ಬೆಂಗಳೂರು: ಕೆಲವು ವರ್ಷ ಕಾಂಗ್ರೆಸ್ ನ ರಾಷ್ಟ್ರ ಮಟ್ಟದ ಸೋಷಿಯಲ್ ಮೀಡಿಯಾ ಘಟಕದಲ್ಲಿ ಮುಂಚೂಣಿಯಲ್ಲಿದ್ದ ನಟಿ ರಮ್ಯಾ ಈಗ ರಾಜ್ಯ ಕಾಂಗ್ರೆಸ್ ನಲ್ಲಿ ಸುಂಟರಗಾಳಿ ಎಬ್ಬಿಸುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ ಬಿ ಪಾಟೀಲ್ ಮತ್ತು ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವ ಡಾ. ಅಶ್ವತ್ಥ್ ನಾರಾಯಣ್ ಪರಸ್ಪರ ಭೇಟಿಯಾದರೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಏನು ಕಷ್ಟ ಎಂಬ ಧಾಟಿಯಲ್ಲಿ ಬುಧವಾರ ಟ್ವೀಟ್ ಮಾಡಿ ಕಿಡಿ ಹಾರಿಸಿದ್ದ ರಮ್ಯಾ, ಗುರುವಾರವೂ ರಾಜಕೀಯಕ್ಕೆ ಸಂಬಂಧಿಸಿ ಮತ್ತಷ್ಟು ಟ್ವೀಟ್ ಮಾಡಿ ಚರ್ಚೆ ಹುಟ್ಟು ಹಾಕಿದ್ದಾರೆ.
ರಮ್ಯಾ ಕಾಂಗ್ರೆಸ್ ನಿಂದ 8 ಕೋಟಿ ರೂ. ಪಡೆದು ಪರಾರಿಯಾಗಿದ್ದರು ಎಂಬ ಕೆಲವು ಕಾಂಗ್ರೆಸ್ ಕಾರ್ಯಕರ್ತರ ಆರೋಪಕ್ಕೆ ಇವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ನಾನು ಯಾರಿಂದಲೂ ಹಣ ಪಡೆದಿಲ್ಲ. ನಾನು ಇಷ್ಟು ದಿನ ಮೌನವಾಗಿ ಇದ್ದದ್ದೇ ತಪ್ಪು. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ರಮ್ಯಾ ಅವರು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರ ಮೊರೆ ಹೋಗಿದ್ದಾರೆ.
ಗೌರವಾನ್ವಿತ ವೇಣುಗೋಪಾಲ್ ಅವರೇ, ನೀವು ಮುಂದೆ ಯಾವತ್ತಾದರು ಕರ್ನಾಟಕಕ್ಕೆ ಬಂದಾಗ ದಯವಿಟ್ಟು ಮಾಧ್ಯಮಗಳಿಗೆ ಈ ಕುರಿತು ಸ್ಪಷ್ಟನೆ ನೀಡಿ. ಈ ರೀತಿ ಜೀವನದುದ್ದಕ್ಕೂ ಅಪವಾದ ಮತ್ತು ಟ್ರೋಲ್ ಗಳಿಗೆ ಈಡಾಗಲು ನನ್ನಿಂದ ಆಗದು ಎಂದು ರಮ್ಯಾ ಬೇಸರದ ದನಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಬೆಂಬಲಿಸಿದವರು ರಾಹುಲ್ ಮಾತ್ರ
ಕಾಂಗ್ರೆಸ್ ನಲ್ಲಿ ನನಗೆ ಅವಕಾಶ ಕೊಟ್ಟವರು ಮತ್ತು ನನ್ನ ಪರವಾಗಿ ನಿಂತವರು ರಾಹುಲ್ ಗಾಂಧಿ ಮಾತ್ರ. ಉಳಿದಂತೆ, ನನಗೆ ಅವಕಾಶ ನೀಡಿದೆ ಎನ್ನುವವರೆಲ್ಲ ಅವಕಾಶವಾದಿಗಳು. ಇಂಥ ಅವಕಾಶವಾದಿಗಳೆಲ್ಲ ಕೇವಲ ನನ್ನ ಬೆನ್ನಿಗೆ ಇರಿದವರು ಮತ್ತು ನನ್ನನ್ನು ಮೂಲೆಗುಂಪು ಮಾಡಲು ಯತ್ನಿಸಿದವರು ಎಂದು ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂ ಬಿ ಪಾಟೀಲ್ ಮತ್ತು ಅಶ್ವತ್ಥ ನಾರಾಯಣ್ ಭೇಟಿ ಕುರಿತು ಟ್ವೀಟ್ ಮಾಡಿದ ತಕ್ಷಣ ಡಿ ಕೆ ಶಿವಕುಮಾರ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವಹೇಳನ ಮಾಡಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ರಮ್ಯಾ ಈಗ ಡಿ ಕೆ ಶಿವಕುಮಾರ್ ಬೆಂಬಲಿಗರಿಗೆ ಕಟುವಾದ ಟ್ವೀಟ್ ಮೂಲಕ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ.
ಡಿಕೆಶಿಯೇ ಗಾಡ್ ಫಾದರ್?
ಸ್ಯಾಂಡಲ್ ವುಡ್ ತಾರೆಯಾಗಿ ದಶಕದ ಕಾಲ ಮೆರೆದಿದ್ದ ರಮ್ಯಾ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಜಯಭೇರಿ ಬಾರಿಸಿದ್ದರು. ರಮ್ಯಾ ಕಾಂಗ್ರೆಸ್ ಸೇರಲು ಡಿ ಕೆ ಶಿವಕುಮಾರ್ ಪ್ರಭಾವ ಕಾರಣ ಎನ್ನಲಾಗುತ್ತಿತ್ತು. ರಮ್ಯಾಗೆ ಡಿಕೆಶಿ ಗಾಡ್ ಫಾದರ್ ಎಂಬ ಮಾತು ಕೇಳಿ ಬರುತ್ತಿತ್ತು. 2014ರಲ್ಲಿ ನರೇಂದ್ರ ಮೋದಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದ ಸಂದರ್ಭದಲ್ಲಿ ರಮ್ಯಾ ಕಾಂಗ್ರೆಸ್ ನ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥೆಯಾಗಿ ಭಾರಿ ಸುದ್ದಿಯಲ್ಲಿದ್ದರು. ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರಿಗೆ ರಮ್ಯಾ ಪರಮಾಪ್ತೆ ಎಂಬ ಮಾತು ಜನಜನಿತವಾಗಿತ್ತು. ನಾಲ್ಕೈದು ವರ್ಷ ಅಜ್ಞಾತವಾಗಿದ್ದ ರಮ್ಯಾ ಈಗ ಡಿಢೀರ್ ಪ್ರತ್ಯಕ್ಷವಾಗಿ ಕಾಂಗ್ರೆಸ್ ಪಕ್ಷದೊಳಗೇ ‘ಹೇಳಿಕೆಗಳ ಪಟಾಕಿ’ ಹಚ್ಚುತ್ತಿರುವುದು ಕುತೂಹಲ ಮೂಡಿಸಿದೆ.