ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಎರಡೂ ಕಡೆಯಲ್ಲೂ ಆಡಳಿತ ಪಕ್ಷ vs ವಿರೋಧ ಪಕ್ಷಗಳ ಜಟಾಪಟಿ ಜೋರಾಗಿದೆ. ಅಧಿಕಾರ ದುರಪಯೋಗ ಎಂದು ಕಾಂಗ್ರೆಸ್ ನಾಯಕರು ದೂರಿದ್ದರೆ ಇತ್ತ ಕಾನೂನು ಹೋರಾಟದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ, ಯಾಕೆ ಪ್ರತಿಭಟನೆಯ ಪ್ರಹಸನ ಎಂದು ಬಿಜೆಪಿ ನಾಯಕರು ಹೀಯಾಳಿಸುತ್ತಿದ್ದಾರೆ.
ಇದನ್ನೂ ಓದಿ |National Herald case| ಶುಕ್ರವಾರ ವಿಚಾರಣೆಗೆ ಹಾಜರಾಗಲು ರಾಹುಲ್‌ಗೆ ಮತ್ತೆ ಇಡಿ ಸಮನ್ಸ್
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಯಂಗ್ ಇಂಡಿಯಾ ಸಂಸ್ಥೆಗೆ ವರ್ಗಾವಣೆ ಮಾಡಿರುವುದರಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಕೇಂದ್ರ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇ.ಡಿ ನೋಟಿಸ್ ನೀಡಿದೆ. ಈ ವಿಚಾರವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕರು ದೆಹಲಿ ಜತೆಗೆ ಕರ್ನಾಟಕದಲ್ಲಿ ಪ್ರತಿಭಟನೆ, ಪಾದಯಾತ್ರೆ ಎಂದು ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ನಿನ್ನೆಯಷ್ಟೇ ರಾಜಧಾನಿ ಬೆಂಗಳೂರಿನಲ್ಲಿ ಘಟಾನುಘಟಿ ನಾಯಕರು ಬೀದಿಗಿಳಿದು ಪ್ರತಿಭಟಿಸಿದ್ದರು. ಇದಾದ ಬಳಿಕ ಇಂದು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೆಸ್ ಬ್ಲಾಕ್ ಸಮಿತಿ, ಮಾಜಿ ಸಚಿವರು, ಶಾಸಕರು ಮೆರವಣಿಗೆ ಮಾಡಿ, ಮನವಿ ಪತ್ರ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ
ವಿಜಯನಗರ, ತುಮಕೂರು, ಶಿವಮೊಗ್ಗ, ಕೊಡಗು, ದಾವಣಗೆರೆ ಹಾಗೂ ರಾಯಚೂರು, ಹುಬ್ಬಳ್ಳಿ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ ಕಚೇರಿ ಆವರಣದ ಸುತ್ತ ಖಾಕಿ ಸರ್ಪಗಾವಲು ರಚಿಸಿತ್ತು. ಪ್ರತಿಭಟನಾಕಾರರು ಬ್ಯಾರಿಕೇಡ್ ಮುರಿದು ಮುನ್ನುಗ್ಗಲು ಬಂದಾಗ ಪೊಲೀಸರು ವಶಕ್ಕೆ ಪಡೆದುಕೊಂಡರು. ಆಕ್ರೋಶಗೊಂಡ ಕಾರ್ಯಕರ್ತರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.
ಹಾವೇರಿಯಲ್ಲಿ ಪೊಲೀಸರು ಮತ್ತು ಕೈ ನಾಯಕರ ನಡುವೆ ಜಟಾಪಟಿ ನಡೆಯಿತು. ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಮಾಜಿ ಸಚಿವ ಬಸವರಾಜ್ ಶಿವಣ್ಣನವರ್, ಶಾಸಕ ಶ್ರೀನಿವಾಸ ಮಾನೆ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದ ಘಟನೆಯು ನಡೆಯಿತು. ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಬೈಕ್ ರ‍್ಯಾಲಿ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಒಳಗೆ ತೆರಳಿ ಮನವಿ ಸಲ್ಲಿಸಿದರು. ಇತ್ತ ಮಂಡ್ಯದಲ್ಲೂ ಮಾಜಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಜಾಥಾ ನಡಿತು. ಚಿತ್ರದುರ್ಗದ ಅಂಬೇಡ್ಕರ್ ವೃತ್ತದಿಂದ ಶುರುವಾದ ಮೆರವಣಿಗೆಯು ಕಾರ್ಯಕರ್ತರು ಡಿಸಿ ಕಚೇರಿಗೆ ನುಗ್ಗಲು ಪ್ರಯತ್ನಿಸಿದಾಗ ಧರಣಿ ನಿರತ ಐವರು ಕಾಂಗ್ರೆಸ್ ಮುಖಂಡರನ್ನು ಬಂಧಿಸಲಾಯಿತು.ಪೊಲೀಸರೊಂದಿಗೆ ಠಾಣೆ ಎದುರೇ ಪ್ರತಿಭಟನಾಕಾರು ಮಾತಿನ ಚಕಮಕಿ, ವಾಗ್ವಾದ ನಡೆಸಿದರು.
ಮಾಜಿ ಸಚಿವರ ಆಕ್ರೋಶ
ಕಾಂಗ್ರೆಸ್‌ನ ಮಾಜಿ ಸಚಿವರೆಲ್ಲರೂ ಬಿಜೆಪಿ ವಿರುದ್ಧ ಹರಿಹಾಯದ್ದರು. ಮಾಜಿ ಸಚಿವ ಶಿವರಾಜ ತಂಗಡಗಿ ಮಾತಾನಾಡಿ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಪಕ್ಷ ಹಾಗೂ ಆರ್ ಎಸ್ ಎಸ್‌ನ ಕೊಡುಗೆ ಏನು? ಕಾಂಗ್ರೆಸ್ ಪಕ್ಷಕ್ಕೆ ಭವ್ಯ ಇತಿಹಾಸವಿದ್ದು, ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಇಂತಹ ಇತಿಹಾಸವಿರುವ ದೇಶಕ್ಕಾಗಿ ಕೊಡುಗೆ ನೀಡಿರುವ ನೆಹರೂ ಕುಟುಂಬದ ಕುಡಿಯನ್ನು ಇ.ಡಿ ಮೂಲಕ ಬೆದರಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ ವಿಜಯಪುರದಲ್ಲಿ ಮಾತಾನಾಡಿ, ವಿನಾಕಾರಣ ತೊಂದರೆ ಕೊಡುತ್ತಿರುವ ಬಿಜೆಪಿ ನಾಯಕರಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಬಳ್ಳಾರಿಯಲ್ಲಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಕಿಡಿಕಾರಿದ್ದು, ಬಿಜೆಪಿ ಸರ್ಕಾರ ಇ.ಡಿ ಮುಂದಿಟ್ಟುಕೊಂಡು ಕಾಂಗ್ರೆಸ್ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಅಧಿಕಾರದಲ್ಲಿ ಇರುವವರು ಏನು ಬೇಕಾದರು ಮಾಡಬಹುದು ಎಂದುಕೊಂಡಿರುವ ಅವರಿಗೆ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ ಎಂದು ತಿರುಗೇಟು ಕೊಟ್ಟರು.
ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಮಾಜಿ ಸಚಿವ ಎಚ್.ವೈ.ಮೇಟಿ, ಮಾಜಿ ಶಾಸಕ ಜೆ.ಟಿ.ಪಾಟೀಲ್, ಶಾಸಕ ಆನಂದ ನ್ಯಾಮಗೌಡ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರು ತಿರುಗೇಟು
ಕಾಂಗ್ರೆಸ್ ನಾಯಕರ ಪ್ರತಿಭಟನೆಗೆ ಬಿಜೆಪಿ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಮುಖಂಡರು ತಪ್ಪು ಇಲ್ಲದಿದ್ದರೆ ಕಾನೂನು ಹೋರಾಟ ಮಾಡಬೇಕಿತ್ತು. ಅದು ಬಿಟ್ಟು, ಯಾಕೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಇದು ತಪ್ಪನ್ನು ಮುಚ್ಚಿಕೊಳ್ಳಲು ಮಾಡುತ್ತಿರುವ ಹೋರಾಟವಷ್ಟೇ. ಆರೋಪ ಬಂದಾಗ ಅದನ್ನು ಕಾನೂನು ಮಾರ್ಗದಲ್ಲಿ ಬಗೆಹರಿಸಿಕೊಳ್ಳಲಿ ಎಂದರು.
ಇದನ್ನೂ ಓದಿ | ಇಂದು ರಾಹುಲ್ ಗಾಂಧಿ ಇಡಿ ವಿಚಾರಣೆ: ಕಾಲ್ನಡಿಗೆಯಲ್ಲಿ ಹೊರಟ ಕಾಂಗ್ರೆಸಿಗರು ಪೊಲೀಸ್ ವಶಕ್ಕೆ