Site icon Vistara News

Bangalore Mysore Expressway: ಈ ಹೆದ್ದಾರಿ ಅಪಘಾತಕ್ಕೆ ರಹದಾರಿ! 5 ತಿಂಗಳಲ್ಲಿ 570 ಅಪಘಾತ, 55 ಸಾವು

Bangalore Mysore Expressway AI Photos

ಬೆಂಗಳೂರು: ಅಭಿವೃದ್ಧಿ, ಸಂಪರ್ಕ ಸೇರಿದಂತೆ ಆರ್ಥಿಕ ಚಟುವಟಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಮಾರು 9 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ (Bangalore Mysore Expressway) ಈಗ ಅಪಘಾತಕ್ಕೆ (Highway Accident) ರಹದಾರಿಯಾಗುತ್ತಿದೆ. ಇಲ್ಲಿ ಅವಘಡಗಳ ಸರಮಾಲೆಯೇ ನಡೆಯುತ್ತಿದೆ. ಸಂಚಾರದಲ್ಲಿ ಸಮಯ ಉಳಿಕೆಗೆ ಹೆಸರಾಗಿರುವ ಈ ಹೆದ್ದಾರಿಯು ಜೀವಗಳಿಗೆ ಮಾರಕವಾಗುತ್ತಿವೆ. ಕೇವಲ ಐದು ತಿಂಗಳಲ್ಲಿ 570 ಅಪಘಾತಗಳು ಸಂಭವಿಸಿದ್ದು, 55 ಮಂದಿ ಮೃತಪಟ್ಟಿದ್ದಾರೆ!

ಈ 570 ಅಪಘಾತದಲ್ಲಿ 52 ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, 184 ಮಂದಿ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಇನ್ನು 279 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅತಿಯಾದ ವೇಗ, ಚಾಲಕರ ನಿರ್ಲಕ್ಷ್ಯ ಮತ್ತು ರಸ್ತೆಯ ಅವೈಜ್ಞಾನಿಕ ನಿರ್ಮಾಣವು ಈ ಪ್ರಮಾಣದ ಅಪಘಾತಗಳಿಗೆ ಮುಖ್ಯ ಕಾರಣಗಳಾಗಿವೆ ಎಂದು ಹೇಳಲಾಗಿದೆ.

ಇಲ್ಲಿ ಒನ್‌ ವೇ ಇರುವುದು, ಎಕ್ಸ್‌ಪ್ರೆಸ್‌ ವೇ ಆಗಿರುವ ಕಾರಣಕ್ಕೆ ಹೆಚ್ಚಿನ ವಾಹನಗಳು ತಮ್ಮ ವೇಗದ ಮಿತಿಯನ್ನು ಹೆಚ್ಚಳ ಮಾಡುತ್ತವೆ. ಗಂಟೆಗೆ 160 ಕಿ.ಮೀ ವೇಗದಲ್ಲಿ ಹೋಗುವ ಬಗ್ಗೆ ವರದಿಯಾಗಿದೆ. ಇದು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಈ ವೇಗದಲ್ಲಿದ್ದಾಗ ಮುಂದಿನ ವಾಹನಗಳು ನಿಧಾನ ಮಾಡಿದರೆ, ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ, ನಿದ್ದೆ ಮಂಪರು ಬಂದರೆ, ಇಲ್ಲವೇ ಹೆದ್ದಾರಿಯಲ್ಲಿನ ಅನೇಕ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಿಂದ ವಾಹನಗಳು ಬಂದರೆ ಅಪಘಾತಗಳು ಸಂಭವಿಸುತ್ತವೆ.

ಅಪಘಾತ ತಪ್ಪಿಸಲು ಏನು ಮಾಡಬೇಕು?

ಇಲ್ಲಿ ಅಪಘಾತಗಳನ್ನು ತಪ್ಪಿಸಲು ಒಂದೋ ಜನರೇ ಸ್ವಯಂ ಪ್ರೇರಿತರಾಗಿ ವೇಗದ ಮಿತಿಯನ್ನು ಕಡಿಮೆ ಮಾಡಬೇಕು. ವೇಗದ ಮಿತಿ 80 ಕಿ.ಮೀ ಆಗಿರಬೇಕು. ಸರ್ಕಾರವೇ ವೇಗದ ಮಿತಿಯನ್ನು ಅಳವಡಿಸಬೇಕು. ಜತೆಗೆ ಅಪಾಯ ಇದ್ದ ಕಡೆ ಅಪಘಾತ ವಲಯಗಳನ್ನು ಗುರುತಿಸಿ ಫಲಕಗಳನ್ನು ಹಾಕಬೇಕು. ಅಲ್ಲಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಬೇಕು. ಇನ್ನು ಸರ್ವಿಸ್‌ ರಸ್ತೆಗಳ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಬೇಕು. ಇನ್ನು ಹೆದ್ದಾರಿಗಳ ಮಧ್ಯೆ ಇರುವ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲೂ ಸೂಕ್ತ ಫಲಗಳನ್ನು ಅಳವಡಿಸಿ ಜಾಗೃತಿ ಮೂಡಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Loksabha 2024: ಹೇ ಕೂತ್ಕೊಳಪ್ಪ, ಮೋದಿ ಸೋತಾಗ ಗೊಬ್ಬರದ ರೇಟ್‌ ಕಡಿಮೆ ಮಾಡ್ತೀವಿ: ಅಭಿಮಾನಿಗೆ ರೇಗಿದ ಸಿಎಂ ಸಿದ್ದರಾಮಯ್ಯ

119 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ವೇ

119 ಕಿ.ಮೀ ಉದ್ದದ ಆರು ಪಥದ ಎಕ್ಸ್‌ಪ್ರೆಸ್ ವೇ ಆಗಿದ್ದು, 8,480 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿದೆ. ಬೆಂಗಳೂರಿನ ನಂತರ ಮೈಸೂರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಉಪ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದರ ಭಾಗವಾಗಿ ಎರಡೂ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು 8,480 ಕೋಟಿ ರೂ.ಗಳ ವೆಚ್ಚದಲ್ಲಿ ಈ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಜನರೂ ಸಹ ಇಲ್ಲಿ ಖುಷಿಯಿಂದಲೇ ಸಂಚಾರ ಮಾಡುತ್ತಿದ್ದಾರಾದರೂ ವೇಗದಲ್ಲಿ ಹೋಗಿ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ.

Exit mobile version