Site icon Vistara News

ಶ್ರೀರಾಮನ ಹೆಸರೇಳಿಕೊಂಡು ರಾವಣರಾಜ್ಯ ಸೃಷ್ಟಿಸಬೇಡಿ: BJP ವಿರುದ್ಧ ಕುಮಾರಸ್ವಾಮಿ ಕಿಡಿ

ಎಚ್‌.ಡಿ.ಕುಮಾರಸ್ವಾಮಿ

ಮೈಸೂರು: ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಕರ್ನಾಟಕವನ್ನು ಉತ್ತರ ಪ್ರದೇಶವನ್ನಾಗಿ ಮಾಡಲು ಹೊರಟಿವೆ. ಅದೆಂದಿಗೂ ಸಾಧ್ಯವಾಗುವುದಿಲ್ಲ. ಉತ್ತರ ಪ್ರದೇಶದಲ್ಲಿ ನಡೆದ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲ. ಶ್ರೀರಾಮನ ಹೆಸರೇಳಿಕೊಂಡು ರಾವಣ ರಾಜ್ಯ ಸೃಷ್ಟಿ ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ʼಜೆಪಿ ವಿಚಾರ ವೇದಿಕೆʼ ಹಮ್ಮಿಕೊಂಡಿದ್ದ ʼಸರ್ವ ಜನಾಂಗದ ತೋಟ; ಭಾವೈಕ್ಯತೆಯ ಒಂದು ಚರ್ಚೆʼ ಸಂವಾದ ಕಾರ್ಯಕ್ರಮದಲ್ಲಿ H.D. Kumara swamy ಮಾತನಾಡಿದರು. ಎಲ್ಲೆಲ್ಲೂ ಬಿಜೆಪಿಯ ದ್ವಂದ್ವ ನಿಲುವು ಎದ್ದು ಕಾಣುತ್ತಿದೆ. ರಾಜ್ಯದ ಪ್ರತಿ ಕುಟುಂಬ ನೆಮ್ಮದಿಯಾಗಿ ಬದುಕುವಂಥ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಬೇಕು. ಅಭಿವೃದ್ಧಿಶೀಲ ಕರ್ನಾಟಕವನ್ನು ಎಲ್ಲಾ ರೀತಿಯಲ್ಲೂ ಹಾಳು ಮಾಡಿ ಉತ್ತರ ಪ್ರದೇಶವನ್ನಾಗಿ ಮಾಡಲು ಹೊರಟಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು.

ಕೇಸರಿ ಪವಿತ್ರ ವಸ್ತ್ರ. ಅದಕ್ಕೊಂದು ಪಾವಿತ್ರ್ಯತೆ ಇದೆ. ಅದನ್ನು ಹೆಗಲ ಮೇಲೆ ಹಾಕಿಕೊಂಡು ಮಾಡಬಾರದ್ದನ್ನು ಮಾಡಿ ಶ್ರೀರಾಮ ಮತ್ತು ಹಿಂದೂ ಧರ್ಮಕ್ಕೆ ಕಳಂಕ ತರಬೇಡಿ. ಕರ್ನಾಟಕವನ್ನು ರಾವಣ ರಾಜ್ಯ ಮಾಡಬೇಡಿ, ಕೈಲಾದರೆ ರಾಮರಾಜ್ಯ ನಿರ್ಮಾಣ ಮಾಡಿ. ಬಿಜೆಪಿ ಅಭಿವೃದ್ಧಿಯ ವಿಷಯ ಇಟ್ಟುಕೊಂಡು ಮತ ಕೇಳುತ್ತಿಲ್ಲ. ಅದರ ಬಳಿ ಅಂಥ ಜನಪರ ವಿಷಯಗಳೇ ಇಲ್ಲ. ಅದಕ್ಕಾಗಿ ನೆಮ್ಮದಿಯಾಗಿದ್ದ ಕರ್ನಾಟಕದಲ್ಲಿ ಶಾಂತಿಯನ್ನು ಕದಡಿ ಜನರ ಬದುಕು ಹಾಳು ಮಾಡಲು ಹೊರಟಿದೆ. ಮಾವು ಖರೀದಿ ವಿಷಯದಲ್ಲೂ ಧರ್ಮವನ್ನು ಎಳೆದುತಂದು ರೈತರ ಬದುಕನ್ನೂ ಹಾಳು ಮಾಡಲು ಹುನ್ನಾರ ನಡೆಸಿದೆ. ಬಿಜೆಪಿಗೆ ಧೈರ್ಯವಿದ್ದರೆ ʼಕಾಯಕವೆ ಕೈಲಾಸʼ ಎಂದು ಹೇಳಿಕೊಂಡು ಮತ ಕೇಳಲಿ. ಹಣೆಗೆ ಬೊಟ್ಟು ಇಟ್ಟುಕೊಂಡು ಜೈಶ್ರೀರಾಂ ಎಂದರೆ ರೈತರು ಉಳಿಯುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಹೇಳಿದರು.

ಮೌನಿ ಮುಖ್ಯಮಂತ್ರಿ

ಸಮಾಜದಲ್ಲಿ ಅಶಾಂತಿ ಮೂಡಿಸಲು ಕರ ಪತ್ರ ಹಂಚುತ್ತಿದ್ದರೂ, ಧರ್ಮ ಧರ್ಮಗಳ ದ್ವೇಷ ಸೃಷ್ಟಿ ಮಾಡುತ್ತಿದ್ದರೂ ಸರಕಾರ ಏನೂ ಕ್ರಮ ಕೈಗೊಳ್ಳಲಿಲ್ಲ. ಮುಖ್ಯಮಂತ್ರಿಯೂ ಮೌನವಾಗಿದ್ದಾರೆ. ಅವರು ಮೌನಿಬಾಬಗಳಾಗಿದ್ದಾರೆ. ರಾಜ್ಯವು ಕುವೆಂಪು ಅವರ ಸರ್ವ ಜನಾಂಗದ ಶಾಂತಿ ತೋಟವಾಗಿತ್ತು. ಅದನ್ನು ಇವರೆಲ್ಲ ಸೇರಿ ಹಾಳು ಮಾಡಿದ್ದಾರೆ. ಒಂದು ತಿಂಗಳಲ್ಲಿ ಮತ್ತೆ ರಾಜ್ಯದಲ್ಲಿ ಶಾಂತಿ ವಾತಾವರಣ ಮರುಸ್ಥಾಪನೆ ಮಾಡದಿದ್ದರೆ ಸರಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಸರಕಾರಕ್ಕೆ ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟರು.

ಮತ್ತಷ್ಟು ಓದು: ಆಜಾನ್‌ ಸ್ಥಗಿತಗೊಳಿಸದಿದ್ದರೆ ಹನುಮಾನ್‌ ಚಾಲೀಸಾ ಪಠಣ: ವಿಶ್ವ ಹಿಂದು ಪರಿಷತ್‌ ಎಚ್ಚರಿಕೆ

ನನಗೆ 2023ರ ಚುನಾವಣೆ ಮುಖ್ಯವಲ್ಲ, ಧರ್ಮಾತೀತ ಸಮಾಜ ಗಟ್ಟಿಯಾಗಬೇಕು. ಹಿಜಾಬ್ ನಂತಹ ಒಂದು ಸಣ್ಣ ಘಟನೆ ದೊಡ್ಡದಾಗಲು ಸರಕಾರದ ನಿರ್ಲಕ್ಷ್ಯವೇ ಕಾರಣ. ಸರಕಾರವೇ ಕಿಡಿಗೇಡಿಗಳಿಗೆ ಉತ್ತೇಜನ ಕೊಟ್ಟು ಮೌನವಾಯಿತು. ಈ ಮೂಲಕ ಅಶಾಂತಿ ವಾತಾವರಣ ನಿರ್ಮಾಣ ಮಾಡಿದರು. ಕೆಲವರು ಮೌನವಾಗಿ ಇರುವ ಕಾರಣ ಈ ವಿವಾದವು ರಾಜ್ಯ, ದೇಶ ಹಾಗೂ ವಿದೇಶಕ್ಕೂ ವ್ಯಾಪಿಸಿತು. ಈ ವಿಷಯವನ್ನು ಮಾತನಾಡಲು ಕಾಂಗ್ರೆಸ್‌ ಹಿಂದೇಟು ಹಾಕಿತು ಎಂದು ಟೀಕಿಸಿದರು.

ಮತ್ತಷ್ಟು ಓದು: ಮುಸ್ಲಿಮರು ಕತ್ತರಿಸಿದ ಮಾಂಸವನ್ನೇ ನಾವು ಸೇವಿಸೋದು: ಸಿದ್ದರಾಮಯ್ಯ

Exit mobile version