ಬೆಂಗಳೂರು: ವಿಧಾನಸಭೆ ಚುನಾವಣೆಗೆ ವರ್ಷಕ್ಕೂ ಕಡಿಮೆ ಸಮಯ ಇರುವಂತೆ JDS ತನ್ನ ಅಭಿಯಾನಕ್ಕೆ ಮಂಗಳವಾರದಿಂದ ಚಾಲನೆ ನೀಡಲು ಸಿದ್ಧವಾಗಿದೆ. ಕರ್ನಾಟಕದ ನೀರಾವರಿ ಯೋಜನೆಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ಎಚ್.ಡಿ. ದೇವೇಗೌಡರು( H.D. Devegowda) ರಾಮನಗರದಿಂದ ಜನತಾ ಜಲಧಾರೆ ರಥಕ್ಕೆ ಚಾಲನೆ ನೀಡಲಿದ್ದಾರೆ.
ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ !
ದೇಶದಲ್ಲಿ ಹೆಚ್ಚು ತೆರಿಗೆ ನೀಡುವ ರಾಜ್ಯವಾಗಿದ್ದರೂ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ತರುವಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ವಿಫಲವಾಗಿವೆ ಎನ್ನುವುದು ಕುಮಾರಸ್ವಾಮಿಯವರ ಆರೋಪ. ರಾಷ್ಟ್ರೀಯ ಪಕ್ಷಗಳ ವಿಳಂಬ ನೀತಿ ನೋಡಿದರೆ ಇನ್ನೂ ನೂರು ವರ್ಷವಾದರೂ ರಾಜ್ಯದ ನೀರಾವರಿ ಯೋಜನೆಗಳು ಮುಕ್ತಾಯವಾಗುವ ಲಕ್ಷಣಗಳು ಕಾಣುತ್ತಿಲ್ಲ. ನಮಗೆ ಅಧಿಕಾರ ಇರುವಷ್ಟು ನೀರನ್ನು ಬಳಸಿಕೊಳ್ಳಲೂ ಕಳೆದ 75 ವರ್ಷಗಳಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಗಿ ಜೆಡಿಎಸ್‌ಗೆ ಅಧಿಕಾರ ನೀಡಿದರೆ ಐದು ವರ್ಷದಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ಸಂಪೂರ್ಣ ಮಾಡುತ್ತೇನೆ. ಇಲ್ಲವಾದಲ್ಲಿ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಜನತಾ ಜಲಧಾರೆ ಕುರಿತು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದರು.
180 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ
ರಾಮನಗರದ ಗ್ರಾಮದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಜನತಾ ಜಲಧಾರೆ ರಥಗಳಿಗೆ ಚಾಲನೆ ನೀಡಲಿದ್ದಾರೆ. 15 ಜನತಾ ಜಲಧಾರೆ ರಥಗಳು 31 ಜಿಲ್ಲೆಯ 94 ಸ್ಥಳಗಳಲ್ಲಿರುವ ಪ್ರಮುಖ ಹಾಗೂ ಉಪನದಿಗಳಿಂದ ನೀರನ್ನು ಕಳಶಗಳಲ್ಲಿ ಸಂಗ್ರಹ ಮಾಡುತ್ತವೆ. ರಾಜ್ಯದ 180 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಿದ ನಂತರ ಮೇ 8ರೊಳಗೆ ಎಲ್ಲ ರಥಗಳೂ ಬೆಂಗಳೂರಿಗೆ ಬಂದು ಸೇರುತ್ತವೆ. ಪಕ್ಷದ ಕಚೇರಿ ಬಳಿಯಲ್ಲಿ ಬೃಹತ್ ಕಳಶ ಸ್ಥಾಪನೆ ಮಾಡಿ ಎಲ್ಲ ನೀರನ್ನು ಅದರಲ್ಲಿ ಒಟ್ಟುಗೂಡಿಸಿ ಮುಂದಿನ ಚುನಾವಣೆವರೆಗೂ ಪೂಜೆ ಸಲ್ಲಿಸಲಾಗುತ್ತದೆ. ಬೆಂಗಳೂರಿನಲ್ಲಿ 4-5 ಲಕ್ಷ ಕಾರ್ಯಕರ್ತರು ಹಾಗೂ ರೈತರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಹೆಚ್ಚಿನ ಓದಿಗಾಗಿ: ಟಿಷರಿಗೂ ಬಿಜೆಪಿಯವರಿಗೂ ವ್ಯತ್ಯಾಸವಿಲ್ಲ: ಕಮಲ ಪಕ್ಷದ ವಿರುದ್ಧ HDK ವಾಗ್ದಾಳಿ
ಈಶ್ವರಪ್ಪ ಕುಮಾರಸ್ವಾಮಿ ಮುಖಾಮುಖಿ
ರಾಮನಗರದಿಂದ ಜನತಾ ಜಲಧಾರೆ ರಥಗಳಿಗೆ ಚಾಲನೆ ನೀಡುವುದಕ್ಕೂ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡದೇವಿ ಚಾಮುಂಡೇಶ್ವರಿಯ ದರ್ಶನವನ್ನು ಕುಮಾರಸ್ವಾಮಿ ಪಡೆದರು. ಸಾಂಕೇತಿಕವಾಗಿ ಒಂದು ವಾಹನಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ ಅವರಿಗೆ ಶಾಸಕ ಸಾ. ರಾ. ಮಹೇಶ್ ಜತೆಯಾಗಿದ್ದರು.
ದೇವರ ದರ್ಶನ ಮುಗಿಸಿ ಕುಮಾರಸ್ವಾಮಿ ಹೊರಬರುತ್ತಿರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿಇವ ಕೆ.ಎಸ್. ಈಶ್ವರಪ್ಪ ಎದುರಾದರು. ಕೆಲಕಾಲ ಇಬ್ಬರೂ ನಾಯಕರು ಉಭಯ ಕುಶಲೋಪರಿ ನಡೆಸಿ ನಂತರ ತೆರಳಿದರು.
ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಖಚಿತ
ಇತ್ತೀಚೆಗಷ್ಟೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಸಹ ಜನತಾ ಜಲಧಾರೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್‌ನಿಂದ ಬೇರ್ಪಟ್ಟ ನಂತರ ಜೆಡಿಎಸ್ ಸೇರ್ಪಡೆ ಖಚಿತ ಎನ್ನಲಾಗುತ್ತಿದ್ದ ಮಾತಿಗೆ ಇದರಿಂದ ಪುಷ್ಠಿ ಸಿಕ್ಕಿದೆ.