Site icon Vistara News

White House: ಭಾರತದಲ್ಲಿದೆ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ: ಅಮೆರಿಕದ ಮೆಚ್ಚುಗೆ; ಮೋದಿ ನಾಯಕತ್ವಕ್ಕೂ ಸಿಕ್ತು ಶಹಬ್ಬಾಸ್‌ಗಿರಿ

White House

White House

ವಾಷಿಂಗ್ಟನ್‌: ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದಕ್ಕೆ ಅಮೆರಿಕದ ಶ್ವೇತಭವನ (White House)ವು ಭಾರತೀಯರನ್ನು ಶ್ಲಾಘಿಸಿದೆ. ಶ್ವೇತಭವನದ ವಕ್ತಾರ ಜಾನ್ ಕಿರ್ಬಿ (John Kirby) ಈ ಬಗ್ಗೆ ಮಾತನಾಡಿ, ಭಾರತವು ಜಾಗತಿಕವಾಗಿ ಅತ್ಯಂತ ರೋಮಾಂಚಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ ಎಂದು ಬಣ್ಣಿಸಿದ್ದಾರೆ. ʼʼಸುಮಾರು 2,660 ನೋಂದಾಯಿತ ಪಕ್ಷಗಳನ್ನು ಪ್ರತಿನಿಧಿಸುವ ಸಾವಿರಾರು ಅಭ್ಯರ್ಥಿಗಳ ಪೈಕಿ 545 ಸಂಸದರನ್ನು ಆಯ್ಕೆ ಮಾಡಲು ಕೋಟ್ಯಂತರ ಮಂದಿ ಹತ್ತು ಲಕ್ಷಕ್ಕೂ ಅಧಿಕ ಮತದಾನ ಕೇಂದ್ರಗಳಲ್ಲಿ ಹಕ್ಕು ಚಲಾ ಚಲಾಯಿಸುತ್ತಿದ್ದಾರೆʼʼ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಭಾರತಕ್ಕಿಂತ ಹೆಚ್ಚು ವ್ಯವಸ್ಥಿತ ಪ್ರಜಾಪ್ರಭುತ್ವ ಜಗತ್ತಿನ ಬೇರೆ ಕಡೆ ಇಲ್ಲ. ಮತ ಚಲಾಯಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿರುವುದಕ್ಕಾಗಿ ಮತ್ತು ತಮ್ಮ ಭವಿಷ್ಯದ ಸರ್ಕಾರವನ್ನು ನಿರ್ಧರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿರುವುದಕ್ಕಾಗಿ ನಾವು ಭಾರತೀಯರನ್ನು ಶ್ಲಾಘಿಸುತ್ತೇವೆ. ಈ ಮತದಾನದ ಪ್ರಕ್ರಿಯೆಯುದ್ದಕ್ಕೂ ನಾವು ಅವರಿಗೆ ಶುಭ ಹಾರೈಸುತ್ತೇವೆ” ಎಂದು ಜಾನ್ ಕಿರ್ಬಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರಿಗೂ ಮೆಚ್ಚುಗೆ

ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ವೃದ್ಧಿಸುತ್ತಿರುವ ಬಗ್ಗೆಯೂ ಅವರು ಪ್ರಸ್ತಾವಿಸಿದ್ದಾರೆ. ʼʼಮೋದಿ ಅವರ ನಾಯಕತ್ವದ ಅಡಿಯಲ್ಲಿ ವಿಶೇಷವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತದ ಕೊನೆಯ ಮೂರು ವರ್ಷಗಳಲ್ಲಿ ಭಾರತ-ಅಮೆರಿಕ ಸಂಬಂಧ ಬಲವಾಗಿದೆ. ಉಭಯ ದೇಶಗಳ ನಡುವಿನ ಬಂಧವು ನಿರಂತರವಾಗಿ ವೃದ್ಧಿಸುತ್ತಿದೆʼʼ ಎಂದು ವಿವರಿಸಿದ್ದಾರೆ.

“ನಾವು ಎರಡೂ ದೇಶಗಳ ಸಂಬಂಧ ವೃದ್ಧಿಗೆ ಎಲ್ಲ ರೀತಿಯ ಹೊಸ ಉಪಕ್ರಮಗಳನ್ನು ಪ್ರಾರಂಭಿಸಿದ್ದೇವೆ. ನಿರ್ಣಾಯಕ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಇಂಡೋ-ಪೆಸಿಫಿಕ್ ಕ್ವಾಡ್‌ನ ಪ್ರಸ್ತುತತೆಯನ್ನು ಹೆಚ್ಚಿಸುತ್ತಿದ್ದೇವೆ. ಜತೆಗೆ ನಾವು ರಕ್ಷಣಾ ಕ್ಷೇತ್ರದಲ್ಲಿಯೂ ಪರಸ್ಪರ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ನಾವು ಕೃತಜ್ಞರಾಗಿದ್ದೇವೆʼʼ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: PM Modi US visit : ಶ್ವೇತಭವನದ ಔತಣಕೂಟದಲ್ಲಿ ಮಿಂಚಿದ ಮುಕೇಶ್‌, ನೀತಾ ಅಂಬಾನಿ, ನಿಖಿಲ್‌ ಕಾಮತ್

ಶ್ವೇತಭವನದಲ್ಲಿ ಮೊಳಗಿದ ʼಸಾರೆ ಜಹಾನ್‌ ಸೇ ಅಚ್ಚಾʼ

ಇತ್ತೀಚೆಗಷ್ಟೇ ಅಮೆರಿಕದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾರತದ ದೇಶಭಕ್ತಿಗೀತೆ ʼಸಾರಾ ಜಹಾನ್‌ ಸೇ ಅಚ್ಚಾʼ ಹಾಡು ಮೊಳಗಿತ್ತು. ಶ್ವೇತಭವನದಲ್ಲಿ ಆಯೋಜನೆಗೊಂಡಿದ್ದ ಏಷಿಯನ್‌ ಅಮೆರಿಕನ್‌, ಸ್ಥಳೀಯ ಹವಾಯಿಯನ್‌ ಮತ್ತು ಪೆಸಿಫಿಕ್‌ ಐಲ್ಯಾಂಡರ್‌ ಪಾರಂಪರ್ಯ ಮಾಸಾಚರಣೆ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರೀಸ್‌ ಭಾಗಿಯಾಗಿದ್ದರು. ಈ ವೇಳೆ ಶ್ವೇತಭವನದ ಮೆರೈನ್ ಬ್ಯಾಂಡ್ ʼಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾʼ ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿತ್ತು. ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ವೈರಲ್‌ ಆಗಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಶ್ವೇತಭವನ ಭಾರತದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದೆ.

Exit mobile version