Site icon Vistara News

Zakir Naik: ಹಿಂದುಗಳನ್ನು ಮತಾಂತರಗೊಳಿಸುವ ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕು; ವಿವಾದ ಹುಟ್ಟುಹಾಕಿದ ಮೌಲ್ವಿ

Zakir Naik

Zakir Naik

ಇಸ್ಲಾಮಾಬಾದ್‌: ಪಾಕಿಸ್ತಾನದ ಮೌಲ್ವಿಯೊಬ್ಬ ಭಾರತದ ವಿವಾದಿತ ಮತಪ್ರಭಾಷಣಕಾರ, ಭಾಷಣಕಾರ ಜಾಕೀರ್ ನಾಯ್ಕ್‌ (Zakir Naik)ನನ್ನು ದೇಶದ ಚಕ್ರವರ್ತಿಯನ್ನಾಗಿ ಘೋಷಿಸಬೇಕೆಂದು ಹೇಳಿ ವಿವಾದ ಹುಟ್ಟು ಹಾಕಿದ್ದಾನೆ. ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ‘ಸಾಂಪ್ರದಾಯಿಕ ಹಿಂದೂ ಧರ್ಮ’ವನ್ನು ಉತ್ತೇಜಿಸುವ ಪಕ್ಷವು ಭಾರತವನ್ನು ಆಳುತ್ತಿರುವ ಅವಧಿಯಲ್ಲಿ ಸಾವಿರಾರು ಹಿಂದುಗಳನ್ನು ಮತಾಂತರಗೊಳಿಸಲು ಯತ್ನಿಸುವ ಜಾಕೀರ್ ನಾಯ್ಕ್‌ನ ಪಾತ್ರವನ್ನು ಮೌಲ್ವಿ ಶ್ಲಾಘಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಮೌಲ್ವಿ ತನ್ನ ಭಾಷಣದಲ್ಲಿ, ʼʼಡಾ.ಜಾಕೀರ್ ನಾಯ್ಕ್‌ ಇಂದು ತಮ್ಮ ಭಾಷಣ, ವಿಡಿಯೊದ ಮೂಲಕ ಸಾವಿರಾರು ಹಿಂದುಗಳ ಮತಾಂತರ ನಡೆಸಿದ್ದಾರೆ. ಸದ್ಯ ಭಾರತದಲ್ಲಿ ಆಡಳಿತ ನಡೆಸುತ್ತಿರುವ, ಮೋದಿ ನೇತೃತ್ವದ ಹಿಂದು ಪರವಾದ ಸರ್ಕಾರದ ಅವಧಿಯಲ್ಲಿ ಡಾ.ಝಾಕೀರ್‌ಗೆ ಪ್ರವಾದಿ ಇಬ್ರಾಹಿಂ ಅವರಂತೆ ಕಷ್ಟಕರ ಜೀವನ ನಡೆಸುವುದು ಅನಿವಾರ್ಯ ಎನಿಸಿಕೊಂಡಿದೆʼʼ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಇಲ್ಲಿಗೆ ಮೌಲ್ವಿಯ ವಾಕ್‌ ಪ್ರವಾಹ ನಿಂತಿಲ್ಲ. ಮುಂದುವರಿದು, ʼʼಡಾ.ಜಾಕೀರ್ ನಾಯ್ಕ್‌ ತನ್ನ ವಿಡಿಯೊದ ಮೂಲಕ ಅನೇಕ ಹಿಂದುಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ. ಹೀಗಾಗಿ ಅವರು ಅಲ್ಲಾಹುವಿನ ಸ್ನೇಹಿತ ಎನಿಸಿಕೊಂಡಿದ್ದಾರೆ. ಜತೆಗೆ ಭಾರತದ ಚಕ್ರವರ್ತಿ ಯಾಕಾಗಬಾರದು?ʼʼ ಎಂದು ಪ್ರಶ್ನಿಸಿಸುವ ಮೂಲಕ ನಾಲಿಗೆ ಹರಿಯಬಿಟ್ಟಿದ್ದಾನೆ.

ವ್ಯಾಪಕ ಆಕ್ರೋಶ

ಸದ್ಯ ಪಾಕಿಸ್ತಾನದ ಈ ಮೌಲ್ವಿಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದೆ. ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕೆಂಬ ಮೌಲ್ವಿಯ ಆಘಾತಕಾರಿ ಘೋಷಣೆಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ʼʼಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ನಿನ್ನ ಜಾಕೀರ್ ನಾಯ್ಕ್‌ ಪಲಾಯನ ಮಾಡಿದ್ದು ಯಾಕೆ ಎನ್ನುವುದಕ್ಕೆ ಮೊದಲು ಉತ್ತರಿಸುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಜಾಕೀರ್ ʼನಾಲಾಯಕ್‌ʼ ಭಯೋತ್ಪಾದನೆಯನ್ನು ಉತ್ತೇಜಿಸುತ್ತಾನೆ. ಒಂದು ವೇಳೆ ಆತ ನಿಜವನ್ನೇ ಹೇಳಿದ್ದರೆ ಹೇಡಿಯಂತೆ ಪಲಾಯನ ಮಾಡುವ ಅಗತ್ಯ ಏನಿತ್ತು?ʼʼ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಜಾಕೀರ್ ನಾಯ್ಕ್ ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಯುಎಇಯಲ್ಲಿನ ದೇವಾಲಯ ನಿರ್ಮಾಣದ ಕೆಲಸವನ್ನು ಒಪ್ಪಿಕೊಳ್ಳದಂತೆ ಮುಸ್ಲಿಂ ಯುವಕರಿಗೆ ಸಂದೇಶ ನೀಡಿದ್ದ. ಇಂತಹ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಇಸ್ಲಾಮಿಕ್ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಇದಕ್ಕೆ ಕಾರಣ ನೀಡಿದ್ದ. ಇತ್ತೀಚೆಗೆ ಪ್ರಧಾನಿ ಮೋದಿ ಅವರು ಅಬುಧಾಬಿಯಲ್ಲಿನ ಬಿಎಪಿಎಸ್ ಹಿಂದು ಮಂದಿರ ಉದ್ಘಾಟಿಸಿದ್ದನ್ನು ಉಲ್ಲೇಖಿಸಿ ಈ ವಿಡಿಯೊವನ್ನು ಮಾಡಲಾಗಿತ್ತು.

“ಆಲ್ಕೋಹಾಲ್ ಉತ್ಪಾದಿಸುವ ಕಂಪನಿಯಲ್ಲಿ ಕೆಲಸ ಮಾಡುವುದು ಮತ್ತು ಸಾವಿರಾರು ಜನರನ್ನು ಕೊಲ್ಲಲಿರುವ ಕೊಕೇನ್ ಅಥವಾ ಗಾಂಜಾವನ್ನು ಉತ್ಪಾದಿಸುವುದು ದೊಡ್ಡ ಪಾಪ. ಆದರೆ ದೇವಾಲಯ ನಿರ್ಮಾಣಕ್ಕಾಗಿ ಕೆಲಸ ಮಾಡುವುದು ಅದಕ್ಕಿಂತಲೂ ದೊಡ್ಡ ಪಾಪ. ಇಸ್ಲಾಂ ಹೊರತುಪಡಿಸಿ ಬೇರೆ ಯಾವುದೇ ಧರ್ಮಗಳ ಪೂಜಾ ಸ್ಥಳಕ್ಕಾಗಿ ನೀವು ಕೆಲಸ ಮಾಡುವುದು ಹರಾಮ್” ಎಂದು ನಾಯ್ಕ್‌ ಹೇಳಿದ್ದ. ಜತೆಗೆ “ಸಾವಿರಾರು ಮುಗ್ಧ ಮನುಷ್ಯರನ್ನು ಕೊಲ್ಲುತ್ತಿರುವ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ತಯಾರಿಸುವುದು ದೇವಾಲಯ ಅಥವಾ ಚರ್ಚ್ ನಿರ್ಮಾಣದಲ್ಲಿ ಕೆಲಸ ಮಾಡುವುದಕ್ಕಿಂತ ಉತ್ತಮ ಕಾರ್ಯʼʼ ಎಂದೂ ಅಭಿಪ್ರಾಯಪಟ್ಟಿದ್ದ.

ನಿಷೇಧ

ದ್ವೇಷವನ್ನು ಉತ್ತೇಜಿಸುವ ಭಾಷಣ ಮಾಡುವ ಕಾರಣಕ್ಕೆ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (IRF) ಸ್ಥಾಪಕ ಜಾಕೀರ್ ನಾಯ್ಕ್‌ನನ್ನು 2016ರಲ್ಲಿ ಭಾರತದಲ್ಲಿ ನಿಷೇಧಿಸಲಾಗಿತ್ತು. ಮುಸ್ಲಿಂ ಯುವಕರನ್ನು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಲು ಪ್ರಚೋದಿಸಿದ ಆರೋಪ ಆತನ ಮೇಲಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಮಾತ್ರವಲ್ಲ ಜಾರಿ ನಿರ್ದೇಶನಾಲಯ (ED) ಆತನ ಸಂಸ್ಥೆಯ ವಿರುದ್ಧ ಮನಿ ಲಾಂಡರಿಂಗ್ ಆರೋಪದ ಮೇಲೆ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: Zakir Naik: ಒಮಾನ್‌ನಿಂದ ಜಾಕೀರ್‌ ನಾಯ್ಕ್‌ ಗಡಿಪಾರು, ಮೂಲಭೂತವಾದಿಯ ಬಂಧನಕ್ಕೆ ಭಾರತ ಮುಹೂರ್ತ ಫಿಕ್ಸ್‌?

Exit mobile version