Site icon Vistara News

Amazon: ಭಾರತದಲ್ಲಿ 2025ರ ಹೊತ್ತಿಗೆ 20 ಲಕ್ಷ ಉದ್ಯೋಗ ಸೃಷ್ಟಿಸಲಿದೆ ಅಮೆಜಾನ್! ಮೋದಿ ಜತೆ ಸಿಇಒ ಮಾತುಕತೆ

Andy Jassy and PM Narendra Modi

ನವದೆಹಲಿ: ಇ ಕಾಮರ್ಸ್ ದೈತ್ಯ ಅಮೆಜಾನ್ (Amazon) ಭಾರತದಲ್ಲಿ (India) ಸುಮಾರು 15 ಶತಕೋಟಿ ಡಾಲರ್ ಹೂಡಿಕೆ ಮಾಡಲು ಸಜ್ಜಾಗಿದೆ. ಇದರೊಂದಿಗೆ ಭಾರತದಲ್ಲಿ ಅದರ ಒಟ್ಟು ಹೂಡಿಕೆಯ ಪ್ರಮಾಣ 26 ಶತಕೋಟಿ ಡಾಲರ್‌ಗೆ ಏರಿಕೆಯಾಗಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗೆ ಭೇಟಿಯ ವೇಳೆ ಅಮೆಜಾನ್ ಸಿಇಒ ಆ್ಯಂಡಿ ಜಾಸ್ಸಿ (Amazon CEO Andy Jassy) ಅವರು ಈ ವಿಷಯವನ್ನು ತಿಳಿಸಿದ್ದಾರೆ. ಭಾರತದಲ್ಲಿ ಈವರೆಗೆ ನಾವು 11 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದೇವೆ. ಹೆಚ್ಚುವರಿಯಾಗಿ ಇನ್ನೂ 15 ಶತಕೋಟಿ ಡಾಲರ್ ಹೂಡಿಕೆ ಮಾಡಲಿದ್ದೇವೆ. ಭಾರತದಲ್ಲಿ ಅಮೆಜಾನ್ ಹೂಡಿಕೆ ಮೊತ್ತ 26 ಶತಕೋಟಿ ಡಾಲರ್ ಆಗಲಿದೆ. ಹಾಗಾಗಿ, ಭವಿಷ್ಯದಲ್ಲಿ ಭಾರತದ ಜತೆಗೆ ನಾವು ಸಂಬಂಧವನ್ನು ಹೆಚ್ಚಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಹಲವು ಕಂಪನಿಗಳ ಸಿಇಒಗಳನ್ನು ಜತೆಗೆ ಅವರು ಸಭೆ ನಡೆಸಿದ್ದರು. ಈ ವೇಳೆ ಅಮೆಜಾನ್ ಸಿಇಒ ಆ್ಯಂಡಿ ಜಾಸ್ಸಿ ಕೂಡ ಇದ್ದರು. ಮಾತುಕತೆ ಸಮಯದಲ್ಲಿ ಉಭಯ ನಾಯಕರು ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ರಫ್ತುಗಳನ್ನು ಉತ್ತೇಜಿಸುವುದು, ಡಿಜಿಟಲೀಕರಣವನ್ನು ಅಳವಡಿಸಿಕೊಳ್ಳುವುದು ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ವ್ಯಕ್ತಿಗಳು ಮತ್ತು ಸಣ್ಣ ಉದ್ಯಮಗಳನ್ನು ಸಬಲೀಕರಣಗೊಳಿಸುವಂತಹ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಈ ಸುದ್ದಿಯನ್ನೂ ಓದಿ: NIT Patna: ಎನ್ಐಟಿ ಪಾಟ್ನಾ ವಿದ್ಯಾರ್ಥಿಗೆ 1.8 ಕೋಟಿ ರೂಪಾಯಿ ಜಾಬ್ ಆಫರ್! ಅಮೆಜಾನ್‌ನಲ್ಲಿ ಕೆಲಸ

ಅಮೆಜಾನ್ ಕಂಪನಿಯು ಭಾರತದಲ್ಲಿ 2025ರ ಹೊತ್ತಿಗೆ ಸುಮಾರು 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನು ಹಾಕಿಕೊಂಡಿದೆ. ಅಷ್ಟೇ ಅಲ್ಲದೇ, 10 ದಶಲಕ್ಷ ಸಣ್ಣ ವ್ಯಾಪಾರಸ್ಥರಿಗೆ ನೆರವು ಒದಗಿಸುವುದು ಹಾಗೂ 20 ಶತಕೋಟಿ ರಫ್ತು ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಅಮೆಜಾನ್ ಸಿಇಒ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಮುಂಚೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರು ಈ ವಿಷಯವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version