ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (ಜೆ.ಪಿ. ನಡ್ಡಾ) ಒಬಿಸಿ ಮೋರ್ಚಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಡ್ಡಾ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು. ಯಲಹಂಕದ ಹೋಟೆಲ್ ರಮಡಾದಲ್ಲಿ ನಡೆಯುತ್ತಿರುವ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಶಿಕ್ಷಣ ವರ್ಗದ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ. ರೆಸಾರ್ಟ್‌ಗೆ ಆಗಮಿಸಿದ ನಡ್ಡಾ ಅವರನ್ನು ಬಿಜೆಪಿ ಕಾರ್ಯಕರ್ತೆಯರು ಪೂರ್ಣಕುಂಭದೊಂದಿಗೆ ಬರಮಾಡಿಕೊಂಡರು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವ ಅಶ್ವತ್ಥನಾರಾಯಣ, ಸಚಿವ ಮುನಿರತ್ನ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಪ್ರಭಾರಿ ಅರುಣ್ ಸಿಂಗ್ ಸೇರಿ ಅನೇಕರು ಸ್ವಾಗತಿಸಿದರು. ಈಗಾಗಲೆ ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್ ಸಭೆಯಲ್ಲಿ ಶುಕ್ರವಾರವೇ ಪಾಲ್ಗೊಂಡಿದ್ದಾರೆ.
ಒಬಿಸಿ ವೋಟ್‌ಬ್ಯಾಂಕ್ ಮೇಲೆ ಕಣ್ಣು
ಮುಖ್ಯವಾಗಿ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳಲ್ಲಿ ಒಬಿಸಿ ಸಮುದಾಯವನ್ನು ಬಿಜೆಪಿಯ ಭದ್ರ ವೋಟ್ ಬ್ಯಾಂಕ್ ಆಗಿ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಅನೇಕ ವರ್ಷಳಿಂದಲೂ ಒಬಿಸಿ ಸಮುದಾಯಕ್ಕೆ ವಿವಿಧ ಯೋಜನೆಗಳನ್ನು ಬಿಜೆಪಿ ಸರ್ಕಾರ ರೂಪಿಸುತ್ತಿದೆ. ಸಭೆಯಲ್ಲಿ ಶುಕ್ರವಾರ ಮಾತನಾಡಿದ್ದ ಅರುಣ್ ಸಿಂಗ್, ʼಒಬಿಸಿ ಸಮುದಾಯವನ್ನು ಗುರುತಿಸಲು ರಾಜ್ಯಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಗರಿಷ್ಠ ಸಂಖ್ಯೆಯ ಒಬಿಸಿ ಸಮುದಾಯದ ಸಚಿವರನ್ನು ಕೇಂದ್ರ ಸರ್ಕಾರದ ಸಚಿವಸಂಪುಟದಲ್ಲಿ ಸೇರಿಸಿರುವುದು ಮೋದಿ ಅವರ ದೂರದೃಷ್ಟಿಗೆ ಮತ್ತು ಎಲ್ಲರನ್ನೂ ಮುಖ್ಯವಾಹಿನಿಗೆ ತರುವ ಚಿಂತನೆಗೆ ಸಾಕ್ಷಿಯಂತಿದೆʼ ಎಂದಿದ್ದರು.
ʼಕೇಂದ್ರ ಸಚಿವಸಂಪುಟದಲ್ಲಿ ಅತಿ ಹೆಚ್ಚು ದಲಿತರು ಮತ್ತು ಒಬಿಸಿ ಸಚಿವರಿಗೆ ಅವಕಾಶ ನೀಡಿದ ಮೋದಿಜಿ ಅವರ ನೇತೃತ್ವದ ಸರಕಾರವು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ನೀಡಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನ ಸಿಗುತ್ತಿದೆ. ಸ್ವಂತ ಉದ್ಯೋಗ ಸೇರಿದಂತೆ ವಿವಿಧ ರಂಗಗಳಲ್ಲಿ ಒಬಿಸಿ ವರ್ಗಕ್ಕೆ ನೆರವಾಗಲು ಕೇಂದ್ರದ ಬಿಜೆಪಿ ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇದರ ಫಲವಾಗಿ ಬಿಜೆಪಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳನ್ನು ಗೆದ್ದುಕೊಂಡಿದೆʼ ಎಂದು ಅರುಣ್ ಸಿಂಗ್ ವಿವರಿಸಿದ್ದರು.
ದೇಶಾದ್ಯಂತ ಅನೇಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಬೇಕಿದೆ. ಬಿಬಿಎಂಪಿ ಸೇರಿ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಶೀಘ್ರದಲ್ಲೆ ನಡೆಸಬೇಕಿದೆ. ಆದರೆ ಇನ್ನೂ ಒಬಿಸಿ ಮೀಸಲಾತಿ ಆಗಿಲ್ಲ ಎಂಬ ಕಾರಣವನ್ನು ನೀಡಿ ಬಿಜೆಪಿ ಸೇರಿ ಯಾವ ಸರ್ಕಾರಗಳೂ ಚುನಾವಣೆ ನಡೆಸಲು ಸಿದ್ಧವಾಗಿಲ್ಲ. ಒಬಿಸಿ ಮೀಸಲಾತಿ ಇಲ್ಲದೆ ಯಾವುದೇ ಕಾರಣಕ್ಕೆ ಚುನಾವಣೆ ನಡೆಸುವುದಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅನೇಕ ಬಾರಿ ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿರುವ ಒಬಿಸಿ ಸಮುದಾಯವನ್ನು ಚುನಾವಣೆಯಲ್ಲಿ ತನ್ನತ್ತ ಸೆಳೆಯಲು ಬಿಜೆಪಿ ಬಲವಾದ ಪ್ರಯತ್ನ ನಡೆಸುತ್ತಿದೆ.
ಚಿತ್ರದುರ್ಗಕ್ಕೆ ಭೇಟಿ
ಬೆಂಗಳೂರಿನ ಕಾರ್ಯಕ್ರಮದ ನಂತರ ಚಿತ್ರದುರ್ಗದಲ್ಲಿ ನಡೆಯುವ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಮಾವೇಶದಲ್ಲಿ ಜೆ.ಪಿ. ನಡ್ಡಾ ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆ ವೇಳೆಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ ದೆಹಲಿಗೆ ವಾಪಸಾಗಲಿದ್ದಾರೆ.