ಮಾಸ್ಕೋ: ಕಳೆದ ಫೆಬ್ರವರಿಯಿಂದ ಉಕ್ರೇನ್‌ನಲ್ಲಿ ಸೇನೆಯು ರಕ್ತಪಿಪಾಸುತನ ಮೆರೆಯಲು ಕಾರಣವಾದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೀಗ ಕರ್ಮ ರಿಟರ್ನ್ಸ್ ಎನ್ನುವ ಮಾತು ನಿಜವಾಗಿಯೂ ಅರ್ಥವಾಗಿರಬಹುದು. ವ್ಲಾಡಿಮಿರ್ ಪುಟಿನ್ ವಿರುದ್ಧವೇ ರಷ್ಯಾದ ಖಾಸಗಿ ಸೇನಾಪಡೆ ವ್ಯಾಗ್ನರ್ ಗ್ರೂಪ್ (Turmoil In Russia) ತಿರುಗಿಬಿದ್ದಿದ್ದು, ರಷ್ಯಾ ರಾಜಧಾನಿ ಮಾಸ್ಕೊ ಕಡೆ ವ್ಯಾಗ್ನರ್ ಸೇನೆ ನುಗ್ಗುತ್ತಿದೆ. ಇದರಿಂದ ಹೆದರಿದ ವ್ಲಾಡಿಮಿರ್ ಪುಟಿನ್ ಪಲಾಯನ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು, ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರು ವ್ಲಾಡಿಮಿರ್ ಪುಟಿನ್ ಅವರನ್ನು ಅಧ್ಯಕ್ಷ ಸ್ಥಾನದಿಂದಲೇ ಕೆಳಗಿಳಿಸುವ ಶಪಥ ಮಾಡಿದ್ದಾರೆ. ಪುಟಿನ್ ವಿರುದ್ಧ ಸೇನಾ ದಂಗೆ ಆರಂಭಿಸಿದ್ದೇನೆ ಎಂದು ಘೋಷಿಸಿದ್ದಲ್ಲದೆ ಹಲವು ನಗರಗಳಲ್ಲಿರುವ ಸೇನಾ ನೆಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಪುಟಿನ್ ಅವರನ್ನು ಶತಾಯ ಗತಾಯ ಮಣಿಸಬೇಕು ಎಂದು ಮಾಸ್ಕೋ ನಗರದತ್ತ ಸೇನೆಯನ್ನು ನುಗ್ಗಿಸಿದ್ದಾರೆ. ಲಿಪೆಟ್ಸ್‌ಕ್ ಪ್ರಾಂತ್ಯದ ಕಡೆಗೂ ಸೇನೆಯನ್ನು ನುಗ್ಗಿಸಲಾಗಿದೆ ಎಂದು ಪ್ರಾಂತ್ಯದ ಗವರ್ನರ್ ಹೇಳಿದ್ದಾರೆ.
ವ್ಲಾಡಿಮಿರ್ ಪುಟಿನ್ ಪಲಾಯನ?
ಉಕ್ರೇನ್ ಮೇಲೆ ಯುದ್ಧ ಸಾರಿ, ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ವ್ಲಾಡಿಮಿರ್ ಪುಟಿನ್ ಈಗ ದೇಶದಿಂದಲೇ ಪಲಾಯನ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ವ್ಯಾಗ್ನರ್ ಗ್ರೂಪ್ ಪಡೆಗಳು ಹಾಗೂ ಯೆವ್ಗೆನಿ ಪ್ರಿಗೋಜಿನ್ ಎಂಬ ಹಠಮಾರಿ ಸೇನಾಧಿಪತಿಯ ದಂಗೆಗೆ ಬೆಚ್ಚಿ ಪಲಾಯನ ಮಾಡಿರಬಹುದು. ವ್ಲಾಡಿಮಿರ್ ಪುಟಿನ್ ಸಂಚರಿಸುತ್ತಿದ್ದ ವಿಮಾನವು ರಡಾರ್ ಸಂಪರ್ಕ ಕಳೆದುಕೊಂಡಿರುವ ಕಾರಣ ಇಂತಹ ಗುಮಾನಿ ಇದೆ. ಆದರೆ, ಕ್ರೆಮ್ಲಿನ್ ಈ ಆರೋಪವನ್ನು ಅಲ್ಲಗಳೆದಿದೆ.
ಇದನ್ನೂ ಓದಿ: Russian Coup: ರಷ್ಯಾ ಸೇನೆಗೆ ತಿರುಗಿಬಿದ್ದ ಬಾಡಿಗೆ ಹಂತಕರ ಪಡೆ, ಪುಟಿನ್‌ಗೆ ಸೇನಾ ದಂಗೆ ಸವಾಲು
ಮಾಸ್ಕೋ ನಗರ ಸ್ತಬ್ಧ
ವ್ಯಾಗ್ನರ್ ಗ್ರೂಪ್ ಸುಮಾರು 400 ಕಿಲೋಮೀಟರ್ ದೂರದಿಂದ ಮಾಸ್ಕೋದತ್ತ ತೆರಳುತ್ತಿರುವ ಕಾರಣ ಇಡೀ ಮಾಸ್ಕೋ ನಗರ ಸ್ತಬ್ಧವಾಗಿದೆ. ಭದ್ರತಾ ಸಿಬ್ಬಂದಿಯು ರಸ್ತೆಗಳನ್ನು ಬ್ಲಾಕ್ ಮಾಡಿದ್ದು, ಕಟ್ಟೆಚ್ಚರ ಘೋಷಿಸಿದ್ದಾರೆ. ಆರ್ಟಿಲರಿಗಳು, ಯುದ್ಧ ಟ್ಯಾಂಕ್, ರಾಕೆಟ್‌ಗಳನ್ನು ಸಾಗಿಸಿಕೊಂಡು ವ್ಯಾಗ್ನರ್ ಗ್ರೂಪ್ ಮಾಸ್ಕೋದತ್ತ ಧಾವಿಸುತ್ತಿದೆ. ಮುಂದಿನ ದಿನಗಳಲ್ಲಿ ಉಕ್ರೇನ್‌ಗೆ ಆದ ಪರಿಸ್ಥಿತಿಯೇ ರಷ್ಯಾಗೂ ಆಗಲಿದೆ. ಅದರಲ್ಲೂ, ತಮ್ಮ ದೇಶದ ಖಾಸಗಿ ಸೇನೆಯೇ ವ್ಲಾಡಿಮಿರ್ ಪುಟಿನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲಿದೆ. ಆ ಮೂಲಕ ಪುಟಿನ್ ಅವರಿಗೆ ತಕ್ಕ ಶಾಸ್ತಿ ಮಾಡಲಿದೆ. ಇದಕ್ಕಾಗಿ ಹಿಂಸಾಚಾರ ಮಿತಿಮೀರಲಿದೆ ಎಂದೆಲ್ಲ ವಿಶ್ಲೇಷಿಸಲಾಗುತ್ತಿದೆ.