Site icon Vistara News

ಸರಳ ವಾಸ್ತು ಚಂದ್ರಶೇಖರ್‌ ಗುರೂಜಿ ಹತ್ಯೆ: ಎದೆಯ ಮೇಲಿಟ್ಟು ಮೆರೆಸುತ್ತಿದ್ದವನು ಅರವತ್ತು ಕಡೆ ಇರಿದ

chandrashekhar guruji murderer mahantesh 1

ಹುಬ್ಬಳ್ಳಿ: ನಾಡಿನಾದ್ಯಂತ ವಾಸ್ತು ಶಾಸ್ತ್ರಕ್ಕೆ ಹೆಸರುವಾಸಿಯಾಗಿದ್ದ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹಾಡಹಗಲೇ ಕೊಲೆಯಾಗಿ ಹೋಗಿದ್ದಾರೆ. ಸರಳ ವಾಸ್ತು ಸಂಸ್ಥೆಯಲ್ಲೆ ಕೆಲಸ ಮಾಡುತ್ತ “ಗುರೂಜಿʼ ಎಂದು ಕರೆಯುತ್ತ ಚಂದ್ರಶೇಖರ ಗುರೂಜಿ ಅವರನ್ನು ಎದೆಯ ಮೇಲಿಟ್ಟು ಮೆರೆಸುತ್ತಿದ್ದ ಮಹಾಂತೇಶ ಶಿರೂರ್‌ ಈಗ ಹತ್ಯೆಯ ಆರೋಪಿ. ರಾಮದುರ್ಗದ ಬಳಿ ಮತ್ತೊಬ್ಬ ಆರೋಪಿ ಮಂಜುನಾಥ್‌ ಜತೆ ಸಿಕ್ಕಿಬಿದ್ದಾಗಲೂ ಈತನ ಮುಖದಲ್ಲಿ ಸ್ವಲ್ಪವೂ ಪಶ್ಚಾತ್ತಾಪದ ಭಾವನೆ ಇರಲಿಲ್ಲ.

ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವ, ಅತ್ಯಂತ ಸಭ್ಯರಂತೆ ನಟಿಸಿದ ಇಬ್ಬರು, ಉಣಕಲ್‌ ಕೆರೆ ಬಳಿ ಇರುವ ಪ್ರೆಸಿಡೆಂಟ್‌ ಹೋಟೆಲ್‌ ಸಿಬ್ಬಂದಿಯ ಕಣ್ಣೆದುರೇ ಅರವತ್ತು ಬಾರಿ ಚಂದ್ರಶೇಖರ್‌ ಗುರೂಜಿಗೆ ಇರಿದಿದ್ದಾರೆ. ಮಹಾಂತೇಶ್‌ ಶಿರೂರು ಹಾಗೂ ಮಂಜುನಾಥ್‌ನನ್ನು ಕೊಲೆ ನಡೆದ ಕೇವಲ ನಾಲ್ಕು ಗಂಟೆಯಲ್ಲೇ ಪೊಲೀಸರು ಸೆರೆ ಹಿಡಿದಿದ್ದಾರೆ.

ಹುಬ್ಬಳ್ಳಿಯಲ್ಲಿ ಕೊಲೆ ಮಾಡಿ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಸಂಚರಿಸುತ್ತಿದ್ದ ಆರೋಪಿಗಳಿಗೆ, ಪೊಲೀಸರು ಎನ್‌ಕೌಂಟರ್‌ ಮಾಡಿಬಿಡಬಹುದು ಎಂಬ ಭಯ ಶುರುವಾಗಿದೆ. ಕೂಡಲೆ ತಾವೆ ಪೊಲೀಸರಿಗೆ ಫೋನ್‌ ಮಾಡಿ ಬಂಧಿತವಾಗುವುದಾಗಿ ಹೇಳಿದ್ದಾರೆ. ಕೂಡಲೆ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿಸಿದ ಸಮಯದಲ್ಲಿ ಇಬ್ಬರ ಕೈಗಳನ್ನು ಹಿಡಿದು ಪೊಲೀಸರು ಎಳೆದೊಯ್ಯುತ್ತಿದ್ದಾರೆ.

ಕಾಣದ ಪಶ್ಚಾತ್ತಾಪ

ಉಣಕಲ್‌ ಕೆರೆ ಬಳಿ ಇರುವ ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿ ನಡೆದ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದ್ದು, ರಾಜ್ಯವನ್ನೆ ಬೆಚ್ಚಿ ಬೀಳಿಸಿದೆ. ಚಂದ್ರಶೇಖರ ಗುರೂಜಿ ಸೋಫಾದ ಮೇಲೆ ಕೂರುತ್ತಿದ್ದಂತೆಯೇ ಅವರ ಕಾಲ ಬಳಿ ಬಗ್ಗಿ ಒಬ್ಬ ನಮಸ್ಕರಿಸುತ್ತಾನೆ. ಪಕ್ಕದಲ್ಲಿಯೇ ಚಾಕುವನ್ನು ಪೇಪರ್‌ನಲ್ಲಿ ಮುಚ್ಚಿಟ್ಟುಕೊಂಡಿದ್ದ ಮತ್ತೊಬ್ಬ ಹಂತಕ ಗುರೂಜಿಯ ಎದೆ, ಕುತ್ತಿಗೆಗೆ ಬಲವಾಗಿ ಚಾಕುವಿನಿಂದ ಇರಿಯುತ್ತಾನೆ. ಅವರು ತಪ್ಪಿಸಿಕೊಳ್ಳಲು ಕಿರುಚುತ್ತಾ ಎದ್ದು ನಿಂತರೂ ಬಿಡದ ಹಂತಕರಿಬ್ಬರೂ, ಜಿದ್ದಿಗೆ ಬಿದ್ದವರಂತೆ ಚಾಕುವಿನಿಂದ ಇರಿಯುತ್ತಲೇ ಇರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆರೋಪಿಗಳಾದ ಮಂಜುನಾಥ ಹಾಗೂ ಮಹಾಂತೇಶನನ್ನು ಪೊಲೀಸರು ಬಂಧಿಸಿ ಕರೆದೊಯ್ದರು

ಗುರೂಜಿ ನೆಲಕ್ಕುರುಳಿದರೂ ಬಿಡದೆ ಅವರನ್ನು ನಿರಂತರವಾಗಿ ಇರಿಯಲಾಗಿದೆ. ಕೇವಲ ೪೦ ಸೆಕೆಂಡುಗಳಲ್ಲಿ ಸುಮಾರು ೬೦ಕ್ಕೂ ಹೆಚ್ಚು ಬಾರಿ ಹಂತಕರು ಇರಿದಿದ್ದಾರೆ. ಹಂತಕರಲ್ಲಿ ಒಬ್ಬ ಮೊದಲಿಗೆ ಓಡಿ ಹೋದರೆ, ಇನ್ನೊಬ್ಬ ಇನ್ನಷ್ಟು ಬಾರಿ ಇರಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇಬ್ಬರೂ ಹೋಟೆಲ್‌ನಿಂದ ಹೊರ ಹೋಗಿರುವುದು ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಇಷ್ಟೆಲ್ಲ ಭಯಾನಕ ಕೊಲೆ ಮಾಡಿದರೂ, ಪೊಲೀಸರು ಬಂಧಿಸುವ ಸಮಯದಲ್ಲಿ ಆರೋಪಿಗಳ ಮುಖದಲ್ಲಿ ಸ್ವಲ್ಪವಾದರೂ ಭಯವಾಗಲಿ, ಆತಂಕವಾಗಲಿ ಅಥವಾ ಪಶ್ಚಾತ್ತಾಪದ ಭಾವನೆ ಕಂಡುಬರಲೇ ಇಲ್ಲ. ʻಜೋರಾಗಿ ನೂಕಬೇಡಿʼ ಎಂದು ಪೊಲೀಸರಿಗೇ ಜೋರು ಮಾಡಿರುವ ಮಹಾಂತೇಶ, ʼನೂಕಬೇಡಿ. ನೀವು ಬರಲಿಲ್ಲ ಎಂದಿದ್ದರೂ ನಾವೇ ಫೋನ್‌ ಮಾಡಿ ಬರುತ್ತಿದ್ದೆವುʼ ಎಂದು ಜೋರು ಮಾಡಿದ್ದಾನೆ.

ಎದೆ ಮೇಲೆ ಗುರೂಜಿ ಚಿತ್ರ

2009ರಿಂದ ಸರಳ ವಾಸ್ತುವಿನಲ್ಲಿ ಕೆಲಸ ಮಾಡುತ್ತಿದ್ದ ಮಹಾಂತೇಶ, ಗುರೂಜಿ ಅವರನ್ನು ಕಂಡರೆ ಅತ್ಯಂತ ಪ್ರೀತಿ ಹೊಂದಿದ್ದವ. ಪ್ರತಿ ವರ್ಷ ಆಗಸ್ಟ್‌ 8ನೇ ತಾರೂಕು ಚಂದ್ರಶೇಖರ ಗುರೂಜಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಆಶೀರ್ವಾದ ಪಡೆಯುತ್ತಿದ್ದ. ತನ್ನ ಫೇಸ್‌ಬುಕ್‌ ಪುಟದಲ್ಲಿ, ಗುರುಬ್ರಹ್ಮ, ಗುರು ವಿಷ್ಣು… ಶ್ಲೋಕ ಹಾಕಿ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದ.

ಸರಳ ವಾಸ್ತು ಸಿಬ್ಬಂದಿಗೆ ಮಾಡಿಸಲಾಗಿದ್ದ ವಿಶೇಷ ಟಿ ಷರ್ಟ್‌ ಧರಿಸಿ 2018ರಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದ. ಬಲ ಎದೆಯ ಮೇಲೆ ಚಂದ್ರಶೇಖರ ಗುರೂಜಿ ಅವರ ಭಾವಚಿತ್ರವಿದ್ದ ಹಳದಿ ಟಿ ಷರ್ಟ್‌ ಧರಿಡಿ ಗುರೂಜಿ ಅವರೊಂದಿಗೆ ಹತ್ತಾರು ಸೆಲ್ಫಿ ತೆಗೆದುಕೊಂಡಿದ್ದಾನೆ. ಆದರೆ ಇದೀಗ ಅದೇ ಗುರೂಜಿ ಅವರನ್ನು ಅತ್ಯಂತ ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಿದ್ದಾನೆ.

ಆಸ್ತಿ ಮಾಡಿರುವುದು ಸುಳ್ಳು ಎಂದ ವನಜಾಕ್ಷಿ

ಚಂದ್ರಶೇಖರ ಗುರೂಜಿ ಅವರ ಸರಳ ವಾಸ್ತು ಸಂಸ್ಥೆಯಲ್ಲಿ ಮಹಾಂತೇಶ ಕೆಲಸ ಮಾಡುತ್ತಿದ್ದ ಎನ್ನುವುದನ್ನು ಆತನ ಪತ್ನಿ ವನಜಾಕ್ಷಿ ಖಚಿತಪಡಿಸಿದ್ದಾರೆ. ಇಬ್ಬರೂ ಅಲ್ಲಿ ಕೆಲಸ ಮಾಡುತ್ತಿದ್ದೆವು. ನಾನು 16 ವರ್ಷ ಕೆಲಸ ಮಾಡಿದ್ದೇವೆ, ನಮ್ಮ ಮನೆಯವರು 2009ರಿಂದ ಕೆಲಸ ಮಾಡಿದ್ದಾರೆ. ಇಬ್ಬರನ್ನೂ ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಮಹಾಂತೇಶ್‌ ಕೆಲಸ ಬಿಟ್ಟಿರುವುದು ನಿಜವೇ ಆದರೂ ಅದೇನೂ ಜಗಳ ಆಡಿಕೊಂಡು ಹೊರಬಂದಿದ್ದಲ್ಲ. ಅವರು ಏಕೆ ಕೆಲಸ ಬಿಟ್ಟರು ಎಂದು ನನಗೆ ಹೇಳಿಲ್ಲ. ಗುರೂಜಿ ಅವರನ್ನೂ ಕೇಳಿದೆ, ನೀನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದಿದ್ದರು. ಈಗ ಏಕೆ ಹೀಗಾಗಿದೆ ಗೊತ್ತಿಲ್ಲ. ನಮ್ಮ ಮನೆಯವರು ಏಕೆ ಕೊಲೆ ಮಾಡಿದ್ದಾರೆ ಎನ್ನುವುದೂ ಗೊತ್ತಿಲ್ಲ.

ಅಪಾರ್ಟ್‌ಮೆಂಟ್‌ ಹಾಗೂ ಬೇನಾಮಿ ಆಸ್ತಿ ಕುರಿತು ಪ್ರತಿಕ್ರಿಯಿಸಿ, ಯಾವ ಬೇನಾಮಿ ಆಸ್ತಿಯನ್ನೂ ನನ್ನ ಹೆಸರಿನಲ್ಲಿ ಮಾಡಿಲ್ಲ. ಈ ಅಪಾರ್ಟ್‌ಮೆಂಟ್‌ ಮೊದಲು ಗುರೂಜಿ ಅವರ ಹೆಸರಿನಲ್ಲಿತ್ತು, ಈಗ ಬೇರೆಯವರು ಖರೀದಿಸಿದ್ದಾರೆ. ಇದೊಂದು ಫ್ಲಾಟ್‌ ಮಾತ್ರ ನನ್ನ ಹೆಸರಿನಲ್ಲಿದೆ, ಅದೂ ಇಪ್ಪತ್ತು ವರ್ಷ ನನ್ನ ಹೆಸರಿನಲ್ಲಿ ಸಾಲದಲ್ಲಿದೆ. ಈಗಿನ್ನೂ ಮೂರು ವರ್ಷದ ಸಾಲ ಮಾತ್ರ ತೀರಿದೆ. ಆಸ್ತಿಯದ್ದೆಲ್ಲ ಸುಳ್ಳು ಎಂದರು.

ಹತ್ಯೆ ನಡೆದ ಸನ್ನಿವೇಶ

Exit mobile version