Site icon Vistara News

Iran Attack: ಪಾಕ್ ಮೇಲೆ ಇರಾನ್ ದಾಳಿ ಮಾಡಿದ್ದೇಕೆ? ದಾಳಿಯ ಪರಿಣಾಮ ಏನು?

Iran Attack On Pakistan

Why Iran attacked Pakistan? how it will affect the region?

ಟೆಹ್ರಾನ್:‌ ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಜೈಶ್‌ ಅಲ್‌ ಅದ್ಲ್‌ (Jaish al Adl) ಉಗ್ರ ಸಂಘಟನೆಯ ಎರಡು ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ (Iran Attack) ನಡೆಸಿದೆ. ಇದರಿಂದಾಗಿ ಆರ್ಥಿಕವಾಗಿ ಕಂಗೆಟ್ಟಿರುವ, ಉಗ್ರ ಪೋಷಣೆಗಾಗಿ ಜಾಗತಿಕವಾಗಿ ವಿರೋಧ ಎದುರಿಸುತ್ತಿರುವ ಪಾಕಿಸ್ತಾನವು (Pakistan) ತತ್ತರಿಸಿಹೋಗಿದೆ. ಇರಾನ್‌ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇದರಿಂದ ಇರಾನ್‌ ಗಂಭೀರ ಪರಿಣಾಮ ಎದುರಿಸಲಿದೆ ಎಂದು ಪಾಕಿಸ್ತಾನ ಗುಟುರು ಹಾಕಿದರೂ ಆಂತರಿಕವಾಗಿಯೇ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಹಾಗಾದರೆ, ಪಾಕಿಸ್ತಾನದ ಮೇಲೆ ಇರಾನ್‌ ದಾಳಿ ಮಾಡಿದ್ದೇಕೆ? ಇದರ ಪರಿಣಾಮಗಳು ಏನಾಗಬಹುದು ಎಂಬುದರ ಕಿರು ಮಾಹಿತಿ ಇಲ್ಲಿದೆ.

ಇರಾನ್‌ ದಾಳಿಗೆ ಕಾರಣಗಳೇನು?

ಇರಾನ್‌ ಹಾಗೂ ಪಾಕಿಸ್ತಾನವು ಬಲೂಚಿಸ್ತಾನದ ಬಳಿ 969 ಮೈಲುಗಳ ಗಡಿ ಹಂಚಿಕೊಂಡಿವೆ. ಬಲೂಚಿಸ್ತಾನದ ಗಡಿಯಲ್ಲಿ ಇರಾನ್‌ನ ಸುನ್ನಿ ಪಂಗಡದವರು ದೌರ್ಜನ್ಯಕ್ಕೀಡಾಗುತ್ತಿದ್ದಾರೆ. ಇವರಿಗೆ ಕಿರುಕುಳ ನೀಡಲಾಗುತ್ತಿದೆ. ಇನ್ನು, ಭಾರತದ ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರನ್ನು ಛೂಬಿಡುವಂತೆಯೇ ಬಲೂಚಿಸ್ತಾನದಲ್ಲಿ ಜೈಶ್‌ ಅಲ್‌ ಅದ್ಲ್‌ ಉಗ್ರ ಸಂಘಟನೆ ಸೇರಿ ಹಲವು ಸಂಘಟನೆಗಳಿಗೆ ಪಾಕಿಸ್ತಾನ ಹಣಕಾಸು ನೆರವು ನೀಡಿ ಅಶಾಂತಿಗೆ ಕಾರಣವಾಗುತ್ತಿದೆ ಎಂದು ಇರಾನ್‌ ಆರೋಪಿಸಿದೆ.

Iran Attack On Pakistan

ಪಾಕಿಸ್ತಾನವು ಗಡಿ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ. ಸುನ್ನಿ ಅಲ್ಪಸಂಖ್ಯಾತರಿಗೆ ಕಿರುಕುಳ, ಗಡಿಯಲ್ಲಿ ಉಗ್ರರ ಪೋಷಣೆ, ಅವರಿಗೆ ಹಣಕಾಸು ನೆರವು ನೀಡುತ್ತಿದೆ ಎಂದು ಇರಾನ್‌ ಆರೋಪಿಸುತ್ತಲೇ ಇದೆ. ಆದರೆ, ಇರಾನ್‌ ಆರೋಪಗಳನ್ನು ಪಾಕಿಸ್ತಾನ ತಿರಸ್ಕರಿಸುತ್ತಲೇ ಬಂದಿದೆ. ಇಷ್ಟಾದರೂ, ಪಾಕಿಸ್ತಾನ ಹಾಗೂ ಇರಾನ್‌ ಗಡಿಯಲ್ಲಿ ಸಂಘರ್ಷಗಳು ನಿಂತಿರಲಿಲ್ಲ. ಈಗ ಆಕ್ರಮಣಕಾರಿ ನೀತಿ ಅನುಸರಿಸಿರುವ ಇರಾನ್‌, ಕ್ಷಿಪಣಿ ದಾಳಿ ಮೂಲಕ ಜೈಶ್‌ ಅಲ್‌ ಅದ್ಲ್‌ ಉಗ್ರ ಸಂಘಟನೆಯ ಎರಡು ನೆಲೆಗಳನ್ನು ಧ್ವಂಸಗೊಳಿಸಿದೆ.

ದಾಳಿಯಿಂದಾಗುವ ಪರಿಣಾಮಗಳು

ಪಾಕಿಸ್ತಾನದ ಪ್ರದೇಶಕ್ಕೆ ನುಗ್ಗಿ, ಉಗ್ರರ ಎರಡು ನೆಲೆಗಳನ್ನು ಇರಾನ್‌ ಧ್ವಂಸಗೊಳಿಸಿದ್ದು, ಇದರಿಂದ ಹಲವು ಪರಿಣಾಮಗಳು ಎದುರಾಗಲಿವೆ ಎಂದು ಹೇಳಲಾಗುತ್ತಿದೆ. ದಾಳಿಯಿಂದ ಇರಾನ್‌ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆಯಾಗಿದೆ. ಇದಕ್ಕೂ ಮೊದಲು ಕೂಡ ಇರಾನ್‌ ಹಾಗೂ ಪಾಕಿಸ್ತಾನ ಅಷ್ಟೊಂದು ಉತ್ತಮ ಸಂಬಂಧವನ್ನು ಹೊಂದಿರಲಿಲ್ಲವಾದರೂ ಈ ದಾಳಿಯು ಭಿನ್ನಾಭಿಪ್ರಾಯವನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಲಿದೆ ಎಂದು ವಿಶ್ಲೇಷಿಸಲಾಗಿದೆ.

Iran Attack On Pakistan

ಪಾಕಿಸ್ತಾನದ ಒಳಗೆ ನುಗ್ಗಿ ಕ್ಷಿಪಣಿ ಹಾಗೂ ಡ್ರೋನ್‌ ಮೇಲೆ ದಾಳಿ ನಡೆಸಿರುವುದರಿಂದ ಇದು ಪ್ರಾದೇಶಿಕ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ. ಇರಾನ್‌ ಮೇಲೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನವೂ ಪ್ರತಿದಾಳಿ ಮಾಡಿದರೆ ಇರಾನ್‌ ಸುಮ್ಮನಿರುವುದಿಲ್ಲ. ಇದರಿಂದಾಗಿ ಉಕ್ರೇನ್-ರಷ್ಯಾ, ಇಸ್ರೇಲ್-ಪ್ಯಾಲೆಸ್ತೀನ್‌ ಸಮರದಂತೆ ಮತ್ತೆ ಎರಡು ದೇಶಗಳ ಸಂಘರ್ಷಕ್ಕೆ ಇರಾನ್‌ ದಾಳಿಯು ಮುನ್ನುಡಿ ಬರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: Iran Attack: ಇರಾನ್‌ ಕ್ಷಿಪಣಿ ದಾಳಿಗೆ ಕಂಗೆಟ್ಟ ಪಾಕಿಸ್ತಾನ; ಬೆಂಬಲಿಸುವುದೇ ಚೀನಾ?

ಇರಾನ್‌ ಹಾಗೂ ಪಾಕಿಸ್ತಾನವು ಇಸ್ಲಾಮಿಕ್‌ ರಾಷ್ಟ್ರಗಳಾದರೂ ಇಸ್ಲಾಂನಲ್ಲಿಯೇ ಇರುವ ಪಂಗಡಗಳಿಂದಾಗಿ ಸಂಘರ್ಷ ಎದುರಿಸುತ್ತಿವೆ. ಹಾಗೊಂದು ವೇಳೆ ಎರಡೂ ರಾಷ್ಟ್ರಗಳು ಆಕ್ರಮಣಕಾರಿ ನೀತಿ ಅನುಸರಿಸಿದರೆ ಅದು ಜಾಗತಿಕ ಸಮಸ್ಯೆಯಾಗಲಿದೆ. ಇಸ್ಲಾಮಿಕ್‌ ರಾಷ್ಟ್ರಗಳಲ್ಲಿಯೇ ಎರಡು ಬಣಗಳಾಗಲಿವೆ. ಇದು ಜಾಗತಿಕ ಅಶಾಂತಿಗೂ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಆರ್ಥಿಕವಾಗಿ ದಿವಾಳಿಯಾಗಿರುವ, ಸಾಮಾಜಿಕವಾಗಿ ಕಂಗೆಟ್ಟಿರುವ, ರಾಜಕೀಯ ಅರಾಜಕತೆ ಎದುರಿಸುತ್ತಿರುವ ಪಾಕಿಸ್ತಾನವು ಪ್ರತಿದಾಳಿ ಮಾಡುವ ಧೈರ್ಯ ತೋರಲಿಕ್ಕಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version