ಬೆಂಗಳೂರು: ಅನೇಕ ವರ್ಷಗಳಿಂದಲೂ ಮಾಂಸದ ವ್ಯಾಪಾರ ಮಾಡುವಲ್ಲಿ ಮುಸ್ಲಿಂ ಸಮುದಾಯದವರೇ ಮುಂದೆ ಇದ್ದಾರೆ. ನಾವೂ ಅವರಿಂದಲೇ ಮಾಂಸ ಖರೀದಿ ಮಾಡುತ್ತೇವೆ. ಆದರೆ ಬಿಜೆಪಿಯವರು ವಿನಾಕಾರಣ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರರ ಜತೆಗೆ ಸಿದ್ದರಾಮಯ್ಯ ಮಾತನಾಡಿದರು. ಹಲಾಲ್ ರೀತಿಯಲ್ಲಿ ಮಾಂಸ ಕತ್ತರಿಸಿ ತಿಂದರೆ ಆರೋಗ್ಯಕ್ಕೆ ಉತ್ತಮ ಎನ್ನುವುದು ಮುಸ್ಲಿಮರ ನಂಬಿಕೆ. ಅನೇಕ ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ನಾವೆಲ್ಲರೂ ಅವರಿಂದಲೇ ಖರೀದಿ ಮಾಡುತ್ತೇವೆ. ಮಾಂಸ ತಿನ್ನದೇ ಇರುವವರು ಅನಗತ್ಯವಾಗಿ ಈ ವಿಚಾರವನ್ನು ವಿವಾದ ಮಾಡುತ್ತಿದ್ದಾರೆ. ಅದೇ ರೀತಿ ಮಾವಿನ ವ್ಯಾಪಾರದಲ್ಲೂ ಮುಸ್ಲಿಂ ಸಮುದಾಯದವರೆ ಹೆಚ್ಚಿದ್ದಾರೆ. ಇದರಲ್ಲಿ ನಾವು ಮಧ್ಯಪ್ರವೇಶ ಮಾಡಲು ಆಗುತ್ತದೆಯೇ?
ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ. ಪೆಟ್ರೋಲ್ ಬೆಲೆ ಕಳೆದೊಂದು ವಾರದಲ್ಲಿ ₹9 ಕ್ಕಿಂತ ಹೆಚ್ಚಾಗಿದೆ, ರಸಗೊಬ್ಬರದ ಬೆಲೆ ₹150 ಹೆಚ್ಚಳವಾಗಿದೆ. ಗ್ಯಾಸ್, ವಿದ್ಯುತ್, ಅಡುಗೆ ತೈಲ, ಸಿಮೆಂಟ್, ಕಬ್ಬಿಣ, ಔಷಧಗಳ ಬೆಲೆಯೂ ಹೆಚ್ಚಳವಾಗಿದೆ. ಅದೆಲ್ಲದರ ಜತೆಗೆ ಭ್ರಷ್ಟಾಚಾರ ಮಿತಿಮೀರಿದೆ. ಇಂತಹ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಬಿಜೆಪಿಯವರು ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ.
ಸಮಾಜವನ್ನು ಒಡೆದು ಮತಗಳನ್ನು ಕ್ರೋಢೀಕರಣ ಮಾಡಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಧಾರ್ಮಿಕ ವಿಚಾರಗಳನ್ನು ಕೆರಳಿಸಿ ಹಲಾಲ್, ಮಾವಿನ ವ್ಯಾಪಾರ, ಮಸೀದಿ ಮೈಕ್ ಮುಂತಾದ ವಿಚಾರಗಳಲ್ಲಿ ಕೆರಳಿಸವುದು ಮುಂದೊಂದು ದಿನ ಬಿಜೆಪಿಯವರಿಗೇ ತಿರುಗುಬಾಣವಾಗುತ್ತದೆ. ಜನರು ಇದನ್ನೆಲ್ಲ ನೋಡುತ್ತಿರುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಅಸಮರ್ಥ ಗೃಹಸಚಿವ ಆರಗ
ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಅತ್ಯಂತ ಅಸಮರ್ಥರು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಉರ್ದು ಬಾರಲಿಲ್ಲ ಎಂಬ ಕಾರಣಕ್ಕೆ ಕೊಲೆ ಆಗಿದೆ ಎಂಬ ಗೃಹಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇವರೊಬ್ಬ ಅತ್ಯಂತ ಅಸಮರ್ಥ ಗೃಹಸಚಿವ. ಅವರಿಗೆ ಅನುಭವವೂ ಇಲ್ಲ, ಇಲಾಖೆಯನ್ನು ನಿಭಾಯಿಸುವುದೂ ಗೊತ್ತಿಲ್ಲ.
ಮೈಸೂರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವಾದಾಗ, ಆ ವೇಳೆಯಲ್ಲಿ ಯುವತಿ ಏಕೆ ಅಲ್ಲಿಗೆ ಹೋಗಬೇಕಿತ್ತು ಎಂದಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್‌ನವರು ನನ್ನನ್ನೇ ರೇಪ್ ಮಾಡುತ್ತಿದ್ದಾರೆ ಎನ್ನುವಂತಹ ಮಾತನ್ನಾಡಿದ್ದರು. ಇದೆಲ್ಲದರ ಜತೆಗೆ, ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದು ಮಂಗಳೂರಿನಲ್ಲಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ನೈತಿಕ ಪೊಲೀಸ್‌ಗಿರಿ ಮಾಡುವವರಿಗೆ ಇದರಿಂದ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಕದಡಿ ಅವುಗಳನ್ನು ಮತಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಳ್ಳುವುದು ಬಿಜೆಪಿ ಹುನ್ನಾರ ಎಂದು ಹೇಳಿದರು.