Site icon Vistara News

Karnataka Election 2023: ಪ್ರಭು ರಾಮ ಆಯ್ತು, ಈಗ ಹನುಮನನ್ನು ಬಂಧಿಸಿಡಲು ಹೊರಟಿದೆ ಕಾಂಗ್ರೆಸ್: ಪಿಎಂ ಮೋದಿ

after Prabhu Rama, now Congress is going to lock up Hanuman: PM Modi lashed out

ಹೊಸಪೇಟೆ, ಕರ್ನಾಟಕ: ನಾನು ರಾಮನ ಭಕ್ತ ಹನುಮಾನ್ ಜನಿಸಿದ ಭೂಮಿಗೆ ಬಂದಿದ್ದೇನೆ. ಇದೇ ಸಮಯದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ಬಜರಂಗಬಲಿಗೆ ಬೀಗ ಹಾಕಿ, ಬಂಧಿಸುವುದಾಗಿ ಹೇಳುತ್ತಿದೆ. ಜೈ ಬಜರಂಗಬಲಿ ಎಂದು ಕೂಗುವವರ ಮೇಲೆ ನಿಷೇಧ ಹೇರುವ ಭರವಸೆ ನೀಡಿದೆ. ಈ ಕಾಂಗ್ರೆಸ್‌ಗೆ ಮೊದಲು ಪ್ರಭು ಶ್ರೀರಾಮಚಂದ್ರನನ್ನು ಕಂಡರೆ ಆಗುತ್ತಿರಲಿಲ್ಲ. ಈಗ ರಾಮನ ಭಕ್ತ ಹನುಮಾನ್ ಮೇಲೂ ವಿಷಕಾರುತ್ತಿದೆ. ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು(Karnataka election 2023).

ಹೊಸಪೇಟೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಉಲ್ಲೇಖಿಸಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಮಾಜದಲ್ಲಿ ದ್ವೇಷ ಭಾವನೆ ಬಿತ್ತುವ ಬಜರಂಗದಳ, ಪಿಎಫ್ಐಗಳಂಥ ಸಂಘಟನೆಗಳನ್ನು ನಿಷೇಧಿಸುವ ಭರವಸೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ.

ಹೊಸಪೇಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಹನುಮಾನ್ ಜನಿಸಿದ ಈ ನಾಡಿನಲ್ಲಿ ನಿಂತು ಹೇಳುತ್ತಿದ್ದೇನೆ, ಕರ್ನಾಟಕದ ಸಂಸ್ಕೃತಿ, ಪರಂಪರೆ, ಮರ್ಯಾದೆ, ಘನತೆಗೆ ಒಂದು ಕಪ್ಪು ಚುಕ್ಕೆ ಆಗದಂತೆ ಬಿಜೆಪಿ ನೋಡಿಕೊಳ್ಳಲಿದೆ. ಬಿಜೆಪಿ ಕೂಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ನಾಡಿನ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ದೇಶದಲ್ಲೇ ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡುವ ಸಂಕಲ್ಪ ಮಾಡಿದ್ದೇವೆ. ಈ ಸಂಕಲ್ಪಕ್ಕೆ ಬದ್ಧರಾಗಿದ್ದೇವೆ. ನಮ್ಮ ಈ ಸಂಕಲ್ಪಕ್ಕೆ ಆಶೀರ್ವಾದ ಕೇಳಲು ಹನುಮಾನ್ ಜನಿಸಿದ ನಾಡಿಗೆ ಬಂದಿದ್ದೇನೆ. ಬಿಜೆಪಿ ಕರ್ನಾಟಕದಲ್ಲಿ ಅಭಿವೃದ್ಧಿಯನ್ನು ಕೈಗೊಳ್ಳಲಿದೆ. ಕರ್ನಾಟಕದ ಯುವಕರಿಗೆ ಹೊಸ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದೆ.

ವಿಜಯನಗರ ಸಾಮ್ರಾಜ್ಯದ ಶೀಕೃಷ್ಣ ದೇವರಾಯ ಆಡಳಿತವು ಉತ್ತಮವಾಗಿತ್ತು. ಅವರು ದೇಶ ವಿದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಇಟ್ಟುಕೊಂಡಿದ್ದರು. ಕರ್ನಾಟಕ ಸಂಸ್ಕೃತಿಯನ್ನು ವಿಶ್ವಾದ್ಯಂತ ಪಸರಿಸಿದರು. ಈ ಪ್ರದೇಶದ ನಾಗರಿಕತೆಯನ್ನು ಜೀವಂತವಾಗಿಡಲು ಪ್ರಯತ್ನಿಸದರು. ವಿಜಯನಗರ ಸಾಮ್ರಾಜ್ಯದ ಪರಂಪರೆಯನ್ನು ಕೇಂದ್ರ ಸರ್ಕಾರ ಗೌರವಿಸುತ್ತದೆ. ಶ್ರೀಕೃಷ್ಣದೇವರಾಯ ಅವರ ಹಾದಿಯಲ್ಲೇ ಕೇಂದ್ರ ಸರ್ಕಾರ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಇದನ್ನೂ ಓದಿ: Karnataka Election: ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್‌ ಗಾಂಧಿ ಕೇಳಿದ 3 ಪ್ರಶ್ನೆ ಏನು?; ಭಾಷಣ ಕಡಿಮೆ ಮಾಡಲು ಹೇಳಿದ್ದೇಕೆ?

ರೈತರ ಪಟ್ಟಿ ಕಳುಹಿಸದ ಕಾಂಗ್ರೆಸ್-ಜೆಡಿಎಸ್ ಸರ್ಕಾರ

ಈ ದೇಶದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಜಾರಿಗೆ ತಂದಿತು. ಆಗ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಜಾರಿಯಲ್ಲಿತ್ತು. ಆಗ ಇವರು ಕರ್ನಾಟಕದ ರೈತರಿಗೆ ಎಂಥ ಮೋಸ ಮಾಡಿದರು, ಎಂಥ ವಿಶ್ವಾಸದ್ರೋಹ ಮಾಡಿದರು ಎಂದರೆ, ಕೇಂದ್ರ ಸರ್ಕಾರಕ್ಕೆ ಕರ್ನಾಟಕದ 50 ಲಕ್ಷ ರೈತರ ಹೆಸರಿನ ಪಟ್ಟಿಯನ್ನೇ ಕಳುಹಿಸಿಕೊಡಲಿಲ್ಲ. ಇದರಿಂದ ಕರ್ನಾಟಕದ ರೈತರಿಗೆ ಭಾರೀ ಅನ್ಯಾಯವಾಯಿತು. ಕೇಂದ್ರ ಸರ್ಕಾರವು ಪದೇ ಪದೇ ಪಟ್ಟಿಯನ್ನು ಕಳುಹಿಸುವಂತೆ ಮನವಿ ಮಾಡಿಕೊಂಡರೂ ಸಮ್ಮಿಶ್ರ ಸರ್ಕಾರ ಕಳುಹಿಸಲಿಲ್ಲ. ಅವರಿಗೆ ರೈತರ ಬಗ್ಗೆ ಕಾಳಜಿಯೇ ಇರಲಿಲ್ಲ. ಮುಂದೆ ಬಿಜೆಪಿ ಸರ್ಕಾರ ಬಂದಾಗ ಪಟ್ಟಿ ಪಡೆದು ರೈತರ ಖಾತೆಗಳಿಗೆ ನೆರವು ಒದಗಿಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

Exit mobile version