.
ದೊಡ್ಡ ಗುಂಪು ಬ್ಯಾರಿಕೇಡ್ ಮುರಿದ ಪರಿಣಾಮ ವ್ಯಕ್ತಿ ಮೋದಿಯತ್ತ ನುಗ್ಗಿದ್ದ. ಇದನ್ನು ಭದ್ರತಾ ಲೋಪ ಎನ್ನುವ ಹಾಗಿಲ್ಲ. ವ್ಯಕ್ತಿಯನ್ನು ಅಲ್ಲಿಂದ ಹೊರಗೆ ಹಾಕಲಾಗಿದೆ. ಅವನನ್ನು ಯಾವುದೇ ರೀತಿ ವಿಚಾರಣೆ ಮಾಡಿಲ್ಲ ಎಂದು ರಿಷ್ಯಂತ್ ಹೇಳಿದರು.
ಇದನ್ನೂ ಓದಿ : Modi in Karnataka: ದಾವಣಗೆರೆ ಮಹಾ ಸಂಗಮದ ಆವರಣದಲ್ಲೇ ಮೋದಿ ರೋಡ್ ಶೋ ನಡೆಸಿದ್ದೇಕೆ?
-
ಅಂಕಣ17 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ17 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ17 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ18 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ15 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ15 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಕರ್ನಾಟಕ11 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಅಂಕಣ12 hours ago
ಹೊಸ ಅಂಕಣ: ಸೈಬರ್ ಮಿತ್ರ: ಜಾಣರಾಗಿ, ಜಾಗರೂಕರಾಗಿರಿ!