Site icon Vistara News

CET exams: ನಾಳೆಯಿಂದ ಪರೀಕ್ಷೆ: ನೀಟ್‌ ಮಾದರಿಯಲ್ಲಿ ನಡೆಯೋ ಎಕ್ಸಾಂಗೆ ಹೋಗೋ ಮುನ್ನ ಇದನ್ನು ಗಮನಿಸಿ

PU Exam Date 2023

ಬೆಂಗಳೂರು: ಇಂಜಿನಿಯರಿಂಗ್, ಕೃಷಿ ವಿಜ್ಞಾನ ಮುಂತಾದ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಸಿಇಟಿ ಪರೀಕ್ಷೆ ಜೂನ್ 16, 17  ರಂದು ಹಾಗೂ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ 18 ರಂದು ನಡೆಯಲಿದೆ.‌

ಈ ಬಾರಿ 2.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 1.4 ಲಕ್ಷ ವಿದ್ಯಾರ್ಥಿಗಳು, 1.7 ಲಕ್ಷ ವಿದ್ಯಾರ್ಥಿನಿಯ ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ ಒಟ್ಟು 486 ಪರೀಕ್ಷಾ ಕೇಂದ್ರಗಳನ್ನ ನಿಯೋಜನೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಬಳಿ ಜಾಮರ್, ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಿದ್ದು, ಪರೀಕ್ಷಾ ಕೇಂದ್ರದ ಸುತ್ತ-ಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್‌ ಜಾರಿಯಲ್ಲಿರಲಿದೆ. ಜೆರಾಕ್ಸ್ ಅಂಗಡಿಗಳನ್ನ ಮುಚ್ಚುವುದು ಕಡ್ಡಾಯವಾಗಿದೆ.  

ಯಾವುದೇ ಅಕ್ರಮಕ್ಕೂ ಅವಕಾಶ ನೀಡಬಾರದೆಂಬ ಉದ್ದೇಶದಿಂದ ಈ ಬಾರಿ ಪ್ರತಿಯೊಂದು ಕೇಂದ್ರದ ಪರೀಕ್ಷಾ ಪ್ರಕ್ರಿಯೆಯನ್ನೂ ಸಮಗ್ರವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದು ಸಚಿವ ಡಾ ಸಿ.ಎನ್‌. ಅಶ್ವತ್ಥನಾರಾಯಣ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪ್ರಶ್ನೆಪತ್ರಿಕೆ ಪೂರೈಕೆ ಇತ್ಯಾದಿಗಳನ್ನು ಹದ್ದಿನ ಕಣ್ಣಿನ ಪಹರೆಯಲ್ಲಿ ನಡೆಸಲಾಗುವುದು. ಈ ಸಲದ ಸಿಇಟಿ ಪರೀಕ್ಷೆಯಲ್ಲಿ ಪ್ರಶ್ನೆ ಮತ್ತು ಉತ್ತರಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಎರಡರಲ್ಲೂ ಕೊಡಲಾಗುವುದು ಎಂದು ಮಾಹಿತಿ ನೀಡಿದರು. ಪ್ರತಿಯೊಂದು ಕೇಂದ್ರಕ್ಕೂ ಸಹಾಯಕ ಆಯುಕ್ತರ ದರ್ಜೆಯ ಅಧಿಕಾರಿಯೊಬ್ಬರನ್ನು ಪರೀಕ್ಷಾ ವೀಕ್ಷಕರಾಗಿ ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ http://kea.kar.nic.in ಗೆ ಭೇಟಿ ನೀಡಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿ ಸಿಇಟಿ 2022 ರ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಜತೆಗೆ ಅಭ್ಯರ್ಥಿಗಳಿಗೆ ನೀಡಲಾಗಿರುವ ಸೂಚನೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಹಾಗೂ ಮಾರ್ಗದರ್ಶನಗಳನ್ನು / ಕಾರ್ಯವಿಧಾನಗಳನ್ನು ತಪ್ಪದೆ ಅನುಸರಿಸಲು ಕೆಇಎ ಸೂಚಿಸಿದೆ. ಪ್ರವೇಶ ಪತ್ರದಲ್ಲಿ ಮುದ್ರಿಸಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ, ನಿಗದಿತ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಲು ಸೂಚಿಸಲಾಗಿದೆ.

ಇದನ್ನೂ ಓದಿ | CET 2022 | ಸಿಇಟಿ ಅರ್ಜಿ ಸಲ್ಲಿಕೆಗೆ ಹೊಸ ಲಿಂಕ್‌: ಇಂದಿನಿಂದ ಆರಂಭ

ಸಿಇಟಿ ಪರೀಕ್ಷಾ ಸಮಯದಲ್ಲಿ ಬದಲಾವಣೆ

16-6-22ರಂದು ಬೆಳಗ್ಗೆ 10.30 ರಿಂದ 11.50 – ಜೀವಶಾಸ್ತ್ರ

ಮಧ್ಯಾಹ್ನ 2.30 ರಿಂದ 3.50 -ಗಣಿತ

17-6-22ರಂದು ಬೆಳಗ್ಗೆ 10.30 ರಿಂದ 11.50- ಭೌತಶಾಸ್ತ್ರ

ಮಧ್ಯಾಹ್ನ 2.30 ರಿಂದ 3.50- ರಸಾಯನಶಾಸ್ತ್ರ

18-6-22ರಂದು ಬೆಳಗ್ಗೆ 11.30 ರಿಂದ 12.30 ಹೊರನಾಡ ಕನ್ನಡಿಗರಿಗೆ ಕನ್ನಡ  ಪರೀಕ್ಷೆ

ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 60 ಅಂಕಗಳಿದ್ದು, ಪ್ರತಿ ಪ್ರಶ್ನೆಪತ್ರಿಕೆಗೆ 4 ಬಹುಆಯ್ಕೆ ಉತ್ತರಗಳು ಇರಲಿದೆ. ತಪ್ಪು ಉತ್ತರಗಳಿಗೆ ಅಂಕಗಳನ್ನ ನೀಡುವುದಿಲ್ಲ.   

ಗುರುತಿನ ಚೀಟಿ ತೋರಿಸಿದರಷ್ಟೇ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ

ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಸಿಇಟಿ ಪರೀಕ್ಷೆ ನಡೆಸಲು ಕೆಇಎ ಮುಂದಾಗಿದ್ದು, ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಗುರುತಿನ ಚೀಟಿ ತರಬೇಕು. ಗುರುತಿನ ಚೀಟಿ (identity card) ಇಲ್ಲದೇ ಹೋದರೆ ಅಂಥವರಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇರುವುದಿಲ್ಲ. ಪರೀಕ್ಷಾ ಮೇಲ್ವಿಚಾರಕರು ಪರೀಕ್ಷೆಯ ಪ್ರವೇಶ ಪತ್ರದಲ್ಲಿರುವ (hall ticket) ಭಾವಚಿತ್ರ ಹಾಗೂ ಗುರುತಿನ ಚೀಟಿಯಲ್ಲಿರುವ ಭಾವಚಿತ್ರ ಒಂದೇ ಎಂಬುದನ್ನ ಖಚಿತಪಡಿಸಿಕೊಳ್ಳಬೇಕು.

ಯಾವೆಲ್ಲ ಗುರುತಿನ ಚೀಟಿ ಹೊಂದಿರಬೇಕು ಎಂಬುದನ್ನ ನೋಡುವುದಾದರೆ ಕಾಲೇಜಿನ ಗುರುತಿನ ಚೀಟಿ, ಬಸ್‌ ಪಾಸ್‌, ಡ್ರೈವಿಂಗ್‌ ಲೈಸ್‌ನ್ಸ್‌, ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಇವುಗಳಲ್ಲಿ ಯಾವುದಾದರೂ ಒಂದನ್ನ ತೆಗೆದುಕೊಂಡು ಹೋಗಬಹುದು.

ಅಭ್ಯರ್ಥಿಗಳಿಗೆ ಒಂದಿಷ್ಟು ಸಲಹೆ

-ಪರೀಕ್ಷಾ ಕೊಠಡಿಗೆ ಹಾಜರಾಗುತ್ತಿದ್ದಂತೆ ಓ.ಎಂ.ಆರ್ ಉತ್ತರ ಪತ್ರಿಕೆಯಲ್ಲಿ ಹೆಸರನ್ನು ದಪ್ಪಕ್ಷರಗಳಲ್ಲಿ ಬರೆಯಬೇಕು.

-ಓ.ಎಂ.ಆರ್‌. ಶೀಟ್‌ನಲ್ಲಿ ಎಚ್ಚರದಿಂದ ಸಿಇಟಿ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ.

-ಸಿಇಟಿ ಸಂಖ್ಯೆಯನ್ನು ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಸಂಖ್ಯೆಯು ಅನುಗುಣವಾಗಿದೆಯೆ ಎಂದು ಪರಿಶೀಲಿಸಿಕೊಳ್ಳಿ.

-ಉತ್ತರ ಪತ್ರಿಕೆಯ ಕೆಳಭಾಗದಲ್ಲಿ ನಿಗದಿತ ಜಾಗದಲ್ಲಿ ಪೂರ್ಣ ಸಹಿ ಮಾಡಬೇಕು.

– ಓ.ಎಂ.ಆರ್‌. ಶೀಟ್‌ನಲ್ಲಿ ಮುದ್ರಿತವಾಗಿರುವ ಟೈಮಿಂಗ್‌ ಮಾರ್ಕ್‌ನ್ನು ತಿದ್ದಬಾರದು/ಹಾಳು ಮಾಡಬಾರದು.

– ಪರೀಕ್ಷೆಗೆ ನೀಲಿ ಅಥವಾ ಕಪ್ಪು‌ ಶಾಹಿಯ ಬಾಲ್ ಪೆನ್‌ ಇದೆಯೇ ಎಂಬುದನ್ನ ಖಚಿತಪಡಿಸಿಕೊಳ್ಳಿ, ಮೂರಕ್ಕಿಂತ ಹೆಚ್ಚು ಪೆನ್‌ ಹಾಗೂ ಪೆನ್ಸಿಲ್‌ ತೆಗೆದುಕೊಂಡು ಹೋಗುವಂತಿಲ್ಲ.

ಪರೀಕ್ಷಾ ಕೊಠಡಿಯಲ್ಲಿ ಈ ತಪ್ಪು ಮಾಡಬೇಡಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ ಪರೀಕ್ಷಾ ಕೊಠಡಿಯಲ್ಲಿರುವಾಗ ಅಭ್ಯರ್ಥಿಗಳು ಯಾವುದೇ ರೀತಿಯ ತಪ್ಪುಗಳನ್ನು ಎಸಗಿದರೆ ಅಂತಹವರ ಮೇಲೆ ಶಿಸ್ತುಕ್ರಮ ಹಾಗೂ ಅಪರಾಧ ಮೊಕದ್ದಮೆ ಹಾಕಲಾಗುತ್ತೆ. ಇಷ್ಟಕ್ಕೂ ಯಾವುದು ತಪ್ಪು ಕಾರ್ಯ ಅಂತ ನೋಡುವುದಾದರೆ, ಗಲಾಟೆ ಮಾಡಿದರೆ, ನಿಶಬ್ಧತೆಯ್ನು ಕಾಪಾಡದಿದ್ದರೆ, ಪರೀಕ್ಷಾ ಸಮಯದಲ್ಲಿ ವಿಷಯಕ್ಕೆ ಸಂಬಂಧಿಸಿದ ಯಾವುದೇ ಪುಸ್ತಕ, ಚೀಟಿ ಇತ್ಯಾದಿಗಳನ್ನ ಬಳಸುವಂತಿಲ್ಲ.

ಬೇರೆ ಅಭ್ಯರ್ಥಿಗಳೊಂದಿಗೆ ಮಾತಾಡುವುದು, ಸಂಜ್ಞೆ ಮಾಡುವುದು, ಅಭ್ಯರ್ಥಿಯು ಬೇರೆ ಅಭ್ಯರ್ಥಿಯೊಂದಿಗೆ ನಕಲು (ಕಾಪಿ) ಮಾಡುವುದು ಅಪರಾಧವಾಗಿದೆ. ಅಭ್ಯರ್ಥಿಯು ಉತ್ತರ ಪತ್ರಿಕೆಯನ್ನು ವರ್ಗಾಯಿಸುವಂತಿಲ್ಲ. ಪರೀಕ್ಷಾ ಅವಧಿಯಲ್ಲಿ ಅಥವಾ ನಂತರದಲ್ಲೂ ಉತ್ತರ ಪತ್ರಿಕೆಯನ್ನು ಹೊರಗೆ ತೆಗೆದುಕೊಂಡು ಹೋದರೆ ಅಥವಾ ಅವ್ಯವಹಾರದಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಅಂತಹ ಉತ್ತರ ಪತ್ರಿಕೆಯನ್ನ ಸ್ಥಳದಲ್ಲೇ ಹರಿದು ಹಾಕಲಾಗುತ್ತದೆ.

ಪರೀಕ್ಷಾ ಕೇಂದ್ರದೊಳಗೆ ಇವೆಲ್ಲವೂ ನಿರ್ಬಂಧ

ಪರೀಕ್ಷಾ ಕೇಂದ್ರದೊಳಗೆ ಆಧುನಿಕ ಎಲೆಕ್ಟ್ರಾನಿಕ್‌ ಉಪಕರಣಗಳು, ಮೊಬೈಲ್‌ ಫೋನ್‌, ಬ್ಲೂಟೂಥ್‌, ಸ್ಲ್ಯೆಡ್‌ ರೂಲ್ಸ್‌ ಸೇರಿದಂತೆ ಕ್ಯಾಲಕ್ಯುಲೇಟರ್, ವೈಟ್‌ ಪ್ಲ್ಯೊಯಿಡ್‌, ವೈರ್‌ಲೆಸ್ ಸೆಟ್ಸ್‌, ಪೇಪರ್‌ ಚೀಟಿ, ಬುಕ್ಸ್‌ ನಿಷೇಧಿಸಲಾಗಿದೆ. ಕೈ ಗಡಿಯಾರ ಕಟ್ಟಿಕೊಂಡು/ ತೆಗೆದುಕೊಂಡು ಹೋಗುವಂತಿಲ್ಲ.

ವಸ್ತ್ರಸಂಹಿತೆ ಜಾರಿ

ರಾಜ್ಯದಲ್ಲಿ ಈ ಹಿಂದೆ ನಡೆದಿದ್ದ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಹಿಜಾಬ್‌ ಸಂಘರ್ಷದ ಕೂಗು ಕೇಳಿ ಬಂದಿತ್ತು. ಹೀಗಾಗಿ ಈ ಸಲ ಯಾವುದೇ ಗದ್ದಲ ಗಲಾಟೆಗೆ ಅವಕಾಶ ಇರದಂತೆ ಕೆಇಎ ಕ್ರಮವಹಿಸಿದೆ. ಇದಕ್ಕಾಗಿ ವಸ್ತ್ರ ಸಂಹಿತೆ ಜಾರಿ ಮಾಡಿದ್ದು, ಅಭ್ಯರ್ಥಿಗಳು ಪರೀಕ್ಷೆಗೆ ತುಂಬು ತೋಳು ಇರುವ ವಸ್ತ್ರಗಳನ್ನು ಹಾಗೂ ಕಿವಿ, ತಲೆ ಮುಚ್ಚುವಂತಹ ವಸ್ತ್ರಗಳನ್ನ ಪರೀಕ್ಷಾ ಕೊಠಡಿಯಲ್ಲಿ ಧರಿಸುವುದನ್ನ ನಿಷೇಧಿಸಲಾಗಿದೆ. ಯಾವುದೇ ರೀತಿಯ ಆಭರಣಗಳನ್ನ ಧರಿಸುವಂತಿಲ್ಲ ಅಂತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ನಾಲ್ಕನೇ ಅಲೆ ಭೀತಿ ಮಾಸ್ಕ್‌ ಕಡ್ಡಾಯ

ರಾಜ್ಯದಲ್ಲಿ ಕೋವಿಡ್‌ ಸೋಂಕು ಏರಿಕೆ ಆಗುತ್ತಿದೆ. ನಾಲ್ಕನೆ ಅಲೆಯ ಭೀತಿ ಇರುವುದರಿಂದ ಫೇಸ್‌ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ. ಆದರೆ ಅಭ್ಯರ್ಥಿಗಳು ಸರ್ಜಿಕಲ್‌ ಮಾಸ್ಕ್‌ ಮಾತ್ರ ಧರಿಸಬೇಕು. ಎನ್‌ 95 ಮಾಸ್ಕ್‌ ಅಥವಾ ಕಾಟನ್‌ ಮಾಸ್ಕ್‌ ಧರಿಸಲು ಅನುಮತಿ ಇರುವುದಿಲ್ಲ.

ಇದನ್ನೂ ಓದಿ | KCET 2022: ವೃತ್ತಿಪರ ಕೋರ್ಸ್‌ಗಳಿಗೆ ಜೂನ್‌ 16 ಮತ್ತು 18ಕ್ಕೆ ಸಿಇಟಿ ಪರೀಕ್ಷೆ

Exit mobile version