ಮೈಸೂರು: ವ್ಯಕ್ತಿಯೊಬ್ಬರು ಕೆಲಸವನ್ನು ಪಡೆಯಬೇಕು ಎನ್ನುವ ಆಸೆಯಿಂದ ಆನ್ಲೈನ್ನಲ್ಲಿ ಬರೋಬ್ಬರಿ 48,80,200 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಸದ್ಯ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಕೊರೊನಾದಿಂದಾಗಿ ಕೆಲಸ ಕಳೆದುಕೊಂಡಿದ್ದ ಇಲ್ಲಿನ ಸಾತಗಳ್ಳಿ ನಿವಾಸಿಯೊಬ್ಬರು ಮೆಕ್ಯಾನಿಕಲ್ ಇಂಜಿನಿಯರ್ಗೆ ಸಂಬಂಧಪಟ್ಟ ಕೆಲಸ ಹುಡುಕಲು ಆನ್ಲೈನ್ ಮೊರೆ ಹೋಗಿದ್ದರು. ಈ ವೇಳೆ ಗೂಗಲ್‌ನಲ್ಲಿ ಎಮಿನೆಂಟ್ ಮೈಂಡ್ ವಿ ಸೋರ್ಸ್ ಎಂಬ ಹೆಸರಿನ ಕಂಪನಿಯನ್ನು ಸಂಪರ್ಕಿಸಿದ್ದರು. ಮೊದಲ ಬಾರಿ 1 ಸಾವಿರ ಹಣ ಕಟ್ಟುವಂತೆ ಕಂಪನಿಯ ಸಿಬ್ಬಂದಿ ತಿಳಿಸಿದ್ದರು. ಇದಕ್ಕೆ ಒಪ್ಪಿಕೊಂಡ ದೂರುದಾರ ಹಣ ಕಟ್ಟಿದ್ದರು. ಬಳಿಕ ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಹಣವನ್ನು ಪಡೆದಿದ್ದರು. ಆದರೆ, ಕೆಲಸದ ಬಗ್ಗೆ ಮಾತ್ರ ಯಾವುದೇ ಭರವಸೆ ನೀಡಿರಲಿಲ್ಲ. ಇದರಿಂದಾಗಿ ದೂರುದಾರ ಕೆಲಸ ಬೇಡ ಹಣ ವಾಪಸ್ ಕೊಡಿ ಎಂದಾಗ ಮತ್ತಷ್ಟು ಹಣಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ದೂರುದಾರ ಅನಿವಾರ್ಯವಾಗಿ ಮೈಸೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 24 ಲಕ್ಷ ರೂ. ನಗದು, 7 ಕೀಪ್ಯಾಡ್ ಮೊಬೈಲ್, 4 ಸ್ಮಾರ್ಟ್ ಫೋನ್, 11 ಸಿಮ್ ಕಾರ್ಡ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂವರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ಮೂವರು ಮತ್ತಷ್ಟು ಜನರಿಗೆ ವಂಚನೆ ಮಾಡಿರುವ ಸಾಧ್ಯತೆ ಹೆಚ್ಚಿದ್ದು, ತನಿಖೆ ಬಳಿಕ ಬಹಿರಂಗವಾಗಬೇಕಿದೆ.
ಇದನ್ನು ಓದಿ| ರಿಮೋಟ್ ಕಂಟ್ರೋಲ್ ತೂಕದ ಯಂತ್ರ ಬಳಸಿ ರೈತರಿಗೆ ಮೋಸ: ದಲ್ಲಾಳಿಗಳ ಅಕ್ರಮ ಬೆಳಕಿಗೆ