Site icon Vistara News

Aero India 2023: ಭಾರತದ ರಕ್ಷಣಾ ರಫ್ತು 2024ರಲ್ಲಿ 500 ಕೋಟಿ ಡಾಲರ್‌ ಗುರಿ: ಹೂಡಿಕೆದಾರರಿಗೆ ಸುವರ್ಣಾವಕಾಶ ಎಂದ ಪ್ರಧಾನಿ ಮೋದಿ

aero-india-2023-prime-minister-narendra-modi-says-huge-opportunity-to-invest-in-defence-sector

#image_title

ಬೆಂಗಳೂರು: ಭಾರತದ ರಕ್ಷಣಾ ಕ್ಷೇತ್ರವು ಹಿಂದೆಂದಿಗಿಂತಳೂ ವೇಗವಾಗಿ ಮುನ್ನುತ್ತಿದ್ದು, 2024ರಲ್ಲಿ 500 ಕೋಟಿ ಡಾಲರ್‌ (5 ಬಿಲಿಯನ್‌ ಡಾಲರ್‌) ಗುರಿ ಹೊಂದಿದೆ. ಅನುಭವ, ಬೇಡಿಕೆ, ಕೌಶಲ್ಯ ಎಲ್ಲವನ್ನೂ ಹೊಂದಿರುವ ಭಾರತದಲ್ಲಿ, ಕರ್ನಾಟಕದಲ್ಲಿ ಹೂಡಿಕೆ ಮಾಡಲು ಇದು ಸುವರ್ಣಾವಕಾಶ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಯಲಹಂಕದ ವಾಯುನೆಲೆಯಲ್ಲಿ ಐದು ದಿನ ನಡೆಯಲಿರುವ ಏಷ್ಯಾದ ಅತ್ಯಂತ ದೊಡ್ಡ ಏರ್‌ ಶೋ, 14ನೇ ಆವೃತ್ತಿಯ ಏರೋ ಇಂಡಿಯಾಗೆ ಚಾಲನೆ ನೀಡಿ ಮಾತನಾಡಿದರು.

ಏರೋ ಇಂಡಿಯಾ ಆಯೋಜನೆಯು ಭಾರತದ ಹೆಚ್ಚುತ್ತಿರುವ ಶಕ್ತಿಯ ಪ್ರತೀಕ. ಇಷ್ಟು ದೇಶಗಳು ಭಾಗವಹಿಸುತ್ತಿರುವುದನ್ನು ನೋಡಿದರೆ, ಭಾರತದ ಕುರಿತು ವಿಶ್ವದ ವಿಶ್ವಾಸವನ್ನು ತೋರಿಸುತ್ತದೆ. ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದು ಮುನ್ನಡೆಯುತ್ತಿರುವ ಈ ಬಾರಿಯ ಏರೋ ಇಂಡಿಯಾದಲ್ಲಿ ಬೃಹತ್‌ ಕಂಪನಿಗಳಿಂದ ಸಣ್ಣ ಕೈಗಾರಿಕೆಗಳವರೆಗೆ ಪಾಲ್ಗೊಳ್ಳುವಿಕೆ ಕಾಣುತ್ತಿದೆ. ಆತ್ಮನಿರ್ಭರವಾಗುವ ಭಾರತದ ಶಕ್ತಿ ಹೀಗೇ ಮುಂದುವರಿಯಲಿ ಎಂದು ಆಶಿಸುತ್ತೇನೆ ಎಂದರು.

ಇಲ್ಲಿ ರಕ್ಷಣಾ ಸಚಿವರ ಕಾನ್‌ಕ್ಲೇವ್‌ ಹಾಗೂ ಸಿಇಒಗಳ ರೌಂಡ್‌ ಟೇಬಲ್‌ ಸಹ ಆಯೋಜನೆಯಾಗಿದೆ. ಇದರಿಂದ ಏರೋ ಇಂಡಿಯಾ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ. ಇದೆಲ್ಲ ಉಪಕ್ರಮಗಳಿಗಾಗಿ ರಕ್ಷಣಾ ಸಚಿವಾಲಯ ಹಾಗೂ ಕೈಗಾರಿಕಾ ವಲಯಕ್ಕೆ ಶುಭಾಶಯಗಳು ಎಂದು ಮೋದಿ ಹಾರೈಸಿದರು.

21ನೇ ಶತಮಾನದ ಹೊಸ ಭಾರತವು ಯಾವುದೇ ಅಕಾಶವನ್ನೂ ಕೈಬಿಡುವುದಿಲ್ಲ ಎಂದ ಮೋದಿ, ಇದಕ್ಕಾಗಿ ಶ್ರಮ ವಹಿಸುವುದರಿಂದಲೂ ನಾವು ಹಿಂದೆ ಸರಿಯುವುದಿಲ್ಲ. ಈ ಹಿಂದೆ ಅತಿ ದೊಡ್ಡ ರಕ್ಷಣಾ ಉಪಕರಣ ಆಮದು ರಾಷ್ಟ್ರವಾಗಿದ್ದ ಭಾರತ ಈಗ ಐವತ್ತಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಫ್ತು ಮತ್ತಷ್ಟು ಹೆಚ್ಚಾಗಲಿದೆ. ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಬಹುದೊಡ್ಡ ಅವಕಾಶವಿದೆ.

ಈ ಏಳೆಂಟು ವರ್ಷದಲ್ಲಿ ರಕ್ಷಣಾ ಕ್ಷೇತ್ರ ಬಹುದೊಡ್ಡ ಬದಲಾವಣೆ ಕಂಡಿದೆ. ಇದು ಕೇವಲ ಆರಂಭ. ಈಗ ನೂರೈವತ್ತು ಕೋಟಿ ಡಾಲರ್‌ ಮೊತ್ತದಷ್ಟು ಇರುವವ ಭಾರತದ ರಕ್ಷಣಾ ರಫ್ತು ಪ್ರಮಾಣವು 2024ರ ವೇಳೆಗೆ ಐದುನೂರು ಕೋಟಿ ಡಾಲರ್‌ಗೆ ಹೆಚ್ಚುವ ಗುರಿ ಹೊಂದಿದ್ದೇವೆ. ಇದಕ್ಕೆ ಏರೋ ಇಂಡಿಯಾ ಒಂದು ಚಿಮ್ಮು ಹಲಗೆಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಖಾಸಗಿ ಕ್ಷೇತ್ರ ಹಾಗೂ ಹೂಡಿಕೆದಾರರ ಪಾತ್ರ ಮಹತ್ವದ್ದು. ಹೆಚ್ಚೆಚ್ಚು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಎಂದು ಹೂಡಿಕೆದಾರರಿಗೆ ಕರೆ ನೀಡುತ್ತೇನೆ. ನಿಮ್ಮ ವ್ಯಾಪಾರಕ್ಕೆ ಹೊಸ ಅವಕಾಶಗಳನ್ನು ಇದು ಒದಗಿಸುತ್ತದೆ. ಅಮೃತಕಾಲದ ಭಾರತವು ಒಬ್ಬ ಫೈಟರ್‌ ಪೈಲಟ್‌ ರೀತಿ ಮುನ್ನುಗ್ಗುತ್ತಿದೆ. ಈಗಿನ ಭಾರತಕ್ಕೆ ಎತ್ತರಗಳನ್ನು ಏರಲು ಭಯ ಆಗುವುದಿಲ್ಲ. ಅತ್ಯಂತ ಉತ್ಸಾಹದಿಂದ ಎತ್ತರಕ್ಕೆ ಹಾರುವ, ವೇಗವಾಗಿ ಹೋಗುವ ಹಾಗೂ ಅತ್ಯಂತ ಶೀಘ್ರವಾಗಿ ನಿರ್ಧಾರ ಕೈಗೊಳ್ಳುವ ಫೈಟರ್‌ ಪೈಲಟ್‌ ರೀತಿಯಲ್ಲಿ ದೇಶವೂ ಮುನ್ನಡೆಯುತ್ತಿದೆ.

ಇದನ್ನೂ ಓದಿ: Aero India 2023 : ರಾಜ್ಯದಲ್ಲೇ ಹೊಸ ಏರೋಸ್ಪೇಸ್‌ ನೀತಿ, ವೈಮಾನಿಕ ಕ್ಷೇತ್ರದಲ್ಲಿ ಮಹತ್ಸಾಧನೆಗೆ ಅಣಿ ಎಂದ ಬೊಮ್ಮಾಯಿ

ಆದರೆ ಇಷ್ಟೆಲ್ಲ ಎತ್ತರಕ್ಕೆ ಹಾರಿದರೂ ನೆಲಕ್ಕೆ ಕಿವಿ ಕೊಟ್ಟಿದೆ. ನೆಲಮಟ್ಟದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿಯುತ್ತಿದೆ. ನಮ್ಮ ಎಲ್ಲ ನೀತಿ, ನಿರ್ಧಾರಗಳಲ್ಲಿ ನಿಯತ್ತು ಇದೆ. ಎಲ್ಲ ಕ್ಷೇತ್ರ ಹಾಗೂ ಹೂಡಿಕೆದಾರರೂ ಇದೆಲ್ಲದರ ಲಾಭವನ್ನು ಪಡೆದುಕೊಳ್ಳಬೇಕು. ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌ನಲ್ಲಿ ಮಾಡಿರುವ ಸುಧಾರಣೆಗಳು ವಿಶ್ವಾದ್ಯಂತ ಪ್ರಶಂಸೆಗೆ ಒಳಗಾಗುತ್ತಿದೆ. ಉದ್ಯಮಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಸರಳವಾಗಿಸಿದ್ದೇವೆ, ಅದರ ಅವಧಿಯನ್ನು ಹೆಚ್ಚಿಸಿದ್ದೇವೆ.

ಭಾರತದಕಲ್ಲಿ ಬೇಡಿಕೆಯೂ ಇದೆ, ಸಾಮರ್ಥ್ಯವೂ ಇದೆ, ಅನುಭವವೂ ಇದೆ. ಸಹಜ ನ್ಯಾಯ ಹೇಳುವುದೆಂದರೆ ಇಲ್ಲಿ ಕೈಗಾರಿಕೆ ದಿನೇದಿನೇ ಬೆಳೆಯುತ್ತದೆ. ಇನ್ನು ಮುಂದೆಯೂ ರಕ್ಷಣಾ ಕ್ಷೇತ್ರ ವೇಗವಾಗಿ ಬೆಳೆಯಲಿದೆ. ಮುಂದಿನ ದಿನಗಳಲ್ಲಿ ಏರೋ ಇಂಡಿಯಾದ ಮತ್ತಷ್ಟು ವೈಭವಯುತ ಆಯೋಜನೆ ಮಾಡಲಿದ್ದೇವೆ ಎಂದು ನಿರೀಕ್ಷೆ ಹೊಂದಿದ್ದೇನೆ ಎಂದರು.

Exit mobile version