ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿಧಾನಸಭೆ ಕ್ಷೇತ್ರವಾದ ವರುಣದಲ್ಲಿ (Varuna) ಶುದ್ಧ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದು, ತಗಡೂರು ಗ್ರಾಮದಲ್ಲಿ ಇದರಿಂದ ಜನ ಕಾಲರಾಗೆ ತುತ್ತಾಗುತ್ತಿದ್ದಾರೆ. ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ, ಕಲುಷಿತ ನೀರು ಸೇವಿಸಿದ ಕಾರಣ 25 ಗ್ರಾಮಸ್ಥರು ಸೇರಿ 114 ಮಂದಿ ಕಾಲರಾ (Cholera) ಕಾಯಿಲೆಯಿಂದ ಬಳಲುತ್ತಿದ್ದಾರೆ. ವಾಂತಿ-ಭೇದಿಯಿಂದ ಜನ ತತ್ತರಿಸಿ ಹೋಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ತಗಡೂರು ಗ್ರಾಮವು ನಂಜನಗೂಡು ತಾಲೂಕಿಗೆ ಸೇರಿದರೂ ವರುಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ತಗಡೂರು ಗ್ರಾಮ ಪಂಚಾಯಿತಿಯ 1, 2 ಹಾಗೂ 3ನೇ ವಾಸಿಸುತ್ತಿರುವ ಜನರು ಕಾಲರಾಗೆ ತುತ್ತಾಗಿದ್ದಾರೆ. 114 ರೋಗಿಗಳಲ್ಲಿ ಐವರ ಸ್ಥಿತಿ ಗಂಭೀರವಾದ ಕಾರಣ ಅವರನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರಿಗೆ ತಗಡೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಮಧ್ಯೆಯೇ, ಕಾಲರಾ ಹರಡಲು ಅಧಿಕಾರಿಗಳ ನಿರ್ಲಕ್ಷ್ಯವೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
12 ಕೈ ಪಂಪ್‌ಗಳಿದ್ದರೂ ಪ್ರಯೋಜನ ಇಲ್ಲ
ಗ್ರಾಮದಲ್ಲಿ 12 ಕೈ ಪಂಪ್‌ಗಳಿದ್ದು, ನಾಲ್ಕು ಕೈಪಂಪ್‌ಗಳ ನೀರು ಕುಡಿಯಲು ಯೋಗ್ಯವಿಲ್ಲ. ಆತಂಕಕಾರಿ ವರದಿ ಇದ್ದರೂ ತಗಡೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಹಾಗಾಗಿ, ಕಲುಷಿತ ನೀರು ಸೇವಿಸಿ ನೂರಾರು ಜನ ಅಸ್ವಸ್ಥರಾಗಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ದಿಢೀರ್ ಕ್ರಮಕ್ಕೆ ಮುಂದಾದ ಅಧಿಕಾರಿಗಳು
ಗ್ರಾಮದಲ್ಲಿ ನೂರಾರು ಜನ ಕಾಲರಾಗೆ ತುತ್ತಾಗಿರುವ ಸುದ್ದಿ ತಿಳಿಯುತ್ತಲೇ ಅಧಿಕಾರಿಗಳ ದಂಡೇ ಗ್ರಾಮಕ್ಕೆ ತೆರಳಿದೆ. ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕುಮಾರಸ್ವಾಮಿ, ನಂಜನಗೂಡು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಜಿಲ್ಲಾ ಕಾಲರಾ ವೈದ್ಯಾಧಿಕಾರಿ ಡಾ. ಪುಟ್ಟತಾಯಮ್ಮ, ತಾಲೂಕು ವೈದ್ಯಾಧಿಕಾರಿ ಡಾ. ಈಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಗ್ರಾಮದಲ್ಲಿರುವ ಸಾರ್ವಜನಿಕರಿಗೆ ಕೂಡ ಪ್ರತಿರೋಧಕ ಚುಚ್ಚುಮದ್ದು ನೀಡಲಾಗುತ್ತಿದೆ. ಪ್ರತಿ ಮನೆ ಮನೆಗೆ ಒಆರ್‌ಎಸ್ ಪೌಡರ್ ವಿತರಣೆ ಮಾಡಲಾಗಿದೆ. ಮನೆಯಲ್ಲಿ ಬಿಸಿ ನೀರು ಸೇವನೆ ಮಾಡಲು ಪ್ರತ್ಯೇಕವಾಗಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ.
ಗ್ರಾಮದಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದು, ದಿನಕ್ಕೆ ಮೂರು ಬಾರಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಜತೆಗೂಡಿ ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಇಷ್ಟಾದರೂ ಪಿಡಿಒ ದಿವಾಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ನಾಪತ್ತೆಯಾಗಿದ್ದು, ಸಂಬಂಧಪಟ್ಟ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: SSLC Grace Marks: ಯಾರನ್ನು ಕೇಳಿ ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿರಿ? ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ!