ಬೆಂಗಳೂರು: ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಜ್ಯೋತಿಷಿ ಒಬ್ಬರ ಮೇಲೆ ಭಕ್ತರ ಸೋಗಿನಲ್ಲಿ ಬಂದು ದಾಳಿ ನಡೆದಿದ್ದು, ಚಿನ್ನಾಭರಣ, ನಗದು ಎಗರಿಸಿ ಪರಾರಿಯಾಗಿದ್ದ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಸ್ವಾಮೀಜಿ ಆಪ್ತರೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಕೆಂಗೇರಿ ನಿವಾಸಿ ಪ್ರಮೋದ್ ಜ್ಯೋತಿಷಿ ಅವರ ಮನೆಗೆ ನುಗ್ಗಿದ ಆರೋಪಿಗಳು ಚಾಕು ತೋರಿಸಿ ಹಣ ಕೊಡುವಂತೆ ಬೆದರಿಸಿದ್ದಾರೆ. ಈ ವೇಳೆ ಜ್ಯೋತಿಷಿಗೆ ಇತ್ತೀಚೆಗೆ ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಪ್ರಕರಣ ನೆನಪಿಗೆ ಬಂದಿದ್ದರಿಂದ ಪ್ರತಿರೋಧ ಒಡ್ಡದೇ ಸುಮ್ಮನಾಗಿದ್ದಾರೆ. ನಂತರ ಆರೋಪಿಗಳು ಜ್ಯೋತಿಷಿಯ ಕೈಕಾಲು ಕಟ್ಟಿ 400 ಗ್ರಾಂ ಚಿನ್ನ ಹಾಗೂ 5 ಲಕ್ಷ ರೂಪಾಯಿಯನ್ನು ದೋಚಿ ಪರಾರಿಯಾಗಿದ್ದರು.
ಇದನ್ನು ಓದಿ| ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ: ಎದೆಯ ಮೇಲಿಟ್ಟು ಮೆರೆಸುತ್ತಿದ್ದವನು ಅರವತ್ತು ಕಡೆ ಇರಿದ
ಈ ದಾಳಿಯಿಂದ ಆಘಾತಕ್ಕೆ ಒಳಗಾಗಿದ್ದ ಪ್ರಮೋದ್ ಜ್ಯೋತಿಷಿಗೆ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ತನಿಖೆ ನಡೆಸಿದ್ದಾರೆ. ಆದರೆ, ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪರಿಚಯಸ್ಥರೇ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ಬಂದಿದೆ. ಕೂಡಲೇ ಜ್ಯೋತಿಷಿಯ ಆಪ್ತರನ್ನು ವಿಚಾರಣೆ ನಡೆಸಿದಾಗ ಅವರ ಪರಮಾಪ್ತೆ ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಬೆಳಕಿಗೆ ಬಂದಿದೆ.
ಕೂಡಲೇ ತನಿಖೆ ಚುರುಕುಗೊಳಿಸಿದ ಪೊಲೀಸರು ಜ್ಯೋತಿಷಿಯ ಆಪ್ತೆಯನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ ಆಡುಗೋಡಿ, ಮಡಿವಾಳ ಸೇರಿದಂತೆ ಹಲವೆಡೆ ರಾಬರಿ, ಸುಲಿಗೆ ಮಾಡಿದ್ದ ಆರೋಪಿಗಳನ್ನು ಬಳಸಿಕೊಂಡು ಈ ಕೃತ್ಯ ಮಾಡಿರುವುದಾಗಿ ಆಕೆ ಬಾಯಿಬಿಟ್ಟಿದ್ದಾಳೆ. ಸದ್ಯ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದೋಚಿರುವ ಚಿನ್ನಾಭರಣ, ನಗದನ್ನು ವಶಕ್ಕೆ ಪಡೆಯಲಾಗುತ್ತಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ| ಮೊದಲು ಚಂದ್ರಶೇಖರ್ ಗುರೂಜಿ ಕಾಲಿಗೆ ಬಿದ್ದರು, ನಂತರ 60 ಬಾರಿ ಇರಿದು ಕೊಂದರು!