Site icon Vistara News

ಶಾಲಾ ಬಾಂಬ್‌ ಬೆದರಿಕೆಯ ಗಂಭೀರ ತನಿಖೆ: ಪೊಲೀಸರಿಗೆ CM ಬೊಮ್ಮಾಯಿ ಸೂಚನೆ

ಬೆಂಗಳೂರು: ಬೆಂಗಳೂರಿನ 10 ಖಾಸಗಿ ಶಾಲೆಗಳಲ್ಲಿ Bomb ಇದೆ ಎಂಬ ಸಂದೇಶ ರವಾನಿಸಿ ಶುಕ್ರವಾರವಿಡೀ ಸರ್ಕಾರ, ಸಮಾಜ ಹಾಗೂ ಪೋಷಕರಲ್ಲಿ ಆತಂಕದ ವಾತಾವರಣ ನಿರ್ಮಿಸಿದ ದುಷ್ಕರ್ಮಿಗಳ ವಿರುದ್ಧ ಗಂಭೀರ ತನಿಖೆ ನಡೆಸಬೇಕು ಎಂದು CM ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆ. ಕರ್ನಾಟಕ ಪ್ರಗತಿಪರವಾದ ರಾಜ್ಯವಾಗಿದ್ದು, ಇದಕ್ಕೆ ಕೆಟ್ಟ ಹೆಸರು ತರಲು ಕೆಲವರು ಪದೇಪದೆ ಹೀಗೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೃಹಕಚೇರಿ ಕೃಷ್ಣಾದಲ್ಲಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಎಲ್ಲ ಕಡೆ ತಪಾಸಣೆ ಮಾಡಲು ತಿಳಿಸಿದ್ದು, ಸಂದೇಶ ಕಳಿಸಿದವರ ವಿವರಗಳನ್ನು ಕಲೆ ಹಾಕಿ ಅವರನ್ನು ಬಂಧಿಸಲಾಗುವುದು. ಸುರಕ್ಷತಾ ಕ್ರಮ ಹಾಗೂ ತನಿಖಾ ಕ್ರಮಗಳನ್ನು ಖಂಡಿತವಾಗಿಯೂ ತೆಗೆದುಕೊಳ್ಳಲಾಗುವುದು. ಶಾಲಾ ಆಡಳಿತ ಮಂಡಳಿಗಳು ಹಾಗೂ ಮಕ್ಕಳ ಪೋಷಕರು ಧೈರ್ಯವಾಗಿರಲಿ. ಆತಂಕ ಪಡುವ ಅಗತ್ಯವಿಲ್ಲ. ನಾವು ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.

10ನೇ ಶಾಲೆ ಸೇರ್ಪಡೆ

ಶುಕ್ರವಾರ ಬೆಳಗ್ಗಿನಿಂದ ಬಾಂಬ್‌ ಬೆದರಿಕೆಯಲ್ಲೇ ಕಳೆಯುವಂತೆ ಮಾಡಿದ ಇಮೇಲ್‌ ಸಂದೇಶ, ಬೆಂಗಳೂರಿನ ಪ್ರತಿಷ್ಠಿತ ಸೋಫಿಯಾ ಶಾಲೆಗೂ ಆಗಮಿಸಿದೆ ಎಂಬ ವಿಚಾರ ಸಂಜೆ ವೇಳೆಗೆ ತಿಳಿದುಬಂದಿದೆ. ಇದರೊಂದಿಗೆ ಒಟ್ಟು 10 ಶಾಲೆಗಳಿಗೆ ಇಮೇಲ್‌ ಸಂದೇಶ ಆಗಮಿಸಿರುವುದು ಪತ್ತೆಯಾಗಿದೆ. ವಿಧಾನಸೌಧದ ಕೂಗಳತೆ ದೂರದಲ್ಲೆ ಇರುವ ಸೋಫಿಯಾ ಶಾಲೆಗೂ ಹೈಗ್ರೌಂಡ್ಸ್‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇತರೆಲ್ಲೆಡೆಗಳಂತೆಯೇ ಸೋಫಿಯಾ ಶಾಲೆಯಲ್ಲೂ ಯಾವುದೇ ಬಾಂಬ್‌ ಪತ್ತೆಯಾಗಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೂರ್ವ ವಲಯ ಹೆಚ್ಚುವರಿ ಪೊಲೀಸ್‌ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್‌, ಸಂದೇಶ ಸ್ವೀಕರಿಸಲಾದ ಎಲ್ಲ ಶಾಲೆಗಳಿಗೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿವರೆಗೆ ಯಾವುದೇ ಬಾಂಬ್‌ ಪತ್ತೆಯಾಗಿಲ್ಲ. ಹಿಂದಿನ ಅನುಭವದ ಆಧಾರದಲ್ಲಿ ಹೇಳುವುದಾದರೆ ಪರೀಕ್ಷಾ ಸಂದರ್ಭದಲ್ಲಿ ಆಗಮಿಸುವ ಇಂತಹ ಸಂದೇಶಗಳು 99% ಸುಳ್ಳಾಗಿರುತ್ತವೆ. ಆದರೂ ಗಂಭೀರವಾಗಿ ತನಿಖೆ ನಡೆಸಿ ಯಾರಿಂದ ಈ ಸಂದೇಶ ಬಂದಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ ಎಂದಿದ್ದಾರೆ.

ಹೆಚ್ಚಿನ ಓದಿಗಾಗಿ: ಬೆಂಗಳೂರು ಶಾಲೆಗಳಿಗೆ ಬಾಂಬ್‌ ಬೆದರಿಕೆ

Exit mobile version