Site icon Vistara News

ಸಂಪುಟ ವಿಸ್ತರಣೆ ಬಗ್ಗೆ ಕರ್ನಾಟಕದಲ್ಲೆ ತೀರ್ಮಾನ: CM ಬೊಮ್ಮಾಯಿಗೆ ತಿಳಿಸಿದ ವರಿಷ್ಠರು

basavaraja bommai sad and nalin kumar kateel

ಬೆಂಗಳೂರು: ಚುನಾವಣೆಗೆ ಇನ್ನೊಂದು ವರ್ಷಕ್ಕಿಂತಲೂ ಕಡಿಮೆ ಅವಧಿ ಇರುವಂತೆ ರಾಜ್ಯ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗುವುದು ಖಚಿತವಾಗಿದ್ದು, ನವದೆಹಲಿಯ ಬದಲಿಗೆ ಬೆಂಗಳೂರಿನಲ್ಲೆ ಕುಳಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭಾರತೀಯ ಜನತಾ ಪಕ್ಷದ(BJP) ವರಿಷ್ಠರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಸಿದ್ದಾರೆ.

ಎರಡು ದಿನ ನವದೆಹಲಿ ಭೇಟಿಗೆ ತೆರಳಿದ್ದ ಬೊಮ್ಮಾಯಿ ಅವರು, ಬಿಜೆಪಿ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಜತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ರಕ್ಷಣಾ ಸಚಿವ ರಾಜನಾಥ ಸಿಂಗ್‌, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಅನೇಕ ವಿಚಾರಗಳಲ್ಲಿ ಮಾತುಕತೆ ನಡೆಸಿದ್ದಾರೆ.

ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಕುರಿತು ನಡ್ಡಾ ಅವರ ಜತೆಗೆ ಬೊಮ್ಮಾಯಿ ಚರ್ಚಿಸಿದ್ದಾರೆ. ಎಲ್ಲ ಮಾಹಿತಿಗಳನ್ನೂ ಹಾಗೂ ಮುಖ್ಯಮಂತ್ರಿಯವರ ಅಭಿಪ್ರಾಯಗಳನ್ನೂ ಸ್ವೀಕರಿಸಿದ್ದಾರೆ. ಆದರೆ ನವದೆಹಲಿಯಲ್ಲಿ ಈ ವಿಚಾರ ತೀರ್ಮಾನ ಮಾಡುವುದು ಬೇಡ. ಚುನಾವಣೆ ಹತ್ತಿರದಲ್ಲಿರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಅಸಮಧಾನಗಳು ಹಾಗೂ ಭಿನ್ನಾಭಿಪ್ರಾಯಗಳು ಉಂಟಾದರೆ ಅದನ್ನು ಶಮನ ಮಾಡುವಲ್ಲೇ ನಮ್ಮ ಸಮಯ, ಶ್ರಮ ವ್ಯರ್ಥವಾಗುತ್ತದೆ. ಹೇಗಿದ್ದರೂ ಏಪ್ರಿಲ್‌ 16 ಹಾಗೂ 17ರಂದು ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ತರಾತುರಿಯಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಿದರೆ ಕಾರ್ಯಕಾರಿಣಿ ಮೇಲೆಯೂ ಪರಿಣಾಮ ಬೀಡಬಹುದು ಎಂದು ವರಿಷ್ಠರು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಹೆಚ್ಚಿನ ಓದು: ಕರ್ನಾಟಕದಲ್ಲಿ 75 ಕೆರೆ ಅಭಿವೃದ್ಧಿಪಡಿಸುವ ಟಾಸ್ಕ್‌ ನೀಡಿದ ಮೋದಿ: CM ಬೊಮ್ಮಾಯಿಗೆ ಸೂಚನೆ

ಕಾರ್ಯಕಾರಿಣಿಯ ಸಂದರ್ಭದಲ್ಲಿ ಚರ್ಚೆ

ಹೇಗಿದ್ದರೂ ರಾಜ್ಯ ಕಾರ್ಯಕಾರಿಣಿ ಸಭೆಗೆ ಕೇಂದ್ರದ ವರಿಷ್ಠರು ಆಗಮಿಸಲಿದ್ದಾರೆ. ಜೆ.ಪಿ. ನಡ್ಡಾ, ಬಿ.ಎಲ್‌. ಸಂತೋಷ್‌ ಸೇರಿ ಅನೇಕರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದ ಬಿಜೆಪಿ ನಾಯಕರುಗಳು, ಸಂಘಟನಾ ಕಾರ್ಯದರ್ಶಿ ಸೇರಿ ಅನೇಕರ ಜತೆಗೆ ಅನೌಪಚಾರಿಕ ಹಾಗೂ ವೈಯಕ್ತಿಕ ಮಾತುಕತೆ ನಡೆಸೋಣ. ಅವರೆಲ್ಲರ ಅಭಿಪ್ರಾಯವನ್ನೂ ಸ್ವೀಕರಿಸೋಣ. ಕೆಲವರು ಸಚಿವರಾಗಿದ್ದುಕೊಂಡು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು, ಇನ್ನು ಕೆಲವರು ಸಂಘಟನೆಯನ್ನು ಸದೃಢವಾಗಿಸಿ ಚುನಾವಣೆಗೆ ಕಾರ್ಯಕರ್ತರನ್ನು ಸಿದ್ಧಗೊಳಿಸಬೇಕು. ಎರಡೂ ನಿಟ್ಟಿನಲ್ಲಿ ಅನುಕೂಲಕರ ನಿರ್ಧಾರ ಕೈಗೊಳ್ಳೋಣ ಎಂದು ಬೊಮ್ಮಾಯಿ ಅವರಿಗೆ ವರಿಷ್ಠರು ತಿಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಬಜೆಟ್‌ ಅನುಷ್ಠಾನ ಮುಖ್ಯ

ಇತ್ತೀಚೆಗಷ್ಟೆ ಸಮತೋಲಿತ ಹಾಗೂ ಎಲ್ಲ ವರ್ಗ, ಸಮುದಾಯಗಳನ್ನೂ ಒಳಗೊಳ್ಳುವ ಮಹತ್ವಾಕಾಂಕ್ಷಿ ಬಜೆಟ್ಟನ್ನು ಬಸವರಾಜ ಬೊಮ್ಮಾಯಿ ಮಂಡಿಸಿದ್ದಾರೆ. ಚುನಾವಣೆಗೆ ತೆರಳುವುದಕ್ಕೂ ಮುನ್ನ ಬಜೆಟ್‌ ಘೊಷಣೆಗಳ ಪರಿಣಾಮಕಾರಿ ಅನುಷ್ಠಾನ ಮುಖ್ಯ ಎನ್ನುವುದನ್ನು ನವದೆಹಲಿ ಪ್ರವಾಸದ ವೇಳೆ ಬೊಮ್ಮಾಯಿ ಅವರಿಗೆ ಬಿಜೆಪಿ ವರಿಷ್ಠರು ಹಾಗೂ ವಿವಿಧ ಸಚಿವರು ಸೂಚ್ಯವಾಗಿ ತಿಳಿಸಿದ್ದಾರೆ. ಜತೆಗೆ, ಬಜೆಟ್‌ ಘೊಷಣೆಗಳ ಅನುಷ್ಠಾನಕ್ಕೆ ತಮ್ಮ ಇಲಾಖೆಗಳಿಂದ ಅಗತ್ಯ ಸಹಕಾರವನ್ನು ನೀಡುವುದಾಗಿಗೂ ಭರವಸೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳ ಆದೇಶಗಳನ್ನು ನೀಡಿ ಅವುಗಳ ಅನುಷ್ಠಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದುʼ ಎಂದಿದ್ದಾರೆ.

Exit mobile version