Site icon Vistara News

Karnataka Election: ವರುಣ ಕ್ಷೇತ್ರದಲ್ಲಿ 18 ಲಕ್ಷ ರೂಪಾಯಿ ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು

cash

ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election) ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಝಣ ಝಣ ಕಾಂಚಾಣ ಸದ್ದು ಮಾಡುತ್ತಿದೆ. ಈ ನಡುವೆ ಮತದಾರರಿಗೆ ಹಂಚಿಕೆ ಮಾಡಲು ಸಾಗಿಸುತ್ತಿದ್ದ ಹಣವನ್ನು ವಿವಿಧೆಡೆ ಪೊಲೀಸರು ವಶಕ್ಕ ಪಡೆದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರ ಮೈಸೂರು ಜಿಲ್ಲೆಯ ವರುಣ, ರಾಯಚೂರು, ಚಿಕ್ಕೋಡಿ, ಮಂಗಳೂರು, ಕಾರವಾರ ಹಾಗೂ ತುಮಕೂರಿನಲ್ಲಿ ನಗದು, ಮದ್ಯ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಸಿದ್ದರಾಮಯ್ಯ ಕ್ಷೇತ್ರದಲ್ಲಿ 18 ಲಕ್ಷ ರೂ. ಜಪ್ತಿ

ಮೈಸೂರು: ವರುಣ ಕ್ಷೇತ್ರದ ಮೈಸೂರು-ತಿ.ನರಸೀಪುರ ಹೆದ್ದಾರಿಯ ಚೆಕ್​ಪೋಸ್ಟ್​ನಲ್ಲಿ 18 ಲಕ್ಷ ರೂ.ಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಾಹನ ತಪಾಸಣೆ ವೇಳೆ ದಾಖಲೆ ಇಲ್ಲದ ಹಣ ಪತ್ತೆಯಾಗಿದ್ದರಿಂದ ಹಣವನ್ನು ಜಪ್ತಿ ಮಾಡಲಾಗಿದ್ದು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.

ಅಕ್ರಮವಾಗಿ ದಾಸ್ತಾನು ಮಾಡಿದ್ದ 370 ಲೀಟರ್ ಮದ್ಯ ವಶ

ಚಿಕ್ಕೋಡಿ‌: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ತೋರಣಹಳ್ಲಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 3 ಲಕ್ಷ ರೂಪಾಯಿ ಮೌಲ್ಯದ 370 ಲೀಟರ್ ಮದ್ಯವನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಮಧ್ಯ ಹಾಗೂ ಮನೆಯ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Karnataka Election 2023: ಶಿವಮೊಗ್ಗ ಒಂದರಲ್ಲೇ 4.5 ಕೋಟಿ ರೂ. ಮೌಲ್ಯದ ಸೀರೆ ಜಪ್ತಿ; ರಾಜ್ಯಾದ್ಯಂತ ವಶಕ್ಕೆ ಸಿಕ್ಕಿದ್ದೆಷ್ಟು?

ಕೇರಳ ಗಡಿಯಲ್ಲಿ 7.95 ಲಕ್ಷ ರೂಪಾಯಿ ಜಪ್ತಿ

ಮಂಗಳೂರು: ಕೇರಳದಿಂದ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 7.95 ಲಕ್ಷ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೇರಳ ಗಡಿ ಭಾಗವಾಗಿರುವ ತಲಪಾಡಿಯಲ್ಲಿ ಘಟನೆ ನಡೆದಿದೆ. ತಲಪಾಡಿ ಚೆಕ್‌ಪೋಸ್ಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ.

ಕಾಸರಗೋಡು ಜಿಲ್ಲೆಯ ಕುತ್ರಿಕ್ಕೋಡು ನಿವಾಸಿ ಸುರೇಶ್ ಎಂಬವರಿಂದ ಹಣ ವಶಪಡಿಸಿಕೊಳ್ಳಲಾಗಿದೆ. ಸುರೇಶ್ ಅವರು ಫ್ಯಾಬ್ರಿಕೇಷನ್ ವೃತ್ತಿ ನಡೆಸುವವರಾಗಿದ್ದು, ಮಂಗಳೂರಿನ ಬಂದರಿನಿಂದ ಸಾಮಗ್ರಿಗಳ ಖರೀದಿಗಾಗಿ ಹಣ ತರುತ್ತಿದ್ದರು ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾರೆ. ಚುನಾವಣಾ ಆಯೋಗದ ರಿಟೈನಿಂಗ್ ಅಧಿಕಾರಿಗಳ ವಶಕ್ಕೆ ನಗದು ಹಾಗೂ ಕಾರನ್ನು ವಿಚಾರಣೆಗೆ ನೀಡಲಾಗಿದೆ. ಇದು ಚುನಾವಣೆಗೆ ಸಂಬಂಧಿಸಿದ ಹಣವಾದಲ್ಲಿ ಪ್ರಕರಣ ದಾಖಲಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

3 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ವಶ

ತುಮಕೂರು: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 3 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳನ್ನು ತಿಪಟೂರು ತಾಲೂಕಿನ ರಜತಾದ್ರಿಪುರ ಟೋಲ್ ಬಳಿ ಚುನಾವಣಾ ಸಂಚಾರಿ ಜಾಗೃತ ದಳ ವಶಕ್ಕೆ ಪಡೆದಿದೆ. ಓಮಿನಿ ವಾಹನದಲ್ಲಿ ದಾಖಲೆ ಇಲ್ಲದೇ ಸಾಗಿಸುತಿದ್ದ ಬಟ್ಟೆ ಹಾಗೂ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Belagavi News: ಹೆಂಡತಿಯ ಕಾಟ; ನೆಮ್ಮದಿ ಅರಸಿ ಗೋವಾಕ್ಕೆ ಹೊರಟಿದ್ದವ 26 ಲಕ್ಷ ರೂ.ನೊಂದಿಗೆ ಪೊಲೀಸರಿಗೆ ಸಿಕ್ಕಿಬಿದ್ದ!

ಹೊನ್ನಾವರದಲ್ಲಿ 69 ಸಾವಿರ ರೂಪಾಯಿ ಮೌಲ್ಯದ ಮದ್ಯ ಜಪ್ತಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಉಪ್ಪೋಣಿ ಗ್ರಾಮದ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ 69,120 ರೂಪಾಯಿ ಮೌಲ್ಯದ ಮದ್ಯ ಜಪ್ತಿ ಮಾಡಿ, ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೇಶವ ನಾಯ್ಕ ಬಂಧಿತ ಆರೋಪಿ. ಮನೆಯಲ್ಲಿ ಸಂಗ್ರಹಿಸಿದ್ದ 52 ಲೀಟರ್ ಮದ್ಯ ಹಾಗೂ 48 ಲೀಟರ್ ಬಿಯರ್‌ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ಹೊನ್ನಾವರ ಪಿಎಸ್ಐ ಪ್ರವೀಣ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ರಾಯಚೂರಿನಲ್ಲಿ 2 ದಿನದಲ್ಲಿ 32.42 ಲಕ್ಷ ರೂಪಾಯಿ ವಶ

ರಾಯಚೂರು: ಜಿಲ್ಲೆಯಲ್ಲಿ ಕಾಂಚಾಣದ ಸದ್ದು ಜೋರಾಗಿ ಕೇಳಿಬರುತ್ತಿದೆ. ಜಿಲ್ಲೆಯಲ್ಲಿ ಎರಡೇ ದಿನದಲ್ಲಿ 32,42,627 ರೂಪಾಯಿ ಹಣ ಜಪ್ತಿ ಮಾಡಲಾಗಿದೆ. ಮಾನ್ವಿ, ರಾಯಚೂರು ಗ್ರಾಮೀಣ, ದೇವದುರ್ಗ ಚೆಕ್ ಪೊಸ್ಟ್‌ಗಳಲ್ಲಿ ವಾಹನ ತಪಾಸಣೆ ನಡೆಸಿದಾಗ ಲಕ್ಷ ಲಕ್ಷ ಹಣ ಪತ್ತೆಯಾಗಿದೆ.

Exit mobile version