ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಹಣ, ಮದ್ಯದ ಹೊಳೆಯನ್ನೇ ಹರಿಸುತ್ತಿವೆ. ಈ ನಡುವೆ ಬೆಂಗಳೂರು, ಗದಗ, ದಾವಣಗೆರೆ ಯಾದಗಿರಿ ಸೇರಿ ವಿವಿಧ ಜಿಲ್ಲೆಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ, ಮದ್ಯೆ, ಸೀರೆ, ಕುಕ್ಕರ್ ಸೇರಿ ಸುಮಾರು 7.64 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
1.57 ಕೋಟಿ ರೂ. ಮೌಲ್ಯದ ಕುಕ್ಕರ್, ತವಾಗಳ ವಶ
ಬೆಂಗಳೂರು: ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಿಕೆ ಮಾಡಲು ದಾಸ್ತಾನು ಮಾಡಿದ್ದ 1.57 ಕೋಟಿ ರೂಪಾಯಿ ಮೌಲ್ಯದ ಕುಕ್ಕರ್ ಹಾಗೂ ತವಾಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ದಾಳಿಯಲ್ಲಿ 4533 ಕುಕ್ಕರ್, 10964 ತವಾಗಳು ಪತ್ತೆಯಾಗಿವೆ. ಆದರೆ, ಕುಕ್ಕರ್ ಮತ್ತು ತವಾಗಳು ಯಾವ ಪಕ್ಷದ ಅಭ್ಯರ್ಥಿಗೆ ಸೇರಿದ್ದು, ಎಲ್ಲಿಗೆ ಸಾಗಿಸಲು ದಾಸ್ತಾನು ಮಾಡಲಾಗಿತ್ತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಎಲ್ಲ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಎಟಿಎಂಗಳಿಗೆ ಸಾಗಿಸುತ್ತಿದ್ದ 4.5 ಕೋಟಿ ರೂಪಾಯಿ ಹಣ ಜಪ್ತಿ
ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ವೀರಸಂದ್ರ ಸಿಗ್ನಲ್ ಬಳಿಯ ಚೆಕ್ ಪೋಸ್ಟ್‌ನಲ್ಲಿ ರಿಸರ್ವ್ ಬ್ಯಾಂಕ್ ಗೈಡ್‌ಲೈನ್ಸ್ ಮೀರಿ ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ 4.75 ಕೋಟಿ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೀತಿ ಸಂಹಿತೆ ಮೀರಿ ವಿವಿಧ ಬ್ಯಾಂಕ್‌ಗಳ ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ರೈಟರ್ಸ್ ಎಂಬ ಭದ್ರತಾ ಏಜೆನ್ಸಿಯ ವಾಹನವನ್ನು ವಶಕ್ಕೆ ಪಡೆಯಲಾಗಿದೆ. 10 ಲಕ್ಷ ರೂಪಾಯಿ ಹೆಚ್ಚುವರಿ ಹಣ ಸಾಗಾಟ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಹೆಬ್ಬಗೋಡಿ ಪೊಲೀಸರು ಹಣವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Nandini vs Amul: ಒಂದು ದೇಶ-ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್: ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್
ನಟಿ ಶ್ರೀದೇವಿ ಕುಟುಂಬದ ಕಾರಿನಲ್ಲಿ 66 ಕೆ.ಜಿ. ಬೆಳ್ಳಿ ವಸ್ತುಗಳು ಪತ್ತೆ
ದಾವಣಗೆರೆ: ತಾಲೂಕಿನ ಹೆಬ್ಬಾಳ ಟೋಲ್ ಬಳಿ ಬಿಎಂಡಬ್ಲ್ಯು ಕಾರ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 39 ಲಕ್ಷ ರೂಪಾಯಿ ಮೌಲ್ಯದ 66 ಕೆ.ಜಿ. ಬೆಳ್ಳಿ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತಹಸೀಲ್ದಾರ್ ಡಾ. ಅಶ್ವತ್ ಹಾಗೂ ತಂಡ ಬೆಳ್ಳಿಯನ್ನು ವಶಕ್ಕೆ ಪಡೆದಿದೆ. ಬೆಳ್ಳಿ ಹಾಗೂ ಕಾರು, ಚಿತ್ರ ನಿರ್ಮಾಪಕ ಹಾಗೂ ಖ್ಯಾತ ನಟಿ ದಿವಂಗತ ಶ್ರೀದೇವಿ ಪತಿ ಬೋನಿ ಕಪೂರ್ ಅವರ ಕುಟುಂಬಕ್ಕೆ ಸೇರಿದ್ದು ಎಂಬ ಮಾಹಿತಿ ತಿಳಿದುಬಂದಿದೆ. ಆದರೆ ಕಾರಿನಲ್ಲಿ ಮಾಲೀಕರು ಯಾರೂ ಇರಲಿಲ್ಲ, ಹೀಗಾಗಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಗದು ಸೇರಿ 7.95 ಲಕ್ಷ ರೂ. ಮೌಲ್ಯದ ಮದ್ಯ ವಶ
ಗದಗ: ಜಿಲ್ಲೆಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಏಕಕಾಲಕ್ಕೆ ಪ್ರತ್ಯೇಕವಾಗಿ ಮೂರು ಚೆಕ್ ಪೋಸ್ಟ್‌ಗಳಲ್ಲಿ ನಗದು ಸೇರಿ 7.95 ಲಕ್ಷ ರೂಪಾಯಿ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಟೀರ ಚೆಕ್‌ಪೋಸ್ಟ್‌ನಲ್ಲಿ ಸೂಕ್ತ ದಾಖಲೆ ಇಲ್ಲದ 2,18,500 ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ ದಂಡಿನ ದುರ್ಗಮ್ಮ ಚೆಕ್‌ಪೋಸ್ಟ್‌ನಲ್ಲಿ 5,50,000 ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು ಶಿರಹಟ್ಟಿ ತಾಲೂಕಿನ ಶಿವಾಜಿ ನಗರ ಚೆಕ್‌ಪೋಸ್ಟ್‌ನಲ್ಲಿ 27,000 ಸಾವಿರ ಮೌಲ್ಯದ 69,120 ಲೀಟರ್ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
8 ಲಕ್ಷ ರೂ. ಮೌಲ್ಯದ 78 ರೇಷ್ಮೆ ಸೀರೆ ವಶ
ಗದಗ: ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 8 ಲಕ್ಷ ರೂ. ಮೌಲ್ಯದ 78 ರೇಷ್ಮೆ ಸೀರೆಗಳನ್ನು ಗದಗ ತಾಲೂಕಿನ ಬಿಂಕದಕಟ್ಟಿ ಬಳಿಯ ಹೆದ್ದಾರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂಧ್ರ ಪ್ರದೇಶದ ಕಡಪಾದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ವಾಹನ ಸಮೇತ ಬಗೆಬಗೆಯ ರೇಷ್ಮೆ ಸೀರೆಗಳನ್ನು ಗದಗ ಗ್ರಾಮೀಣ ಪೊಲೀಸರು ಜಪ್ತಿ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾದಗಿರಿಯಲ್ಲಿ 34 ಲಕ್ಷ ರೂಪಾಯಿ ಜಪ್ತಿ
ಯಾದಗಿರಿ: ನಗರದ ಹೊರವಲಯದ ಚೆಕ್‌ಪೊಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 34 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಂಕ್‌ವೊಂದರ ಎಟಿಎಂಗೆ ಹಣ ತುಂಬುವ ಭದ್ರತಾ ವಾಹನದಲ್ಲಿ ಹಣ ಸಾಗಿಸಲಾಗುತ್ತಿತ್ತು. ಯಾದಗಿರಿಯಿಂದ ಕಲಬುರಗಿ ಜಿಲ್ಲೆಯ ನಾಲವಾರ ಕಡೆ ಯಾವುದೇ ದಾಖಲೆಯಿಲ್ಲದೆ ಹಣ ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹಣ ಜಪ್ತಿ ಮಾಡಲಾಗಿದೆ. ಸ್ಥಳಕ್ಕೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Karnataka Election: ನೀತಿ ಸಂಹಿತೆ ಉಲ್ಲಂಘಿಸಿ ನಡೆಸುವ ರಸ್ತೆ ಕಾಮಗಾರಿಗಳಿಗೆ ತಡೆ ನೀಡಿ; ಜೆಡಿಎಸ್
ಕೋಲಾರ ಗಡಿಯಲ್ಲಿ 4.9 ಕೆ.ಜಿ ಬೆಳ್ಳಿ ಬಿಸ್ಕೆಟ್‌ಗಳ ವಶ
ಕೋಲಾರ: ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ 4.9 ಕೆ.ಜಿ ಬೆಳ್ಳಿ ಬಿಸ್ಕೆಟ್‌ಗಳನ್ನು ಜಿಲ್ಲೆಯ ಮುಳಬಾಗಿಲು ತಾಲೂಕಿನ ಗೋಕುಂಟೆ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದ ರಾಮಸಮುದ್ರಂ ಕಡೆಯಿಂದ ರಾಜ್ಯಕ್ಕೆ ಬರುತ್ತಿದ್ದ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ರಾಮಸಮುದ್ರಂನ ಆಭರಣ ವ್ಯಾಪಾರಿ ಶ್ರೀನಿವಾಸ್ ಎಂಬುವವರ ವಿರುದ್ಧ ಮುಳಬಾಗಲು ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 3 ಲಕ್ಷ ರೂಪಾಯಿ ಪತ್ತೆ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ರಮ್ಮನಹಳ್ಳಿ ಚೆಕ್ ಪೋಸ್ಟ್‌ನಲ್ಲಿ 3 ಲಕ್ಷ ರೂ.ಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೈಕ್‌ನಲ್ಲಿ ಯಾವುದೇ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದಾಗ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.