Site icon Vistara News

Taiwan: 1 ಲಕ್ಷ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾದ ತೈವಾನ್

taiwan

taiwan

ನವದೆಹಲಿ: ಇತ್ತೀಚೆಗೆ ಪ್ಯಾಲೆಸ್ತೀನ್‌ (Palestine) ಕಾರ್ಮಿಕರ ಜಾಗದಲ್ಲಿ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್‌ (Israel) ಮುಂದಾಗಿತ್ತು. ಇದರ ಬೆನ್ನಲ್ಲೇ ತೈವಾನ್‌ (Taiwan) ಕೂಡ ಭಾರತೀಯ ಕಾರ್ಮಿಕರನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ತೋರಿದೆ. ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ತೈವಾನ್ 1 ಲಕ್ಷ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಮಿಕರನ್ನು ನೇಮಿಸಿಕೊಳ್ಳುವ ಕುರಿತು ಡಿಸೆಂಬರ್‌ ಆರಂಭದಲ್ಲಿ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕುವ ಸಾಧ್ಯತೆ ಇದೆ. ತೈವಾನ್‌ನಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಭಾರತದಲ್ಲಿ ಉದ್ಯೋಗಾವಕಾಶಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಲ್ಲಿನ ಯುವ ಜನತೆಯ ಈ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿಯೂ ಈ ಯೋಜನೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಎರಡೂ ದೇಶಗಳು 2020ರಿಂದ ಈ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿದ್ದರೂ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದೀಗ ಒಪ್ಪಂದ ಜಾರಿಗೆ ಕಾಲ ಕೂಡಿ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯರಿಗೆ ಉತ್ತಮ ಅವಕಾಶ

ಒಪ್ಪಂದದಿಂದಾಗಿ ಭಾರತೀಯ ಕಾರ್ಮಿಕರು ತೈವಾನ್‌ನ ಕಾರ್ಖಾನೆಗಳು, ನಿರ್ಮಾಣ ಸೈಟ್‌, ಹೊಲಗಳು, ಮೀನುಗಾರಿಕಾ ಕ್ಷೇತ್ರ ಮತ್ತು ಆಸ್ಪತ್ರೆಗಳಲ್ಲಿ ಉದ್ಯೋಗವನ್ನು ಪಡೆಯುವ ನಿರೀಕ್ಷೆಯಿದೆ. ಭಾರತೀಯ ಕಾರ್ಮಿಕರನ್ನು ಆಕರ್ಷಿಸಲು ತೈವಾನ್ ಸಮಾನ ವೇತನ ಮತ್ತು ವಿಮಾ ಪ್ರಯೋಜನಗಳನ್ನು ನೀಡುತ್ತಿದೆ. 790 ಬಿಲಿಯನ್ ಡಾಲರ್ ಆರ್ಥಿಕತೆಯನ್ನು ಉಳಿಸಿಕೊಳ್ಳಲು ತೈವಾನ್‌ಗೆ ಹೆಚ್ಚಿನ ಕಾರ್ಮಿಕರ ಅಗತ್ಯವಿದೆ. ದೇಶವು 2025ರ ವೇಳೆಗೆ “ಸೂಪರ್ ಏಜ್ಡ್” ಸಮಾಜವಾಗಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಉಭಯ ದೇಶಗಳ ನಡುವಿನ ವ್ಯಾಪಾರವು 2001ರಲ್ಲಿ 1.19 ಬಿಲಿಯನ್ ಡಾಲರ್ ಇತ್ತು. 2022ರಲ್ಲಿ 8.4 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಅಂದರೆ ಸುಮಾರು ಏಳು ಪಟ್ಟು ಹೆಚ್ಚಾಗಿದೆ.

ಚೀನಾದೊಂದಿಗೆ ಸಂಘರ್ಷದ ಸಾಧ್ಯತೆ?

ಸದ್ಯ ಭಾರತದೊಂದಿಗಿನ ತೈವಾನ್‌ನ ಈ ಒಪ್ಪಂದ ಚೀನಾದೊಂದಿಗಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಬಹುದು. ಬೀಜಿಂಗ್ ತನ್ನ ಸ್ವಂತ ಭೂಪ್ರದೇಶವೆಂದು ಪರಿಗಣಿಸುವ ಸ್ವಯಂ-ಆಡಳಿತದ ದ್ವೀಪವಾದ ತೈವಾನ್‌ನೊಂದಿಗೆ ಯಾವುದೇ ಅಧಿಕೃತ ಸಂವಹನ ನಡೆಸಲು ನಿರಾಕರಿಸುವ ಸಾಧ್ಯತೆ ಇದೆ.

Israel- Palestine War: 1 ಲಕ್ಷ ಪ್ಯಾಲೆಸ್ತೀನ್‌ ಕಾರ್ಮಿಕರ ಬದಲಿಗೆ ಭಾರತೀಯರ ನೇಮಕ: ಇಸ್ರೇಲ್‌

ವಯಸ್ಸಾದ ಉದ್ಯೋಗಿಗಳನ್ನು ಹೊಂದಿರುವ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಉದ್ಯೋಗ ಒಪ್ಪಂದಗಳನ್ನು ಮಾಡಿಕೊಳ್ಳಲು ಭಾರತ ಸರ್ಕಾರ ಆಸಕ್ತಿ ವಹಿಸಿದೆ ಎಂದು ಮೂಲಗಳು ತಿಳಿಸಿವೆ. ಇಲ್ಲಿಯವರೆಗೆ ಜಪಾನ್, ಫ್ರಾನ್ಸ್ ಮತ್ತು ಇಂಗ್ಲೆಂಡ್‌ ಸೇರಿದಂತೆ 13 ದೇಶಗಳೊಂದಿಗೆ ಭಾರತ ಇಂತಹ ಒಪ್ಪಂದಗಳಿಗೆ ಸಹಿ ಹಾಕಿದೆ. ಮಾತ್ರವಲ್ಲ ನೆದರ್‌ಲ್ಯಾಂಡ್‌, ಗ್ರೀಸ್, ಡೆನ್ಮಾರ್ಕ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ ಮುಂತಾದ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.

ಭಾರತ-ತೈವಾನ್ ಉದ್ಯೋಗ ಒಪ್ಪಂದದ ಮಾತುಕತೆಯು ಅಂತಿಮ ಹಂತದಲ್ಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಭಾರತದ ನಿರುದ್ಯೋಗ ಸಮಸ್ಯೆಗೆ ಇದು ಒಂದು ಹಂತದ ಪರಿಹಾರ ಒದಗಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version