Site icon Vistara News

ವಕ್ಫ್‌ ಬೋರ್ಡ್‌ ಅಭಿಯಾನಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಧಾರ್ಮಿಕ ವಿವಾದದಿಂದ CM ಅಂತರ

cm

ಬೆಂಗಳೂರು/ ಬಸವಕಲ್ಯಾಣ: ರಾಜ್ಯದಲ್ಲಿ ಅನೇಕ ದಿನಗಳಿಂದ ಹಿಜಾಬ್‌, ಹಲಾಲ್‌ ಎನ್ನುತ್ತಲೇ ಧಾರ್ಮಿಕ ವಿಚಾರಗಳ ಕುರಿತು ಪ್ರತಿಕ್ರಿಯೆ ನೀಡುತ್ತಲೇ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಇದೀಗ ಈ ವಿಚಾರಗಳಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಸೇರಿ ಅನೇಕರು ಆರಂಭಿಸಲು ಕರೆ ನೀಡಿರುವ ವಕ್ಫ್‌ಬೋರ್ಡ್‌ ನಿಷೇಧದ ಕುರಿತು ಪ್ರತಿಕ್ರಿಯಿಸಿರುವ ಬೊಮ್ಮಾಯಿ, ಸರ್ಕಾರ ಕಾನೂನಿನ ಪ್ರಕಾರ ಮಾತ್ರ ನಡೆದುಕೊಳ್ಳುತ್ತದೆ. ಯಾವ ಅಭಿಯಾನಗಳಿಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಚುನಾವಣೆ ಹತ್ತಿರವಾದಂತೆ ಹಿಂದು ಮತಗಳ ಕ್ರೋಢೀಕರಣ ಆಗುವ ಉದ್ದೇಶವನ್ನು ಹೊಂದಿ ಅನೇಕ ಕ್ರಮಗಳನ್ನು ಸರ್ಕಾರವೂ ಕೈಗೊಳ್ಳುತ್ತ ಬಂದಿದೆ. ಹಿಂದು ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಮುಖ್ಯಮಂತ್ರಿ ಹೇಳಿಕೆ ಸಾಕಷ್ಟು ಮೆಚ್ಚುಗೆ ಹಾಗೂ ಚರ್ಚೆಗೆ ಕಾರಣವಾಗಿತ್ತು. ನಂತರದ ದಿನಗಳಲ್ಲಿ ಉಡುಪಿಯ ಸರ್ಕಾರಿ ಕಾಲೇಜಿನ ಆರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವ ವಿಚಾರದಿಂದ ವಿವಾದ ಆರಂಭವಾಯಿತು.

ನಂತರ ಅದು ಸರ್ಕಾರದ ಮಟ್ಟದಲ್ಲಿ ಹಾಗೂ ಹಿಂದು ಮುಸ್ಲಿಂ ಸಂಘಟನೆಗಳ ನಡುವೆಯೂ ವಿವಾದದ ಕಿಡಿ ಹೊತ್ತಿಸಿತು. ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗುವಂತಿಲ್ಲ ಎಂಬ ಸರ್ಕಾರದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದ ನಂತರ ಒಂದೆಡೆ ಮುಸ್ಲಿಂ ಸಂಗಟನೆಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದವು. ಇನ್ನೊಂದೆಡೆ ಹಿಂದು ಸಂಗಟನೆಗಳು ಹಿಜಾಬ್‌ ನಂತರದಲ್ಲಿ ಹಲಾಲ್‌ ಕಟ್‌- ಝಟ್ಕಾ ಕಟ್‌ ವಿವಾದಕ್ಕೆ ನಾಂದಿ ಹಾಡಿದವು. ಹಿಂದುಗಳು ಮುಸಲ್ಮಾನರಿಂದ ಮಾಂಸ ಖರೀದಿ ಮಾಡುವಂತಿಲ್ಲ ಎಂಬ ಅಭಿಯಾನ ಆರಂಭವಾಯಿತು. ಇದೆಲ್ಲದರ ನಡುವೆ ಮಂಡ್ಯದ ಪಿಇಎಸ್‌ ಕಾಲೀಜಿನ ಮುಸ್ಲಿಂ ವಿದ್ಯಾರ್ಥಿನಿ ಅಲ್ಲಾ ಹೊ ಅಕ್ಬರ್‌ ಎಂದು ಕೂಗಿದ್ದನ್ನೇ ಬಂಡವಾಳವಾಗಿಸಿಕೊಂಡ ಅಲ್‌ಖೈದಾ ಭಯೋತ್ಪಾದಕ ಸಂಘಟನೆ, ಅದನ್ನೇ ಪ್ರಚಾರ ಮಾಡಿತು.

ಉದ್ಯಮ ವಲಯಕ್ಕೂ ವಿಸ್ತರಿಸಿದ ವಿವಾದ

ವಿವಾದವು ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಕೆಲ ದಿನಗಳಿಂದ ಸರ್ಕಾರಗಳ ನಡುವಿನ ಸಂಘರ್ಷಕ್ಕೂ ಕಾರಣವಾಗಿದೆ. ಕರ್ನಾಟಕದಲ್ಲಿ ಧಾರ್ಮಿಕ ವಾತಾವರಣ ಹಾಳಾಗಿದೆ, ಸೌಹಾರ್ದ ವಾತಾವರಣವಿಲ್ಲ ಎಂಬ ಮಾತು ಉದ್ಯಮ ವಲಯದಿಂದಲೂ ಕೇಳಿಬರುತ್ತಿದೆ. ಮೊದಲಿಗೆ ಈ ಕುರಿತು ಬಯೋಕಾನ್‌ ಅಧ್ಯಕ್ಷೆ ಕಿರಣ್‌ ಮಜುಮ್‌ದಾರ್‌ ಷಾ ಟ್ವೀಟ್‌ ಮಾಡಿದ್ದರು. ನಂತರದಲ್ಲಿ ತೆಲಂಗಾಣ ಐಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್‌ ಪ್ರತಿಕ್ರಿಯೆ ನೀಡಿ, ಹೈದರಾಬಾದ್‌ ನಿಜಕ್ಕೂ ಕಾಸ್ಮೋಪಾಲಿಟನ್‌ ಆಗಿದೆ. ಉದ್ಯಮಗಳು ಇಲ್ಲಿಗೆ ಆಗಮಿಸಲು ಸ್ವಾಗತ ಎಂದಿದ್ದರು.

ಇದೆಲ್ಲದರ ಜತೆಗೆ ತಮಿಳುನಾಡಿನ ಡಿಎಂಕೆ ಸರ್ಕಾರದ ಹಣಕಾಸು ಸಚಿವ ಪಳನಿವೇಲನ್‌ ತ್ಯಾಗರಾಜನ್‌ ಮಾತನಾಡಿ, ಕರ್ನಾಟಕದಲ್ಲಿ ನಡೆಯುತ್ತಿರುವ ಎಲ್ಲ ಘಟನೆಗಳನ್ನೂ ಗಂಭೀರವಾಗಿ ವೀಕ್ಷಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕೋಮುವಾದದ ವಾತಾವರಣವಿದೆ. ಕರ್ನಾಟಕದಿಂದ ತಮಿಳುನಾಡಿಗೆ ಉದ್ಯಮವನ್ನು ಸ್ಥಳಾಂತರ ಮಾಡುವವರಿಗೆ ಸ್ವಾಗತ ಎಂದಿದ್ದರು.

ಹೆಚ್ಚಿನ ಓದಿಗಾಗಿ: 450 ಪೊಲೀಸರ ಕಣ್ಗಾವಲಿನಲ್ಲಿ ಬೆಂಗಳೂರು ಕರಗ: ದರ್ಗಾ ಪ್ರವೇಶ ತಡೆದರೆ ಅರೆಸ್ಟ್‌

ತೆಲಂಗಾಣದ ಕೆ.ಟಿ. ರಾಮರಾವ್‌ ಹೇಳಿಕೆ ಕುರಿತು ಎರಡು ದಿನದ ಹಿಂದೆ ಪ್ರತಿಕ್ರಿಯೆ ನೀಡಿದ್ದ ಬೊಮ್ಮಾಯಿ, ಹೈದರಾಬಾದ್‌ ಜತೆಗೆ ಬೆಂಗಳೂರನ್ನು ಹೋಲಿಸುವುದು ಅತಿ ದೊಡ್ಡ ವ್ಯಂಗ್ಯ ಎಂದಿದ್ದರು. ಎರಡೂ ಘಟನೆಗಳ ಬಗ್ಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದ ಸಿಎಂ, ಕೆಲವು ಬಾಹ್ಯ ಶಕ್ತಿಗಳು ಕರ್ನಾಟಕದ ಹೆಸರನ್ನು ಕೆಡಿಸುವ ಪ್ರಯತ್ನ ಮಾಡುತ್ತಿವೆ. ಆದರೆ ಕರ್ನಾಟಕ ಅಭಿವೃದ್ಧಿಶೀಲ ರಾಜ್ಯ. ನೆರೆ ರಾಜ್ಯಗಳ ಇಂತಹ ಹತಾಶ ಪ್ರಯತ್ನಗಳು ನನ್ನ ಮನಸ್ಸಿನಲ್ಲಿ ಕಹಿ ಭಾವನೆಯನ್ನು ಮೂಡಿಸಿವೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಮತೀಯ ವಿವಾದವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಹ ಸಹಜವಾಗಿಯೇ ಪ್ರಯತ್ನ ನಡೆಸಿದ್ದವು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮತಗಳಿಂದ ದೂರವಾಗಿದ್ದ ಜೆಡಿಎಸ್‌, ಹಿಜಾಬ್‌ ಹಾಗೂ ಹಲಾಲ್‌ ಕಟ್‌ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರಂತೂ ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಈ ವಿಚಾರವನ್ನು ಮುಂದಿಟ್ಟಿಕೊಂಡು ಬಿಜೆಪಿ ವಿರದ್ಧ ಹರಿಯಾಯುತ್ತಲೇ ಇದ್ದಾರೆ.

ಬದಲಾಯಿತು ಸಿಎಂ ಧಾಟಿ

ಇಷ್ಟೆಲ್ಲ ಬೆಳವಣಿಗೆ ನಂತರ ವಿವಾದದ ಕುರಿತು ತಮ್ಮ ಮಾತಿನ ಧಾಟಿಯನ್ನು ಸಿಎಂ ಬದಲಾಯಿಸಿಕೊಂಡಿದ್ದಾರೆ. ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ವಕ್ಫ್ ಬೋರ್ಡ್ ಬ್ಯಾನ್ ಅಭಿಯಾನಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಗುರಿ. ಅವರವರ ಸಂಪ್ರದಾಯವನ್ನು ಅವರು ಆಚರಣೆ ಮಾಡುತ್ತಾರೆ. ಸರ್ಕಾರ ಕಾನೂನಿನ ಪ್ರಕಾರ ಮಾತ್ರ ನಡೆದುಕೊಳ್ಳುತ್ತದೆ. ಉಳಿದಂತೆ ಅಭಿಯಾನಗಳಿಗೂ ಸರ್ಕಾರಕ್ಕೆ ಸಂಬಂಧವಿಲ್ಲ ಎಂದು ಹೇಳಿ ಮುನ್ನಡೆದಿದ್ದಾರೆ.

ಹಿಂದು ಮುಸ್ಲಿಂ ವಿವಾದವು ಕರ್ನಾಟಕದ ಕುರಿತು ಹೊರ ಜಗತ್ತಿನಲ್ಲಿ ನಕಾರಾತ್ಮಕ ಚಿತ್ರಣ ಮೂಡಿಸುತ್ತಿರುವುದು ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ಬಂದಿದೆ. ಚುನಾವಣೆ ವರ್ಷದಲ್ಲಿ ಇಂತಹ ನಕಾರಾತ್ಮಕ ವಿಚಾರ ರೂಪುಗೊಳ್ಳಲು ಅವಕಾಶ ನೀಡುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇದೇ ಕಾರಣಕ್ಕೆ ಬಸವ ಕಲ್ಯಾಣದಲ್ಲಿ ಶನಿವಾರ ಸುದ್ದಿಗಾರರರ ಪ್ರಶ್ನೆಗೆ ಉತ್ತರಿಸುತ್ತ, ವಕ್ಫ್‌ ಬೋರ್ಡ್‌ ನಿಷೇಧ ಅಭಿಯಾನಕ್ಕೆ ಬೆಂಬಲವಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ.

Exit mobile version