ಯಾದಗಿರಿ: ತನ್ನ ಹಾಗೂ ಪತ್ನಿಯ ನಡುವಿನ ಜಗಳವನ್ನು ಬಗೆಹರಿಸಲು ಸಂಬಂಧಿಕರನ್ನು ಮನೆಗೆ ಕರಿಸಿ ನಾಲ್ವರಿಗೆ ಬೆಂಕಿ ಹಚ್ಚಿರುವ ದುರಂತ ಘಟನೆ ಯಾದಗಿರಿಯಲ್ಲಿ ಬುಧವಾರ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಒಬ್ಬರು ಸ್ಥಳದಲ್ಲೆ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಇನ್ನಿಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ.
ಹುಲಿಗಮ್ಮ ಎಂಬ ಮಹಿಳೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಾರೆ. ಅವರ ಪತಿ ಶರಣಪ್ಪ ಜೆಸಿಬಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ಹಲವು ವರ್ಷಗಳಿಂದ ಹುಲಿಗಮ್ಮ ಹಾಗೂ ಪತಿ ಶರಣಪ್ಪ ನಡುವೆ ಕೌಟುಂಬಿಕ ಕಲಹ ನಡೆದಿತ್ತು. ಅನೇಕ ಬಾರಿ ಇವರಿಬ್ಬರೂ ಜಗಳವಾಡಿಕೊಂಡಿದ್ದರು. ಕಳೆದ 14 ತಿಂಗಳಿಂದ ಹುಲಿಗಮ್ಮ ಪತಿಯಿಂದ ದೂರಾಗಿ ಲಿಂಗಸೂರಿನಲ್ಲಿಯೇ ವಾಸವಾಗಿದ್ದರು. ಇಬ್ಬರ ಸಂಬಂಧ ಸರಿಯಾಗುವ ಯಾವುದೇ ಲಕ್ಷಣ ಇರಲಿಲ್ಲ.
ಇದೆಲ್ಲದರ ನಂತರ ಪತಿ ಶರಣಪ್ಪ ವಿಚ್ಛೇದನ ಪಡೆಯಲು ಮುಂದಾಗಿದ್ದ. ಆದರೆ ಇದಕ್ಕೆ ಹುಲಿಗಮ್ಮ ನಿರಾಕರಿಸಿದ್ದರು. ಇದರಿಂದ ಕೋಪಗೊಂಡಿದ್ದ ಶರಣಪ್ಪ ಮಗಳಿಗೆ ಬುದ್ಧಿವಾದ ಹೇಳಿ ಎಂದು ಹುಲಿಗಮ್ಮ ಪೋಷಕರಿಗೆ ಹೇಳಿದ್ದ. ಈ ವಿಷಯವಾಗಿ ಮಾತನಾಡಲು ಯಾದಗಿರಿಯ ನಾರಾಯಣಪುರಕ್ಕೆ ಬರುವಂತೆ ಹುಲಿಗಮ್ಮ ಅವರ ಸಂಬಂಧಿಕರರಿಗೆ ಶರಣಪ್ಪ ತಿಳಿಸಿದ್ದ.
ಕೂಡಿಹಾಕಿ ಕೊಳ್ಳಿ ಇಟ್ಟ
ಇಬ್ಬರ ನಡುವಿನ ಜಗಳವನ್ನು ಸರಿಪಡಿಸಿ ಸಂಸಾರವನ್ನು ಒಂದುಮಾಡಬೇಕೆಂದು ಸಂಬಂಧಿಕರು ಬಂದಿದ್ದರು. ಮನೆಗೆ ಬಂದ ಸಂಬಂಧಿಕರ ಜತೆ ಕೆಲಹೊತ್ತು ಮಾತನಾಡಿದ ಶರಣಪ್ಪ, ಇದ್ದಕ್ಕಿದ್ದಂತೆ ನಾಲ್ವರನ್ನೂ ಮನೆಯಲ್ಲಿ ಕೂಡಿ ಹಾಕಿದ. 5 ಲೀಟರ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ಬೆಂಕಿಯ ಶಾಖವನ್ನು ತಾಳಲಾಗದೆ ಅರಚಾಡುತ್ತಿದ್ದವರ ಧ್ವನಿಯನ್ನು ಕೇಳಿದ ಅಕ್ಕಪಕ್ಕದ ಮನೆಯವರು ಕೂಡಲೇ ಸ್ಥಳಕ್ಕೆ ಆಗಮಿಸಿ ಅವರ ರಕ್ಷಣೆಗೆ ಮುಂದಾದರು. ಸರಕು ಸಾಗಿಸುವ ವಾಹನಗಳಲ್ಲಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಈ ವೇಳೆಗಾಗಲೆ ನಾಗೇಶ್ ಚೆನ್ನಪ್ಪ(35) ಮೃತಪಟ್ಟಿದ್ದರು.
ಉಳಿದ ಮೂವರನ್ನೂ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಕೆಲ ಹೊತ್ತಿನ ನಂತರ ಶರಣಪ್ಪ(65) ಎಂಬವರೂ ಮೃತಪಟ್ಟಿದ್ದಾರೆ. ಇದೀಗ ಸಿದ್ರಾಮಪ್ಪ ಮುರಾಳ, ಮುತ್ತಪ್ಪ ಮುರಾಳ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ನಾರಾಯಣಪುರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Agnipath | ಅಗ್ನಿವೀರರ ನೇಮಕಕ್ಕೆ ರಾಜ್ಯದಲ್ಲಿ ನಡೆಯಲಿದೆ ನಾಲ್ಕು ರ‍್ಯಾಲಿ